ಪ್ರಾಯೋಗಿಕ ನಿಲುವೆಂಬ ಭ್ರಷ್ಟರ ಸಮರ್ಥನೆ

ರ್ನಾಟಕದ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ತಕ್ಷಣ ಬಂದ ಬೌದ್ಧಿಕ ಜಗತ್ತಿನ ಪ್ರತಿಕ್ರಿಯೆಗಳಲ್ಲಿ ಮೊದಲನೆಯದ್ದು ಮತ್ತು ಬಹಳ ಮುಖ್ಯವಾದುದು ಡಾ.ಯು.ಆರ್‌. ಅನಂತಮೂರ್ತಿಯವರದ್ದು. `ಯಾರು ಬಂದರೇನು? ಎಲ್ಲರೂ ಭ್ರಷ್ಟರೇ…’ ಎಂಬ ಸಿನಿಕ ಪ್ರತಿಕ್ರಿಯೆಯ ಬದಲಿಗೆ ಅವರು ರಚನಾತ್ಮಕವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಹನ್ನೊಂದು ಅಂಶಗಳ ಜನತಾ ಪ್ರಣಾಳಿಕೆಯೊಂದರ ಕರಡನ್ನು ಬಿಡುಗಡೆ ಮಾಡಿ ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಪೂರ್ಣಗೊಳಿಸೋಣ ಎಂದರು. ಈ ಪ್ರಣಾಳಿಕೆಗೆ ಬಂದ ಪ್ರತಿಕ್ರಿಯೆಗಳು ಬಹಳ ಕುತೂಹಲಕಾರಿ. ರಾಜಕೀಯ ಪಕ್ಷಗಳಿಗೆಲ್ಲಾ ಒಂದೊಂದು ಪ್ರಣಾಳಿಕೆಯಿದ್ದಂತೆ ಜನತೆಗೂ ಒಂದು ಪ್ರಣಾಳಿಕೆ ಇರುತ್ತದೆ ಎಂಬುದನ್ನು ಹೇಳಿದ ಅನಂತಮೂತಿರ್ಯವರ ನಿಲುವನ್ನು ಹಲವರು ಶ್ಲಾಘಿಸಿದರು. ವಿವಿಧ ಚಳವಳಿಗಳಲ್ಲಿ ತೊಡಗಿಕೊಂಡಿರುವ ಹಲವರು, ರಾಜಕಾರಣ ಪರಿಶುದ್ಧವಾಗಿರಬೇಕೆಂದು ಬಯಸುವವರು ಅನಂತಮೂರ್ತಿಯವರು ಮಂಡಿಸಿದ ಹನ್ನೊಂದು ಸೂತ್ರಗಳಿಗೆ ಪೂರಕವಾಗಿ ಒಂದಷ್ಟು ಅಂಶಗಳನ್ನು ಸೇರಿಸಿದರು.

ಇನ್ನೊಂದು ವರ್ಗ ಅನಂತಮೂರ್ತಿಯವರನ್ನು ಮನಸೋ ಇಚ್ಛೆ ಹಳಿಯಲಾರಂಭಿಸಿತು. ಅದು ಈಗಲೂ ಮುಂದುವರಿದಿದೆ. ಹೀಗೆ ಬೈಯುವವರಲ್ಲಿ ಎರಡು ಬಗೆ. ಒಂದು ವರ್ಗದವರು ಅನಂತಮೂತಿರ್ಯವರು ಏನು ಮಾಡಿದರೂ ಅದನ್ನು ಟೀಕಿಸಬೇಕೆಂದು ಪಣ ತೊಟ್ಟವರು. ಮತ್ತೊಂದು ವರ್ಗದವರಿಗೆ ಈ ಬಗೆಯ ಹಟವೇನೂ ಇಲ್ಲ. ಅವರ ದೃಷ್ಟಿಯಲ್ಲಿ ರಾಜಕಾರಣ ಎಂಬುದು ಜ್ಞಾನಪೀಠ ಪುರಸ್ಕೃತರಿಗೆ ಹೇಳಿಕೊಳ್ಳುವಂಥದ್ದಲ್ಲ. ಅದು ಕೊಳಕು ರಾಡಿ. ಅದರ ಆಗುಹೋಗುಗಳಿಗೆ ಸಾಹಿತಿಯೊಬ್ಬ ಪ್ರತಿಕ್ರಿಯಿಸುವುದು ಆತನ ವ್ಯಕ್ತಿತ್ವಕ್ಕೆ ಶೋಭಿಸುವುದಿಲ್ಲ.

ಈ ಎರಡೂ ಗುಂಪಿಗೆ ಸೇರದ ಮತ್ತೊಂದು ವರ್ಗವಿದೆ. ಇದನ್ನು ಸಿನಿಕರ ಬಳಗ ಎಂದು ಗುರುತಿಸಬಹುದೇನೋ. ಈ ಸಿನಿಕರ ಬಳಗ ಅನಂತಮೂರ್ತಿಯವರು ಜನರೆದುರು ಇಟ್ಟ ಕರಡು ಪ್ರಣಾಳಿಕೆಯ ಹನ್ನೊಂದು ಅಂಶಗಳಲ್ಲಿ `ಮೀಸಲಾತಿ ಪಡೆದವರಿಗೆ ಮತ್ತೆ ಮೀಸಲಾತಿ ಬೇಡ’ ಎಂಬ ಅಂಶವೊಂದನ್ನುಳಿದು ಉಳಿದೆಲ್ಲವೂ ಅಪ್ರಾಯೋಗಿಕ. ಅತಿ ಆದರ್ಶದ ಮಾತುಗಳು ಎಂದು ನಿರಾಕರಿಸಿಬಿಟ್ಟಿತು.

* * *

ಅನಂತಮೂರ್ತಿಯವರ ಪ್ರಣಾಳಿಕೆಯ ಹನ್ನೊಂದು ಅಂಶಗಳು ಈ ಕೆಳಗಿನಂತೆ ಸಂಕ್ಷೇಪಿಸಬಹುದು.

1.ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು.

2.ಎಲ್ಲ ಮಕ್ಕಳಿಗೂ ಹತ್ತನೇ ತರಗತಿಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ದೊರೆಯಬೇಕು.

3.ನಮ್ಮ ನಗರಗಳು ಬೆಳೆಯುವಾಗ ಅವು ವೃದ್ಧರಿಗೂ ಅಂಗವಿಕಲರಿಗೂ ಮಕ್ಕಳಿಗೂ ಅಹ್ಲಾದಕರವಾಗಿರಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನವನಗಳು. ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶ, ಸೈಕಲ್‌ನಲ್ಲಿ ಓಡಾಡುವವರಿಗೆ ಅವರದೇ ಮಾರ್ಗಗಳು ಬೇಕು.

4.ಬಡಪಾಯಿಗಳಾದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಮೀಸಲಾತಿ ಬೇಕು.

5.ಈಗಾಗಲೇ ಮೀಸಲಾತಿ ಪಡೆದವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಬೇಡ. ಬದಲಿಗೆ ಆ ವರ್ಗಗಳಲ್ಲಿ ಈವರೆಗೂ ಏನೂ ಸಿಗದವರಿಗೆ ಈ ಸವಲತ್ತು ದೊರೆಯಬೇಕು.

6.ವೋಟುಗಳಿಸಲು ಕೋಮು, ಭಾಷೆ, ಜಾತಿಗಳ ನಡುವೆ ವೈಷಮ್ಯವನ್ನು ಬೆಳೆಸುವ ಮಾಧ್ಯಮಗಳ ಲಾಭಕೋರತನದ ಹವಣಿಕೆಗಳಿಗೂ ರಾಜಕಾರಣಿಗಳ ಪ್ರಚಾರಗಳಿಗೂ ನಿರ್ಬಂಧಗಳಿರಬೇಕು.

7.ಕೃಷಿಯೋಗ್ಯ ಭೂಮಿಯನ್ನು ವಿಶೇಷ ಆರ್ಥಿಕ ವಲಯಗಳಿಗಾಗಿ ವಶಪಡಿಸಿಕೊಳ್ಳಬಾರದು.

8.ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಬೇಕು.

9.ದೊಡ್ಡ ಮಾಲ್‌ಗಳ ಬದಲಿಗೆ ಹಲವು ವ್ಯಾಪಾರಿಗಳು ನಡೆಸುವ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು.

10.ಭೂಮಿಯ ತಾಪವನ್ನು ಹೆಚ್ಚಿಸುವ ಸಕಲ ಜೀವಿಗಳಿಗೆ ಮೃತ್ಯು ಪ್ರಾಯವಾದ ಅಮೆರಿಕಾ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲಿ ವ್ಯಕ್ತವಾಗಬೇಕು.

11.ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯುತ್ತಿಗೂ ಜಲಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನ ಲೋಕದಲ್ಲಿ ಆದ್ಯಂತೆ ಇರುವಂತೆ ನೋಡಿಕೊಳ್ಳಬೇಕು.

ಈ ಪ್ರಣಾಳಿಕೆಗೆ ಪ್ರತಿಕ್ರಿಯಿಸಿದ ಸಿನಿಕರ ಬಳಗದ ಪ್ರತಿನಿಧಿಯೊಬ್ಬರು `ಸಾಮಾನ್ಯ ಶಾಲೆಗಳು, ಉದ್ಯಾನವನಗಳಿರುವ ನಗರಗಳು, ಪ್ರತ್ಯೇಕ ಸೈಕಲ್‌ ಲೇನ್‌ಗಳೆಲ್ಲಾ ಅಮೆರಿಕಾದಲ್ಲಿವೆ. ಕರ್ನಾಟಕದ ಎಲ್ಲರಿಗೂ ಅಮೆರಿಕಾಕ್ಕೆ ವಿಸಾ ಕೊಟ್ಟರೆ ಸಮಸ್ಯೆ ಪೂರ್ಣ ಪರಿಹಾರ!’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ಈ ಸಿನಿಕ ಪ್ರತಿಕ್ರಿಯೆ ಕೂಡಾ ಜನತಾ ಪ್ರಣಾಳಿಕೆಯ ಪ್ರಾಯೋಗಿಕತೆಯನ್ನು ಹೇಳುತ್ತಿದೆ ಎಂಬುದೇ ಇಲ್ಲಿನ ತಮಾಷೆ. ಆಧುನಿಕ ಅಭಿವೃದ್ಧಿಯ ಪ್ರವಾದಿಗಳಿಗೆಲ್ಲಾ ಬಹುದೊಡ್ಡ ಮಾದರಿ ಅಮೆರಿಕ. ಅಲ್ಲಿನ ಸಾಮಾನ್ಯ ಶಾಲೆಗಳೂ ಮಕ್ಕಳಿಗೂ ಮುದುಕರಿಗೂ ಅಂಗವಿಕಲರಿಗೂ ಸಹ್ಯವಾದ ನಗರಗಳೇಕೆ ನಮಗೆ ಮಾದರಿಯಾಗುತ್ತಿಲ್ಲ?

* * *

ಕರ್ನಾಟಕದ ರಾಜಕಾರಣ ಕೋಮು ಉನ್ಮಾದ, ಅಧಿಕಾರ ಲಾಲಸೆ, ಜಾತಿ ಜಗಳಗಳ ಆಡೊಂಬಲವಾಗಿರುವುದರಿಂದ ಬೇಸರಗೊಂಡು ಸಿನಿಕರ ಬಳಗದ ಸದಸ್ಯರಾಗಬಹುದಾಗಿದ್ದವರು ರವಿ ಕೃಷ್ಣಾ ರೆಡ್ಡಿ. ಮೂವತ್ಮೂರು ವರ್ಷ ವಯಸ್ಸಿನ ಇವರು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಮರಿಕದಲ್ಲಿ ಕೈತುಂಬಾ ಸಂಬಳ ತರುವ ಕೆಲಸವೂ ಇದೆ. ಕನ್ನಡ ಮತ್ತು ಇಂಗ್ಲಿಷ್‌ಗಳೆರಡರಲ್ಲೂ ಚೆನ್ನಾಗಿ ಬರೆಯುವ ಕೌಶಲ್ಯವೂ ಇದೆ. ಹಾಗಾಗಿ ಸಿನಿಕ ಅಭಿಪ್ರಾಯಗಳನ್ನು ಪ್ರಚುರ ಪಡಿಸುವುದೂ ಇವರಿಗೆ ಬಹಳ ಸುಲಭ. ಈ ಸುಲಭದ ಹಾದಿಯನ್ನು ಬಿಟ್ಟು ಅವರು ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯ ಮತ್ತು ನೈತಿಕತೆಗಳಿಗೆ ಆಗ್ರಹಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಿನಿಕರ ಬಳಗದ ದೃಷ್ಟಿಯಲ್ಲಿ ಇದೂ ಅಪ್ರಾಯೋಗಿಕ. ಏಕೆಂದರೆ ರವಿ ಗೆಲ್ಲುವ ಸಾಧ್ಯತೆ ಇಲ್ಲ. ಮೌಲ್ಯಗಳಿಗಾಗಿ ಆಗ್ರಹಿಸಿ ಉಪವಾಸ ಮಾಡಿದರೆ ಯಾರು ಕೇಳುತ್ತಾರೆ? ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

* * *

ಸಮಾನತೆ, ಪರಿಸರ ಅಭಿವೃದ್ಧಿ, ನೈತಿಕತೆ ಮುಂತಾದುವುಗಳೆಲ್ಲಾ ಅಪ್ರಾಯೋಗಿಕ ಎಂದರೆ ಪ್ರಾಯೋಗಿಕವಾದುದೇನು?

ಸುಳ್ಳು ಭರವಸೆಗಳನ್ನು ನೀಡುವುದು, ಓಟಿಗಾಗಿ ಲಂಚ ಪಡೆದು ಗೆದ್ದ ನಂತರ ಅದನ್ನು ಮರಳಿ ಗಳಿಸುವುದು, ಕೋಮು ದ್ವೇಷವನ್ನು ಹುಟ್ಟು ಹಾಕುವುದು, ಅಕ್ರಮವಾಗಿ ಆಸ್ತಿ ಸಂಪಾದಿಸುವುದು, ದೇಶದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ಗಣಿಗಾರಿಕೆ ನಡೆಸುವುದು, ದೊಡ್ಡ ಕಾರುಗಳು ವೇಗವಾಗಿ ಚಲಿಸಲು ಸಾಧ್ಯವಿರುವ ದೊಡ್ಡ ರಸ್ತೆಗಳನ್ನು ನಿರ್ಮಿಸುವುದು, ಸರಕಾರೀ ಶಾಲೆಗಳನ್ನು ದೊಡ್ಡಿಗಳನ್ನಾಗಿಸುವುದು ಮುಂತಾದುವುಗಳೆಲ್ಲಾ ಪ್ರಾಯೋಗಿಕವಾದ ಕ್ರಿಯೆಗಳು ಎನ್ನಬಹುದೇ?

ಅಭಿಪ್ರಾಯ ರೂಪಿಸುವ ಸ್ಥಾನದಲ್ಲಿ ನಿಂತಿದ್ದೇನೆಂದು ಭಾವಿಸುವ ಸಿನಿಕರ ಬಳಗ ಇವೆಲ್ಲವೂ ಪ್ರಾಯೋಗಿಕವೇ ಸರಿ ಎಂಬ ಸಿನಿಕ ವಾದವನ್ನು ಮಂಡಿಸಿದರೂ ಆಶ್ಚರ್ಯವಿಲ್ಲ. ಆದರೆ ವಾಸ್ತವ ಇಷ್ಟೊಂದು ನಿರಾಶಾದಾಯಕವಾಗಿಲ್ಲ. ಅನಂತಮೂರ್ತಿ ಮತ್ತು ರವಿ ಕೃಷ್ಣಾ ರೆಡ್ಡಿಯವರ ವೈಯಕ್ತಿಕ ಮಟ್ಟದ ಪ್ರತಿಕ್ರಿಯೆಗಳಿಗಿಂತ ಭಿನ್ನವಾದ ಸಾಮುದಾಯಿಕ ಪ್ರತಿಕ್ರಿಯೆಯೊಂದೂ ರೂಪುಗೊಂಡಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ನೂರಾರು ಸಂಘಟನೆಗಳು ಒಂದಾಗಿ ಜನತೆಯ ಪ್ರಣಾಳಿಕೆಯೊಂದನ್ನು ಪ್ರಕಟಿಸಿವೆ. ಈ ಎಲ್ಲಾ ಪ್ರಯತ್ನಗಳ ಫಲವೇನು ಎಂಬುದನ್ನು ಚುನಾವಣೆಯ ಫಲಿತಾಂಶಗಳೇ ಹೇಳಬೇಕು.

ಇತಿಹಾಸವನ್ನು ನೋಡಿದರೆ ಸಿನಿಕರ ಮಾತುಗಳನ್ನು ಸಮರ್ಥಿಸುವ ಉದಾಹರಣೆಗಳು ಸಿಗುವುದಿಲ್ಲ. ದೇಶದಲ್ಲೆಲ್ಲೂ ಇಲ್ಲದ ವಾಜಪೇಯಿ ಅಲೆ ಕರ್ನಾಟಕದಲ್ಲಿ ಇದ್ದಾಗಲೂ ಕರ್ನಾಟಕದ ಜನತೆ ಬಿಜೆಪಿಗೆ ಆಡಳಿತ ನಡೆಸುವಷ್ಟು ಸ್ಥಾನಗಳನ್ನು ನೀಡಲಿಲ್ಲ. ಹಾಗೆಯೇ ಇಡೀ ದೇಶ ಎನ್‌ಡಿಎಯ `ಪ್ರಕಾಶಮಾನ ಭಾರತ’ವನ್ನು ಕಂಡು ಕಂಗಾಲಾಗಿದ್ದರೂ ಕಾಂಗ್ರೆಸ್‌ ಮಾತ್ರ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನೂ ನೀಡಲಿಲ್ಲ. ಸಮ್ಮಿಶ್ರ ಸರಕಾರ ಅಗತ್ಯ ಎನ್ನುವ ವಾತಾವರಣವನ್ನು ಮತದಾರರು ಸೃಷ್ಟಿಸಿದರು. ಇದರಲ್ಲೊಂದು ಸ್ಪಷ್ಟ ಸಂದೇಶವಿತ್ತು. ನೀವ್ಯಾರೂ ನಮ್ಮ ಪ್ರಣಾಳಿಕೆಯನ್ನು ಗಮನಿಸಲಿಲ್ಲ ಎಂಬುದೇ ಆ ಸಂದೇಶ.

ಬ್ಲಾಗುಗಳಲ್ಲಿ ಬಡಬಡಿಸುವವರಿಗೂ ಪತ್ರಿಕೆಗಳಲ್ಲಿ ಕರೆ ನೀಡುವವರಿಗೂ ಟಿ.ವಿ.ಸ್ಟುಡಿಯೋಗಳಲ್ಲಿ ಕುಳಿತು ಜನರ ನಾಡಿ ಮಿಡಿತವನ್ನು ಅಳೆಯುವವರಿಗೂ ಇದು ಅರ್ಥವಾಗಬೇಕಾಗಿದೆ. ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮೊದಲೇ ತನ್ನ ಆಯ್ಕೆಯನ್ನು ಖಚಿತ ಪಡಿಸಿಕೊಂಡಿರುವ ಭಾರತೀಯ ಮತದಾರ ವಿಶ್ಲೇಷಕರ ಲೆಕ್ಕಾಚಾರಗಳನ್ನು ತಪ್ಪಿಸಬೇಕು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡಿರುತ್ತಾನೆ.

ಗೆಲ್ಲುವ ಕುದುರೆಯೂ ಕೃತಿ ಚೌರ್ಯದ ಹಕ್ಕೂ

ಹರಿದಾಸ್ ಮುಂದ್ರಾ ಹಗರಣಕ್ಕೆ ಈಗ ಅರವತ್ತು ತುಂಬುತ್ತಿದೆ. ಸ್ವತಂತ್ರ ಭಾರತದ ಮೊದಲ ಹಣಕಾಸು ಹಗರಣ ಎನ್ನಬಹುದಾದ ಈ ಪ್ರಕರಣ ಭಾರತದ ಭ್ರಷ್ಟಾಚಾರದ ಇತಿಹಾಸದಲ್ಲೊಂದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಪ್ರಕರಣ ಬಯಲಿಗೆ ತಂದದ್ದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಅಳಿಯ ಫಿರೋಜ್ ಗಾಂಧಿ. ಈ ಪ್ರಕರಣ ಮಾವ ಮತ್ತು ಅಳಿಯನ ಮಧ್ಯೆ ಬಹುದೊಡ್ಡ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ಈ ಭಿನ್ನಾಭಿಪ್ರಾಯಗಳೇನೇ ಇದ್ದರೂ ನೆಹರು ಈ ಹಗರಣದ ತನಿಖೆಗೆ ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ನೇತೃತ್ವದ ಆಯೋಗವೊಂದನ್ನು ರಚಿಸಿದ್ದರು. ಆಯೋಗದ ಶಿಫಾರಸನ್ನು ಕಾರ್ಯರೂಪಕ್ಕೂ ತಂದರು.

ಹಗರಣದ ಸ್ವರೂಪ ಹೀಗಿದೆ. ಭಾರತೀಯ ಜೀವ ವಿಮಾ ನಿಗಮ ಆಗಷ್ಟೇ ಸ್ಥಾಪನೆಯಾಗಿತ್ತು. ಎಲ್ಲಾ ವಿಮಾ ಕಂಪೆನಿಗಳಂತೆಯೇ ಭಾರತೀಯ ಜೀವ ವಿಮಾ ನಿಗಮವೂ (ಎಲ್ಐಸಿ) ವಿಮಾದಾರರಿಂದ ಸಂಗ್ರಹಿಸಿದ ಹಣವನ್ನು ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿತ್ತು. ಇದರ ಭಾಗವಾಗಿ Richardson Cruddas, Jessops, Smith Stanistreet, Osler Lamps, Agnelo Brothers ಮತ್ತು British India Corporation. ಎಂಬ ಕಂಪೆನಿಗಳ ಷೇರುಗಳನ್ನು ಖರೀದಿಸಿತು. ಹಗರಣದ ಮೂಲವಿರುವುದು ಖರೀದಿಗಳಲ್ಲಿ. ಆರೂ ಕಂಪೆನಿಗಳು ಕೊಲ್ಕತ್ತಾ ಮೂಲದ ಉದ್ಯಮಿ ಹರಿದಾಸ್ ಮುಂದ್ರಾ ಎಂಬಾತನಿಗೆ ಸೇರಿದ್ದವು. ಎಲ್ಲಾ ಕಂಪೆನಿಗಳೂ ಲಾಭದಾಯಕವಾಗಿರಲಿಲ್ಲ ಎಂಬುದಷ್ಟೇ ಅಲ್ಲದೇ ತೀವ್ರ ಹಣಕಾಸಿನ ಸಂಕಷ್ಟವನ್ನೂ ಎದುರಿಸುತ್ತಿದ್ದವು. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಈ ಕಂಪೆನಿಗಳ ಷೇರುಗಳನ್ನು ಎಲ್ಐಸಿ ಖರೀದಿಸಿತ್ತು. ಆ ಕಾಲಕ್ಕೇ ಈ ಮೊತ್ತ 1.24 ಕೋಟಿ ರೂಪಾಯಿಗಳಷ್ಟಿತ್ತು. ಈ ಖರೀದಿಗಳ ಹಿಂದೆ ಹರಿದಾಸ್ ಮುಂದ್ರಾ ಕೈವಾಡವಿತ್ತು. ಹಗರಣವನ್ನು ಫಿರೋಜ್ ಗಾಂಧಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ ಅಂದಿನ ಹಣಕಾಸು ಸಚಿವ ಕೆ.ಕೆ. ಕೃಷ್ಣಮಾಚಾರಿ `ಇದು ಸಾಧ್ಯವೇ ಇಲ್ಲ’ ಎಂದು ಅಲ್ಲಗಳೆದಿದ್ದರು. ಮುಂದೆ ಅವರೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡರು. ಜವಹರಲಾ್ ನೆಹರು ಆರಂಭದಲ್ಲಿ ಮುಜುಗರಕ್ಕೀಡಾದರೂ ಜನನಾಯಕನ ಧೈರ್ಯ ತೋರಿದರು. ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ನೇತೃತ್ವದ ಆಯೋಗಕ್ಕೆ ತನಿಖೆಯನ್ನು ಒಪ್ಪಿಸಿದರು.

ಎಂ.ಸಿ. ಚಾಗ್ಲಾ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಧೋರಣೆಗೆ ಮಾದರಿ ಎನಿಸಬಹುದಾದ ತನಿಖೆ ನಡೆಸಿ ಅಂದಿನ ಹಣಕಾಸು ಕಾರ್ಯದರ್ಶಿ ಎಚ್.ಎಂ. ಪಟೇಲ್, ಎಲ್ಐಸಿಯ ಇಬ್ಬರು ಅಧಿಕಾರಿಗಳು ಮತ್ತು ಹಣಕಾಸು ಸಚಿವ ಕೆ.ಕೆ. ಕೃಷ್ಣಮಾಚಾರಿ ಈ ಅಕ್ರಮ ಷೇರು ಖರೀದಿಗಳಿಗೆ ಜವಾಬ್ದಾರರು ಎಂಬ ನಿರ್ಣಯಕ್ಕೆ ಬಂದರು. ಹಣಕಾಸು ಕಾರ್ಯದರ್ಶಿ ಮತ್ತು ಎ್ಐಸಿಯ ಇಬ್ಬರು ಅಧಿಕಾರಿಗಳು ಈ ಖರೀದಿಗೆ ನೇರವಾಗಿ ಜವಾಬ್ದಾರರಾಗಿದ್ದರೆ ಹಣಕಾಸು ಸಚಿವರು ಸಾಂವಿಧಾನಿಕವಾಗಿ ಜವಾಬ್ದಾರಿ ಹೊರ ಬೇಕಾಗುತ್ತದೆ ಎಂದು ಚಾಗ್ಲಾ ಹೇಳಿದ್ದರು. ಕೆ.ಕೆ. ಕೃಷ್ಣಮಾಚಾರಿ `ಸಾಂವಿಧಾನಿಕ ಜವಾಬ್ದಾರಿ’ ಹೊತ್ತು ರಾಜೀನಾಮೆ ನೀಡಿದರು. ಉಳಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಯಿತು. ಪ್ರಕರಣದ ರೂವಾರಿ ಹರಿದಾಸ್ ಮುಂದ್ರಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೂ ಆಯಿತು.

* * *

ಜವಹರಲಾ್ ನೆಹರು ಪ್ರಧಾನಿಯಾಗಿದ್ದಾಗಲೇ ಇಹಲೋಕ ತ್ಯಜಿಸಿದರು. ಕೊನೆಗೊಂದು ದಿನ ಇಂದಿರಾಗಾಂಧಿ ಪ್ರಧಾನಿಯಾದರು. ಹರಿದಾಸ್ ಮುಂದ್ರಾ ಹಗರಣದಲ್ಲಿ ಆರೋಪಿಯಾಗಿದ್ದ ಹಣಕಾಸು ಕಾರ್ಯದರ್ಶಿ ಎಚ್.ಎಂ. ಪಟೇಲ್ ಸ್ವತಂತ್ರ ಪಾರ್ಟಿ ಸೇರಿ ರಾಜಕಾರಣಿಯಾದರು. ಇಂದಿರಾ ಸರಕಾರದ ಭ್ರಷ್ಟತೆಯ ವಿರುದ್ಧ ಜಯಪ್ರಕಾ್ ನಾರಾಯಣ್ ದೊಡ್ಡ ಆಂದೋಲನವನ್ನೇ ನಡೆಸಿದರು. ಭಾರತದ ಜನತೆ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರಕಾರವೊಂದನ್ನು ಆರಿಸಿದರು. ಮೊರಾರ್ಜಿ ದೇಸಾಯಿ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ವತಂತ್ರ ಭಾರತದ ಮೊದಲ ಬೃಹ್ ಹಣಕಾಸು ಹಗರಣದ ಆರೋಪಿ ಎಚ್ ಎಂ ಪಟೇಲ್ ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದರು!

ಎಲ್ಐಸಿ ಯಾವ ಷೇರುಗಳನ್ನು ಖರೀದಿಸಬೇಕು ಎಂಬ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಎಚ್.ಎಂ. ಪಟೇಲ್ ಅವರಿಗೆ ಬಹು ಮುಖ್ಯ ಪಾತ್ರವಿತ್ತು. ಯಾರು ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಯಾರಿಗೂ ಮುಚ್ಚಿಡಲು ಸಾಧ್ಯವಿರಲಿಲ್ಲ. ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿಸಿಕೊಂಡಿದ್ದವರು ಮಾತ್ರ ಈ ವಿಷಯವನ್ನು ಮರೆತಿದ್ದರು. ಎಚ್.ಎಂ. ಪಟೇ್ ಹಣಕಾಸು ಸಚಿವರಾದ ನಂತರ ಅವರನ್ನು `ಪ್ರಾಮಾಣಿಕ ಅಧಿಕಾರಿ’, `ದೇದೀಪ್ಯಮಾನ ಸೇವಾ ದಾಖಲೆ ಹೊಂದಿದವರು’ ಎಂದೆಲ್ಲಾ ಸಮರ್ಥಿಸಿಕೊಳ್ಳಲಾಯಿತು.

* * *

ಈಗ ಕರ್ನಾಟಕದ ವಿಧಾನಸಭೆಗೆ ಚುನಾವಣೆಗಳು ನಡೆಯುತ್ತಿವೆ. ವಾಸ್ತವದಲ್ಲಿ ಚುನಾವಣಾ ವಿಷಯ ಎಂಬುದೊಂದಿಲ್ಲ. ಆದರೆ ಬಿಜೆಪಿ ಇದನ್ನು ಒಪ್ಪುವುದಿಲ್ಲ. ಬಿಜೆಪಿ – ಜೆಡಿಎಸ್ ಮೈತ್ರಿಕೂಟದ ಸರಕಾರ ಪತನವಾದ ದಿನದಿಂದಲೂ ಅದು ನಡೆಸುತ್ತಿರುವ ಪ್ರಚಾರ ಅಭಿಯಾನದಲ್ಲಿ ಮೇಲಿಂದ ಮೇಲೆ ಎರಡು ವಿಷಯಗಳನ್ನು ಪ್ರಸ್ತಾಪಿಸುತ್ತಿದೆ. ಒಂದು ಜೆಡಿಎಸ್ ನ ವಿಶ್ವಾಸ ದ್ರೋಹ ಮತ್ತೊಂದು ಗಣಿ ಲಂಚ ಹಗರಣ. ಬಿಜೆಪಿಯ ಮಟ್ಟಿಗೆ ತಾತ್ವಿಕವಾಗಿಯಾದರೂ ಭ್ರಷ್ಟಾಚಾರ ಮತ್ತು ವಿಶ್ವಾಸ ದ್ರೋಹಗಳೆರಡೂ ಚುನಾವಣಾ ವಿಷಯಗಳು.

ಕೆಲ ಕಾಲದ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪಿಎಚ್ ಡಿ ಹಗರಣವೊಂದರಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಾಧ್ಯಾಪಕರ ಪಿಎಚ್ ಡಿ ವಿದ್ಯಾರ್ಥಿಯೊಬ್ಬ ನಡೆಸಿದ ಕೃತಿಚೌರ್ಯ ಹಗರಣದ ಕೇಂದ್ರ ಬಿಂದು. ಈ ಶಿಷ್ಯೋತ್ತಮ ಕೃತಿ ಚೌರ್ಯ ಮಾಡಿದ್ದು ತನ್ನ ಮಾರ್ಗದರ್ಶಕರ ಪಿಎ್ಡಿ ಪ್ರಬಂಧವನ್ನು. ತಮ್ಮದೇ ಮಹಾಪ್ರಬಂಧವನ್ನೇ ಶಿಷ್ಯ ಕದ್ದಿದ್ದರೂ ಅದರ ಕುರಿತು ಗುರುಗಳು ತೆಪ್ಪಗಿದ್ದರು. ಅಂದರೆ ಕದಿಯುವಿಕೆಗೆ ಅವರ ಒಪ್ಪಿಗೆಯೂ ಇತ್ತು. ಈ ಕುರಿತಂತೆ ಮೂರು ಸಮಿತಿಗಳು ತನಿಖೆ ನಡೆಸಿದವು. ಕೊನೆಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರು `ಮಾರ್ಗದರ್ಶಕ’ ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದ್ದರು. ಈ ಪಿಎಚ್ ಡಿ ಹಗರಣದ ವಿರುದ್ಧ ಬಿಜೆಪಿಯ ವಿದ್ಯಾರ್ಥಿ ವಿಭಾಗದಂತೆ ಕಾರ್ಯಾಚರಿಸುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತ್ತು. ಈ ಹಗರಣ ಬೆಳಕಿಗೆ ಬಂದ ದಿನಗಳಲ್ಲೇ ಈ ಪ್ರಾಧ್ಯಾಪಕರು ಟಿ.ವಿ. ಕ್ಯಾಮೆರಾಗಳ ಎದುರು ಕುಲಾಧಿಪತಿಗಳಾಗಿದ್ದ ರಾಜ್ಯಪಾಲರನ್ನು ವಾಚಾಮಗೋಚರವಾಗಿ ನಿಂದಿಸಿದ್ದರು.

ಈ ಪ್ರಾಧ್ಯಾಪಕರೀಗ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗಣಿ ಲಂಚ ಹಗರಣ ಮತ್ತು ವಿಶ್ವಾಸದ್ರೋಹಗಳನ್ನು ಚುನಾವಣಾ ವಿಷಯವನ್ನಾಗಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಅವರಿಗೆ ಬೆಂಗಳೂರಿನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಈ ಟಿಕೆಟ್ ಸೇರಿದಂತೆ ತನ್ನ ಒಟ್ಟು ಟಿಕೆಟ್ ನೀಡಿಕೆ ನೀತಿಯೇನು ಎಂಬುದನ್ನೂ ಬಿಜೆಪಿ ಸ್ಪಷ್ಟ ಪಡಿಸಿದೆ – `ಗೆಲ್ಲುವ ಕುದುರೆಗಳಿಗೆ ಟಿಕೆಟ್’.

ಈ ನೀತಿಯ ಬೆಳಕಿನಲ್ಲಿ ಕೃತಿಚೌರ್ಯದ ಮಾರ್ಗದರ್ಶಕರಿಗೆ ಟಿಕೆಟ್ ನೀಡಿರುವುದನ್ನು ಹೇಗೆ ವಿಶ್ಲೇಷಿಸುವುದು? ಇದಕ್ಕೆ ಇರುವ ಉತ್ತರ ಸರಳ. ಪುಲಿಕೇಶಿ ನಗರದ ಜನರು ಕೃತಿಚೌರ್ಯವನ್ನು ಸಮರ್ಥಿಸುತ್ತಾರೆ. ರಾಜ್ಯಪಾಲರು ನಿಯಮಬದ್ಧವಾಗಿ ನಡೆದುಕೊಳ್ಳುವುದು ತಪ್ಪು ಎಂದು ಭಾವಿಸುತ್ತಾರೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ ಕುಲಾಧಿಪತಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಬೆಂಬಲಿಸುತ್ತಾರೆ! ಬಿಜೆಪಿ ಟಿಕೆಟ್ ನೀಡಿಕೆಯ ಹಿಂದಿನ ನೀತಿಯ ಅರ್ಥ ಇದೇ ಆಗಿದ್ದರೆ ಅದು ಖಂಡಿತವಾಗಿಯೂ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಮತದಾರರನ್ನು ಅವಮಾನಿಸುತ್ತಿದೆ.

* * *

ಚುನಾವಣೆಗಳಲ್ಲಿ ಗೆಲ್ಲುವುದಕ್ಕೂ ನೈತಿಕತೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಈವರೆಗಿನ ಹಲವು ಚುನಾವಣೆಗಳು ಸಾಬೀತು ಮಾಡಿವೆ. ಆದುದರಿಂದ ಪುಲಿಕೇಶಿ ನಗರದ ಮತದಾರರು `ಕೃತಿಚೌರ್ಯ’ವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕೊಳ್ಳೋಣ. ಬಿಜೆಪಿ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗಳಿಸಿ ಕೃತಿಚೌರ್ಯದ ಮಾರ್ಗದರ್ಶಕರೂ ಗೆದ್ದುಬಿಟ್ಟರೆ?

ಅವರು ಶಿಕ್ಷಣ ಮಂತ್ರಿಯಾಗಬಹುದು. ಎಚ್.ಎಂ. ಪಟೇಲರನ್ನು ಹೊಗಳಲು ಬಳಸಿದ ಅದೇ ಶಬ್ದಗಳನ್ನು ಈ ಕೃತಿಚೌರ್ಯದ ಮಾರ್ಗದರ್ಶಕರನ್ನು ಹೊಗಳುವುದಕ್ಕೂ ಬಳಸಬಹುದು. ಜತೆಗೆ `ಪಿಎಚ್ ಡಿ ವಿದ್ಯಾರ್ಥಿಗಳ ಕೃತಿಚೌರ್ಯ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಾಧ್ಯಾಪಕ’ ಎಂದೂ ಸೇರಿಸಿಕೊಳ್ಳಬಹುದು

ಕನ್ನಡಿಯೆದುರಿನ ಗೊರಿಲ್ಲಾಗಳು ಮತ್ತು ಕನ್ನಡದ ತಲ್ಲಣಗಳು

ನೊಬೆಲ್‌ ಪುರಸ್ಕೃತ ಕೊಲಂಬಿಯನ್‌ ಲೇಖಕ ಗೇಬ್ರಿಯಲ್‌ ಗಾರ್ಸಿಯಾ ಮಾರ್ಕ್ವೆಜ್‌ ಸ್ಪ್ಯಾನಿಷ್‌ ಭಾಷೆಯಲ್ಲಿ ಬರೆಯುತ್ತಾರೆ. ಅದರ ಇಂಗ್ಲಿಷ್‌ ಮತ್ತು ಫ್ರೆಂಚ್‌ ಅನುವಾದಗಳ ಮೂಲಕ ಜಗತ್ತು ಅವರನ್ನು ಅರಿಯುತ್ತದೆ. ಅನುವಾದಗಳಲ್ಲೂ ಅವರು `ಬೆಸ್ಟ್‌ ಸೆಲ್ಲರ್‌’ ಲೇಖಕ. ಅವರ ಬಹುಮುಖ್ಯ ಕಾದಂಬರಿಗಳಾದ `ಒನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಸಾಲಿಟ್ಯೂಡ್‌’,`ಕ್ರಾನಿಕಲ್‌ ಆಫ್‌ ಡೆತ್‌ ಫೋರ್‌ಟೋಲ್ಡ್‌’ ಮತ್ತು ಹಲವು ಸಣ್ಣ ಕತೆಗಳು ಕನ್ನಡಕ್ಕೂ ಅನುವಾದಗೊಂಡು ಜನಪ್ರಿಯವಾಗಿವೆ. ಈ ಲೇಖಕನ ಆತ್ಮಕತೆಯ ಮೊದಲ ಭಾಗವಾದ `ಲಿವಿಂಗ್‌ ಟು ಟೆಲ್‌ ದ ಟೇಲ್‌’ನಲ್ಲಿ ಮಾರ್ಕ್ವೆಜ್‌ ಶಾಲೆಗೆ ಸೇರುವುದಕ್ಕೆ ಸಂಬಂಧಿಸಿದಂತೆ ಅವರ ಅಪ್ಪ-ಅಮ್ಮನ ಮಧ್ಯೆ ನಡೆದ ಮಾತುಕತೆಯ ವಿವರವಿದೆ.

ಅಪ್ಪ ಇಂಗ್ಲಿಷ್‌ ಕಲಿಸುವ ಶಾಲೆಗೆ ಸೇರಿಸಲು ಹೊರಟರೆ ಅದನ್ನು ಲೂಥರ್‌ನ ಅನುಯಾಯಿ ಗಳ (ಪ್ರಾಟಸ್ಟೆಂಟರ) ಅಡ್ಡೆ ಎಂದು ಕರೆದು ಅಮ್ಮ ತಡೆಯುತ್ತಾಳೆ. ತಾನು ಇಂಗ್ಲಿಷ್‌ ಕಲಿಸುವ ಶಾಲೆಗೆ ಸೇರಿದ್ದರೆ ಇಂಗ್ಲಿಷ್‌ ಗೊತ್ತಿಲ್ಲದ ಲೇಖಕನಾಗುತ್ತಿರಲಿಲ್ಲ ಎಂಬ ವಿಷಾದದೊಂದಿಗೆ ಮಾರ್ಕ್ವೆಜ್‌ ಇದನ್ನು ವಿವರಿಸುತ್ತಾರೆ. ಈ ಘಟನೆಯನ್ನು ಸುಗತ ಶ್ರೀನಿವಾಸರಾಜು ಕನ್ನಡದ ತಲ್ಲಣಗಳನ್ನು ಹೇಳುವ ತಮ್ಮ ಇಂಗ್ಲಿಷ್‌ ಪುಸ್ತಕದ (ಕೀಪಿಂಗ್‌ ಫೈತ್‌ ವಿದ್‌ ದ ಮದರ್‌ ಟಂಗ್‌-ಆ್ಯಂಕ್ಸೈಟೀಸ್‌ ಆಫ್‌ ಎ ಲೋಕಲ್‌ ಕಲ್ಚರ್‌) ಪ್ರಸ್ತಾವನೆಯಲ್ಲಿ ಬಳಸಿಕೊಂಡಿದ್ದಾರೆ. ಇಂಗ್ಲಿಷ್‌ ಮತ್ತು ಕನ್ನಡಗಳೆರಡರಲ್ಲೂ ಸಮರ್ಥ ವಾಗಿ ಅಭಿವ್ಯಕ್ತಿಸುವ ಶಕ್ತಿ ಇರುವ ಸುಗತ ಈ ಮಾರ್ಕ್ವೇಜಿಯನ್‌ ದ್ವಂದ್ವವನ್ನು ಉದಾಹರಿಸುವುದು ಕನ್ನಡದ ತಲ್ಲಣಗಳ ಕುರಿತ ಒಂದು ಮಹತ್ವದ ರೂಪಕ. ಮಾರ್ಕ್ವೆಜ್‌ ಇಂಗ್ಲಿಷ್‌ ಗೊತ್ತಿದ್ದರೆ ಏನಾಗುತ್ತಿದ್ದ ಎಂಬ ಪ್ರಶ್ನೆಯೂ ಇಲ್ಲಿದೆ. ಕೆಲವರಿದ್ದಕ್ಕೆ `ಇಷ್ಟು ದೊಡ್ಡ ಲೇಖಕ ನಾಗುತ್ತಿರಲಿಲ್ಲ’ ಎಂಬ ಉತ್ತರವನ್ನೂ ನೀಡಿದ್ದಾರೆ. ಕನ್ನಡದ ಸಂದರ್ಭ ದಲ್ಲಿ ಮಾರ್ಕ್ವೇಜಿಯನ್‌ ದ್ವಂದ್ವವನ್ನು ಕುವೆಂಪು ಅವರ ಇಂಗ್ಲಿಷ್‌ ಕುರಿತ ನಿಲುವಿನ ಮೂಲಕವೂ ಅರ್ಥ ಮಾಡಿಕೊಳ್ಳಬಹುದು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹಾಡಿದ್ದ ಕವಿಯೇ ತಾನು ಇಂಗ್ಲಿಷ್‌ ಕಲಿಯದೇ ಇದ್ದರೆ ಹಳ್ಳಿಯಲ್ಲಿ ಸಗಣಿ ಎತ್ತುತ್ತಲೇ ಇರಬೇಕಾಗಿತ್ತೆಂದೂ ಹೇಳಿದ್ದರು.

* * *

ಆಫ್ರಿಕಾ ಖಂಡದ ಪಶ್ಚಿಮದಲ್ಲಿ ಸೆನೆಗಲ್‌ ಎಂಬ ದೇಶವಿದೆ. ಕರ್ನಾಟಕದ ಕಾಲುಭಾಗದಷ್ಟು ಜನಸಂಖ್ಯೆ ಮಾತ್ರ ಇರುವ ಈ ದೇಶ ಜಗತ್ತಿನ ಗಮನ ಸೆಳೆದದ್ದು 2002ರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ. ವಿಶ್ವಚಾಂಪಿಯನ್‌ ಫ್ರಾನ್ಸ್‌ ಅನ್ನು ಮೊದಲ ಪಂದ್ಯದಲ್ಲೇ ಸೋಲಿಸಿದ್ದ ಸೆನೆಗಲ್‌ ತಂಡ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿತ್ತು. ಆಫ್ರಿಕಾ ಖಂಡದ ಇತರ ದೇಶಗಳಂತೆ ಇಲ್ಲಿಯೂ ಹಲವು ಭಾಷೆಗಳಿವೆ. ವೋಲೋಫ್‌, ಪುಲಾರ್‌, ಜೋಲಾ, ಮಂಡಿಂಕ ಇವುಗಳಲ್ಲಿ ಮುಖ್ಯವಾದುವು. ಇಲ್ಲಿನ ಆಡಳಿತ ಭಾಷೆ ಮಾತ್ರ ಫ್ರೆಂಚ್‌. ನಮ್ಮನ್ನು ಇಂಗ್ಲಿಷ್‌ ಕಾಡುವಂತೆಯೇ ಸೆನೆಗಲ್‌ ಸೇರಿದಂತೆ ಆಫ್ರಿಕಾ ಖಂಡದ ಹಲವು ದೇಶಗಳನ್ನು ಫ್ರೆಂಚ್‌ ಕಾಡುತ್ತದೆ. ಬರೆಹಗಾರರಿಂದ ಆರಂಭಿಸಿ ಆಡಳಿತಗಾರರ ತನಕ `ಮುಖ್ಯವಾಹಿನಿ’ಯಲ್ಲಿರಬೇಕಾದರೆ ಫ್ರೆಂಚ್‌ ಬಳಸಬೇಕಾದ ಅನಿವಾರ್ಯತೆ ಅವರದ್ದು. ನಮ್ಮಲ್ಲಿ ಇಂಗ್ಲಿಷ್‌ ಬಲ್ಲವರಿಗೆ ಸಿಗುವ ಮಹತ್ವವೇ ಇಲ್ಲಿ ಫ್ರೆಂಚ್‌ ಬಲ್ಲವರಿಗೆ ಸಿಗುತ್ತದೆ.

ಬೂಬಾಕರ್‌ ಬೋರಿಸ್‌ ದಿಯೋಪ್‌ ಮಾಕ್ವೇಜಿಯನ್‌ ದ್ವಂದ್ವವನ್ನು ಅನುಭವಿಸಿದ ಸೆನೆಗಲ್‌ನ ಲೇಖಕ. ಈತನದ್ದು ಮಾರ್ಕ್ವೆಜ್‌ಗೆ ವಿರುದ್ಧ ವಾದ ಸ್ಥಿತಿ. ಈತ ಬರೆಯಲು ತೊಡಗಿದ್ದು ಫ್ರೆಂಚ್‌ನಲ್ಲಿ. 1981ರಲ್ಲಿ ಸಾಹಿತ್ಯ ಜಗತ್ತಿಗೆ ಕಾಲಿರಿಸಿದ ಈತ ಫ್ರೆಂಚ್‌ನಲ್ಲಿ ಬರೆಯುವ ಪ್ರಖ್ಯಾತರಲ್ಲಿ ಒಬ್ಬ. ಕೆಲ ಕಾದಂಬರಿಗಳು, ಒಂದು ಚಿತ್ರಕಥೆ ಮತ್ತು ಮೂರು ಕಾದಂಬರಿ ಗಳನ್ನು ಬರೆದಿರುವ ಈತ ತನ್ನ ಅಂಕಣಗಳ ಮೂಲಕವೂ ಜನಪ್ರಿಯ.

1998ರಲ್ಲಿ ನರಮೇಧಗಳು ಮತ್ತು ಗಲಭೆಗಳಿಂದ ಕುಪ್ರಸಿದ್ಧವಾಗಿದ್ದ ರುವಾಂಡಾಕ್ಕೆ ಆಫ್ರಿಕನ್‌ ಲೇಖಕರ ತಂಡವೊಂದು ಭೇಟಿ ನೀಡಿತ್ತು. Rwanda, Writing lest we forget ಎಂಬ ಯೋಜನೆಯೊಂದರ ಅನ್ವಯ ಈ ಲೇಖಕರ ತಂಡ ಅಲ್ಲಿಗೆ ಹೋಗಿತ್ತು. ಬೂಬಾಕರ್‌ ಕೂಡಾ ಈ ತಂಡದ ಸದಸ್ಯನಾಗಿದ್ದ. ರುವಾಂಡಾದ ಕ್ರೌರ್ಯ ಬೂಬಾಕರ್‌ನಲ್ಲಿ ದೊಡ್ಡ ಬದಲಾವಣೆಯನ್ನೇ ಉಂಟು ಮಾಡಿತು. ಅಲ್ಲಿಯವರೆಗೂ ಫ್ರೆಂಚ್‌ನಲ್ಲಿ ಬರೆಯುತ್ತಿದ್ದ ಆತ ಇನ್ನು ಮುಂದೆ ತನ್ನ ಮಾತೃಭಾಷೆಯಾದ ವೋಲೋಫ್‌ನಲ್ಲಿ ಮಾತ್ರ ಬರೆಯಲು ತೀರ್ಮಾನಿಸಿದ.

ಇಂಥದ್ದೊಂದು ನಿರ್ಧಾರಕ್ಕೆ ಬಂದದ್ದನ್ನು ಆತ ವಿವರಿಸುವುದು ಹೀಗೆ `…ಅಲ್ಲಿ ನಡೆಯುತ್ತಿದ್ದ ನರಮೇಧ ದಿನಕ್ಕೆ ಹತ್ತು ಸಾವಿರ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿತ್ತು. ಇದನ್ನು ಇನ್ನೂ ಮೂರು ತಿಂಗಳ ಕಾಲ ನಡೆಯಲು ಬಿಟ್ಟು ಏನನ್ನೂ ಮಾಡದಿದ್ದರೆ ಆಫ್ರಿಕಾ ಜಗತ್ತಿನ ಶಾಪಗ್ರಸ್ಥ ಪ್ರದೇಶಗಳಲ್ಲಿ ಒಂದಾಗುತ್ತದೆ. ನಾನೊಬ್ಬ ಬರೆಹಗಾರ. ನನ್ನದಲ್ಲದ ಯಾವುದೋ ಒಂದು ಭಾಷೆಯಲ್ಲಿ ಬರೆದು ಅದನ್ನು ಆಡುವ, ಬಳಸುವ ದೇಶಗಳಲ್ಲಿ ಬೌದ್ಧಿಕ ಚರ್ಚೆಗೆ ವಸ್ತುವಾಗುತ್ತಿದ್ದೇನೆ. ಆದರೆ ನನ್ನ ದೇಶದ ಮಟ್ಟಿಗೆ ಈ ಬರೆಹಗಳು ಏನೂ ಅಲ್ಲ. ಹೀಗನ್ನಿಸಿದ್ದೇ ತಡ ನಾನು ಇನ್ನು ಬರೆಯುವುದಿದ್ದರೆ ಮಾತೃಭಾಷೆಯಲ್ಲಿ ಮಾತ್ರ ಎಂದು ನಿರ್ಧರಿಸಿದೆ’.

ಬೂಬಾಕರ್‌ನ ಮಾತೃಭಾಷೆ ವೋಲೋಫ್‌. ಇದು ಸೆನೆಗಲ್‌ನ ಎರಡು ಪ್ರಮುಖ ಭಾಷೆಗಳಲ್ಲಿ ಒಂದು. ಮತ್ತೊಂದು ಪುಲಾರ್‌. ವೋಲೋಫ್‌ ಭಾಷೆಗೆ ನಾಲ್ಕು ಡಯಲೆಕ್ಟ್‌ಗಳಿವೆ. ಇವುಗಳಲ್ಲಿ ಎರಡನ್ನು ಆಡುವಷ್ಟು ಬೂಬಾಕರ್‌ಗೆ ಗೊತ್ತಿತ್ತು. ಒಂದೂ ಕಾಲು ಕೋಟಿ ಜನಸಂಖ್ಯೆಯ ದೇಶದಲ್ಲಿ ಬೂಬಾಕರ್‌ಗೆ ಗೊತ್ತಿದ್ದ ಡಯಲೆಕ್ಟ್‌ಗಳನ್ನು ಅರಿತಿದ್ದವರ ಸಂಖ್ಯೆ ಎಷ್ಟಿರಬಹುದು? ಇಷ್ಟರ ಮೇಲೆ ಸೆನೆಗಲ್‌ನ ಸಾಕ್ಷರತೆಯ ಪ್ರಮಾಣ ಕೇವಲ ಶೇಕಡಾ 39. ಫ್ರೆಂಚ್‌ನಲ್ಲಿ ಬರೆಯುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಲೇಖಕ ವೋಲೋಫ್‌ ನಲ್ಲಿ ಬರೆಯುವುದೆಂದರೆ ತನ್ನ ಓದುಗರಲ್ಲಿ ಶೇಕಡಾ 99 ಮಂದಿಯನ್ನೂ ಮರೆತುಬಿಡಬೇಕಷ್ಟೇ.

ಓದುಗರ ಸಂಖ್ಯೆಯ ಕುರಿತ ಭ್ರಮಯೆನ್ನೇನೋ ಬೂಬಾಕರ್‌ ಕಳಚಿಕೊಂಡ. ವೋಲೋಫ್‌ನಲ್ಲೇ ತನ್ನ ಕಾದಂಬರಿಯನ್ನು ಬರೆಯಲು ಹೊರಟಾಗ ಮತ್ತೊಂದು ಸವಾಲು ಎದುರಾಯಿತು. ಅಭಿವ್ಯಕ್ತಿಗೆ ಬೇಕಾದ ಪದಗಳೇ ಬೂಬಾಕರ್‌ ಬಳಿ ಇರಲಿಲ್ಲ. ಫ್ರೆಂಚ್‌ ತನಗೆ ಕೇವಲ ಅಭಿವ್ಯಕ್ತಿಯ ಭಾಷೆ ಮಾತ್ರವಾಗಿರಲಿಲ್ಲ. ಅದು ಗ್ರಹಿಕೆಯ ಭಾಷೆಯೂ ಆಗಿತ್ತೆಂದು ಅವನಿಗೆ ಅರಿವಾಯಿತು. ತನ್ನೊಳಗಿನ ಫ್ರೆಂಚ್‌ನ ಜತೆಗೆ ಗುದ್ದಾಡುತ್ತಾಲೇ ಬೂಬಾಕರ್‌ ತನ್ನ ಮೊದಲ ವೋಲೋಫ್‌ ಕಾದಂಬರಿಯನ್ನು ಬರೆದು ಮುಗಿಸಿದ.

ಈ ಕ್ರಿಯೆಯ ಮಧ್ಯೆಯೇ ಎದುರಾದುದು ಮತ್ತೊಂದು ಸಮಸ್ಯೆ. ಪುಸ್ತಕ ಬರೆದರಷ್ಟೇ ಸಾಕೇ. ಅದನ್ನು ಮುದ್ರಿಸಿ ಮಾರಾಟವನ್ನೂ ಮಾಡಬೇಕಲ್ಲ. ವೋಲೋಫ್‌ ಭಾಷೆಯಲ್ಲಿ ಸಾಹಿತ್ಯ ರಚನೆ ನಿಂತು 30 ವರ್ಷಗಳು ಕಳೆದಿದ್ದವು. ಇಷ್ಟರ ಮೇಲೆ ವೋಲೋಫ್‌ ಓದಲು ಗೊತ್ತಿದ್ದವರಿಗೆ ಹೊಟ್ಟೆಗೇ ಇರಲಿಲ್ಲ. ಓದಲು ಗೊತ್ತಿದ್ದ ಹಣವಂತರಿಗೆ ಪುಸ್ತಕ ಖರೀದಿಸುವುದಕ್ಕಿಂತ ಹೊಸ ಕಾರು ಖರೀದಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಸಾಮಾನ್ಯರಾಗಿದ್ದರೆ ಇದು ತನ್ನೊಳಗಿನ ಬರೆಹಗಾರನ ಆತ್ಮಹತ್ಯೆ ಎಂದು ಭಾವಿಸುತ್ತಿದ್ದರೇನೋ. ಬೂಬಾಕರ್‌ ಮಾತ್ರ ಎದೆಗುಂದಲಿಲ್ಲ. Doomi Golo ಎಂಬ ಕಾದಂಬರಿ ಪೂರ್ಣಗೊಂಡು ಪ್ರಕಟ ವಾಯಿತು. ಮೊದಲ ಆವೃತ್ತಿಯ 3000 ಪ್ರತಿಗಳು ಮಾರಾಟವಾದವು. ಎರಡನೇ ಆವೃತ್ತಿಯ ಮುದ್ರಣಕ್ಕೆ ಸರಕಾರವೇ ಧನ ಸಹಾಯ ಮಾಡಿತು. ಎಂಟು ವರ್ಷಗಳ ನಂತರ ಈ ಕಾದಂಬರಿಯ ಫ್ರೆಂಚ್‌ ಮತ್ತು ಇಂಗ್ಲಿಷ್‌ ಅನುವಾದಗಳೂ ಪ್ರಕಟವಾದವು.

Doomi Golo ಕಾದಂಬರಿ ಸೆನೆಗಲ್‌ನ ಸಾಹಿತ್ಯ ಲೋಕವನ್ನೇ ಬದ ಲಾಯಿಸಿಬಿಟ್ಟಿತು. ಸಾಹಿತ್ಯ ರಚನೆ ನಿಂತೇ ಹೋಗಿದ್ದ ವೋಲೋಫ್‌, ಪುಲಾರ್‌, ಜೋಲಾ, ಮಂಡಿಂಕ ಭಾಷೆಗಳಲ್ಲಿ ಸಾಹಿತ್ಯ ರಚಿಸುವ ಹೊಸ ತಲೆಮಾರೇ ಹುಟ್ಟಿಕೊಂಡಿತು. ಈ ಭಾಷೆಗಳ ಪುಸ್ತಕಗಳೂ ಮಾರಾಟವಾಗ ತೊಡಗಿದವು. ಗೂಗಿ ಥಿಯಾಂಗೋ ಆರಂಭಿಸಿದ್ದ `ಮಾತೃಭಾಷೆಯ ಬರೆಹ’ ಆಂದೋ ಲನಕ್ಕೆ ಬೂಬಾಕರ್‌ನ ಪ್ರಯತ್ನ ವೇಗವರ್ಧಕ ವಾಯಿತು. ಕೇವಲ ಆಫ್ರಿಕನ್‌ ದೇಶಗಳೊಳಗಷ್ಟೇ ಇದ್ದ ಈ ಮಾತೃಭಾಷಾ ಬರೆಹದ ಆಂದೋಲನ ವಲಸೆ ಹೋಗಿದ್ದವರ ಮಟ್ಟಕ್ಕೂ ವ್ಯಾಪಿಸಿತು. ಯೂರೋಪಿನಿಂದ ಅಮೆರಿಕದವರೆಗೂ ವ್ಯಾಪಿಸಿದ್ದ ಆಫ್ರಿಕನ್‌ ವಲಸಿಗ ಯುವಕರು ತಮ್ಮ ಭಾಷೆಗಳಲ್ಲಿ, ತಮ್ಮದೇ ಡಯಲೆಕ್ಟುಗಳಲ್ಲಿ ಈಗ ಬರೆಯಲಾರಂಭಿಸಿದ್ದಾರೆ.

* * *

Doomi Golo ಕಾದಂಬರಿಯಲ್ಲಿ ಮಾರ್ಕ್ವೇಜಿಯನ್‌ ದ್ವಂದ್ವಕ್ಕೆ ಉತ್ತರವಾಗುವಂಥ ಒಂದು ರೂಪಕವಿದೆ. ಇದು ಇಡೀ ಕಾದಂಬರಿಯ ಧ್ವನಿಯೂ ಹೌದು. ಎಲ್ಲೋ ಒಂದು ದೊಡ್ಡ ನಿಲುವುಗನ್ನಡಿ-ಅದು ಎಲ್ಲಿಯೂ ಇರಬಹುದು. ಅದರ ಎದುರು ಎರಡು ಗೊರಿಲ್ಲಾಗಳು. ಕನ್ನಡಿಯಲ್ಲಿ ಕಂಡ ತಮ್ಮ ಪ್ರತಿಬಿಂಬದ ಮೇಲೆ ಅವು ದಾಳಿ ಮಾಡುತ್ತವೆ. ಈ ದಾಳಿಯಲ್ಲಿ ಕನ್ನಡಿ ಒಡೆದು ಅದರ ಚೂಪಾದ ತುಂಡುಗಳು ಚುಚ್ಚಿ ಗೊರಿಲ್ಲಾಗಳು ಸಾಯುತ್ತವೆ. `ಅನ್ಯ’ದ ಕುರಿತ ಭಯ, ಸಿಟ್ಟು, ತಿರಸ್ಕಾರಗಳೆಲ್ಲವೂ ನಮ್ಮ ಬಗೆಗಿನ ಭಾವನೆಗಳೇ ಹೊರತು ಬೇರೇನೂ ಅಲ್ಲ. ನಾವು ಇಂಗ್ಲಿಷ್‌ಗೆ ಭಾವುಕವಾಗಿ ಪ್ರತಿಕ್ರಿಯಿಸುವ ವಿಧಾನಕ್ಕೂ ಗೊರಿಲ್ಲಾ ಗಳು ಕನ್ನಡಿಯಲ್ಲಿ ತಮ್ಮದೇ ಪ್ರತಿಬಿಂಬಗಳಿಗೆ ಪ್ರತಿಕ್ರಿಯಿಸಿದ್ದಕ್ಕೂ ವ್ಯತ್ಯಾಸವೇನೂ ಇಲ್ಲ. ಕನ್ನಡಿಯ ಮೇಲಿನ ದಾಳಿ ನಮ್ಮನ್ನೇ ಇಲ್ಲವಾಗಿಸುತ್ತದೆ. ಪ್ರತಿಬಿಂಬವೆಂದು ತಿಳಿದರೆ ನಮ್ಮ ಸಮಸ್ಯೆ ಅರ್ಥವಾಗುತ್ತದೆ.