
ಯುಪಿಎ ಸರಕಾರ ವಿಶ್ವಾಸ ಮತ ಯಾಚಿಸಲು ಕರೆದಿದ್ದ ಅಧಿವೇಶನದ ಎರಡನೆಯ ದಿನ ಮತದಾನ ನಡೆಯುವ ಸ್ವಲ್ಪ ಹೊತ್ತಿಗೆ ಮೊದಲು ಮೂವರು ಬಿಜೆಪಿ ಸಂಸದರು ನೋಟಿನ ಕಟ್ಟುಗಳನ್ನು ಲೋಕಸಭೆಯಲ್ಲಿ ಪ್ರದರ್ಶಿಸಿದರು. ಮತದಾನದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಈ ಹಣದ ಆಮಿಷವನ್ನೊಡ್ಡಲಾಗಿತ್ತು ಎಂದು ಆರೋಪಿಸಿದರು. ದೇಶದ ಮೂಲೆ ಮೂಲೆಗಳಲ್ಲಿರುವವರೆಲ್ಲಾ ಟಿ.ವಿ.ಯಲ್ಲಿ ಈ ದೃಶ್ಯವನ್ನು ಕಂಡರು. ಸ್ಪೀಕರ್ ಸೋಮನಾಥ ಚಟರ್ಜಿ ಈ ಸಂಗತಿಯ ಕುರಿತ ತನಿಖೆಯ ಭರವಸೆಯನ್ನೂ ನೀಡಿದರು. ಯುಪಿಎ ವಿಶ್ವಾಸ ಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಯಿತು.
ಈ ಎಲ್ಲಾ ಘಟನಾವಳಿಗಳ ನಂತರ ಎಲ್ಲಾ ಪಕ್ಷಗಳ ಮುಖಂಡರಂತೆ ಸಿಪಿಐ (ಎಂ)ನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕೂಡಾ ಮಾಧ್ಯಮಗಳ ಜತೆ ಮಾತನಾಡಿದರು. ಅವರು ಹೇಳಿದ ಒಂದು ಮಾತು ಹೀಗೆ `ನಮ್ಮ ಮಿತ್ರ ಪಕ್ಷಗಳ ಹಲವು ಸದಸ್ಯರಿಗೆ ಲಂಚದ ಆಮಿಷವನ್ನೊಡ್ಡಲಾಗಿತ್ತು. ಆದರೆ ನಮ್ಮ ಪಕ್ಷದ ಸದಸ್ಯರಿಗೆ ಮಾತ್ರ ಇಂಥ ಆಮಿಷಗಳಿರಲಿಲ್ಲ. ಕಾರಣ ನಮ್ಮ ಪಕ್ಷದ ಸದಸ್ಯರನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿತ್ತು’. ಈ ಹೇಳಿಕೆಯನ್ನು ಅಹಂಕಾರದ ಹೇಳಿಕೆ ಎಂದು ಕೇಡರ್‌ಗಳಿಲ್ಲದ ಪಕ್ಷದ ನಾಯಕರು ಹೇಳಬಹುದಾದರೂ ಇದು ವಾಸ್ತವ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂಥ ಬದ್ಧತೆಗಳು ಅಗತ್ಯ ಎಂಬುದರಲ್ಲಿಯೂ ಸಂಶಯವಿಲ್ಲ. ತನ್ನ ಸದಸ್ಯರನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಇರುವ ಪಕ್ಷವೊಂದು ತನ್ನ ಹಿರಿಯ ಸದಸ್ಯನೊಬ್ಬ ಅಂತಃಸ್ಸಾಕ್ಷಿಗೂ, ದೇಶದ ಸಂವಿಧಾನಕ್ಕೂ ಬದ್ಧತೆಯನ್ನು ತೋರಿಸಿದಾಗ ಏಕೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಮಾತ್ರ ಆಶ್ಚರ್ಯದ ವಿಷಯ.