ಹಿರಿತೆರೆಯಲ್ಲಿ ಕಾಣಿಸದ ಸೀತಾರಾಂ ಮ್ಯಾಜಿಕ್

ಕಿರುತೆರೆಯ ಸ್ಟಾರ್ ನಿರ್ದೇಶಕ ಟಿ ಎನ್ ಸೀತಾರಾಂ 'ಮೀರಾ ಮಾಧವ ರಾಘವ' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೇ ಹೋಗಿದ್ದೆ. ನೋಡಿ ನಿರಾಶೆಯಾಯಿತು. ಭಾನುವಾರದ ಪತ್ರಿಕೆಗಳನ್ನು ನೋಡಿದರೆ ಪ್ರಜಾವಾಣಿ ಹೊರತು ಪಡಿಸಿದರೆ ಉಳಿದೆಲ್ಲಾ ಪತ್ರಿಕೆಗಳೂ ಚಿತ್ರವನ್ನು ವಾಚಾಮಗೋಚರವಾಗಿ ಹೊಗಳಿವೆ. ಸಂಪದದಲ್ಲೂ ಹೊಗಳಿಕೆಗಳೇ ತುಂಬಿರುವ ಎರಡು ಲೇಖನಗಳು. ಅಂಥದ್ದೇ ಪ್ರತಿಕ್ರಿಯೆಗಳು. ನಾನು ಸಿನಿಮಾ ನೋಡುವುದರಲ್ಲಿಯೇ ಏನೋ ತಪ್ಪಿದೆ ಎಂದುಕೊಂಡು ನನ್ನ ಜತೆ ಸಿನಿಮಾಕ್ಕೆ ಬಂದಿದ್ದ ನಾಲ್ಕೈದು ಮಂದಿ ಗೆಳೆಯರನ್ನು ಕೇಳಿದೆ. ಅವರೂ "ಸಿನಿಮಾ ಚೆನ್ನಾಗಿಲ್ಲ" ಎಂದರು.

'ಮೀರಾ ಮಾಧವ ರಾಘವ' ಸಿನಿಮಾದಲ್ಲಿ ಚೆನ್ನಾಗಿರುವುದು ಎರಡು ಅಂಶಗಳು. ಒಂದು ಎಚ್ ಎಂ ರಾಮಚಂದ್ರ ಅವರ ಛಾಯಾಗ್ರಹಣ ಮತ್ತೊಂದು ರಮ್ಯಾ ಅಭಿನಯ. ಈ ಎರಡನ್ನು ಹೊರತು ಪಡಿಸಿದರೆ ಈ ಚಿತ್ರದಲ್ಲಿ ಚೆನ್ನಾಗಿದೆ ಎಂದು ಹೇಳುವ ಅಂಶಗಳನ್ನು ಸಂಶೋಧಿಸಿ ಕಂಡು ಹಿಡಿಯಬೇಕಾಗುತ್ತದೆ.

ಟಿ. ಎನ್. ಸೀತಾರಾಂ ಅವರು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಖ್ಯವಾಹಿನಿಯ ಸಿನಿಮಾ ಒಂದಕ್ಕೆ ಬೇಕಿರುವ ಎಲ್ಲಾ ಮಸಾಲೆಗಳೂ ಕತೆಯಲ್ಲಿವೆ. ಕತೆಯನ್ನು ಸಿನಿಮಾ ಮಾಡುವಾಗ ಎಡವಟ್ಟಾಗಿದೆ. ಆ ಎಡವಟ್ಟುಗಳನ್ನು ಪಟ್ಟಿ ಮಾಡುತ್ತಾ ಹೋಗುವುದಕ್ಕೆ ನನಗೇನೇನೂ ಉತ್ಸಾಹವಿಲ್ಲ. ಪ್ರಜಾವಾಣಿಯಲ್ಲಿ ಗೆಳೆಯ ರಘುನಾಥ ಚ. ಹ. ಬರೆದಿರುವ ವಿಮರ್ಶೆಯಲ್ಲಿ ಚಿತ್ರ ಯಾಕೆ ಕೆಟ್ಟದಾಗಿದೆ ಎಂಬುದಕ್ಕೆ ನಾನು ನೀಡಬಹುದಾದ ಎಲ್ಲಾ ಕಾರಣಗಳೂ ಇವೆ. ಸೀತಾರಾಂ ಕಿರುತೆರೆಯಲ್ಲಿ ಸಾಧಿಸುವ ಮ್ಯಾಜಿಕ್ ಅನ್ನು ಹಿರಿತೆರೆಯಲ್ಲೇಕೆ ಸಾಧಿಸುವುದಿಲ್ಲ ಎಂಬುದು ನನಗಿನ್ನೂ ಚೋದ್ಯವಾಗಿಯೇ ಉಳಿದಿದೆ.

-ಇಸ್ಮಾಯಿಲ್