ಮಳೆಯ ತಾರದ ಗುಡುಗು ಸಿಡಿಲು

ಎನ್ ಸಂತೋಷ್ ಹೆಗ್ಡೆ/ Snathosh Hegde
ಮಂತ್ರಿಗಳು ಆಗೀಗ ಅಧಿಕಾರಿಗಳ ಬಗ್ಗೆ ಕಿಡಿಕಾರುವುದುಂಟು. ಸರಕಾರ ರೂಪಿಸಿರುವ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಗುಡುಗುವುದು ಮಾಧ್ಯಮಗಳಲ್ಲೂ ಸುದ್ದಿಯಾಗುತ್ತದೆ. ಈ ಗುಡುಗು ಸಿಡಿಲುಗಳೆಲ್ಲವೂ ಮಳೆಯಾಗದೆ ಮುಗಿದು ಹೋಗುವುದು ನಮ್ಮ ನಿತ್ಯದ ಜಂಜಡಗಳಲ್ಲಿ ಮರೆತೂ ಹೋಗುತ್ತವೆ. ಮಂತ್ರಿ ಮಹೋದಯರ ಈ ಗುಡುಗಾಟಕ್ಕೆ ಮಳೆ ತರಿಸುವ ಶಕ್ತಿಯೇ ಇಲ್ಲ ಎಂಬುದು ವಾಸ್ತವ. ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ಸರಕಾರಗಳು ನಡೆಸಿಕೊಳ್ಳುತ್ತಿರುವುದನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆ ಹಿಂದೆಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಲೋಕಾಯುಕ್ತ ಎನ್‌ ಸಂತೋಷ್‌ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿ ಬಸವನಗೌಡರ ಸಮರ್ಥ ನೇತೃತ್ವ ಈ ಸಂಸ್ಥೆಗೆ ದೊರೆತಿದೆ. ಜತೆಗೆ ರೂಪಕ್‌ ಕುಮಾರ್‌ ದತ್ತಾರಂಥ ದಕ್ಷ ಐಪಿಎಸ್‌ ಅಧಿಕಾರಿ ಲೋಕಾಯುಕ್ತ ಪೊಲೀಸ್‌ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದಾರೆ. ಸಾಲು ಸಾಲಾಗಿ ನಡೆಯುತ್ತಿರುವ ಲೋಕಾಯುಕ್ತ ದಾಳಿಯ ಹಿಂದೆ ಕೆಲಸ ಮಾಡುತ್ತಿರುವುದು ಲೋಕಾಯುಕ್ತ ಪೊಲೀಸ್‌ ವ್ಯವಸ್ಥೆಯ ದಕ್ಷತೆ ಎಂಬುದನ್ನು ನಾವು ಮರೆಯುವಂತೆ ಇಲ್ಲ.

ಎನ್‌ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ನಡೆಯುತ್ತಿದ್ದ ದಾಳಿಗಳಿಗೂ ಈಗ ನಡೆಯುತ್ತಿರುವ ದಾಳಿಗಳಿಗೂ ಬಹಳ ವ್ಯತ್ಯಾಸವಿದೆ. ಎನ್‌ ವೆಂಕಟಾಚಲ ಅವರು ದಾಳಿಗಳ ನೇತೃತ್ವವನ್ನು ತಾವೇ ವಹಿಸುತ್ತಿದ್ದರು. ದಾಳಿಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಜರಿರುತ್ತಿದ್ದುದು ತೀರಾ ಸಾಮಾನ್ಯ. ಸರಕಾರೀ ಆಸ್ಪತ್ರೆಗಳ ಹುಳುಕುಗಳನ್ನೆಲ್ಲಾ ಅವರು ಜನರೆದುರು ತೆರೆದಿಟ್ಟರು. ಲೋಕಾಯುಕ್ತರ ಈ ಕ್ರಿಯಾಶೀಲತೆಯಿಂದ ಜನರು ಲೋಕಾಯುಕ್ತ ಎಂಬ ಸಂಸ್ಥೆಯೊಂದಿದೆ ಎಂಬುದನ್ನು ಮೊದಲ ಬಾರಿಗೆ ಅರಿತುಕೊಂಡರು.

ಸಂತೋಷ್‌ ಹೆಗ್ಡೆ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಅವರಿಗೆ ಎದುರಾದದ್ದು `ನೀವು ದಾಳಿಗಳನ್ನು ನಡೆಸುತ್ತೀರಾ?’. ಸಂತೋಷ್‌ ಹೆಗ್ಡೆಯವರ ಉತ್ತರ `ಉತ್ಸಾಹದಾಯಕವಾಗಿ’ ಇರಲಿಲ್ಲ. ಮಾಧ್ಯಮಗಳ ನಿರೀಕ್ಷೆಯಂತೆ ಅವರು `ಗುಡುಗಲಿಲ್ಲ’. ಅವರು ಲೋಕಾಯುಕ್ತರೇ ನಡೆಸುವ ದಾಳಿಗಳ ಮಿತಿಯ ಬಗ್ಗೆ ಮಾತನಾಡಿದರು. ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗಳ ನಡುವಣ ವ್ಯತ್ಯಾಸವನ್ನು ವಿವರಿಸಲು ಪ್ರಯತ್ನಿಸಿದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಲೋಕಾಯುಕ್ತ ಪೊಲೀಸರೇ ದಾಳಿ ನಡೆಸಿದಾಗ ಅದಕ್ಕೆ ಇರುವ ಕಾನೂನಿನ ಬಲದ ಬಗ್ಗೆ ಹೇಳಿದರು. ಈ ಮಾತುಗಳನ್ನೆಲ್ಲಾ ಋಣಾತ್ಮಕವಾಗಿ ಗ್ರಹಿಸಿದವರೇ ಹೆಚ್ಚು. ಆದರೆ ಈಗ ನಮ್ಮ ಕಣ್ಣ ಮುಂದಿರುವ ಚಿತ್ರ ಬೇರೆಯೇ.

***

ಪತ್ರಿ ಬಸವನಗೌಡ/patri basavana goud

ಲೋಕಾಯುಕ್ತರು ದಾಳಿಗಳನ್ನು ನಡೆಸುವುದೇ ಇಲ್ಲ ಎಂದು ಭಾವಿಸಿದ್ದವರಿಗೆ ಆಶ್ಚರ್ಯವಾಗುವಷ್ಟು ದಾಳಿಗಳು ನಡೆದವು. ಸಾಮಾನ್ಯವಾಗಿ ಲೋಕಾಯುಕ್ತರ ದಾಳಿಗಳಿಂದ ಹೊರಗುಳಿಯುತ್ತಿದ್ದ ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳ ಮೇಲೂ ದಾಳಿಗಳು ನಡೆದವು. ಸರಕಾರಿ ಅಧಿಕಾರಿಗಳು ಪ್ರತೀ ವರ್ಷ ಸಲ್ಲಿಸುವ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಬಹಿರಂಗ ಪಡಿಸಬೇಕು ಎಂಬ ಚರ್ಚೆಯೊಂದು ಆರಂಭವಾಯಿತು. ಆಸ್ತಿ ವಿವರ ನೀಡುವ ಅಧಿಕಾರಿಗಳು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ದು ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡಿದ್ದಾರಾದರೂ ಮುಂದೆಂದಾದರೂ ಒಂದು ದಿನ ಅಧಿಕಾರಿಗಳ ಆಸ್ತಿ ವಿವರವೂ ರಾಜಕಾರಣಿಗಳ ಆಸ್ತಿ ವಿವರದಂತೆಯೇ ಬಹಿರಂಗಗೊಳ್ಳಬಹುದು.

ಲೋಕಾಯುಕ್ತ ವ್ಯವಸ್ಥೆಯನ್ನು ಹೊಸ ಬಗೆಯಲ್ಲಿ ಗ್ರಹಿಸುವ ಪ್ರಯತ್ನವೊಂದಕ್ಕೆ ಎನ್‌ ಸಂತೋಷ್‌ ಹೆಗ್ಡೆ ಮತ್ತು ಪತ್ರಿ ಬಸವನಗೌಡ ನಾಂದಿ ಹಾಡಿದ್ದರಿಂದ ಇವೆಲ್ಲವೂ ಸಾಧ್ಯವಾಯಿತು. ಭ್ರಷ್ಟಾಚಾರಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಷ್ಟೇ ಲೋಕಾಯುಕ್ತರ ಕೆಲಸವಲ್ಲ ಎಂಬುದನ್ನು ಸಂತೋಷ್‌ ಹೆಗ್ಡೆ ತಾವು ಅಧಿಕಾರ ಸ್ವೀಕರಿಸಿದಂದೇ ಸ್ಪಷ್ಟ ಪಡಿಸಿದ್ದರು. ಆಡಳಿತ ಸುಧಾರಣಾ ಕ್ರಿಯೆಯ ನಿರಂತರತೆಯನ್ನು ಕಾಯ್ದುಕೊಳ್ಳುವ ಕೆಲಸ ಲೋಕಾಯುಕ್ತ ಸಂಸ್ಥೆಯದ್ದು ಎಂಬುದು ಅವರ ನಂಬಿಕೆ. ಇದರ ಭಾಗವಾಗಿ ಅವರು ಆಸ್ತಿ ನೋಂದಣಿ ಕ್ರಿಯೆಯ ಸರಳೀಕರಣ, ಶಾಲೆಗಳ ಸುರಕ್ಷತೆಯನ್ನು ಖಚಿತ ಪಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿಸುವುದು ಹೀಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

***

ಭ್ರಷ್ಟಾಚಾರವೆಂಬ ಮದೋನ್ಮತ್ತ ಆನೆಯನ್ನು ಮಣಿಸಲು ಕಾಯ್ದೆಯ ಮಿತಿಯೊಳಗೆ ಲೋಕಾಯುಕ್ತ ಸಂಸ್ಥೆ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವುದಕ್ಕೆ ರಾಜಕಾರಣಿಗಳು ಏನು ಮಾಡಿದ್ದಾರೆ?

ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ಸಾಲಿನ ಭರವಸೆಯೊಂದನ್ನು ನೀಡಿದೆ. `ಭ್ರಷ್ಟಾಚಾರವನ್ನು ತಡೆಗಟ್ಟುವುದು-ಲೋಕಾಯುಕ್ತವನ್ನು ಬಲಪಡಿಸುವುದು’ (ಬಿಜೆಪಿ ಪ್ರಣಾಳಿಕೆ, ಪುಟ ಸಂಖ್ಯೆ-62).

ಬಿಜೆಪಿ ಆಡಳಿತಕ್ಕೆ ಬಂದರೆ ಪ್ರಣಾಳಿಕೆಯೇ ಬಜೆಟ್‌ ಎಂದಿದ್ದ ಯಡಿಯೂರಪ್ಪನವರು ಬಜೆಟ್‌ ಮಂಡಿಸುವ ಸಮಯದಲ್ಲಿ ಪ್ರಣಾಳಿಕೆ ಮರೆತಂತೆ ಲೋಕಾಯುಕ್ತರ ಕೈ ಬಲ ಪಡಿಸುವ ವಿಷಯವನ್ನೂ ಮರೆತು ಬಿಟ್ಟಿದ್ದಾರೆ. ಜೆ.ಎಚ್‌.ಪಟೇಲ್‌ ಒಬ್ಬರನ್ನು ಹೊರತು ಪಡಿಸಿದರೆ ಉಳಿದ ಯಾವ ಮುಖ್ಯಮಂತ್ರಿಯೂ ಲೋಕಾಯುಕ್ತರು ಕೇಸು ದಾಖಲಿಸಲು ಅನುಮತಿ ಕೇಳಿದಾಗ ಒಪ್ಪಿಕೊಂಡಿಲ್ಲ. ಇದಕ್ಕೆ ಇರುವ ಕಾರಣಗಳೇನು ಎಂಬುದನ್ನು ಹುಡುಕುವುದಕ್ಕೆ ಒಂದು ತನಿಖಾ ಆಯೋಗವೇ ಬೇಕು ಅನ್ನಿಸುತ್ತದೆ.

***

ಲೋಕಾಯುಕ್ತ ಸಂಸ್ಥೆ ಹಲ್ಲು, ಉಗುರುಗಳಿಲ್ಲದ ಹುಲಿಯಂತೆ ಇರುವುದರ ಬಗ್ಗೆ ಲೋಕಾಯುಕ್ತರು ಬಹಳಷ್ಟು ಬಾರಿ ಮಾತನಾಡಿದ್ದಾರೆ. ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ಆಸ್ತಿ ವಿವರ ಸಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾನೂನಿನ ಸೂಕ್ಷ್ಮಗಳನ್ನು ಹುಡುಕಿ ಅವರಲ್ಲಿ ನಡುಕ ಹುಟ್ಟಿಸುವಲ್ಲಿಯೂ ಲೋಕಾಯುಕ್ತರು ಯಶಸ್ವಿಯಾಗಿದ್ದರು. ಆದರೆ ಅಧಿಕಾರಿಗಳನ್ನು ಬಗ್ಗಿಸಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಲೋಕಾಯುಕ್ತರ ಕೈ ಬಲ ಪಡಿಸುವ ಭರವಸೆ ನೀಡಿರುವ ರಾಜಕೀಯ ಪಕ್ಷ ಕೂಡಾ ಲೋಕಾಯುಕ್ತರ ದಾಳಿಗೆ ಒಳಗಾದ ಅಧಿಕಾರಿಗಳನ್ನು ಅವೇ ಹುದ್ದೆಗಳಲ್ಲಿ ಮುಂದುವರೆಸುವುದನ್ನು ನೋಡಿ ಲೋಕಾಯುಕ್ತರು ಮೊನ್ನೆ ಮತ್ತೊಮ್ಮೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಲೋಕಾಯುಕ್ತ ಪೊಲೀಸರು ನಡೆಸುವ ದಾಳಿಗಳಲ್ಲಿ ಪತ್ತೆಯಾಗುವ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಿದ್ಧಪಡಿಸುವುದಕ್ಕೆ ಕೆಲವೊಮ್ಮೆ ವರ್ಷಗಳಷ್ಟು ತಡವಾಗುವುದೂ ಉಂಟು. ಈ ಅವಧಿಯಲ್ಲಿ ಅಧಿಕಾರಿ ತನ್ನ ಹಳೆಯ ಹುದ್ದೆಯಲ್ಲೇ ಮುಂದುವರೆದರೆ ಸಾಕ್ಷ್ಯಗಳನ್ನು ನಾಶಪಡಿಸುವ ಎಲ್ಲಾ ಸಾಧ್ಯತೆಗಳಿವೆ. ದುರದೃಷ್ಟವಶಾತ್‌ ಇದನ್ನು ತಡೆಯುವ ಯಾವ ವ್ಯವಸ್ಥೆಯೂ ಸರಕಾರದ ಬಳಿ ಇಲ್ಲ. ಹೆಚ್ಚೆಂದರೆ ಈ ಅಧಿಕಾರಿಗಳನ್ನು ಆರು ತಿಂಗಳುಗಳ ಕಾಲ ಅಮಾನತು ಮಾಡಲಾಗುವುದು. ಈ ಅವಧಿ ಮುಗಿದ ತಕ್ಷಣ ಅವರು ತಮ್ಮ ಹಳೆಯ ಹುದ್ದೆಗೇ ವಕ್ಕರಿಸಿಕೊಳ್ಳುತ್ತಾರೆ. ಕೆಲವರು ಬಡ್ತಿಗಳನ್ನೂ ಪಡೆಯುತ್ತಾರೆ.

ಮೊನ್ನೆ ಮೊನ್ನೆಯಷ್ಟೇ ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್‌ ಒಬ್ಬರು ಹೀಗೆ ತಮ್ಮ ಹಳೆಯ ಹುದ್ದೆಗೇ ವಕ್ಕರಿಸಿದರು. ಅವರನ್ನು ಸ್ವಾಗತಿಸುವುದಕ್ಕೆ ಕಚೇರಿಯಲ್ಲಿ ಪುಷ್ಪಗುಚ್ಛಗಳ ದೊಡ್ಡ ರಾಶಿಯೇ ಇತ್ತು. ಲೋಕಾಯುಕ್ತರು ಈ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ನಂತರ ಅವರನ್ನು ಆ ಹುದ್ದೆಯಿಂದ ವರ್ಗಾಯಿಸಲಾಯಿತು.

***

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರೊಬ್ಬರು ನೇತೃತ್ವ ವಹಿಸಿರುವ ಸಂಸ್ಥೆಯೊಂದಕ್ಕೆ ಸರಕಾರ ನೀಡುವ ಗೌರವ ಇದು. ಮಾಧ್ಯಮಗಳಲ್ಲಿ ಕಟು ಟೀಕೆಗಳು ಪ್ರಕಟವಾದ ನಂತರವಷ್ಟೇ ಸರಕಾರ ಎಚ್ಚೆತ್ತುಕೊಂಡಿತು. ಹೀಗೆ ಕಣ್ಣು ಮುಚ್ಚಿ ಹಾಲು ಕುಡಿಯುವ ಸರಕಾರದ ವರ್ತನೆಯ ಹಿಂದಿನ ರಹಸ್ಯವೇನು?

ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ದಾಳಿಗಳಲ್ಲಿ ಸಿಕ್ಕಿಬಿದ್ದ ಎಲ್ಲ ಪ್ರಭಾವೀ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಅನುಮತಿ ನೀಡಿದ್ದು ಜೆ ಎಚ್‌ ಪಟೇಲ್‌ ಅವರ ಸರಕಾರ ಮಾತ್ರ. ಉಳಿದವರೆಲ್ಲರೂ ಲೋಕಾಯುಕ್ತರು ಆರೋಪ ಪಟ್ಟಿ ಸಲ್ಲಿಸದಂತೆ ತಡೆದಿದ್ದಾರೆ. ಇದೇಕೆ ಎಂಬುದಕ್ಕೆ ಹೆಚ್ಚಿನ ವಿವರಣೆಗಳು ಬೇಕಾಗಿಲ್ಲ. ಅಧಿಕಾರಿಗಳ ಭ್ರಷ್ಟಾಚಾರದಲ್ಲಿ ರಾಜಕಾರಣಿಗಳಿಗೆ ಇರುವ ಪಾಲು ಮುಖ್ಯ ಕಾರಣ. ಇನ್ನು ಧರ್ಮ, ಜಾತಿ, ಒಳ ಜಾತಿಗಳ ವ್ಯವಹಾರ ಬೇರೆಯೇ ಇದೆ.

ವಿರೋಧ ಪಕ್ಷದ ನಾಯಕರಾಗಿದ್ದಾಗ ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದ್ದ ಯಡಿಯೂರಪ್ಪ ಇದಕ್ಕೆ ಹೊರತಾಗಿರುತ್ತಾರೆ ಎಂಬ ನಂಬಿಕೆ ಜನರಲ್ಲಿ ಈಗಲೂ ಉಳಿದಿದೆ. ಇದನ್ನು ನಿಜವಾಗಿಸಲಾದರೂ ಯಡಿಯೂರಪ್ಪನವರು ಲೋಕಾಯುಕ್ತರಿಗೆ ಹೆಚ್ಚಿನ ಶಕ್ತಿ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಲೋಕಾಯುಕ್ತರ ದಾಳಿಗಳ ಮೂಲಕ ಬಹಿರಂಗಗೊಳ್ಳುವ ಅಕ್ರಮ ಆಸ್ತಿಯ ವಿವರಗಳು ಅಧಿಕಾರಿಗಳ ಅಕ್ರಮ ಸಂಪಾದನೆಯ ಪ್ರಮಾಣದ ಸೂಚ್ಯಂಕ ಮಾತ್ರವಾಗಿ ಉಳಿಯುತ್ತದೆ.

ಮಂತ್ರಿಗಳೆಂಬ ಅಭಿನವ ಫರೋಅಗಳು

ಇರಾನ್‌ನ ಖ್ಯಾತ ಚಿಂತಕ ಅಲೀ ಶರೀಅತಿ ಅವರು ತಮ್ಮ ಲೇಖನವೊಂದರಲ್ಲಿ ಈಜಿಪ್ಟ್‌ನ ಪಿರಾಮಿಡ್‌ಗಳನ್ನು ನೋಡಿದ ಅನುಭವವನ್ನು ಬರೆದಿದ್ದಾರೆ. ಪಿರಾಮಿಡ್‌ಗಳೆಂಬ ಅದ್ಭುತಗಳ ಬಗ್ಗೆ ಅಲ್ಲಿನ ಮಾರ್ಗದರ್ಶಿಯ ಮಾತುಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸುತ್ತಾ ಹೋಗುವ ಅವರು ಪಿರಾಮಿಡ್‌ ನಿರ್ಮಾಣದ ಹಿಂದಿನ ಕ್ರೌರ್ಯವನ್ನು ವಿವರಿಸುತ್ತಾರೆ. ಕೈರೋದಲ್ಲಿರುವ ಆರು ದೊಡ್ಡ ಮತ್ತು ಮೂರು ಸಣ್ಣ ಪಿರಾಮಿಡ್‌ಗಳ ನಿರ್ಮಾಣಕ್ಕೆ ಬಳಕೆಯಾದದ್ದು ಸುಮಾರು ಎಂಟುನೂರು ದಶ ಲಕ್ಷ ಬೃಹತ್‌ ಗಾತ್ರದ ಕಲ್ಲುಗಳು. ಪಿರಾಮಿಡ್‌ಗಳನ್ನು ನಿರ್ಮಿಸಿದ ಸ್ಥಳದಿಂದ ಸುಮಾರು 980 ಮೈಲುಗಳ ದೂರದಿಂದ ಈ ಕಲ್ಲುಗಳನ್ನು ತರಲಾಯಿತು. ಪ್ರತಿಯೊಂದು ಕಲ್ಲು ಒಂದೂವರೆಯಿಂದ ಎರಡು ಟನ್‌ಗಳಷ್ಟು ಭಾರವಿದೆ. ಈಗಿನಂತೆ ಕಲ್ಲುಗಳನ್ನು ಎತ್ತಿಡಲು ಕ್ರೇನುಗಳಾಗಲೀ, ಸಾಗಿಸಲು ಯಾಂತ್ರೀಕೃತ ಟ್ರಕ್‌ಗಳಾಗಲೀ ಇಲ್ಲದ ಆ ದಿನಗಳಲ್ಲಿ ಗುಲಾಮರನ್ನು ಬಳಸಿಕೊಂಡೇ ಇವೆಲ್ಲವನ್ನೂ ಮಾಡಲಾಯಿತು.

ಕಲ್ಲುಗಳನ್ನು ತರುವ ಕೆಲಸದಲ್ಲೇ ಎಷ್ಟೋ ಮಂದಿ ಕಲ್ಲುಗಳಡಿಗೆ ಸಿಕ್ಕಿ ಮೃತಪಟ್ಟರು. ಕಲ್ಲುಗಳನ್ನು ಎತ್ತಿ ಇಟ್ಟು ಪಿರಾಮಿಡ್‌ ನಿರ್ಮಿಸುವ ಕ್ರಿಯೆಯಲ್ಲಿ ಸತ್ತವರು ಅದೆಷ್ಟು ಮಂದಿಯೋ. ಅವರನ್ನೆಲ್ಲಾ ಪಿರಾಮಿಡ್‌ಗಳ ಪಕ್ಕದಲ್ಲೇ ಇರುವ ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು. ಪಿರಾಮಿಡ್‌ನ ಒಳಗಿರುವ ಮೃತ ಫರೋಅನ ಸೇವೆಗೆಂದು ಅವರನ್ನು ಪಿರಾಮಿಡ್‌ನ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತಂತೆ. ಸತ್ತ ಮೇಲೂ ಅವರು ಜೀತ ವಿಮುಕ್ತರಾಗಲಿಲ್ಲ!

ಇದೇನು ಕೇವಲ ಈಜಿಪ್ಟಿನ ಪಿರಾಮಿಡ್‌ಗಳಿಗೆ ಮಾತ್ರ ಸೀಮಿತವಾದದ್ದಲ್ಲ. ಚೀನಾದ ಮಹಾಗೋಡೆಯನ್ನು ನಿರ್ಮಿಸುವಾಗಲಂತೂ ಒಂದು ಅಡಿ ಗೋಡೆ ಒಂದು ಜೀವವನ್ನು ಬಲಿತೆಗೆದುಕೊಂಡಿದೆಯಂತೆ. ಈ ಎಲ್ಲಾ ಕ್ರೌರ್ಯಗಳು ನಡೆದದ್ದು ಪ್ರಜಾಪ್ರಭುತ್ವವೆಂಬ ಪರಿಕಲ್ಪನೆ ಜನ್ಮತಳೆಯುವ ಮೊದಲು. ರಾಜನೇ ಪ್ರತ್ಯಕ್ಷ ದೇವರಾಗಿದ್ದ ದಿನಗಳಲ್ಲಿ. ಈಗ ಕಾಲ ಬದಲಾಗಿದೆ. ರಾಜನನ್ನು ಪ್ರಜೆಯೇ ಆರಿಸುವ ದಿನಗಳಿವು. ರಾಜಕಾರಣಿಗಳೆಲ್ಲಾ ಚುನಾವಣೆಯ ದಿನಗಳಲ್ಲಿ ಜನತಾ ಜನಾರ್ದನನನ್ನು ಪೂಜಿಸುವ ಕಾಲವಿದು. ಚುನಾವಣೆಗಳ ಫಲಿತಾಂಶ ಬಂದು ಸರಕಾರ ರಚನೆಯಾದ ತಕ್ಷಣ ಜನತೆಯನ್ನು ಜನಾರ್ದನನೆಂದು ಪೂಜಿಸಿದವರೆಲ್ಲಾ ಈಜಿಪ್ಟ್‌ನ ಫರೋಅಗಳಾಗಿ ಬಿಡುತ್ತಾರೆ. ಫರೋಅಗಳು ಸತ್ತ ನಂತರ ಇರಬೇಕಾದ `ಭವನ’ದ ನಿರ್ಮಾಣಕ್ಕೆ ಲಕ್ಷಾಂತರ ಜನರನ್ನು ಪ್ರಾಣ ಹೋಗುವ ತನಕ ದುಡಿಸಿಕೊಂಡರು. ಅಭಿನವ ಫರೋಅಗಳು ಜನರು ಸೂರಿಲ್ಲದೆ ಸಾಯುತ್ತಿರುವ ಹೊತ್ತಿನಲ್ಲೂ ತಾವು ಅಧಿಕಾರದಲ್ಲಿರುವಷ್ಟು ದಿನ ಮಾತ್ರ ವಾಸಿಸಬೇಕಾದ ಭವನಗಳ ನವೀಕರಣಕ್ಕೆ ತೆರಿಗೆಯ ಹಣವನ್ನು ಮನ ಬಂದಂತೆ ಚೆಲ್ಲುತ್ತಿದ್ದಾರೆ.

***

ಧಾರ್ಮಿಕ ನಂಬಿಕೆಗಳಿಗೆ ಒಂದು ತರ್ಕದ ಅಗತ್ಯವಿಲ್ಲ. ಪ್ರತಿಯೊಬ್ಬನೂ ತನಗೆ ಬೇಕಾದ ಧರ್ಮವನ್ನೂ ಅದರ ನಂಬಿಕೆಗಳನ್ನೂ ಆಚರಿಸುವುದಕ್ಕೆ ಸಂವಿಧಾನ ಅವಕಾಶ ಒದಗಿಸಿದೆ. ಇದಕ್ಕೆ ಜನಪ್ರತಿನಿಧಿಯೂ ಹೊರತಲ್ಲ. ಅವನ ಈ ನಂಬಿಕೆಗಳು ಜನ ಸಾಮಾನ್ಯನ ತೆರಿಗೆಯ ಹಣವನ್ನು ವೆಚ್ಚ ಮಾಡುವ ಮಟ್ಟಕ್ಕೆ ಬೆಳೆದರೆ ಅದನ್ನು ಖಂಡಿಸಲೇ ಬೇಕಾಗುತ್ತದೆ. ಕರ್ನಾಟಕದ ಯಡಿಯೂರಪ್ಪ ಸಚಿವ ಸಂಪುಟದ ಹದಿನೇಳು ಮಂದಿ ಸಚಿವರು ತಮಗೆ ನೀಡಿರುವ ಅಧಿಕೃತ ನಿವಾಸಗಳ ನವೀಕರಣಕ್ಕೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. ಈ ವೆಚ್ಚಕ್ಕೆ ಬಹುಮುಖ್ಯ ಕಾರಣ `ವಾಸ್ತು ದೋಷ’ಗಳನ್ನು ಸರಿಪಡಿಸುವುದಂತೆ.

ಕಂದಾಯ ಸಚಿವ ಕರುಣಾಕರ ರೆಡ್ಡಿ ತೆಲುಗು ಸಿನಿಮಾ ನಟನೊಬ್ಬನ ಮನೆಯಂತೆ ತಮ್ಮ ಅಧಿಕೃತ ನಿವಾಸವನ್ನು ಬದಲಾಯಿಸಿಕೊಂಡಿದ್ದಾರೆಂಬ ಆರೋಪ ಸದನದಲ್ಲೇ ಕೇಳಿಬಂತು. ಈ ನವೀಕರಣಕ್ಕೆ ಸರಕಾರ ವೆಚ್ಚ ಮಾಡಿರುವ ಹಣ 16.58 ಲಕ್ಷ ರೂಪಾಯಿಗಳು. ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಿ. ಸುಧಾಕರ್‌ ಅಧಿಕೃತ ನಿವಾಸದ ನವೀಕರಣಕ್ಕೆ 14 ಲಕ್ಷ ರೂಪಾಯಿಗಳಷ್ಟು ಖರ್ಚಾಗಿದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವ ಪಿ. ಎಂ. ನರೇಂದ್ರ ಸ್ವಾಮಿಯವರ ಮನೆಯ ನವೀಕರಣಕ್ಕೆ 12 ಲಕ್ಷ ರೂಪಾಯಿಗಳು, ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ನವೀಕರಣಕ್ಕೆ 11.30 ಲಕ್ಷ ರೂಪಾಯಿಗಳು ವೆಚ್ಚವಾಗಿದೆ.  ಇನ್ನುಳಿದಂತೆ ಸಣ್ಣ ಕೈಗಾರಿಕಾ ಸಚಿವ ವೆಂಕಟರಮಣಪ್ಪ, ವಸತಿ ಸಚಿವ ಕೃಷ್ಣಯ್ಯ ಶೆಟ್ಟಿ, ಸಾರಿಗೆ ಸಚಿವ ಆರ್‌. ಅಶೋಕ್‌ ಅವರ ನಿವಾಸಗಳ ನವೀಕರಣಕ್ಕೆ ತಲಾ ಹತ್ತು ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿದೆ. ಸಭಾಧ್ಯಕ್ಷ ಜಗದೀಶ್‌ ಶೆಟ್ಟರ್‌ 9.25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿಸಿ ಅಧಿಕೃತ ನಿವಾಸವನ್ನು ನವೀಕರಿಸಿದ್ದಾರೆ. ಲೋಕೋಪಯೋಗಿ ಸಚಿವ ಸಿ. ಎಂ. ಉದಾಸಿ, ಇಂಧನ ಸಚಿವ ಈಶ್ವರಪ್ಪ, ನೀರಾವರಿ ಸಚಿವ ಗೋವಿಂದ ಕಾರಜೋಳ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಯ ಸಚಿವೆ ಶೋಭಾ ಕರಂದ್ಲಾಜೆಯವರು ಕ್ರಮವಾಗಿ 7.18 ಲಕ್ಷ, 6ಲಕ್ಷ, 5.35 ಲಕ್ಷ, 4 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಮನೆ ನವೀಕರಿಸಿದ್ದಾರೆ.

ಬೆಂಗಳೂರು ನಗರವೊಂದರಲ್ಲಿಯೇ 700 ಕೊಳಚೆ ಪ್ರದೇಶಗಳಿವೆ. ಇಲ್ಲಿರುವ ಗೂಡುಗಳಂಥ ಗುಡಿಸಲುಗಳಲ್ಲಿ ಲಕ್ಷಾಂತರ ಮಂದಿ ಬದುಕುತ್ತಿದ್ದಾರೆ. ಪ್ರತೀ ವರ್ಷ ಮಳೆಗಾಲದಲ್ಲಿ ಬೆಂಗಳೂರಿನಲ್ಲೇ ಕನಿಷ್ಠ ಹತ್ತು ಮಂದಿಯಾದರೂ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಗಟ್ಟಿಯಾದ ಮನೆಗಳಿಲ್ಲದೆ ಮಳೆಗಾಲದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಬೇರೆಯೇ ಇದೆ. ತಲೆಯ ಮೇಲೊಂದು ಸೂರಿರಲಿ ಎಂಬ ಆಸೆಯಿಂದ ವರ್ಷಗಳಿಂದ ಆಶ್ರಯ ಮನೆಗಳಿಗಾಗಿ ಕಾಯುತ್ತಿರುವವರ ಸಂಖ್ಯೆಯಂತೂ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇಂಥ ಸ್ಥಿತಿಯಿರುವ ರಾಜ್ಯದ ಮಂತ್ರಿಯೊಬ್ಬ ತನ್ನ ಅಧಿಕೃತ ನಿವಾಸವನ್ನು ನವೀಕರಿಸುವುದಕ್ಕೆ ಹಲವಾರು ಲಕ್ಷಗಳನ್ನು ವ್ಯಯಿಸಿದರೆ ಆತ ಈಜಿಪ್ಟ್‌ನ ಕ್ರೂರ ಫರೋಅಗಳಿಗಿಂತ ಹೇಗೆ ಭಿನ್ನ?

ಸರಕಾರ ಆಶ್ರಯ, ಇಂದಿರಾ ಆವಾಜ್‌ನಂಥ ಯೋಜನೆಗಳ ಅಡಿಯಲ್ಲಿ ಒಂದು ಮನೆ ಕಟ್ಟುವುದಕ್ಕೆ ಬಿಡುಗಡೆ ಮಾಡುವ ಹಣ 25,000 ರೂಪಾಯಿಗಳು. ನಮ್ಮ ಮಂತ್ರಿಗಳು ಮನೆಗಳ ನವೀಕರಣಕ್ಕೆ ವೆಚ್ಚ ಮಾಡಿರುವ ದುಡ್ಡಿನಲ್ಲಿ 462 ಆಶ್ರಯ ಮನೆಗಳನ್ನು ನಿರ್ಮಿಸಬಹುದಿತ್ತು. ಗಣಿ ಉದ್ಯಮಿಯಾಗಿರುವ ಕರುಣಾಕರ ರೆಡ್ಡಿಯವರಿಗೆ ಈ ಸೂಕ್ಷ್ಮ ಅರ್ಥವಾಗದೇ ಇರುವ ಸಾಧ್ಯತೆ ಇದೆ. ಆದರೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌.ಯಡಿಯೂರಪ್ಪನವರಿಗೆ ಇದು ತಿಳಿದಿಲ್ಲ ಎಂದು ಭಾವಿಸಲು ಸಾಧ್ಯವೇ? ವಸತಿ ಸಚಿವ ಕೃಷ್ಣಯ್ಯನವರಿಗಂತೂ ಈ ಲೆಕ್ಕಾಚಾರ ಸರಿಯಾಗಿ ಗೊತ್ತಿರಲೇ ಬೇಕು. ವಸತಿ ಹೀನರಿಗೆ ವಸತಿ ಕಲ್ಪಿಸುವುದೇ ಅವರು ನಿರ್ವಹಿಸುವ ಖಾತೆಯ ಮುಖ್ಯ ಕೆಲಸ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯನ್ನು ನಿರ್ವಹಿಸುತ್ತಿರುವ ಶೋಭಾ ಕರಂದ್ಲಾಜೆಯವರೂ ತಮ್ಮ ಮನೆಯ ನವೀಕರಣಕ್ಕೆ ನಾಲ್ಕು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿರುವುದು ತಮಾಷೆಯಾಗಿ ಕಾಣುತ್ತಿದೆ. ಅವರು ಮಂತ್ರಿ ಸ್ಥಾನವನ್ನು ಸ್ವೀಕರಿಸಿದ ನಂತರ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಗ್ರಾಮ ವಾಸ್ತವ್ಯ ನಡೆಸುತ್ತೇನೆ ಎಂದಿದ್ದರು. ಭವ್ಯ ಬಂಗಲೆಯಂಥ ಅಧಿಕೃತ ನಿವಾಸವನ್ನು ವಾಸಯೋಗ್ಯವಾಗಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದವರು ಹಳ್ಳಿಗಳಲ್ಲಿರುವ ಮನೆಗಳಲ್ಲಿ ಅದು ಹೇಗೆ ವಾಸ್ತವ್ಯ ಮಾಡುತ್ತಾರೋ?

***

ಅಧಿಕೃತ ನಿವಾಸದ ನವೀಕರಣಕ್ಕೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವುದು, ವಾಸ್ತುಶಾಸ್ತ್ರದ ನಂಬಿಕೆಗಳಿಗೆ ಅನುಸಾರವಾಗಿ ಕಟ್ಟಡದ ಸ್ವರೂಪವನ್ನು ಬದಲಾಯಿಸುವುದು ಕೇವಲ ಬಿಜೆಪಿಗೆ ಮೀಸಲಾದ ಪಿಡುಗೇನೂ ಅಲ್ಲ. ದೇವರಾಜ ಅರಸು ಅವರ ಕಾಲದಿಂದಲೂ ಮಂತ್ರಿಗಳಿಗೆ ಈ ರೋಗ ಅಂಟಿಕೊಂಡಿದೆ. ಎಚ್‌.ಡಿ.ದೇವೇಗೌಡ ಮತ್ತು ಎಸ್‌.ಎಂ.ಕೃಷ್ಣ ಅವರ ಆಡಳಿತಾವಧಿ ಈ ನವೀಕರಣಗಳ ಉಚ್ಛ್ರಾಯ ಕಾಲ ಎನ್ನಬಹುದು. ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ನವೀಕರಣಕ್ಕೆ ಎಸ್‌. ಎಂ. ಕೃಷ್ಣ ವೆಚ್ಚ ಮಾಡಿದ ಹಣದಲ್ಲಿ ಇನ್ನೂರು ಆಶ್ರಯ ಮನೆಗಳನ್ನು ನಿರ್ಮಿಸಬಹುದಿತ್ತು. ಧರ್ಮಸಿಂಗ್‌, ಕುಮಾರಸ್ವಾಮಿ ಕೂಡಾ ಇದೇ ಪರಂಪರೆಯನ್ನು ಮುಂದುವರಿಸಿದ್ದರು. ಈಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ಈ ಪರಂಪರೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಈ `ಪ್ರತಿನಿಧಿ’ಗಳಿಗೆ ಜನರ ಮೇಲೆ ನಂಬಿಕೆ ಇಲ್ಲ ಎಂಬುದನ್ನಂತೂ ಅವರ `ನಂಬಿಕೆ’ಗಳೇ ಸಾಬೀತು ಮಾಡುತ್ತಿವೆ.

ಜನರ ನಿರೀಕ್ಷೆಗಳಂತೆ ನಡೆದುಕೊಂಡರೆ ಅವರು ಅಧಿಕಾರ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅದು ಸಾಧ್ಯವಾಗದಿದ್ದರೆ ಯಾವ ವಾಸ್ತು ಶಾಸ್ತ್ರವೂ ಅವರ ಅಧಿಕಾರವನ್ನು ಉಳಿಸುವುದಿಲ್ಲ. ಎಸ್‌. ಎಂ. ಕೃಷ್ಣ ಅರ್ಧ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ನಂತರವೂ ಅವರ ಅಧಿಕಾರವೇನೂ ಶಾಶ್ವತವಾಗಿ ಉಳಿಯಲಿಲ್ಲ. ವಾಸ್ತುವಿನ ಪ್ರಕಾರ ಸರಿಯಾಗಿದ್ದ ಮನೆಯಲ್ಲಿ ಇದ್ದ ಕಾರಣಕ್ಕೆ ಆರ್‌. ವಿ. ದೇಶಪಾಂಡೆ ಹತ್ತು ವರ್ಷ ಮಂತ್ರಿಯಾಗಿದ್ದರೆಂದು ಈಗಿನ ಮಂತ್ರಿಗಳೆಲ್ಲಾ ನಂಬುತ್ತಾರೆ. ಆದರೆ ದೇಶಪಾಂಡೆ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಚುನಾವಣೆಯಲ್ಲಿ ಸೋತರು.

***

ಯಾರ ಸೋಲಿನಿಂದ ಯಾರೂ ಪಾಠ ಕಲಿಯುವುದಿಲ್ಲ ಎಂಬುದು ರಾಜಕಾರಣದ ಮಟ್ಟಿಗೆ ಶಾಶ್ವತ ಸತ್ಯ. ಆದರೆ ಕೆಲವೊಮ್ಮೆ ಬದಲಾವಣೆ ಎಂಬುದು ಅನಿರೀಕ್ಷಿತವಾದ ಮೂಲಗಳಿಂದ ಆರಂಭವಾಗಿಬಿಡುತ್ತದೆ. ವಾಸ್ತು, ಹೋಮ, ಹವನ, ಪೂಜೆ, ಯಾಗಗಳನ್ನು ಅತಿಯಾಗಿ ನಂಬುವ ದೇವೇಗೌಡರ ಮತ್ತು ಕುಟುಂಬದವರ ನೇತೃತ್ವದಲ್ಲಿರುವ ಪಕ್ಷದ ಸದಸ್ಯ ಎಂ.ಸಿ. ನಾಣಯ್ಯ ರಾಜಕಾರಣಿಗಳು ತಮ್ಮ `ನಂಬಿಕೆ’ಗಳಿಗಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು ತಡೆಯಲು ಬೇಕಿರುವ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ಅಭಿನವ ಫರೋಅಗಳ ಆಡಳಿತ ಯುಗದಲ್ಲಿ ಈ ಮಸೂದೆ ಎಂದಾದರೂ ಚರ್ಚೆಗೆ ಬರಬಹುದೇ?