ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೇ?

ಕೋಮು ಸೌಹಾರ್ದವೇದಿಕೆ ಧರಣಿನ್ನ ಹೆಸರು ಇಸ್ಮಾಯಿಲ್ ಎಂದಿರುವುದರಿಂದ ಅನೇಕ ಸಂದರ್ಭಗಳಲ್ಲಿ ನನಗೆ ಬೇಕಿಲ್ಲದಿದ್ದರೂ ನಾನು ಮುಸ್ಲಿಮರ ಪ್ರತಿನಿಧಿಯಾಗಿಬಿಡುತ್ತೇನೆ. ಮತ-ಧರ್ಮದ ಕುರಿತ ನನ್ನ ವೈಯಕ್ತಿಕ ನಿಲುವುಗಳ ಬಗ್ಗೆ ಅರಿವಿರುವ ಹತ್ತಿರದ ಗೆಳೆಯರನ್ನು ಹೊರತು ಪಡಿಸಿದರೆ ನಾನೊಬ್ಬ ಮುಸ್ಲಿಮ ಎಂಬ ಪೂರ್ವಗ್ರಹದೊಂದಿಗೆ ಚರ್ಚೆಗಿಳಿಯುವ ಅನೇಕರಿದ್ದಾರೆ. ಈ ಬಗೆಯ ಚರ್ಚೆಗಳಿಂದ ದೂರ ಉಳಿಯಲು ನಾನು ಪ್ರಯತ್ನಿಸಿದರೂ ಕೆಲವೊಮ್ಮೆ ಅದರಿಂದ ಪಾರಾಗಲು ಸಾಧ್ಯವಾಗುವುದಿಲ್ಲ.

ಇತ್ತೀಚೆಗೆ ಇಂಥದ್ದೇ ಒಂದು ಘಟನೆ ನಡೆಯಿತು. ಕರುಣಾನಿಧಿ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸುವ ಅನೇಕ ಮಾತುಗಳನ್ನಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಾರಪತ್ರಿಕೆಯಲ್ಲಿ ಬಂದ ಪ್ರಸಿದ್ಧ ಸಂಪಾದಕರೊಬ್ಬರ ಬರೆಹದ ಬಗ್ಗೆ ಹೇಳುತ್ತಿದ್ದ ಪರಿಚಿತರೊಬ್ಬರು 'ಕರುಣಾನಿಧಿ ಮುಸ್ಲಿಮರ ದೇವರ ಬಗ್ಗೆ ಹೀಗೆ ಮಾತನಾಡುತ್ತಿದ್ದರೇ? ಮಾತನಾಡಿದ್ದರೆ ಮುಸ್ಲಿಮರು ಸುಮ್ಮನಿರುತ್ತಿದ್ದರೇ?' ಎಂದೆಲ್ಲಾ ಪ್ರಶ್ನಿಸಿದರು. ನಾನು ನಕ್ಕು ಸುಮ್ಮನಾದೆ. ಈ ಬಗೆಯ ಮಾತುಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಹಲವು ಬ್ಲಾಗ್ ಗಳಲ್ಲಿ, ಪತ್ರಿಕಾ ಲೇಖನಗಳಲ್ಲಿಯೂ ಇಂಥ ಪ್ರಶ್ನೆಗಳನ್ನು ಹಲವರು ಎತ್ತಿದ್ದಾರೆ. ಅಂದ ಮೇಲೆ ಈ ಪ್ರಶ್ನೆ ಸರಿಯೇ ಇರಬೇಕಲ್ಲವೇ?

ಒಂದು ಕ್ಷಣ ನನಗೂ ಹಾಗೆಯೇ ಅನ್ನಿಸಿತ್ತು. ಆದರೆ ವಿಷಯವನ್ನು ಸಮಗ್ರವಾಗಿ ಗ್ರಹಿಸಲು ಪ್ರಯತ್ನಿಸಿದಾಗ ಸಿಕ್ಕ ಚಿತ್ರಣವೇ ಬೇರೆ. ಮುಸ್ಲಿಮರು ಸುಮ್ಮನಿರುತ್ತಿದ್ದರೇ? ಎಂದು ಆಕ್ರೋಶದಿಂದ ಪ್ರಶ್ನಿಸುವವರ ಮನಸ್ಸಿನಲ್ಲಿರುವುದೇನು? ನಾನು ಒಂದಿಬ್ಬರು ಗೆಳೆಯರನ್ನೂ ಕೇಳಿ ನೋಡಿದೆ. ನನಗಾಗ ವಿಷಯ ಹೆಚ್ಚು ಸ್ಪಷ್ಟವಾಗುತ್ತಾ ಬಂತು. ಮುಸ್ಲಿಮರು, ಕ್ರೈಸ್ತರ ವಿಷಯಕ್ಕೆ ಬಂದಾಗ ಕೆಲವು ಸಿದ್ಧಮಾದರಿಗಳನ್ನು ನಮ್ಮ ಮಾಧ್ಯಮಗಳು ರೂಪಿಸಿಕೊಟ್ಟಿವೆ. ಈ ಸಿದ್ಧ ಮಾದರಿಗಳ ಮೂಲಕವೇ ಗ್ರಹಿಸ ಹೊರಟರೆ ಸಹಜವಾಗಿ ಕೇಳಬಹುದಾದ ಪ್ರಶ್ನೆಗಳಲ್ಲೊಂದು 'ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೆ?'

ಕಳೆದ ಒಂದು ದಶಕದ ಅವಧಿಯ ರಾಜಕೀಯ ಬೆಳವಣಿಗೆಗಳನ್ನು ನಾನೊಬ್ಬ ಪತ್ರಕರ್ತನಾಗಿ ಕಂಡಿದ್ದೇನೆ. ಈ ಅವಧಿಯಲ್ಲಿ ಅನೇಕ ಬಿಜೆಪಿ ನಾಯಕರ, ವಿಎಚ್ ಪಿ ಪ್ರಮುಖರ, ಭಜರಂಗದಳದ ನಾಯಕರ ಭಾಷಣಗಳನ್ನು ಕೇಳಿದ್ದೇನೆ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದರ ನಾಯಕರು ಮಾತನಾಡುವಾಗ ಇತರ ಮತ-ಧರ್ಮಗಳನ್ನು ನೇರವಾಗಿ ಹೀಯಾಳಿಸುವುದರಿಂದ ದೂರವಿರುತ್ತಾರೆ. ಆದರೆ ವಿಎಚ್ ಪಿ, ಭಜರಂಗದಳ ಇತ್ತೀಚಿನ ಶ್ರೀರಾಮ ಸೇನೆಯಂಥ ಸಂಘಟನೆಗಳ ನಾಯಕರು ಇಂಥ ಯಾವ ರಿಯಾಯಿತಿಯನ್ನೂ ತೋರಿಸುವುದಿಲ್ಲ. ಪ್ರವಾದಿ ಮಹಮ್ಮದರನ್ನು ಹೀಯಾಳಿಸುವುದರಿಂದ ಆರಂಭಿಸಿ ಕುರಾನ್ ನ ಲೇವಡಿಯವರೆಗಿನ ಮಾತುಗಳನ್ನು ನಾನೇ ಕೇಳಿದ್ದೇನೆ. ಇತ್ತೀಚೆಗಷ್ಟೇ ಇಂಥದ್ದೇ ಸಂಘಟನೆಯೊಂದರ ನಾಯಕರೊಬ್ಬರ ಟಿ.ವಿ. ಸಂದರ್ಶನವನ್ನು ನೋಡಿದೆ. ಅವರು ಅಲ್ಲಿಯೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮಾನುಯಾಯಿಗಳ ವಿರುದ್ಧದ 'ಆಕ್ರೋಶ'ವನ್ನು ಮುಚ್ಚಿಡಲಿಲ್ಲ. ಈ ನಾಯಕರ ವಿರುದ್ಧ ಯಾರಾದರೂ ಮುಲ್ಲಾಗಳು ಅಥವಾ ಮುಫ್ತಿಗಳು ಫತ್ವಾ ಹೊರಡಿಸಿದ್ದಾರೆಯೇ ಎಂಬ ಸೂಕ್ಷ್ಮ ಪರಿಶೀಲನೆಯನ್ನೂ ನಡೆಸಿ ನೋಡಿದೆ. ಈ ಬಗೆಯ ಮಾತುಗಳನ್ನಾಡಿದ್ದಕ್ಕೆ ಎಷ್ಟು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂಬುದರ ಬಗ್ಗೆಯೂ ಒಂದು ಸಣ್ಣ ಸಂಶೋಧನೆ ನಡೆಸಿದೆ. ಅದಕ್ಕೂ ಸಿಕ್ಕ ಉತರ ಮಾತ್ರ 'ಇಲ್ಲ'. ಹಾಗಿದ್ದರೆ 'ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೇ?' ಎಂಬ ಪ್ರಶ್ನೆಗಿರುವ ಅರ್ಥವಾದರೂ ಏನು?

***

ದ್ರಾವಿಡ ಚಳವಳಿಯ ದಿನಗಳಲ್ಲಿ ಪೆರಿಯಾರ್ ರಾಮನ ಕುರಿತಂತೆ ಮಾಡಿದ ಟೀಕೆಗಳಿಗೆ ಲೆಕ್ಕವೇ ಇಲ್ಲ. ಇದನ್ನು ಅವರ ಅನೇಕಪ್ರತಿಭಟನೆ ಬೆಂಬಲಿಗರು ಮತ್ತೆಯೂ ಮುಂದುವರಿಸಿದರು. ಇದರ ಪ್ರಭಾವ ಇತರೆಡೆಗಳಲ್ಲಿಯೂ ಆಯಿತು. ಆಗ ಯಾರೂ ತಮಿಳುನಾಡಿನ ಬಸ್ ನಿಲ್ಲಿಸಿ ಅದಕ್ಕೆ ಬೆಂಕಿ ಕೊಟ್ಟು ಒಳಗಿದ್ದ ಒಬ್ಬಿಬ್ಬರು ಪ್ರಯಾಣಿಕರ ಸಮೇತ ಸುಟ್ಟಿರಲಿಲ್ಲ. ಆದರೆ ಈಗ ಅದು ಕರ್ನಾಟಕದಲ್ಲಿಯೇ ಸಂಭವಿಸಿದೆ.

ಗುಜರಾತಿನ ಬರೋಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಭಾಗವಾಗಿ ರಚಿಸಿದ ಚಿತ್ರಗಳನ್ನು ಮತೀಯವಾದಿ ಸಂಘಟನೆಯೊಂದರ ಕಾರ್ಯಕರ್ತರು 'ಮೌಲ್ಯಮಾಪನ' ನಡೆಸಿದರು. ಪರೀಕ್ಷೆಗೆಂದು ರಚಿಸಲಾಗಿದ್ದ ಚಿತ್ರವೊಂದು ಗುಣಮಟ್ಟದಲ್ಲಿ ಒಳ್ಳೆಯದಲ್ಲದೇ ಇದ್ದಿದ್ದರೆ ಅದನ್ನು ಪರೀಕ್ಷಕರೇ ತಿರಸ್ಕರಿಸುತ್ತಿದ್ದರು. ಇನ್ನೂ ಪರೀಕ್ಷಾ ಕೋಣೆಯಲ್ಲೇ ಇದ್ದ ಚಿತ್ರವೊಂದು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾದರೂ ಹೇಗೆ?

2000ನೇ ಇಸ್ವಿಯ ಜನವರಿ ಒಂದನೇ ತಾರೀಕಿನಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮುಖ ಪುಟ ಲೇಖನದಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಡಾಂಟೆಯ ಕಾವ್ಯದ ಕೆಲವು ಸಾಲುಗಳನ್ನು ಉಲ್ಲೇಖಿಸಿದ್ದರು. ಇವು ಡಾಂಟೆ ಪ್ರವಾದಿ ಮಹಮ್ಮದರ ಬಗ್ಗೆ ಬರೆದ ಸಾಲುಗಳು. ಇವುಗಳನ್ನು ವಿಶ್ವಾದ್ಯಂತ ಇಂಗ್ಲಿಷ್ ಕಾವ್ಯವನ್ನು ಬಲ್ಲ ಅನೇಕ ಮುಸ್ಲಿಮರು, ಧರ್ಮಶಾಸ್ತ್ರ ಪಂಡಿತರು ನೂರಾರು ವರ್ಷಗಳಿಂದ ಓದಿದ್ದರೂ ಅವರಾರು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಹೋಗಿರಲಿಲ್ಲ. ಬೆಂಗಳೂರಿನಲ್ಲಿ ಮಾತ್ರ ಎಕ್ಸ್ ಪ್ರೆಸ್ ಕಚೇರಿಯ ಮೇಲೆ ದಾಳಿ ನಡೆಯಿತು. ಭಾರತದ ಉಳಿದ ಯಾವ ನಗರದ ಮುಸ್ಲಿಮರೂ ಇದನ್ನು ಮಾಡಲಿಲ್ಲ!

ಪ್ರವಾದಿ ಮಹಮ್ಮದರನ್ನು ಟೀಕಿಸುವ, ಕಟಕಿಯಾಡುವ ಹಲವು ಪುಸ್ತಕಗಳು, ಲೇಖನಗಳು ಈಗಲೂ ಅಂತರ್ಜಾಲದಲ್ಲಿ ಲಭ್ಯವಿವೆ. ಕ್ರೈಸ್ತ ಧರ್ಮ ಮಾತ್ರ 'ವಿಶ್ವ ಧರ್ಮ' ಎಂದು ವಾದಿಸುವ ಅನೇಕರ ಲೇಖನಗಳಲ್ಲಿ ಇಸ್ಲಾಮನ್ನು ಹೀಯಾಳಿಸುವ, ಟೀಕಿಸುವ ಮಾತುಗಳಿವೆ. ಇವುಗಳಲ್ಲಿ ಒಂದಕ್ಕೂ ನಡೆಯದ ಪ್ರತಿಭಟನೆ ಸಲ್ಮಾನ್ ರಶ್ದಿಯ ಪುಸ್ತಕಕ್ಕೆ ಸಂಬಂಧಿಸಿದಂತೆ ನಡೆಯಿತು. ಹಾಲೆಂಡ್ ನ ಯಾವುದೋ ಪತ್ರಿಕೆಯಲ್ಲಿ ಬಂದ ವ್ಯಂಗ್ಯ ಚಿತ್ರವನ್ನು ವಿರೋಧಿಸಿ ನಡೆಯಿತು. ತಸ್ಲೀಮಾ ನಸ್ರೀನ್ ವಿರುದ್ಧ ನಡೆಯಿತು.

***

ಈ ಘಟನೆಗಳನ್ನೆಲ್ಲಾ ನೋಡುತ್ತಾ ಹೋದರೆ 'ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ' ಎಂಬ ವಾದಕ್ಕೆ ಕೆಲವರನ್ನು ಮಾತ್ರ ಆರಿಸಿಕೊಳ್ಳಲಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ಆಯ್ಕೆಗಳ ಹಿಂದೆ ಯಾವುದೋ ಒಂದು ರಾಜಕಾರಣ ಕೆಲಸ ಮಾಡುತ್ತಿರುತ್ತದೆ. ಯಾರೋ ಕೆಲವರು ಇವನ್ನು ಬಹಳ ಎಚ್ಚರಿಕೆಯಿಂದ ಸಂಘಟಿಸುತ್ತಿರುತ್ತಾರೆ ಎಂಬುದು ಖಚಿತ. ಈ ಸಂದರ್ಭಗಳಲ್ಲೆಲ್ಲಾ ಯಾರೋ ಕೆಲವರು ತಮ್ಮಷ್ಟಕ್ಕೇ ಧರ್ಮ ರಕ್ಷಣೆಯ ಕೆಲಸವನ್ನು ತಮ್ಮ ಮೇಲೆ ಆರೋಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರಿಗೆ ಖಂಡಿತವಾಗಿಯೂ ಸ್ವಂತ ಲಾಭವಿರುತ್ತದೆ.

ಇಂಡಿಯನ್ ಎಕ್ಸ್ ಪ್ರೆಸ್ ಮೇಲೆ ನಡೆಸಲಾದ ದಾಳಿಯನ್ನು ರಾಜಕಾರಣಿಯೊಬ್ಬರು ಸಂಘಟಿಸಿದ್ದರು ಎಂಬುದು ಈಗ ಸ್ಪಷ್ಟವಾಗಿದೆ. ತಸ್ಲೀಮಾ ಮೇಲೆ ನಡೆದ ದಾಳಿಯನ್ನೂ ನೆಲೆ ಕಳೆದುಕೊಳ್ಳುತ್ತಿರುವ ರಾಜಕೀಯ ಪಕ್ಷ ಸಂಘಟಿಸಿತ್ತು ಎಂಬುದು ದಾಳಿ ನಡೆದ ದಿನವೇ ಸ್ಪಷ್ಚವಾಗಿತ್ತು. ಕರ್ನಾಟಕದ ಬಾಬಾಬುಡನ್ ಗಿರಿಯಂಥ ಸೌಹಾರ್ದದ ಸಂಕೇತಗಳನ್ನೂ ಹೀಗೇ ಎಚ್ಚರಿಕೆಯಿಂದ ಆರಿಸಿಕೊಂಡು ಕೆಲವರು ಕಾರ್ಯಾಚರಿಸುತ್ತಿದ್ದಾರೆ. ರಾಮ ಸೇತು ಚಳವಳಿಯ ಹಿಂದೆಯೂ ಬಿಜೆಪಿಯ ಚುನಾವಣಾ ಅಭೀಪ್ಸೆಗಳಿವೆ ಎಂಬುದು ಮೊದಲಿಗೇ ಸ್ಪಷ್ಟವಾದ ವಿಚಾರ.

***

ಇತ್ತೀಚೆಗೆ ನನ್ನ ಗೆಳೆಯ ನಾರಾಯಣ್ ಹೇಳಿದ ಘಟನೆಯೊಂದನ್ನು ಇಲ್ಲಿ ವಿವರಿಸಬೇಕೆನಿಸುತ್ತಿದೆ. ರಾಮ ಸೇತುವಿನ ಕುರಿತು ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರ ವಿವಾದ ಸುದ್ದಿ ಆಗಷ್ಟೇ ನಾರಾಯಣ್ ಅವರ ತಾಯಿಗೆ ತಿಳಿದಿತ್ತಂತೆ. ಅವರು 'ಸರಕಾರ ರಾಮನಿಲ್ಲ ಎಂದಿತಂತೇ?' ಎಂದು ಕೇಳಿದರಂತೆ. ಇದಕ್ಕೆ ಉತ್ತರಿಸಲು ವಿವರಗಳಿಗಾಗಿ ತಡಕಾಡುತ್ತಿರುವಾಗಲೇ ಹತ್ತಿರದಲ್ಲೇ ಇದ್ದ ನಾರಾಯಣರ ಸೋದರತ್ತೆ 'ರಾಮನೆಂಬ ಮನುಷ್ಯ ಇರಲಿಲ್ಲ ಅಂತ ಹೇಳಿದ್ದಂತೆ. ರಾಮದೇವರು ಇಲ್ಲ ಅಂತಲ್ಲ' ಎಂದು ಉತ್ತರಿಸಿದರಂತೆ.ಬಹುಶಃ ಇದು ಭಾರತದ ಜನಸಾಮಾನ್ಯನ ನಿಲುವು.

ನಾನು ಹುಟ್ಟಿ ಬೆಳೆದದ್ದು ಹಾಸನ ಜಿಲ್ಲೆಯಲ್ಲಿ. ನಮ್ಮಾಚೆ 'ನಮ್ಮದು ರಾವಣನ ಒಕ್ಕಲು' ಎಂದು ಹೇಳಿಕೊಳ್ಳುವ ವಿವಿಧ ಜಾತಿಯ ಜನರಿದ್ದಾರೆ. ಹಿಂದೆಲ್ಲಾ ರಾವಣ ಎಂದು ಹೆಸರು ಇಟ್ಟುಕೊಳ್ಳುತ್ತಿದ್ದುದೂ ಉಂಟಂತೆ. ಈಗ ಅದಿಲ್ಲ. ಕನ್ನಡದ ಅತ್ಯುತ್ತಮ ಬರೆಹಗಾರರಲ್ಲಿ ಒಬ್ಬರಾದ ಪಿ.ಲಂಕೇಶ್ ಅವರ ಹೆಸರೇ ಈ 'ರಾವಣನ ಒಕ್ಕಲಿನ' ಜನರನ್ನು ಕುರಿತು ಸಾಕಷ್ಟು ಹೇಳುತ್ತಿದೆ. 'ರಂಗ್ ದೇ ಬಸಂತಿ' ಸಿನಿಮಾ ನೋಡಿದವರಿಗೆ ರಾಮ್ ಪ್ರಸಾದ್ ಬಿಸ್ಮಿಲ್ಹಾ ಎಂಬ ಹೆಸರು ಚೆನ್ನಾಗಿ ನೆನಪಿರುತ್ತದೆ. ಇತಿಹಾಸದಲ್ಲಿರುವ ರಾಮ್ ಪ್ರಸಾದ್ ಬಿಸ್ಲಿಲ್ಹಾ ಬಗ್ಗೆಯೂ ಹಲವರಿಗೆ ಗೊತ್ತಿರಬಹುದು. ನನ್ನೊಬ್ಬ ಮಲೆಯಾಳಿ ಗೆಳೆಯನಿಗೂ ಇದೇ ಹೆಸರಿದೆ. ಅವನೂ ಮುಸ್ಲಿಮನೇ.

***

ಧಾರ್ಮಿಕ ನಂಬಿಕೆಗಳಿಗೂ ಮತೀಯ ಮೂಲಭೂತವಾದದ ರಾಜಕಾರಣಕ್ಕೂ ಸಂಬಂಧವಿರಬೇಕಿಲ್ಲ. ಧಾರ್ಮಿಕ ನಂಬಿಕೆಗಳಿಗೆ ಐತಿಹಾಸಿಕ ಆಧಾರಗಳೂ ಬೇಕಿಲ್ಲ. ರಾಮನ ಭಕ್ತರಿಗೆ ರಾಮನಿದ್ದ ಎಂಬ ಐತಿಹಾಸಿಕ ಸಾಕ್ಷ್ಯಗಳು ಬೇಕಿಲ್ಲ. ಅವುಗಳು ಸಿಕ್ಕಾಕ್ಷಣ ರಾಮ ಕೇವಲ ಮನುಷ್ಯ ಎಂದುಕೊಂಡು ರಾಮನ ಮೇಲಿನ ಭಕ್ತಿಯನ್ನು ಅವರು ತ್ಯಜಿಸುವುದೂ ಇಲ್ಲ. ದೇವರನ್ನು ಕಂಡುಕೊಳ್ಳುವ ಈ ಬಗೆಯನ್ನು ಅನಂತಮೂರ್ತಿಯವರು ತಮ್ಮ 'ಅಲ್ಲಿರುವ ತಿರುಪತಿಗೆ ಇಲ್ಲೊಂದು ತಿರುಪತಿ'ಲೇಖನದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಈ ವಿವೇಕವನ್ನು ನಮ್ಮ ಧರ್ಮ ರಕ್ಷಕರಿಗೆ ಬೋಧಿಸುವುದು ಹೇಗೆ?

ಇಷ್ಟನ್ನೆಲ್ಲಾ ಬರೆಯಲು ಪ್ರೇರೇಪಿಸಿದ್ದು ಇವತ್ತಿನ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ರೋಮಿಲಾ ಥಾಪರ್ ಅವರ ಲೇಖನ. ರಾಮ ಸೇತು ವಿವಾದದ ಕುರಿತಂತೆ ವಿವೇಕದ ಮಾತುಗಳು ಇಲ್ಲಿವೆ ಎಂಬುದು ನನ್ನ ಅನಿಸಿಕೆ.

ಚಿತ್ರಕೃಪೆ ಕರ್ನಾಟಕ ಫೋಟೋ ನ್ಯೂಸ್

ಇದ್ದವರಿಬ್ಬರಲ್ಲಿ ಕದ್ದವರಾರು?

ರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು.ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಸರಕಾರವಿತ್ತು. ಕರ್ನಾಟಕದ ಅನಂತಕುಮಾರ್‌ ಮತ್ತು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಕೇಂದ್ರ ಸಚಿವ ಸಂಪುಟದಲ್ಲಿದ್ದರು. ಕೇಂದ್ರದ ನೆರವಿಗೆ ಸಂಬಂಧಿಸಿದಂತೆ ಕರ್ನಾಟಕದ ಅಧಿಕಾರಾರೂಢ ಕಾಂಗ್ರೆಸ್ಸಿಗರ ಟೀಕೆ ಹೆಚ್ಚುತ್ತಲೇ ಹೋದಾಗ ಇಬ್ಬರೂ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು. ಕೇಂದ್ರ ಬರ ಪರಿಹಾರಕ್ಕೆಂದು ಒದಗಿಸಿದ್ದ ಹಣವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲ. ಬಹಳಷ್ಟು ಹಣ ಬಳಸದೆಯೇ ಲ್ಯಾಪ್ಸ್‌ (laps) ಆಗಿದೆ ಎಂದಲ್ಲಾ ಗದ್ದಲವೆಬ್ಬಿಸಿದ್ದರು. ಇದಕ್ಕೆ ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಜಗಧೀಶ್‌ ಶೆಟ್ಟರ್‌, ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಮುಂತಾದವರೆಲ್ಲಾ ಧ್ವನಿಗೂಡಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೆಲ್ಲಾ ನಡೆದು ಇನ್ನೂ ಐದು ವರ್ಷವೂ ತುಂಬಿಲ್ಲ. ಉತ್ತರ ಕರ್ನಾಟಕವನ್ನು ನೆರೆ ಹಾವಳಿ ತೀವ್ರವಾಗಿ ಬಾಧಿಸುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರವಿದೆ. ರಾಜ್ಯದಲ್ಲಿ ಜನತಾದಳ (ಎಸ್‌) ಮತ್ತು ಬಿಜೆಪಿ ಮೈತ್ರಿಯ ಸಮ್ಮಿಶ್ರ ಸರಕಾರವಿದೆ. ಈಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾಸ್ವಾಮಿ ಕೇಂದ್ರ ಸರಕಾರ ತಮಗೆ ಬೇಕಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ. ಪರಿಹಾರ ಕಾರ್ಯ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರವಿದ್ದಾಗ ಅದರ ಬೆಂಬಲಕ್ಕೆ ನಿಂತಿದ್ದ ಉಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈಗ ಕೇಂದ್ರವನ್ನು ಹಳಿಯುತ್ತಿದ್ದಾರೆ. ಇದಕ್ಕೆ ಈಶ್ವರಪ್ಪ, ಜಗಧೀಶ್‌ ಶೆಟ್ಟರ್‌ ಕೂಡಾ ಜತೆಯಾಗಿದ್ದಾರೆ. ಈ ಹಿಂದೆ ಕೇಂದ್ರವನ್ನು ಹಳಿಯುತ್ತಿದ್ದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ, ಜನಾರ್ದನ ಪೂಜಾರಿ ಮುಂತಾದವರೆಲ್ಲಾ ಈಗ ಕೇಂದ್ರದ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದೆ ಯಡಿಯೂರಪ್ಪ, ಶೆಟ್ಟರ್‌, ಈಶ್ವರಪ್ಪ ಮುಂತಾದವರ ಬಾಯಿಂದ ಬಂದಿದ್ದ ಅದೇ ವಾಕ್ಯಗಳನ್ನು ಈಗ ಹೇಳುತ್ತಿದ್ದಾರೆ. ಕೇಂದ್ರ ಸಚಿವ ಮುನಿಯಪ್ಪ ಮತ್ತು ರಾಜಶೇಖರನ್‌ ಈಗ ಅನಂತಕುಮಾರ್‌ ಮತ್ತು ವೆಂಕಯ್ಯನಾಯ್ಡು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.

`ಇದ್ದವರು ಇಬ್ಬರಾದರೆ ಕದ್ದವರು ಯಾರು?' ಎಂಬ ಪ್ರಶ್ನೆ ಈಗ ಕೇಳಲೇಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರಗಳಿದ್ದಾಗ ಇದು ಸಂಭವಿಸುತ್ತದೆಯೇ ಅಥವಾ ಕೇಂದ್ರದಲ್ಲಿ ಬೇರೆ ಪಕ್ಷ ಆಡಳಿತ ನಡೆಸುತ್ತಿರುವಾಗ ರಾಜ್ಯದ ಆಡಳಿತಾರೂಢರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ಬಗೆಯ ಆರೋಪಗಳನ್ನು ಮಾಡುತ್ತಾರೆಯೇ? ಈ ಹಿಂದಿನ ಬರ ಪರಿಹಾರ ಮತ್ತು ಈಗಿನ ನೆರೆ ಪರಿಹಾರಗಳೆರಡನ್ನೂ ಒಟ್ಟಿಗಿಟ್ಟುಕೊಂಡು ನೋಡಿದರೆ ರಾಜ್ಯದಲ್ಲಿರುವ ಆಡಳಿತಾರೂಢರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದೇ ನಿಜ ಎನಿಸುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರಕ್ಕೇ ಹೆಚ್ಚು ಅನುಕೂಲತೆಗಳಿರುವುದು ನಿಜ. ಭಾರತದಂಥ ವೈವಿಧ್ಯಮಯ ಮತ್ತು ಭಿನ್ನ ಆರ್ಥಿಕ ಸಂರಚನೆಗಳನ್ನೊಳಗೊಂಡ ವಲಯಗಳಿರು ದೇಶದಲ್ಲಿ ಕೇಂದ್ರ ಸರಕಾರ ಹಣಕಾಸಿನ ಮೇಲೆ ಹೆಚ್ಚಿನ ನಿಯಂತ್ರಣ ಇಟ್ಟುಕೊಂಡು ಎಲ್ಲರಿಗೂ ಸಮಾನವಾಗಿ ಸವಲತ್ತುಗಳನ್ನು ಹಂಚುವುದೇ ಸರಿ. ಆದರೆ ಈ ಹಂಚಿಕೆಯಲ್ಲಿ ಕೇಂದ್ರದ ಆಡಳಿತಾರೂಢರು ಕೆಲ ಮಟ್ಟಿಗಿನ ಮಲತಾಯಿ ಧೋರಣೆಯನ್ನು ತಳೆಯಲು ಸಾಧ್ಯವೇ? ಕೇವಲ ತಾಂತ್ರಿಕವಾಗಿ ಇದನ್ನು ಪರಿಶೀಲಿಸಿದರೆ ಕಾನೂನುಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸರಳ ಉತ್ತರ ನೀಡಬಹುದು. ಆದರೆ ನಮ್ಮ ರಾಜಕಾರಣಿಗಳು ಕಾನೂನುಗಳನ್ನು ಮೀರುವುದರಲ್ಲಿ ನಿಸ್ಸೀಮರು. ಈ ಚಾಣಕ್ಷತನವೇನಿದ್ದರೂ ಒಂದು ರಾಜ್ಯಕ್ಕೆ ಸಿಗಲೇಬೇಕಾದ ಪಾಲನ್ನು ತಡೆಹಿಡಿಯುವುದು ಅಸಾಧ್ಯ. ಅದರಲ್ಲೂ ಪಡೆದುಕೊಳ್ಳಬೇಕಾದ ರಾಜ್ಯದಲ್ಲಿ ಅಸರ್ಟಿವ್‌ ಆದ ಸರಕಾರವೊಂದಿದ್ದರೆ ಕೇಂದ್ರವೇ ಇಕ್ಕಟ್ಟಿಗೆ ಸಿಲುಕಿಬಿಡುತ್ತದೆ.

ಇದಕ್ಕೆ ಕರ್ನಾಟಕದ್ದೇ ಆದ ಒಂದು ಉತ್ತಮ ಉದಾಹರಣೆಯಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ವಿಕೇಂದ್ರೀಕರಣವನ್ನು ಮಹಿಳೆಯರೂ ಸೇರಿದಂತೆ ಎಲ್ಲಾ ಶೋಷಿತ ವರ್ಗಗಳಿಗೂ ಮೀಸಲಾತಿಯನ್ನು ನೀಡಿ ಜಾರಿಗೆ ತಂದದ್ದು ಕರ್ನಾಟಕ. ಇದಕ್ಕಾಗಿ 1983ರಲ್ಲಿ ಕರ್ನಾಟಕ ಜಿಲ್ಲಾಪರಿಷತ್‌, ತಾಲೂಕು ಪಂಚಾಯಿತಿ ಸಮಿತಿ, ಮಂಡಲ ಪಂಚಾಯಿತಿ ಮತ್ತು ನ್ಯಾಯಪಂಚಾಯಿತಿ ಕಾಯ್ದೆಯನ್ನು ರೂಪಿಸಿತು. ಇದು ಸಂವಿಧಾನದ ಸಮವರ್ತಿ ಪಟ್ಟಿ (concurrent list)ನಲ್ಲಿ ಬರುವ ವಿಷಯವಾದುದರಿಂದ ಇದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಕೇಂದ್ರದ ಒಪ್ಪಿಗೆಯ ಅಗತ್ಯವಿತ್ತು. ಸರಳವಾಗಿ ಹೇಳಬೇಕಾದರೆ ರಾಷ್ಟ್ರಪತಿಗಳ ಅಂಕಿತ ಬೇಕಿತ್ತು. 1983ರಲ್ಲಿಯೇ ಈ ಕಾಯ್ದೆ ರಾಷ್ಟ್ರಪತಿ ಭವನ ತಲುಪಿದರೂ 1986 ತನಕವೂ ಇದಕ್ಕೆ ಅವರ ಅಂಕಿ ಬೀಳಲಿಲ್ಲ. ರಾಜ್ಯಗಳಿಂದ ಬರುವ ಕಾಯ್ದೆಗಳಿಗೆ ಅಂಕಿತ ಹಾಕುವ ಮೊದಲು ರಾಷ್ಟ್ರಪತಿಗಳು ಅವನ್ನು ಸಂಬಂಧಪಟ್ಟ ಇಲಾಖೆಗೆ (ಕೇಂದ್ರ ಸರಕಾರದ) ಕಳುಹಿಸುತ್ತಾರೆ. ಅಲ್ಲಿಂದ ಬರುವ ಅಭಿಪ್ರಾಯವನ್ನು ಅವಲಂಬಿಸಿ ಅದಕ್ಕೆ ಒಪ್ಪಿಗೆ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ಪರಿಪಾಠ. ಕರ್ನಾಟಕದ ಪಂಚಾಯಿತಿ ಕಾಯ್ದೆಯನ್ನು ರಾಷ್ಟ್ರಪತಿಗಳು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅಲ್ಲಿಂದ ಯಾವ ಅಭಿಪ್ರಾಯ ಬಂತೋ ಏನೋ. ಒಟ್ಟಿನಲ್ಲಿ ಅವರು ಅಂಕಿತ ಹಾಕಲಿಲ್ಲ.

ಮೂರು ವರ್ಷಗಳ ಕಾಲ ರಾಷ್ಟ್ರಪತಿಗಳ ಒಪ್ಪಿಗೆಗೆ ಕಾದು ಕುಳಿತ ಕರ್ನಾಟಕದ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರ ಕೊನೆಗೆ ಸಹನೆ ಕಳೆದುಕೊಂಡು ಕೇಂದ್ರದ ಜತೆಗೆ ನೇರ ಹಣಾಹಣಿಗೆ ಸಿದ್ಧವಾಯಿತು. ಕಾಯ್ದೆಯನ್ನು ರೂಪಿಸಿದ್ದ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್‌ ನಜೀರ್‌ ಸಾಬ್‌ ಅವರು ನೇರ ದಿಲ್ಲಿಗೆ ಹೋಗಿ ರಾಷ್ಟ್ರಪತಿ ಭವನದ ಎದುರು ಧರಣಿ ಕುಳಿತರು. ಕರ್ನಾಟಕ ಪಂಚಾಯಿತಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಬಿತ್ತು. 1987ರಲ್ಲಿ ಮಂಡಲ ಪಂಚಾಯಿತಿ, ಜಿಲ್ಲಾ ಪರಿಷತ್‌ ಚುನಾವಣೆಗಳು ನಡೆದು ದೇಶಕ್ಕೇ ಮಾದರಿಯಾದ ಪಂಚಾಯತ್‌ರಾಜ್‌ ವ್ಯವಸ್ಥೆ ಕಾರ್ಯರೂಪಕ್ಕೆ ಬಂತು.

ಈ ಘಟನೆ ಒಂದು ವಿಷಯವನ್ನು ಖಚಿತ ಪಡಿಸುತ್ತದೆ. ರಾಜ್ಯ ಸರಕಾರ ಸಂವಿಧಾನದಲ್ಲಿ ಒದಗಿಸಲಾಗಿರುವ ಅವಕಾಶಗಳನ್ನು ಬಳಸಿಕೊಂಡು ಸರಿಯಾದ ರೀತಿಯಲ್ಲಿ ಬೇಡಿಕೆಯನ್ನು ಮಂಡಿಸಿದರೆ ಕೇಂದ್ರ ಇಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಕೇಂದ್ರ `ಇಲ್ಲ' ಎಂದರೆ ಅದರ ಜತೆ ಹಣಾಹಣಿಗೆ ಇಳಿದಾದರೂ ಅದನ್ನು ಸಾಧಿಸಬಹುದು. ಒಂದು ಸಾಂವಿಧಾನಿಕ ಬಿಕ್ಕಟ್ಟನ್ನು ಯಾವ ಸರಕಾರವೂ ಇಚ್ಛಿಸುವುದಿಲ್ಲ. ಇಂಥದ್ದನ್ನು ಸಾಧಿಸುವುದಕ್ಕೆ ಬೇಕಿರುವುದು ಪ್ರಾಮಾಣಿಕತೆ, ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಅರಿವು.
ಎಸ್‌.ಎಂ. ಕೃಷ್ಣ ನೇತೃತ್ವದ ಸರಕಾರ ಮತ್ತು ಈಗಿನ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ದೊಡ್ಡ ಕೊರತೆಯೇ ಇವು. ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಗಳೆರಡನ್ನೂ ಕೇವಲ ಭಾಷಣದ ವೇದಿಕೆಗಳಿಗೆ ಸೀಮಿತವಾಗಿಟ್ಟುಕೊಂಡು ಆಡಳಿತಾತ್ಮಕ ಅರಿವೆಂದರೆ `ಕೆ.ಜಿ.ಗೆ ಎಷ್ಟು?' ಎಂದು ಕೇಳುವವರು ಏನು ಮಾಡಬಹುದೋ ಅದನ್ನು ಎಸ್‌.ಎಂ.ಕೃಷ್ಣ ಸರಕಾರ ಮಾಡಿತ್ತು. ಕುಮಾರಸ್ವಾಮಿ-ಯಡಿಯೂರಪ್ಪ ಬೇರೆಯೇ ಪಕ್ಷಗಳವರಾದರೂ ಕೃಷ್ಣ ಪರಂಪರೆಯನ್ನೇ ಮುಂದುವರಿಸುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ.