ವಿರೋಧಿಗಳದ್ದೇ ‘ರಾಜ್ಯಭಾರ’ವಾದರೆ ಸರಕಾರವೇಕೆ?

ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವನವರು ಅಧಿಕಾರ ಸ್ವೀಕರಿಸುವುದಕ್ಕೆ ಸರಿಯಾಗಿ ಹನ್ನೊಂದು ದಿನಗಳ ಮೊದಲು ಕರ್ನಾಟಕದಲ್ಲೊಂದು ಕಳ್ಳಭಟ್ಟಿ ದುರಂತ ಸಂಭವಿಸಿತು. ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ಮಂದಿ ಬಲಿಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಈ ಘಟನೆಯ ಹಿಂದೆ ತಮ್ಮ ವಿರೋಧಿಗಳ ಕೈವಾಡವನ್ನು ಸಂಶಯಿಸಿದ್ದರು. ಇದನ್ನವರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ತಕ್ಕಂತೆ ಸಾರಾಯಿ ನಿಷೇಧವನ್ನು ತೀವ್ರ ಟೀಕೆಗೆ ಒಳಪಡಿಸಿದ್ದ ಕಾಂಗ್ರೆಸ್‌ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರಂಥ ಹೇಳಿಕೆಗಳೂ ಇದ್ದವು.

ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಹತ್ತೇ ದಿನಗಳಲ್ಲಿ ಗೊಬ್ಬರ ಕೊರತೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್‌ ನಡೆಯಿತು. ಗುಂಡು ತಗುಲಿದ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಸಂದರ್ಭದಲ್ಲಿಯೂ ಯಡಿಯೂರಪ್ಪನವರು ಸಂಶಯಿಸಿದ್ದು ವಿರೋಧಿ ಗಳ ಕೈವಾಡವನ್ನೇ. ಇದಕ್ಕೆ ತಕ್ಕಂತೆ ಕೇಂದ್ರ ಸರಕಾರ ಗೊಬ್ಬರ ಬಿಡುಗಡೆ ಮಾಡಿರಲಿಲ್ಲ. ಗೊಬ್ಬರದ ಲಾರಿಗಳನ್ನೇ ಹಿಡಿದು ನಿಲ್ಲಿಸುವಷ್ಟರ ಮಟ್ಟಿಗೆ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಷ್ಟು ಹಿಂಸಾತ್ಮಕ ಪ್ರತಿಭಟನೆಗಳೂ ನಡೆಯುತ್ತಿದ್ದವು.

ಸರಕಾರಕ್ಕೆ ನೂರು ದಿನ ತುಂಬಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ತಥಾಕಥಿತ `ಹಿಂದೂ ಪರ’ ಸಂಘಟನೆಗಳು ದಾಳಿ ನಡೆಸಿದವು. ದಾವಣಗೆರೆಯಲ್ಲಿ ಆರಂಭಗೊಂಡ ಈ ದಾಳಿಯ ಸರಣಿ ಮಂಗಳೂರಿಗೆ ತಲುಪುವ ಹೊತ್ತಿಗೆ ಪಡೆದುಕೊಂಡ ಸ್ವರೂಪವೇ ಬೇರೆ. ಅಲ್ಲಿಯ ತನಕವೂ `ನ್ಯೂ ಲೈಫ್‌ ಫೆಲೋಷಿಪ್‌’ ಎಂಬ ಕ್ರೈಸ್ತ ಧರ್ಮ ಪ್ರಸಾರದ ಸಂಘಟನೆಗೆ ಸೇರಿದ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿದ್ದ ದಾಳಿಗಳು ಕೆಥೋಲಿಕ್‌ ಕ್ರೈಸ್ತರ ಚರ್ಚ್‌ಗಳಿಗೂ ವ್ಯಾಪಿಸಿದವು. ಶಿಲುಬೆಯನ್ನು ಮುರಿಯುವ, ಯೇಸುವಿನ ಪ್ರತಿಮೆಯನ್ನು ಭಗ್ನಗೊಳಿಸುವ, ಪರಮಪ್ರಸಾದವನ್ನು ನಾಶಪಡಿಸುವ, ಗರ್ಭಿಣಿಯ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದವು.
ಮಂಗಳೂರಿನಲ್ಲಿ ಕ್ರೈಸ್ತರು ಈ ದಾಳಿಗಳ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನೂ ಪಡೆಯಿತು. ಈ ಹಿಂಸೆಗೆ ಪೊಲೀಸರೇ ಕಾರಣರು ಎಂಬ ವಾದ ಒಂದೆಡೆಗಿದ್ದರೆ ಪ್ರತಿಭಟನೆಕಾರರ ಹಿಂಸೆ ಪೊಲೀಸರನ್ನು ರೊಚ್ಚಿಗೆಬ್ಬಿಸಿತು ಎಂಬುದು ಮತ್ತೊಂದು ವಾದ. ದಕ್ಷಿಣ ಕನ್ನಡದ ಪೊಲೀಸರು ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಈ ತನಕ ನಿರ್ವಹಿಸಿರುವುದನ್ನು ನೋಡಿದರೆ ತಪ್ಪು ಎರಡೂ ಕಡೆಯೂ ಇರಬಹು ದೆಂದು ಕಾಣಿಸುತ್ತದೆ. ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುವ ವರೆಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಈವರೆಗಿನ ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ.

ಈ ಘಟನೆಗಳಿಗೆ ಪ್ರತಿಕ್ರಿಯಿಸುವಾಗಲೂ ಮುಖ್ಯಮಂತ್ರಿ ಯಡಿಯೂರಪ್ಪನವರು ವಿರೋಧಿಗಳತ್ತಲೇ ಬೊಟ್ಟು ಮಾಡಿದರು. ಈ ಬಾರಿಯಂತೂ ಸ್ಪಷ್ಟವಾಗಿಯೇ ತಮ್ಮ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರಕಾರ 355ನೇ ವಿಧಿಯನ್ನು ಬಳಸಿಕೊಂಡು ಎರಡು ಎಚ್ಚರಿಕೆ ಪತ್ರಗಳನ್ನೂ ಬರೆಯಿತು. ಇದರ ಪರಿಣಾಮವೋ ಎಂಬಂತೆ ಪೊಲೀಸರೇ ತನಿಖೆ ಮಾಡ ಬೇಕಾಗಿದ್ದ ಚರ್ಚ್‌ ದಾಳಿ ಪ್ರಕರಣಗಳು ಒಂದು ಹಂತದಲ್ಲಿ ಸಿಓಡಿಗೆ ಹೋಗಿತ್ತು. ಮತ್ತೆ ಅದೂ ಬದಲಾಗಿ ನ್ಯಾಯಾಂಗ ತನಿಖೆಗೆ ಒಪ್ಪಿಗೆಯಾಯಿತು.

ಇಷ್ಟೆಲ್ಲಾ ಆಗಿ ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ರಾಜಧಾನಿ ಯಲ್ಲೇ ಚರ್ಚ್‌ಗಳ ಮೇಲೆ ದಾಳಿ ನಡೆಯಿತು. ಪೊಲೀಸ್‌ ಆಯುಕ್ತರು ಇದು ದಾಳಿಯಲ್ಲ ಕಳ್ಳತನ ಎಂದರು. ಆದರೆ ಯಡಿಯೂರಪ್ಪನವರು ಮಾತ್ರ `ರಾಜಧಾನಿಯಲ್ಲೂ ಚರ್ಚ್‌ಗಳ ಮೇಲೆ ದಾಳಿ ನಡೆದಿರುವುದಕ್ಕೆ ಪೊಲೀಸ್‌ ಇಲಾಖೆಯ ವೈಫಲ್ಯವೇ ಕಾರಣ’ ಎಂದು ಕಿಡಿಕಾರಿದರು. ತಮಾಷೆಯೆಂದರೆ ಕಳ್ಳಭಟ್ಟಿ ದುರಂತ, ಹಾವೇರಿ ಗೋಲಿಬಾರ್‌ ಮತ್ತು ಬೆಂಗಳೂರಿನ ಹೊರಗೆ ನಡೆದ ಚರ್ಚ್‌ಗಳ ಮೇಲಿನ ದಾಳಿಗಳಲ್ಲೂ ಪೊಲೀಸರ ವೈಫಲ್ಯ ಢಾಳಾಗಿ ಕಾಣಿಸುತ್ತಿದ್ದರೂ ಮುಖ್ಯಮಂತ್ರಿಗಳು ಈ ಬಗ್ಗೆ ಒಂದು ಮಾತನ್ನೂ ಆಡಿರಲಿಲ್ಲ. ರಾಜಧಾನಿಯಲ್ಲಿ ನಡೆದಾಗ ಮಾತ್ರ ಅವರಿಗೆ ಪೊಲೀಸರ ವೈಫಲ್ಯದ ಬಗ್ಗೆ ಅರಿವಾಯಿತು!

* * *
ಆಡಳಿತಾತ್ಮಕ ವೈಫಲ್ಯವನ್ನು ತೋರಿಸಿಕೊಡುವ ಎಲ್ಲಾ ಘಟನೆಗಳ ಸಂದರ್ಭದಲ್ಲಿಯೂ ಆಡಳಿತದ ಚುಕ್ಕಾಣಿ ಹಿಡಿದವರು ವಿರೋಧಿಗಳನ್ನು ಬೊಟ್ಟು ಮಾಡುವುದು ಪಲಾಯನವಾದದ ಪರಾಕಾಷ್ಠೆ. ಮುಖ್ಯ ಮಂತ್ರಿಗೆ ಇರುವ ಅಧಿಕಾರದ ವ್ಯಾಪ್ತಿಯನ್ನು ಪರಿಗಣಿಸಿದರೆ ಈ ಬಗೆಯ ಆರೋಪಗಳನ್ನು ಮಾಡುವುದು ಬಾಲಿಶತನದ ಪರಮಾವಧಿಯೂ ಹೌದು. ಸಾಮಾನ್ಯವಾಗಿ ಎಲ್ಲಾ ಮುಖ್ಯಮಂತ್ರಿಗಳೂ ಗುಪ್ತವಾರ್ತೆ ವಿಭಾಗವನ್ನು ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಂಡಿರುತ್ತಾರೆ. ಪ್ರತೀ ಕ್ಷಣವೂ ಅವರಿಗೆ ಮಾಹಿತಿಗಳು ದೊರೆಯುತ್ತಲೇ ಇರುತ್ತವೆ. ವಿರೋಧ ಪಕ್ಷಗಳು ಅಥವಾ ಪಕ್ಷದೊಳಗಿನ ವಿರೋಧಿಗಳು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದರೆ ಅದರ ಮಾಹಿತಿ ಮುಖ್ಯಮಂತ್ರಿಗಳಿಗೆ ಸ್ವಲ್ಪ ಮೊದಲೇ ತಿಳಿದಿರಬೇಕು. ಇಲ್ಲದಿದ್ದರೆ ಗುಪ್ತವಾರ್ತೆ ವಿಭಾಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ.

ಯಡಿಯೂರಪ್ಪನವರು `ವಿರೋಧಿಗಳ ಷಡ್ಯಂತ್ರ’ದ ಬಗ್ಗೆ ಮಾತನಾಡುವಾಗ ಅವರು ವಿರೋಧ ಪಕ್ಷಗಳನ್ನು ದೃಷ್ಟಿಯಲ್ಲಿಟ್ಟು ಕೊಂಡಿದ್ದರೇ ಇಲ್ಲವೇ ಎಂಬುದು ಚರ್ಚಾಸ್ಪದ ವಿಷಯ. ಅದೇನೇ ಇದ್ದರೂ ಯಾರು `ಷಡ್ಯಂತ್ರ’ ರೂಪಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಬೇಕಿರುವ ಅಧಿಕಾರ ಮತ್ತು ಆಡಳಿತ ಯಂತ್ರ ಮುಖ್ಯ ಮಂತ್ರಿಗಳ ಬಳಿಯೇ ಇರುವುದರಿಂದ ಆರೋಪಗಳನ್ನು ಸಾಬೀತು ಮಾಡಿ ತೋರಿಸುವ ಜವಾಬ್ದಾರಿಯೂ ಅವರಿಗಿರುತ್ತದೆ. ನಿಜಕ್ಕೂ ವಿರೋಧ ಪಕ್ಷಗಳೇ ಇದನ್ನು ಮಾಡುತ್ತಿದ್ದರೆ ಅದನ್ನು ಸಾಬೀತು ಮಾಡುವ ಧೈರ್ಯವನ್ನೂ ಮುಖ್ಯಮಂತ್ರಿಗಳು ತೋರಿಸುತ್ತಿದ್ದರು. ಸುದೀರ್ಘ ಕಾಲದ ರಾಜಕಾರಣದ ಅನುಭವ ಅವರಿಗೆ ಇಂಥ ಧೈರ್ಯವನ್ನು ನೀಡಿರುವುದರಲ್ಲಿ ಯಾವ ಸಂಶಯವೂ ಇಲ್ಲ.

ಚರ್ಚ್‌ಗಳ ಮೇಲಿನ ದಾಳಿಯ ವಿಷಯ ಕೇವಲ `ಹೊರಗಿನ ಶಕ್ತಿಗಳಿಗೆ’ ಮಾತ್ರ ಸೀಮಿತವಾಗಿರುವ ವಿಷಯವಲ್ಲ ಎಂಬುದು ಸ್ವತಃ ಯಡಿಯೂರಪ್ಪನವರಿಗೂ ತಿಳಿದಿರುವಂತೆ ಕಾಣಿಸುತ್ತದೆ. ಜತೆಗೆ ಬಜರಂಗದಳದ ಮುಖ್ಯಸ್ಥ ಮಹೇಂದ್ರಕುಮಾರ್‌ ಮಾಧ್ಯಮಗಳ ಎದುರು `ನಾವೇ ದಾಳಿ ನಡೆಸಿದೆವು’ ಎಂದೂ ಹೇಳಿದ್ದಾರೆ. ಈ ಕಾರಣ ದಿಂದಾಗಿಯೇ ಮುಖ್ಯಮಂತ್ರಿಗಳು ದಾಳಿಗಳ ಆರಂಭದ ಹಂತದಲ್ಲಿ ಸಮಸ್ಯೆಯನ್ನು ಒಂದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನಾಗಿ ನೋಡದೆ ಅದರ ಮನಶ್ಶಾಸ್ತ್ರೀಯ ವಿಶ್ಲೇಷಣೆಯನ್ನು ಆರಂಭಿಸಿದರು. ಮತಾಂತರಗಳ ಬಗ್ಗೆ, ನ್ಯೂ ಲೈಫ್‌ಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದೆಲ್ಲಾ ಹೇಳಿಕೆ ನೀಡಿದರು. ಇವೆಲ್ಲವುಗಳ ಪರಿಣಾಮವನ್ನು ಈಗ ಮುಖ್ಯಮಂತ್ರಿ ಎದುರಿಸುತ್ತಿದ್ದಾರೆ.

* * *

ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೆ ಹಿಡಿದಿರುವ ದೊಡ್ಡ ರೋಗ ಕಾರಣಗಳನ್ನು ಹುಡುಕುವುದು. ಬಾಂಬ್‌ ಸ್ಫೋಟ, ಚರ್ಚ್‌ ಮೇಲೆ ದಾಳಿ ನಡೆದರೆ ಅದಕ್ಕಿರುವ `ಧಾರ್ಮಿಕ ಕಾರಣ’ಗಳನ್ನು ಹುಡುಕುವುದು. ಈ ಹುಡುಕಾಟದ ಕ್ರಿಯೆಯಲ್ಲಿ, ಆರೋಪ ಪ್ರತ್ಯಾರೋಪಗಳ ಭರಾಟೆ ಯಲ್ಲಿ ಸಾಮಾನ್ಯ ಜನ ಅನುಭವಿಸುವ ತೊಂದರೆ ಹಿಂದಕ್ಕೆ ಸರಿಯುತ್ತದೆ. ಸಾವು ನೋವುಗಳಿಗೆ ಜಾತಿ, ಮತ, ಧರ್ಮಗಳಿರುವುದಿಲ್ಲ.

ಇನ್ನು ಧಾರ್ಮಿಕತೆಯ ಸಂಕೇತಗಳಾದ ದೇವಾಲಯಗಳು, ಚರ್ಚ್‌ಗಳು ಮತ್ತು ಪ್ರಾರ್ಥನಾ ಮಂದಿರಗಳ ಪಾವಿತ್ರ್ಯವೂ ಅಷ್ಟೇ. ಒಂದು ಹೆಚ್ಚು ಪವಿತ್ರ ಮತ್ತೊಂದು ದಾಳಿಗೆ ಅರ್ಹ ಎಂಬ ವ್ಯತ್ಯಾಸ ಗಳೇನೂ ಇರುವುದಿಲ್ಲ. ಆಯಾ ಮತ-ಧರ್ಮಗಳನ್ನು ಅನುಸರಿಸುವವ ರಿಗೆ ಅವರವರ ಕ್ಷೇತ್ರಗಳು ಪವಿತ್ರ. ಉಳಿದವರೂ ಅವುಗಳನ್ನು ಪವಿತ್ರ ವೆಂದು ಗೌರವಿಸುವುದೇ ಜಾತ್ಯತೀತತೆ. ದುರದೃಷ್ಟವಶಾತ್‌ ನಮ್ಮ ರಾಜ ಕಾರಣಿಗಳಿಗೆ ಕೆಲವು ಹೆಚ್ಚು ಪವಿತ್ರವಾಗಿ ಕಾಣುವುದು ಇಂದಿನ ದುರಂತ.

ಇದರ ಪರಿಣಾಮವಾಗಿ ಚರ್ಚ್‌ಗಳ ಮೇಲೆ ದಾಳಿ ನಡೆದಾಗ ಒಂದೆಡೆ ದಾಳಿಯ ಕಾರಣಗಳ ಮನೋವಿಶ್ಲೇಷಣೆ ಆರಂಭವಾದರೆ ಮತ್ತೊಂದೆಡೆ ಏಕಪಕ್ಷೀಯ ಖಂಡನೆಗಳು ಆರಂಭವಾಗುತ್ತವೆ. ಆಡಳಿತ ನಡೆಸುವವರು ಕೋಮು ಸೂಕ್ಷ್ಮ ಸಂದರ್ಭಗಳಲ್ಲಿ ಈ ಮನೋ ವಿಶ್ಲೇಷಣೆಗಳನ್ನು ಬದಿಗಿಟ್ಟು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಕಾರ್ಯಪ್ರವೃತ್ತರಾಗಬೇಕು. ವಿರೋಧ ಪಕ್ಷಗಳು ಸರಕಾರವನ್ನು ಟೀಕಿಸುವುದಕ್ಕಷ್ಟೇ ಸೀಮಿತರಾಗದೆ ಒಡೆದ ಹೃದಯಗಳನ್ನು ಒಂದುಗೂಡಿಸುವ ಕ್ರಿಯೆಗೆ ಕೈಜೋಡಿಸಬೇಕು.ಕರ್ನಾಟಕದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕ್ರಿಯೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಕೋಮುವಾದದ ಬೆಳವಣಿಗೆಗೆ ತಮ್ಮದೇ ಆದ ಕಾಣಿಕೆಗಳನ್ನು ನೀಡಿದ ಕಾಂಗ್ರೆಸ್‌ನ ಡಿ.ಬಿ.ಚಂದ್ರೇಗೌಡರು `ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರವಿದೆ’ ಎಂದು ಕ್ರೈಸ್ತರನ್ನು ಸಂತೈಸಲು ಹೊರಡುತ್ತಾರೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಪ್ರತಿಭಟನಾರ್ಥವಾಗಿ ರಜೆ ನೀಡಿದಾಗ ಅದರ ಕಾನೂನು ಬದ್ಧತೆಯನ್ನು ಪ್ರಶ್ನಿಸುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶ್ರೀರಾಮ ಸೇನೆ ಬಂದ್‌ ಕರೆ ನೀಡಿದರೆ ಜಾಣ ಮರೆವು ನಟಿಸುತ್ತಾರೆ.

ಎಲ್ಲವನ್ನೂ ಸಮಚಿತ್ತದಿಂದ ಕಾಣಲು ಸಾಧ್ಯವಾಗುವವನಷ್ಟೇ ನಿಜವಾದ ಮುತ್ಸದ್ಧಿ. ಯಡಿಯೂರಪ್ಪನವರು ಈ ಕ್ಷಣ ತಳೆಯಬೇಕಾದ ನಿಲುವೂ ಅದುವೇ. ಈ ಸಮಚಿತ್ತದ ಪ್ರತಿಕ್ರಿಯೆ ತಕ್ಷಣಕ್ಕೆ ಬಿಜೆಪಿಗೂ ಅದರ ಸಹೋದರ ಸಂಘಟನೆಗಳಿಗೂ ಇರಿಸುಮುರಿಸುಂಟು ಮಾಡಿದರೂ ಇತಿಹಾಸ ಮಾತ್ರ ಅವರನ್ನು ಮುತ್ಸದ್ಧಿಯನ್ನಾಗಿ ಕಾಣುತ್ತದೆ ಎಂಬುದು ಯಡಿಯೂರಪ್ಪನವರಿಗೆ ನೆನಪಿರಬೇಕು.

ದೇಶ ಸ್ಫೋಟಿಸುವಾಗ ಸೂಟ್‌ ಬದಲಾಯಿಸಿದವರು!

`ರೋಮ್‌ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ’ ಸಂಗತಿ ನಮಗೆಲ್ಲಾ ಗೊತ್ತಿದೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರ ಬಗ್ಗೆ ಅನೇಕ ಚರ್ಚೆಗಳಿವೆ. ಕಾರಣ ಆಗ ಪಿಟೀಲು ಎಂಬ ವಾದ್ಯವೇ ಇರಲಿಲ್ಲ. ನಮ್ಮ ಈಗಿನ ಗಿಟಾರ್‌ನ ಮೂಲ ರೂಪವಾಗಿದ್ದ Lyre  ವಾದ್ಯವನ್ನು ನೀರೋ ನುಡಿಸುತ್ತಿದ್ದ ಎಂದು ರೋಮಿನ ಇತಿಹಾಸಕಾರರಲ್ಲಿ ಒಬ್ಬನಾಗಿರುವ ಕ್ಯಾಸಿಯಸ್‌ ಹೇಳಿದ್ದಾನೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರಷ್ಟೇ ಮುಖ್ಯವಾದ ಮತ್ತೊಂದು ಪ್ರಶ್ನೆ ರೋಮ್‌ಗೆ ಬೆಂಕಿ ಹತ್ತಿಕೊಂಡದ್ದು ಹೇಗೆ ಎಂಬುದು? ಇದಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಆಕಸ್ಮಿಕ ಎಂದು ಹೇಳಿದ್ದಾರೆ. ಇನ್ನು ಕೆಲವರು ಕ್ರೈಸ್ತರು ಬೆಂಕಿ ಹಚ್ಚಿದರು ಎನ್ನುತ್ತಾರೆ. ನೀರೋನ ಕಾಲದ ದಾಖಲೆಗಳನ್ನು ಇಟ್ಟುಕೊಂಡು ಈ ಬೆಂಕಿಗೂ ನೀರೋನೇ ಕಾರಣನಾಗಿದ್ದನೆಂದು ಕ್ಯಾಸಿಯಸ್‌ನಂಥ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ನೀರೋ ಕಾಲದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸಲಾಗುತ್ತಿತ್ತು. ಗೋಡೆಗಳೂ ಮರದದಿಂದಲೇ ರೂಪುಗೊಳ್ಳುತ್ತಿದ್ದವು. ಕ್ಯಾಸಿಯಸ್‌ ದಾಖಲಿಸಿರುವಂತೆ `ನಗರವನ್ನು ನಾಶಮಾಡುವ ಅಭೀಪ್ಸೆಯಿಂದ ಉತ್ತೇಜಿತನಾದ ನೀರೋ ಕುಡುಕರಂತೆ ನಟಿಸಿ ನಗರಕ್ಕೆ ಕೊಳ್ಳಿ ಇಡಲು ಜನರನ್ನು ಕಳುಹಿಸಿದ. ಪಾಲಾಟೈನ್‌ ಬೆಟ್ಟದ ಮೇಲಿದ್ದ ತನ್ನ ಅರಮನೆಯಲ್ಲಿ ಉರಿಯುವ ರೋಮ್‌ ಅನ್ನು ನೋಡುತ್ತಾ ನೀರೋ Lyre  ನುಡಿಸುತ್ತಾ ಹಾಡಿದ’.

ಹನ್ನೆರಡು ಸೀಝರ್‌ಗಳು ಮತ್ತು ನೀರೋನ ಜೀವನ ಚರಿತ್ರೆಯನ್ನು ಬರೆದಿರುವ ಸೂಟೋನಿಯಸ್‌ ಹೇಳುವಂತೆ `ತನ್ನ ಹುಚ್ಚು ಗೀಳಿನಿಂದ ಪ್ರೇರೇಪಿತನಾಗಿ ನಗರಕ್ಕೆ ಬೆಂಕಿ ಇಡಲು ಭಟರನ್ನು ಕಳುಹಿಸಿದ. ನಗರಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುವುದನ್ನು ಎಸ್ಕ್ವಿಲೈನ್‌ ಬೆಟ್ಟದ ಮೇಲಿದ್ದ ಮ್ಯಾಸಿನಾಸ್‌ ಗೋಪುರದಲ್ಲಿ Lyre  ನುಡಿಸುತ್ತಾ ಹಾಡುತ್ತಾ ನೋಡಿದ’. ರೋಮ್‌ನ ಮತ್ತೊಬ್ಬ ಇತಿಹಾಸಕಾರ ಟ್ಯಾಸಿಟಸ್‌ ಕೂಡಾ ರೋಮ್‌ಗೆ ಬೆಂಕಿ ಇಡಲು ತನ್ನದೇ ಜನರನ್ನು ಕಳುಹಿಸಿದ್ದ ನೀರೋ ನಗರ ಉರಿಯುತ್ತಿರುವಾಗ ಬಿದ್ದಿದ್ದಾಗ ತನ್ನ ಖಾಸಗಿ ವೇದಿಕೆಯಲ್ಲಿ Lyre  ನುಡಿಸುತ್ತಿದ್ದ ಎನ್ನುತ್ತಾನೆ.

ಈ ಎಲ್ಲಾ ಹೇಳಿಕೆಗಳಿಂದ ರೋಮ್‌ ಕೊಳ್ಳಿ ಇಟ್ಟದ್ದು ಸ್ವತಃ ಚಕ್ರವರ್ತಿ ನೀರೋ ಮತ್ತು ಉರಿಯುವ ನಗರವನ್ನು ನೋಡುತ್ತಾ ಆನಂದತುಂದಿನಲನಾಗಿ ಹಾಡಿದನೆಂಬುದು ಸ್ಪಷ್ಟ.

***

ಸೆಪ್ಟೆಂಬರ್‌ 13ರಂದು ದಿಲ್ಲಿಯಲ್ಲಿ ಸರಣಿ ಸ್ಫೋಟ ನಡೆಯಿತು. ಐದು ಕಡೆ ನಡೆದ ಸ್ಫೋಟದಲ್ಲಿ ಇಡೀ ದಿಲ್ಲಿಯೇ ತಲ್ಲಣಿಸಿತು. ಮರುದಿನ ಕೇಂದ್ರ ಗೃಹ ಸಚಿವರು ಭದ್ರತೆಯ ಸ್ಥಿತಿಯ ಕುರಿತು ಪರಿಶೀಲನೆ ನಡೆಸುವ ಒಂದು ಸಭೆಯನ್ನೂ ನಡೆಸಿದರು. ಇದರಲ್ಲಿ ಭಾಗವಹಿಸಿ ಹೊರಬಂದ ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್‌ ಗುಪ್ತ ಅವರು ನೀಡಿದ ಹೇಳಿಕೆ ಹೀಗಿದೆ. `ದೇಶಾದ್ಯಂತ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಈ ಬಗೆಯ ಸ್ಫೋಟಗಳನ್ನು ನಾವು ನೋಡುತ್ತಿದ್ದೇವೆ. ಪ್ರತೀ ಘಟನೆಯೂ ನಮಗೊಂದು ಅನುಭವ. ಒಂದೊಂದು ಸ್ಫೋಟದಿಂದಲೂ ನಾವು ಕಲಿಯುತ್ತಿದ್ದೇವೆ’.

ಮಧುಕರ್‌ ಗುಪ್ತ ಅವರಿಗೆ ಪ್ರತಿಯೊಂದು ಸ್ಫೋಟವೂ ಒಂದು ಅನುಭವ, ಪ್ರತಿಯೊಂದರಿಂದಲೂ ಅವರು ಕಲಿಯುತ್ತಿದ್ದಾರೆ. ಇದು ಕೇವಲ ಯಾರೋ ಒಬ್ಬ ಅಧಿಕಾರಿಯ ಮಾತಲ್ಲ. ಇಡೀ ದೇಶದ ಆಂತರಿಕ ಭದ್ರತೆಯ ಹೊಣೆ ಹೊತ್ತಿರುವ ಗೃಹ ಖಾತೆಯ ಕಾರ್ಯದರ್ಶಿಯ ಮಾತುಗಳು. ಈತನಿಗೆ ಮತ್ತು ಈತ ಪ್ರತಿನಿಧಿಸುತ್ತಿರುವ ಇಲಾಖೆಗೆ ಜನರ ಸಾಯುವುದು ಕೇವಲ ಒಂದು ಅನುಭವ ಮತ್ತು ಕಲಿಕೆಯ ಅವಕಾಶ. ಈ ಅಧಿಕಾರಿ ಮತ್ತು ಆತ ಪ್ರತಿನಿಧಿಸುತ್ತಿರುವ ವರ್ಗ ರೋಮ್‌ಗೆ ಬೆಂಕಿ ಕೊಟ್ಟು ಅದನ್ನು ನೋಡುತ್ತಾ ಆನಂದ ತುಂದಿಲನಾಗಿ ನೋಡುತ್ತಾ Lyre  ನುಡಿಸಿದ ನೀರೋಗಿಂತ ಹೇಗೆ ಭಿನ್ನ.

ನಮ್ಮಲ್ಲೊಂದು ಹಳೆಯ ಗಾದೆಯೇ ಇದೆ- `ರಾಜನಂತೆ ಪ್ರಜೆ’. ಮಧುಕರ್‌ ಗುಪ್ತ ಪ್ರತೀ ಸ್ಫೋಟವನ್ನು ಒಂದು ಹೊಸ ಅನುಭವವಾಗಿ ಆಸ್ವಾದಿಸುತ್ತಿದ್ದಾಗ ಅವರು ಇಲಾಖೆಯ ಸಚಿವ ಶಿವರಾಜ್‌ ಪಾಟೀಲ್‌ ಮತ್ತೊಂದು ಬಗೆಯಲ್ಲಿ ಅನುಭವಿಸುತ್ತಿದ್ದರು. ಸ್ಫೋಟದಂಥ ದುರಂತಗಳು ನಡೆದಾಗಲೆಲ್ಲಾ ಮಾಧ್ಯಮಗಳು ಗೃಹ ಸಚಿವರನ್ನು ಆಂತರಿಕ ರಕ್ಷಣಾ ವ್ಯವಸ್ಥೆಯ ಕುರಿತಂತೆ ಪ್ರಶ್ನಿಸುತ್ತಾರೆ. ಈಗಂತೂ ಪ್ರತೀ ಸುದ್ದಿಯನ್ನೂ Live  ಆಗಿ ಪ್ರಸಾರ ಮಾಡುವ ಟಿ.ವಿ.ಗಳಿರುವುದರಿಂದ ಸ್ಫೋಟಗಳೂ ಸೇರಿದಂತೆ ಎಲ್ಲಾ ಬಗೆಯ ದುರಂತಗಳೂ ಒಂದು ರೀತಿಯ ಸುದ್ದಿ ಸಂಭ್ರಮಗಳಾಗಿಬಿಟ್ಟಿವೆ. ಟಿ.ವಿ.ಚಾನೆಲ್‌ಗಳೇನೋ ತಮ್ಮ ಮಾನವೀಯತೆಯನ್ನು ಬದಿಗಿಟ್ಟು ಸ್ಫೋಟದಂಥ ದುರಂತವನ್ನೂ ಬಿಸಿ ಬಿಸಿಯಾಗಿ ಮಾರಾಟ ಮಾಡುತ್ತಿರುತ್ತವೆ. ಆದರೆ ದೇಶದ ಗೃಹ ಸಚಿವರೂ ಈ ಟಿ.ವಿ.ಚಾನೆಲ್‌ಗಳಲ್ಲಿ ಸುಂದರವಾಗಿ ಕಾಣಿಸಿಕೊಳ್ಳುವ ಉದ್ದೇಶದಿಂದ ಬಗೆ ಬಗೆಯ ಸೂಟ್‌ಗಳನ್ನು ಧರಿಸಿ ಬಂದರೆ ಹೇಗಿರುತ್ತದೆ?

ದಿಲ್ಲಿಯಲ್ಲಿ ನಡೆದ ಸರಣಿ ಸ್ಫೋಟದ ನಂತರದ ಟಿ.ವಿ.ಯಲ್ಲಿ ಕಾಣಿಸಿಕೊಂಡ ಗೃಹ ಸಚಿವ ಶಿವರಾಜ್‌ ಪಾಟೀಲ್‌ ಕೆಲವೇ ಗಂಟೆಗಳೊಳಗೆ ಮೂರು ಸೂಟ್‌ಗಳನ್ನು ಬದಲಾಯಿಸಿದ್ದರು. ಅಂದು ಸಂಜೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಬಿಳಿ ಸೂಟ್‌ ತೊಟ್ಟು ಹೋಗಿದ್ದ ಗೃಹ ಸಚಿವರು ಸ್ಫೋಟದ ಸುದ್ದಿ ಕೇಳಿದ ತಕ್ಷಣ ಮನೆಗೆ ಧಾವಿಸಿದರು. ಹೊರಗೆ ಬರುವಾಗ ಅವರು ಗಾಢ ವರ್ಣದ ಸೂಟ್‌ ತೊಟ್ಟು ಅದಕ್ಕೆ ಹೊಂದುವ ಶೂ ಧರಿಸಿದ್ದರು. ಸ್ಫೋಟಗಳು ನಡೆದ ತಕ್ಷಣ ಟಿ.ವಿ. ಚಾನೆಲ್‌ಗಳು ಬಯಸುವ `ತಕ್ಷಣದ ಪ್ರತಿಕ್ರಿಯೆ’ ನೀಡಿಯಾದ ಮೇಲೆ ಅವರು ಸ್ಫೋಟದ ಸ್ಥಳದ ಔಪಚಾರಿಕ ಪರಿಶೀಲನೆಗೆ ಹೊರಟರು. ಆಗ ಮತ್ತೆ ಸೂಟ್‌ ಬದಲಾಗಿತ್ತು. ಈ ಬಾರಿ ಮತ್ತೆ ಶ್ವೇತ ವಸನಧಾರಿಯಾಗಿದ್ದರು. ಈ ಸೂಟ್‌ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಗೆ ತೊಟ್ಟಿದ್ದ ಸೂಟ್‌ ಅಲ್ಲ!

ರೋಮ್‌ ಹೊತ್ತಿ ಉರಿಯುವಾಗ ಹಾಡುತ್ತಾ Lyre  ನುಡಿಸಿದ ನೀರೋನ ಮನಸ್ಥಿತಿಗೂ ನಮ್ಮ ಗೃಹ ಸಚಿವರ ಮನಸ್ಥಿತಿಗೂ ಏನಾದರೂ ವ್ಯತ್ಯಾಸವಿದೆಯೇ?

***

ದಿಲ್ಲಿಯಲ್ಲಿ ಬಾಂಬ್‌ ಸ್ಫೋಟಿಸಿದಾಗ ಬೆಂಗಳೂರಿನಲ್ಲಿ ಬಿಜೆಪಿಯ ಕಾರ್ಯಕಾರಿಣಿ ನಡೆಯುತ್ತಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್‌.ಕೆ. ಆಡ್ವಾಣಿಯವರು ಬೆಂಗಳೂರಿನಿಂದಲೇ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಅಹಮದಾಬಾದ್‌ ಸ್ಫೋಟದ ತನಿಖೆಯ ಸಂದರ್ಭದಲ್ಲೇ ದಿಲ್ಲಿ ಸ್ಫೋಟದ ಸುಳಿವು ಗುಜರಾತ್‌ ಪೊಲೀಸರಿಗೆ ದೊರೆತಿತ್ತು. ಇದನ್ನು ಗುಜರಾತ್‌ ಮುಖ್ಯಮಂತ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಪ್ರಧಾನಿಯವರ ಗಮನಕ್ಕೆ ತಂದಿದ್ದರು. ಆದರೂ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಆರೋಪಿಸಿದರು.

ಗುಜರಾತ್‌ ಮುಖ್ಯಮಂತ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಪ್ರಧಾನಿಗೆ ಈ ವಿಷಯ ತಿಳಿಸುವಾಗ ತಮ್ಮ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕರೂ ಆಗಿರುವ ಎಲ್‌.ಕೆ. ಆಡ್ವಾಣಿಯವರಿಗೂ ಈ ವಿಷಯ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕನೆಂಬ ನೆಲೆಯಲ್ಲಿ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಎಷ್ಟರ ಮಟ್ಟಿಗೆ ಪರಿಶೀಲಿಸಿದೆ ಎಂಬುದನ್ನು ಮಾತ್ರ ಆಡ್ವಾಣಿಯವರು ಹೇಳಲಿಲ್ಲ. ವಿರೋಧ ಪಕ್ಷದ ನಾಯಕನೆಂಬ ನೆಲೆಯಲ್ಲಿ ಇಂಥ ವಿಷಯಗಳಲ್ಲಿ ಕೆಲವು ಮಟ್ಟದ ಪರಿಶೀಲನೆಗಳನ್ನು ನಡೆಸಲು ಸಾಧ್ಯವಿದೆ ಎಂಬುದನ್ನು ಹಿರಿಯ ಮುತ್ಸದ್ದಿ ಆಡ್ವಾಣಿಯವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ.

ಸರಕಾರ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಆಗಲೇ ಅರಿವಾಗಿದ್ದರೆ ಈ ಮಾಹಿತಿಯನ್ನು ಕನಿಷ್ಠ ಬಹಿರಂಗಗೊಳಿಸಿ ಜನರ ಗಮನಸೆಳೆಯಲು ಆಡ್ವಾಣಿಯವರಿಗೆ ಸಾಧ್ಯವಿತ್ತು. ಸರಕಾರ ಮಾಹಿತಿ ಕೊಟ್ಟರೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಟೀಕಿಸುವುದಕ್ಕಾಗಿಯಾದರೂ ಇದನ್ನವರು ಮಾಡಬಹುದಿತ್ತು. ಆದರೆ ಅವರು ಸ್ಫೋಟ ನಡೆಯುವ ತನಕ ಸುಮ್ಮನಿದ್ದು `ಇದು ನನಗೆ ಮೊದಲೇ ಗೊತ್ತಿತ್ತು’ ಎಂದರು. ಸ್ಫೋಟದ ದಿನ ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತೇನೆಂದು ಅರಿವಿದ್ದು ತಮ್ಮನ್ನು ತಾವೇ ಸಿಂಗರಿಸಿಕೊಂಡ ಗೃಹ ಸಚಿವರಲ್ಲಿರುವ ನೀರೋ ಗುಣ ಒಂದು ಬಗೆಯದ್ದಾದರೆ ವಿರೋಧ ಪಕ್ಷದ ನಾಯಕರಲ್ಲಿದ್ದ ನೀರೋ ಗುಣ ಮತ್ತೊಂದು ಬಗೆಯದ್ದು. ಸ್ಫೋಟದ ನಂತರ ಆಡ್ವಾಣಿಯವರ ಕಣ್ಣಿಗೆ ಕಾಣಿಸುತ್ತಿದ್ದುದು ಮುಂದಿನ ಲೋಕಸಭಾ ಚುನಾವಣೆಗಳು ಮಾತ್ರ.

***

ಬಿಜೆಪಿಯ ಕಾರ್ಯಕಾರಣಿಯ ಕೊನೆಯ ದಿನ ಮಂಗಳೂರು, ಚಿಕ್ಕಮಗಳೂರು, ಉಡುಪಿಗಳಲ್ಲಿ ಭಜರಂಗದಳದ ಕಾರ್ಯಕರ್ತರು ಸುಮಾರು 15 ಚರ್ಚ್‌ಗಳ ಮೇಲೆ ದಾಳಿ ನಡೆಸಿದರು. `ಮತಾಂತರವನ್ನು ವಿರೋಧಿಸಲು ಈ ದಾಳಿ ನಡೆಸಿದೆವು’ ಎಂದು ಅವರೇ ಹೇಳಿಕೊಂಡರು. ಬಲವಂತದ ಮತಾಂತರ ನಡೆಯುತ್ತಿದ್ದರೆ ಅದನ್ನು ತಡೆಯುವುದಕ್ಕೆ ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆ ಇದೆ. ಭಜರಂಗದಳದ ಹಿರಿಯ ಸಹೋದರ ಸಂಘಟನೆಯೂ ಆಗಿರುವ ಬಿಜೆಪಿ ಎಂಬ ರಾಜಕೀಯ ಪಕ್ಷವೇ ಈಗ ಕರ್ನಾಟಕವನ್ನು ಆಳುತ್ತಿದೆ. ಇದನ್ನೆಲ್ಲಾ ಮರೆತು ಚರ್ಚ್‌ ಒಂದರ ಕ್ರಿಸ್ತನ ವಿಗ್ರಹವನ್ನೂ ಭಗ್ನಗೊಳಿಸಿದ ಈ ದಾಳಿಯನ್ನು ಬಿಜೆಪಿ ತಪ್ಪಿಯೂ ಖಂಡಿಸಲಿಲ್ಲ.

ಈ ದಾಳಿಗಳು ನಡೆಯುತ್ತಿದ್ದ ಹೊತ್ತಿನಲ್ಲೇ ಬಿಜೆಪಿಯ ರಾಜ್ಯ ವಕ್ತಾರ ಧನಂಜಯ ಕುಮಾರ್‌ ಪಾಪ್ಯುಲರ್‌ ಫ್ರಂಟ್‌ ಇಂಡಿಯಾ ಎಂಬ ಸಂಘಟನೆ ಟಿ.ವಿ.ಚಾನೆಲ್‌ ಒಂದರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಮಾತನಾಡುತ್ತಿದ್ದರು. ಸದಾ ತುಷ್ಟೀಕರಣದ ಬಗ್ಗೆ ಮಾತನಾಡುವ ಬಿಜೆಪಿ ತನಗೆ ಅಧಿಕಾರ ದೊರೆತಾಗ ತನ್ನವರನ್ನು ತುಷ್ಟೀಕರಿಸುವುದರಲ್ಲಿ ಉಳಿದೆಲ್ಲರನ್ನೂ ಹಿಂದಿಕ್ಕುತ್ತದೆ ಎಂಬುದಂತೂ ಇದರಿಂದ ಸಾಬೀತಾಗುತ್ತಿದೆ. ಭಾರತೀಯ ಸಂವಿಧಾನ ಹೇಳಿರುವ ಜಾತ್ಯತೀತತೆಯನ್ನು ಪ್ರತಿಪಾದಿಸುವ ಪ್ರತಿಯೊಬ್ಬನನ್ನು `ನೀವು ಭಯೋತ್ಪಾದನೆಯನ್ನು ಖಂಡಿಸುವುದಿಲ್ಲ’ ಎನ್ನುವ ಬಿಜೆಪಿಯ ನಾಯಕರು ತಮ್ಮ ಸಹೋದರ ಸಂಘಟನೆಯ ಭಯೋತ್ಪಾದನೆಯ ವಿಷಯದಲ್ಲೇಕೆ ಕುರುಡು?

ಈ ವರ್ತನೆಯನ್ನು ಕಂಡು ಜನರೇನೂ ಆಶ್ಚರ್ಯ ಪಡುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ರಾಜಕಾರಣಿಯೂ ರಾಜಕೀಯ ಪಕ್ಷವೂ ನೀರೋನ ಅಪರಾವತಾರವೇ. ಅದು ಬಯಲಾಗುವುದಕ್ಕೆ ಬೇಕಿರುವುದು ನಿರ್ದಿಷ್ಟ ಸಂದರ್ಭಗಳಷ್ಟೇ. ದಿಲ್ಲಿಯಲ್ಲಿ ಕಾಂಗ್ರೆಸ್‌ನ ನೀರೋ ಗುಣ ಹೊರಬಿದ್ದರೆ ಬೆಂಗಳೂರಿನಲ್ಲಿ ಬಿಜೆಪಿಯ ನೀರೋ ಗುಣ ಬಹಿರಂಗಗೊಂಡಿತು.

ಭಯೋತ್ಪಾದನೆಯ ಮತ್ತೊಂದು ಮುಖ

ಇತ್ತೀಚೆಗೆ ಬೆಂಗಳೂರು, ಅಹಮದಾಬಾದ್‌ಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಬಂದ ಎರಡು ಮುಖ್ಯ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಮೊದಲನೆಯದ್ದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರದ್ದು. ಸ್ಫೋಟಗಳೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತಿದೆ. ಸಂಸತ್‌ನಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಈ ಸ್ಫೋಟಗಳನ್ನು ಸಂಘಟಸಿದ್ದಿರಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಈ ಪ್ರತಿಕ್ರಿಯೆ ಹೊರಬಿದ್ದ ದಿನವೇ ಸಫ್ದರ್‌ ಹಷ್ಮಿ ಮೆಮೋರಿಯಲ್‌ ಟ್ರಸ್ಟ್‌ನ ಶಬ್ನಂ ಹಶ್ಮಿ `ಪ್ರಭುತ್ವ ತನ್ನ ಉಳಿದೆಲ್ಲಾ ಸೇವೆಗಳನ್ನೂ ಖಾಸಗೀಕರಿಸಿರುವುದರಿಂದ ಅದಕ್ಕೆ ಉಳಿದಿರುವುದು ಭದ್ರತೆಯ ಕೆಲಸ ಮಾತ್ರ. ಇದನ್ನು ಜನರಿಗೆ ಆಗಾಗ ನೆನಪು ಮಾಡಿ ಕೊಡದೇ ಹೋದರೆ ಪ್ರಭುತ್ವವೇ ಅಪ್ರಸ್ತುತವಾಗಿಬಿಡುವ ಸಾಧ್ಯತೆ ಇದೆ. ಸರಣಿ ಸ್ಫೋಟಗಳನ್ನು ಈ ಹಿನ್ನೆಲೆಯಲ್ಲೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದಿದ್ದರು.

ನಗರ ಮಧ್ಯೆ ದೊಡ್ಡ ಪಟಾಕಿ ಸಿಡಿದರೂ ಅದರ ಹಿಂದೆ ಇಸ್ಲಾಮಿಕ್‌ ಭಯೋತ್ಪಾದನೆಯಿದೆ ಎಂದು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. ಅಂತಹ ಪಕ್ಷದ ಪ್ರಮುಖ ನಾಯಕಿಯೊಬ್ಬರು ಬಾಂಬ್‌ ಸ್ಫೋಟದ ಹಿಂದೆ ಮತ್ತೊಂದು ರಾಜಕೀಯ ಪಕ್ಷದ ಕೈವಾಡದ ಬಗ್ಗೆ ಆರೋಪಿಸಿದ್ದು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿಯೂ ವಿಶಿಷ್ಟವಾಗಿಯೂ ಇದೆ. ಅಷ್ಟೇ ಅಲ್ಲ ಅವರು ಸ್ಫೋಟಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಮಾಡಿಸಲು ಕಾರಣವಾದ ಅಂಶದ ಬಗ್ಗೆಯೂ ಹೇಳಿದ್ದರು. ಆದರೆ ಅದನ್ನು ಸ್ವತಃ ಬಿಜೆಪಿ ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಮಾಧ್ಯಮಗಳೂ ಅಷ್ಟೇ. `ಸ್ಫೋಟಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದ ನೀತಿ ಸಂಹಿತೆ’ಯ ಬಗ್ಗೆಯಷ್ಟೇ ಮಾತನಾಡಿ ಸುಮ್ಮನಾಗಿಬಿಟ್ಟವು.

ಶಬ್ನಂ ಹಶ್ಮಿಯವರ ಅಭಿಪ್ರಾಯವೂ ಒಂದು ರೀತಿಯಲ್ಲಿ ಸುಷ್ಮಾ ಸ್ವರಾಜ್‌ ಅವರ ಮಾತನ್ನೇ ಮತ್ತೊಂದು ಬಗೆಯಲ್ಲಿ ಧ್ವನಿಸುತ್ತಿದೆ. ಆದರೆ ಇದು ಟಿ.ವಿ.ಯ ಟಾಕ್‌ ಶೋ ಒಂದರಲ್ಲಿ ಬಂದ ಆನುಷಂಗಿಕವಾದ ಮಾತಾಗಿಯಷ್ಟೇ ಉಳಿಯಿತು. ಪ್ರಭುತ್ವ ಅಥವಾ ಸರಕಾರ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಸ್ಫೋಟಗಳನ್ನು ನಡೆಸಿದ್ದಿರಬಹುದೇ ಎಂಬ ಸಂಶಯವನ್ನು ದೂರಗೊಳಿಸುವ ಯಾವ ಪ್ರಯತ್ನವೂ ಸರಕಾರದ ಕಡೆಯಿಂದಂತೂ ಆಗಲಿಲ್ಲ. ಭಯೋತ್ಪಾದನೆಯ ಕುರಿತು `ತಜ್ಞ ಬರೆಹ’ಗಳನ್ನು ಒದಗಿಸುವವರೂ ಈ ದೃಷ್ಟಿಕೋನದ ಕುರಿತು ಏನನ್ನೂ ಹೇಳಲಿಲ್ಲ.

***

ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಸರಿಯಾಗಿ ಬೆಂಗಳೂರಿನಲ್ಲೊಂದು ಕಳ್ಳಭಟ್ಟಿ ದುರಂತ ನಡೆಯಿತು. ಅದರ ಹಿಂದೆಯೇ ಹಾವೇರಿಯಲ್ಲಿ ರೈತರು ರಸಗೊಬ್ಬರಕ್ಕಾಗಿ ಆಗ್ರಹಿಸಿ ನಡೆಸಿದ ಚಳವಳಿ ಹಿಂಸಾರೂಪ ತಳೆಯಿತು. ಪೊಲೀಸ್‌ ಗೊಲಿಬಾರ್‌ಗೆ ಇಬ್ಬರು ರೈತರು ಬಲಿಯಾದರು. ಈ ಎರಡೂ ಪ್ರಕರಣಗಳ ಹಿಂದೆ ರಾಜಕೀಯ ಕೈವಾಡದ ಸಂಶಯವನ್ನು ಸ್ವತಃ ಮುಖ್ಯಮಂತ್ರಿಗಳೇ ವ್ಯಕ್ತಪಡಿಸಿದ್ದರು. ಈ ಸಂಶಯಕ್ಕೆ ಪುಷ್ಟಿ ನೀಡುವ ಅಂಶಗಳ ಬಗ್ಗೆ ಅವರೂ ಹೇಳಲಿಲ್ಲ. ದಿನಗಳೆಯುತ್ತಾ ಹೊಸ ಸಮಸ್ಯೆಗಳು ಎದುರಾದಂತೆ ಜನರೂ ಇವುಗಳನ್ನು ಮರೆತುಬಿಟ್ಟರು. ರಾಜಕೀಯ ಕಾರಣಕ್ಕಾಗಿ ಒಂದು ಕಳ್ಳಭಟ್ಟಿ ದುರಂತವನ್ನು ಸಂಘಟಿಸಲು ಸಾಧ್ಯವಿದ್ದರೆ, ಚಳವಳಿಯೊಂದನ್ನು ಉದ್ದೇಶಪೂರ್ವಕವಾಗಿ ಹಿಂಸೆಗೆ ತಿರುಗಿಸಲು ಸಾಧ್ಯವಿದ್ದರೆ ಅಮೋನಿಯಂ ನೈಟ್ರೇಟ್‌ನಂಥ ಕಚ್ಚಾ ಸ್ಫೋಟಕಗಳನ್ನು ಬಳಸಿ ಸ್ಫೋಟಗಳನ್ನೂ ನಡೆಸಬಹುದಲ್ಲವೇ?

ಸುಷ್ಮಾ ಸ್ವರಾಜ್‌ ಅವರು ಹೇಳಿದಂತೆ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅಹಮದಾಬಾದ್‌ನಲ್ಲಿ ಸ್ಫೋಟದ ಸಂಚೊಂದನ್ನು ರೂಪಿಸಲಾಗಿತ್ತು. ಇದೇ ತರ್ಕವನ್ನು ಬೆಂಗಳೂರಿಗೆ ಅನ್ವಯಿಸುವುದಾದರೆ ವಿದ್ಯುತ್‌ ಕೊರತೆ, ಗೊಬ್ಬರದ ಕೊರತೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬೆಂಗಳೂರು ಸ್ಫೋಟವನ್ನು ಸಂಘಟಿಸಲಾಗಿತ್ತು ಎಂದು ಭಾವಿಸಬಹುದೇ?

***

ದೇಶವ್ಯಾಪಿಯಾಗಿ ಇತ್ತೀಚೆಗೆ ನಡೆದ ಸ್ಫೋಟಗಳ ಸರಣಿಯಲ್ಲಿ ಒಂದು ಅಂಶ ಸ್ಪಷ್ಟವಾಗಿತ್ತು. ಸ್ಫೋಟಗಳೆಲ್ಲವೂ ಹೇಗೆ ಪೂರ್ವ ನಿಯೋಜಿತವೋ ಹಾಗೆಯೇ ಸರಕಾರದ ಇದಕ್ಕೆ ಪ್ರತಿಕ್ರಿಯಿಸಿದ ರೀತಿಯೂ ಪೂರ್ವನಿಯೋಜಿತವೆಂಬ ಸಂಶಯ ಬರುವಂತೆ ಇತ್ತು. ವರ್ಷಗಳಿಂದ ಹೇಳಿಕೊಂಡು ಬರುತ್ತಿರುವ ಅವೇ ಸಂಘಟನೆಗಳ ಹೆಸರುಗಳು ಮತ್ತೆ ಮತ್ತೆ ಪೊಲೀಸರ ಬಾಯಿಂದ ಬಂದವು. ಲಷ್ಕರ್‌ ಎ ತಯ್ಯೆಬಾ, ಹಿಜ್ಬುಲ್‌ ಮುಜಾಹಿದೀನ್‌, ಸಿಮಿ ಹೀಗೆ ಸ್ಫೋಟದ ನಡೆದ ಕ್ಷಣವೇ ಯಾರು ಬೇಕಾದರೂ ಊಹಿಸಬಹುದಾದ ಹೆಸರುಗಳಿವು. ಸ್ಫೋಟಗಳು ನಡೆದ ಕೆಲವೇ ದಿನಗಳಲ್ಲಿ ಒಂದಷ್ಟು ಮಂದಿಯನ್ನು ಬಂಧಿಸಲಾಗುತ್ತದೆ. ಲಷ್ಕರ್‌ನ ಉತ್ತರ ಭಾರತ ಕಮಾಂಡರ್‌ನನ್ನೇ ಬಂಧಿಸಿದ್ದೇವೆಂದೋ, ಬಾಂಬ್‌ ಸ್ಫೋಟದ ಹಿಂದಿನ ಮೆದುಳನ್ನು ಕಂಡುಹಿಡಿದೆವೆಂದೋ ಪೊಲೀಸರು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಈ ಮೆದುಳುಗಳು, ಕಮಾಂಡರ್‌ಗಳೆಲ್ಲಾ ಜೈಲಿನಲ್ಲಿ ಇರುವಾಗಲೇ ಮತ್ತೊಂದೆಡೆ ಸ್ಫೋಟ ಸಂಭವಿಸುತ್ತಿರುತ್ತದೆ. ಮತ್ತೊಂದಷ್ಟು ಮೆದುಗಳು ಮತ್ತು ಕಮಾಂಡರ್‌ಗಳ ಬಂಧನ ನಡೆಯುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ಎರಡು ಕಡೆ ಸ್ಫೋಟಗಳು ನಡೆದವು. ಇದರಲ್ಲಿ ಐವತ್ತು ಮಂದಿ ಮೃತಪಟ್ಟರು. ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ 97 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. 42 ಮಂದಿಯನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಲಾಯಿತು. ಉಳಿದವರನ್ನು ಇನ್ನೂ ಬಿಡುಗಡೆ ಮಾಡದಿರುವುದಕ್ಕೆ ಕಾರಣ ಅವರು ಪ್ರಕರಣದ ಆರೋಪಿಗಳಾಗಿರುವುದಕ್ಕಲ್ಲ. ಇವರೆಲ್ಲಾ ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಇವರಿನ್ನೂ ಜೈಲುಗಳಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಬಂಧನಗಳು ಈತನಕ ನಡೆದಿಲ್ಲ.

ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಹೈದರಾಬಾದ್‌ ಮಕ್ಕಾ ಮಸೀದಿ ಸ್ಫೋಟದ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಹರ್ಕತುಲ್‌ ಜಿಹಾದ್‌ ಎಂಬ ಸಂಘಟನೆ ಸ್ಫೋಟದ ಹಿಂದಿದೆ ಎಂಬುದು ಪೊಲೀಸರ ಊಹೆ. ಈ ತನಕ ಯಾರ ಮೇಲೂ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಮುಖ್ಯ ಆರೋಪಿಯನ್ನು ಇನ್ನೂ ಪೊಲೀಸರು ಹುಡುಕುತ್ತಲೇ ಇದ್ದಾರೆ. ಸಂಝೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 68. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು. ಆದರೆ ಅವರನ್ನು ಮತ್ತೆ ಬಿಡುಗಡೆ ಮಾಡಲಾಯಿತು. ಈಗ ಹರಿಯಾಣಾ ಪೊಲೀಸರ ಬಳಿ ಈ ಪ್ರಕರಣದ ಮಟ್ಟಿಗೆ ಇರುವ ಮಾಹಿತಿ ಶೂನ್ಯ. ಈ ವರ್ಷ ಮೇ ತಿಂಗಳಿನಲ್ಲಿ ಸಂಭವಿಸಿದ ಜೈಪುರ್‌ ಸ್ಫೋಟ 68 ಮಂದಿ ಮುಗ್ಧರನ್ನು ಬಲಿತೆಗೆದುಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತಾದರೂ ಮುಂದೆ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು. ದಿಲ್ಲಿಯಲ್ಲಿ ಒಬ್ಬಾತನನ್ನು ಆರ್‌ಡಿಎಕ್ಸ್‌ ಇಟ್ಟುಕೊಂಡಿದ್ದನೆಂದು ಬಂಧಿಸಲಾಯಿತು. ಆಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ.

2008ರಲ್ಲಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಸ್ಫೋಟ ಪ್ರಕರಣ ಬಹಳ ಕುತೂಹಲಕಾರಿಯಾಗಿತ್ತು. ಆರ್‌ಎಸ್‌ಎಸ್‌ ಸಂಘಟನೆಯ ಕಾರ್ಯಕರ್ತರು ಎನ್ನಲಾದವರೊಬ್ಬರ ಮನೆಯಲ್ಲಿ ಈ ಸ್ಫೋಟ ನಡೆದಿತ್ತೆಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರಲ್ಲಿ ಇಬ್ಬರು ಮೃತಪಟ್ಟಿದ್ದರು ಈ ಕುರಿತ ತನಿಖೆ ಅಲ್ಲಿಂದಾಚೆಗೆ ಮುಂದುವರಿಯಲೇ ಇಲ್ಲ. ಪರ್‌ಭನಿ ಸ್ಫೋಟಗಳ ಹಿನ್ನೆಲೆಯಲ್ಲೂ ರಾಷ್ಟ್ರೀಯವಾದಿ ಸಂಘಟನೆಯೊಂದರ ಹೆಸರು ಕೇಳಿಬಂದಿತ್ತು. ಈ ಕುರಿತ ತನಿಖೆ ಏನಾಯಿತೆಂದು ಯಾರಿಗೂ ತಿಳಿಯಲಿಲ್ಲ. ಈ ಪಟ್ಟಿಯನ್ನು ಹೀಗೆ ಬೆಳಸುತ್ತಲೇ ಹೋಗಬಹುದು. ಸುಷ್ಮಾ ಮತ್ತು ಶಬ್ನಂ ಅವರ ಹೇಳಿಕೆಗಳ ಜತೆಯಲ್ಲಿ ಈ ವಿವರಗಳನ್ನು ನೋಡಿದರೆ ಭಯೋತ್ಪಾದನೆ ನಾವಂದುಕೊಂಡಷ್ಟು ಅಥವಾ ಸರಕಾರ ಹೇಳುತ್ತಿರುವಷ್ಟು ಸರಳವಾದುದಲ್ಲ ಎಂಬುದಂತೂ ಮನದಟ್ಟಾಗುತ್ತದೆ.

***

ಸ್ಫೋಟಗಳನ್ನು ಸಂಭವಿಸಿದ ಮರು ಕ್ಷಣವೇ ಪೊಲೀಸರು `…ಸಂಘಟನೆಯ ಕೆಲಸ’ ಎನ್ನುವುದು. ಅದರ ಮಾಸ್ಟರ್‌ ಮೈಂಡ್‌ಗಳು ಇಂಥವರೇ ಎಂದು ಊಹಿಸುವುದನ್ನು ಕಂಡು ನಾವೆಲ್ಲಾ ನಮ್ಮ ಪೊಲೀಸರ ಶಕ್ತಿಯ ಕುರಿತು ಹೆಮ್ಮೆ ಪಡುತ್ತಿರುತ್ತೇವೆ. ಆದರೆ ಅವರ ತನಿಖೆಗಳು ಎಂಥವು ಎಂಬುದನ್ನು ಮೇಲೆ ಪಟ್ಟಿ ಮಾಡಿದ ಉದಾಹರಣೆಗಳೇ ಸ್ಪಷ್ಟಪಡಿಸುತ್ತಿವೆ. ಈಗಷ್ಟೇ ಅಹಮದಾಬಾದ್‌ ಸ್ಫೋಟದ ಹಿಂದಿನ ಮಾಸ್ಟರ್‌ ಮೈಂಡ್‌ ಅನ್ನೂ ಅದನ್ನು ನಡೆಸಿದ ಸಂಘಟನೆಯನ್ನೂ ಗುಜರಾತ್‌ ಪೊಲೀಸರು ಕಂಡುಹಿಡಿದಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಸುಷ್ಮಾ ಸ್ವರಾಜ್‌ ಅವರು ಹೇಳಿದ `ರಾಜಕೀಯ ಹುನ್ನಾರ’ಕ್ಕೂ ಈ ಸಂಘಟನೆಗಳಿಗೂ ಸಂಬಂಧವಿದೆಯೇ ಎಂಬುದನ್ನು ಬಿಜೆಪಿ ಆಡಳಿತವಿರುವ ಗುಜರಾತ್‌ ಸರಕಾರದ ಪೊಲೀಸರೂ ಹೇಳುತ್ತಿಲ್ಲ!

ಢಿಫ್ರೆಂಟ್ ಸಿನಿಮಾ ಮತ್ತು ಡಿಫ್ರೆಂಟ್ ಸರಕಾರ

`ನೋಡಿ ಸಾರ್‌, ನಮ್ಮದು ಕಂಪ್ಲೀಟ್‌ ಡಿಫ್ರೆಂಟ್‌ ಸಿನಿಮಾ ಸಾರ್‌. ನಾವು ಇಡೀ ಕತೆಯನ್ನು ಡಿಫ್ರೆಂಟ್‌ ಆಗಿ ಪ್ರೆಸೆಂಟ್‌ ಮಾಡಿದ್ದೀವಿ. ತುಂಬಾನೆ ಡಿಫ್ರೆಂಟ್‌ ಕತೆ. ….ಅವ್ರ ಅಭಿಮಾನಿಗಳು ಎಂಜಾಯ್ ಮಾಡ್ತಾರೆ. ಯಂಗ್‌ಸ್ಟರ್ಸ್‌ಗೆ ಇಷ್ಟ ಆಗುತ್ತೆ. ಲೇಡೀಸ್‌ಗೂ ಇಷ್ಟ ಆಗುತ್ತೆ ಸಾರ್‌. ನೀವು ನೋಡ್ತಾ ಇರಿ ಸಾರ್‌. ಗ್ಯಾರಂಟಿ ಹಂಡ್ರೆಡ್‌ ಡೇಸ್‌.’

`ನಮ್ಮ ಪಕ್ಷ ಭಿನ್ನವಾದುದು. ಸಿದ್ಧಾಂತಗಳಿಗೆ ಬದ್ಧವಾದುದು. ಕಾಂಗ್ರೆಸ್ಸಿನ ಭ್ರಷ್ಟಾಚಾರ, ಜೆಡಿಎಸ್‌ನ ವಚನಭ್ರಷ್ಟತೆ ಸಂಸ್ಕೃತಿ ನಮ್ಮದಲ್ಲ. ನಮ್ಮದು ರಾಷ್ಟ್ರೀಯವಾದಿ ಪಕ್ಷ. ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಪೂರ್ಣ ಅವಧಿಗೆ ಸ್ಥಿರ ಸರಕಾರವನ್ನು ನೀಡುತ್ತೇವೆ. ರೈತರಿಗೆ ಉಚಿತ ವಿದ್ಯುತ್‌ ನೀಡುತ್ತೇವೆ. ವಿದ್ಯುತ್‌ ಬಾಕಿಯನ್ನು ಮನ್ನಾ ಮಾಡುತ್ತೇವೆ. ಬಡತನ ರೇಖೆಗೆ ನಿಗದಿ ಪಡಿಸಿರುವ ಆದಾಯದ ಮಿತಿಯನ್ನು 11,800ರಿಂದ 30,000 ರೂಪಾಯಿಗಳಿಗೆ ಏರಿಸುತ್ತೇವೆ. ಕರ್ನಾಟಕದ ಎಲ್ಲ ಸಮಸ್ಯೆಗಳಿಗೂ ಬಿಜೆಪಿಯೇ ಪರಿಹಾರ’

ಮೇಲಿನ ಎರಡೂ ಹೇಳಿಕೆಗಳ ಮಧ್ಯೆ ಏನಾದರೂ ವ್ಯತ್ಯಾಸವಿದೆಯೇ? ಗಾಂಧಿನಗರಿಗರು ಹೇಳುವ ಕಂಪ್ಲೀಟ್‌ ಡಿಫ್ರೆಂಟ್‌ ಸಿನಿಮಾ ಎಂಬುದು ತಮಿಳಿನಿಂದಲೋ ತೆಲುಗಿನಿಂದಲೋ ಕದ್ದ ಸರಕನ್ನಷ್ಟೇ ಹೊಂದಿರುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿದರೆ ತಕ್ಷಣ ಗಾಂಧಿನಗರ ಉತ್ತರ ಕೊಡುತ್ತದೆ. `ಜಗತ್ತಿನಲ್ಲಿ ಇರುವುದೇ ಒಂಬತ್ತು ಕತೆಗಳು. ಅದನ್ನೇ ಡಿಫ್ರೆಂಟ್‌ ಆಗಿ ಹೇಳುವುದಷ್ಟೇ ನಮ್ಮ ಕೆಲಸ. ಹೊಸ ಕತೆ ಎಂಬುದೊಂದಿಲ್ಲ.’

ಪಾರ್ಟಿ ವಿದ್‌ ಎ ಡಿಫರೆನ್ಸ್‌ ಎಂದು ಸದಾ ಹೇಳಿಕೊಳ್ಳುವ ಬಿಜೆಪಿ ಸರಕಾರ ಈಗ ಕರ್ನಾಟಕದಲ್ಲಿ 100ನೇ ದಿನದತ್ತ ಕಾಲಿಡುತ್ತಿದೆ. ಉಚಿತ ವಿದ್ಯುತ್ತಿಗೇಕೆ ಷರತ್ತು ಹಾಕುತ್ತಿದ್ದೀರಿ? ಬಾಕಿ ಮನ್ನಾ ಮರೆತೇ ಬಿಟ್ಟಿದ್ದೀರಲ್ಲ? ಬಡವರನ್ನು ಗುರುತಿಸುವ ಆದಾಯ ಮಿತಿಯ ಹೆಚ್ಚಳದ ವಿಷಯ ಏನಾಯಿತು? ಎಂದು ಕೇಳಿದರೆ ಅದಕ್ಕೆ ಪಕ್ಕಾ ಗಾಂಧಿನಗರದ ಉತ್ತರವೇ ದೊರೆಯುತ್ತದೆ. `ಉಚಿತ ವಿದ್ಯುತ್‌ ಎಂದರೆ ಎಲ್ಲರಿಗೂ ಉಚಿತ ವಿದ್ಯುತ್‌ ಎಂದರ್ಥವಲ್ಲ. ಬಾಕಿ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದು ಹೌದು. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನೂ ನೋಡಬೇಕಲ್ಲ. ಎರಡು ರೂಪಾಯಿಗೆ ಅಕ್ಕಿ ಕೊಡಬೇಕು ಎಂದು ಹೇಳಿದಾಗ ಒಂದು ಕೆ.ಜಿ. ಅಕ್ಕಿಗೆ 12 ರೂಪಾಯಿ ಇತ್ತು. ಈಗ 24 ರೂಪಾಯಿಗಳಷ್ಟಾಗಿದೆ…’ ಹೀಗೆ ಉತ್ತರಗಳು ಸಾಲು ಸಾಲಾಗಿ ಬರುತ್ತವೆ.

***

ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕೆ ಮೊದಲು 26 ಸರಕಾರಗಳು ಅಸ್ತಿತ್ವಕ್ಕೆ ಬಂದಿವೆ. ಎಸ್‌.ಎಂ. ಕೃಷ್ಣ ಪಟೇಲ್‌ ಸರಕಾರದ ಅವಧಿಯ ತನಕವೂ ಸರಕಾರ ನೂರು ದಿನಗಳನ್ನು ಪೂರ್ಣಗೊಳಿಸಿದ್ದು ಒಂದು `ಸಂಭ್ರಮಾಚರಣೆ’ಯ ವಿಷಯವಾಗಿರಲಿಲ್ಲ. ಮಾಧ್ಯಮಗಳೂ ಸರಕಾರದ ನೂರು ದಿನದ ಸಾಧನೆಗಳ ಚರ್ಚೆಯನ್ನೇನೂ ಆರಂಭಿಸುತ್ತಿರಲಿಲ್ಲ. ಸರಕಾರಕ್ಕೆ ಒಂದು ವರ್ಷ ತುಂಬಿದ ನಂತರವಷ್ಟೇ ಇಂಥದ್ದಕ್ಕೆ ಅವಕಾಶವಿತ್ತು. ಎಸ್‌ ಎಂ ಕೃಷ್ಣ ಅವರ ಸರಕಾರ ನೂರು ದಿನಗಳನ್ನು ಪೂರೈಸಿದಾಗ ಈ ಪರಂಪರೆ ಆರಂಭವಾಯಿತು. ಸರಕಾರೀ ಜಾಹೀರಾತುಗಳು ಮಾಧ್ಯಮಗಳನ್ನು ತುಂಬಿಕೊಂಡವು. ಜತೆಗೇ ಮಾಧ್ಯಮಗಳಲ್ಲಿ ಸರಕಾರದ ನೂರು ದಿನಗಳ ಸಾಧನೆಯ ಕುರಿತ ಚರ್ಚೆಗಳೂ ತುಂಬಿಕೊಂಡವು. ಈಗ ಯಡಿಯೂರಪ್ಪನವರ ಸರಕಾರ ನೂರನೇ ದಿನದತ್ತ ಸಾಗುತ್ತಿರುವ ಹೊತ್ತಿನಲ್ಲೂ ಅದೇ ಸಂಭವಿಸುತ್ತಿದೆ. ಸರಕಾರಕ್ಕೆ ನೂರು ದಿನ ತುಂಬುತ್ತಿರುವುದು ಒಂದು `ಆಚರಣೆ’ಯ ವಿಷಯವಾಗುತ್ತಿದೆ.

ಒಂದು ಸರಕಾರದ ಆಡಳಿತಾವಧಿ ಐದು ವರ್ಷ. ಈ ಐದು ವರ್ಷಗಳ ಅವಧಿಯಲ್ಲಿ ಆರಂಭದ ನೂರು ದಿನಗಳಿಗೆ ವಿಶೇಷ ಮಹತ್ವವೇನೂ ಇರುವುದಿಲ್ಲ. ಅಂಥದ್ದೊಂದು ಮಹತ್ವ ಬರಬೇಕೆಂದರೆ ಸರಕಾರ ಐದು ವರ್ಷಗಳ ಕಾಲ ಬದುಕುವ ಬಗ್ಗೆ ಸಂಶಯವಿರಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸುವ ಬಗ್ಗೆ ಮಾಧ್ಯಮಗಳಿಗೆ ಸಂಶಯವಿರಬೇಕು. ಇಲ್ಲದಿದ್ದರೆ ಸರಕಾರದ `ಸಾರ್ವಜನಿಕ ಸಂಪರ್ಕ ತಜ್ಞರು’ ಸಿಕ್ಕಾಪಟ್ಟೆ ಉತ್ಸಾಹಿಗಳಾಗಿರಬೇಕು. ಎಸ್‌ ಎಂ ಕೃಷ್ಣ ಅವರ ಸರಕಾರದ ಸಂದರ್ಭದಲ್ಲಿ ಕೊನೆ ಅಂಶ ಮುಖ್ಯ ಪಾತ್ರವಹಿಸಿತ್ತು. ಯಡಿಯೂರಪ್ಪನವರ ಸರಕಾರದಲ್ಲಿ ಈ ಮೂರರಲ್ಲಿ ಯಾವುದು ಮುಖ್ಯ ಪಾತ್ರವಹಿಸುತ್ತಿದೆ ಎಂದು ನಿರ್ಧರಿಸುವುದು ಕಷ್ಟವಾಗುತ್ತಿದೆ.

ಈ ವಿದ್ಯಮಾನವನ್ನೂ ಗಾಂಧೀನಗರದ ವಿದ್ಯಮಾನಗಳನ್ನು ಹೋಲುತ್ತದೆ. ಹತ್ತು ವರ್ಷಗಳ ಹಿಂದಿನ ಸಿನಿಮಾ ಜಾಹೀರಾತುಗಳು ಮತ್ತು ಪೋಸ್ಟರ್‌ಗಳನ್ನು ಒಮ್ಮೆ ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ. ಪೊಸ್ಟರ್‌ಗಳು ಮತ್ತು ಜಾಹೀರಾತುಗಳಲ್ಲಿ `ಜನಭರಿತ ಮೂರನೇ ವಾರ’ದಂಥ ಒಕ್ಕಣೆಗಳಿರುತ್ತಿದ್ದವು. ಈಗ ಅವೇ ಜಾಹೀರಾತುಗಳು ಮತ್ತು ಪೋಸ್ಟರ್‌ಗಳಲ್ಲಿ `ಜನಭರಿತ ಮೂರನೇ ದಿನ’ ಎಂದಿರುತ್ತದೆ. ಚಿತ್ರವೊಂದರ ಪ್ರದರ್ಶನದ ದಿನಗಳ ಲೆಕ್ಕಾಚಾರ ವಾರಗಳಿಂದ ದಿನಗಳಿಗೆ ಇಳಿದುಬಿಟ್ಟಿದೆ. ಸರಕಾರದ ಅಸ್ತಿತ್ವದ ಅವಧಿ ಈಗ ವರ್ಷಗಳಿಂದ ದಿನಗಳಿಗೆ ಕುಸಿದಿದೆ ಎಂದು ಭಾವಿಸೋಣವೇ?

***

ಅಧಿಕಾರಕ್ಕೇರುವ ತನಕ ಮಾತ್ರ ರಾಜಕೀಯ ಪಕ್ಷಗಳೂ `ಡಿಫ್ರೆಂಟ್‌’ ಆಗಿರುತ್ತವೆ. ಗಾಂಧಿನಗರದ ಸಿನಿಮಾಗಳೂ ಅಷ್ಟೇ ಬಿಡುಗಡೆಯಾಗುವ ತನಕವೂ `ಡಿಫ್ರೆಂಟ್‌’. ಇದನ್ನು ಬಿಜೆಪಿ ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ಸಾಬೀತು ಮಾಡಿದೆ. ವರ್ಗಾವಣೆಗಳಿಂದ ಆರಂಭಿಸಿ ಆಪರೇಷನ್‌ ಕಮಲದ ತನಕ ಬಿಜೆಪಿಯೂ ಇತರ ಎಲ್ಲಾ ಪಕ್ಷಗಳಂತೆಯೇ ಭ್ರಷ್ಟವೂ ಅಪ್ರಾಮಾಣಿಕವೂ ಆಗಿದೆ ಎಂಬುದು ಸಾಬೀತಾಗಿದೆ. ಇನ್ನು ಅಭಿವೃದ್ಧಿಯ ವಿಷಯ ಮಾತನಾಡದೇ ಇರುವುದೇ ಒಳ್ಳೆಯದು. ಗುಜರಾತ್‌ನ ರಿಮೇಕ್‌ ಆದರೂ ಇಲ್ಲಿ ನಡೆಯುತ್ತದೆ ಎಂದು ಭಾವಿಸಿದ್ದ ಬಿಜೆಪಿ ಕಾರ್ಯಕರ್ತರಿಗೇ ನಿರಾಶೆಯಾಗಿದೆ.

ಉಚಿತ ವಿದ್ಯುತ್‌ ನೀಡಲು ಸಾಧ್ಯವಿಲ್ಲ, ಪಡಿತರ ಸಬ್ಸಿಡಿಯನ್ನು ನೀಡಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳುವ ಧೈರ್ಯ ಮಾಡಿದ್ದರೆ ಈಗಿನ ಸರಕಾರವನ್ನು ಕನಿಷ್ಠ ಈ ಪ್ರಾಮಾಣಿಕತೆಗಾಗಿ ಯಾದರೂ ಭಿನ್ನ ಎಂದು ಒಪ್ಪಿಕೊಳ್ಳಬಹುದಿತ್ತು. ಈಡೇರಿಸಲಾಗದ ಭರವಸೆಗಳನ್ನು ಈಡೇರಿಸುವ ನಾಟಕವನ್ನು ಕಾಂಗ್ರೆಸ್‌ ಐವತ್ತು ವರ್ಷಗಳ ಆಡಿದೆ. ತಾನು ಹುಟ್ಟಿದ ದಿನದಿಂದ ಕಾಂಗ್ರೆಸ್‌ನ ಸಿದ್ಧಾಂತವನ್ನೂ ಆಡಳಿತ ವಿಧಾನವನ್ನೂ ಖಂಡಿಸುತ್ತಲೇ ಬಂದಿರುವ ಬಿಜೆಪಿ ಕೂಡಾ ತನಗೆ ಅಧಿಕಾರ ಸಿಕ್ಕ ತಕ್ಷಣ ಕಾಂಗ್ರೆಸ್‌ನ ಅದೇ ನೀತಿಯನ್ನು ಹೊಸ ಭಾಷೆಯಲ್ಲಿ ಹೇಳುತ್ತಿದೆ ಅಷ್ಟೇ. ಹಳೆಯ ಸರಕಾರಗಳು ರೂಪಿಸಿ ವಿಫಲವಾದ ಯೋಜನೆಗಳನ್ನು ಹೊಸ ಹೆಸರಿನಲ್ಲಿ ನೀಡುವಷ್ಟರ ಮಟ್ಟಿಗೆ ನಮ್ಮ ರಾಜಕಾರಣಿಗಳ ಸೃಜನಶೀಲತೆ ಸತ್ತು ಹೋಗಿದೆಯೇ? ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ನಮಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಇಂಥ ಕಾನೂನುಗಳನ್ನು ನಮ್ಮಿಂದ ಮಾಡಿಸಿವೆ. ಸಾಲ ಪಡೆಯಲು ಇಂಥಾ ಕಾನೂನು ಮಾಡುವುದು ಅನಿವಾರ್ಯವಾಗಿತ್ತು. ಎಂದು ಧೈರ್ಯವಾಗಿ ಹೇಳುವುದಕ್ಕೆ ಯಡಿಯೂರಪ್ಪನವರಿಗೆ ಇರುವ ಸಮಸ್ಯೆಯಾದರೂ ಏನು?

ರಾಜಕಾರಣಿಗಳ ಸಮಸ್ಯೆ ಇರುವುದೇ ಇಲ್ಲಿ. ಇದೂ ಗಾಂಧಿನಗರದ ಸಮಸ್ಯೆಯೇ. ಹೊರಗಿನಿಂದ ಗಾಯಕರನ್ನು, ನಾಯಕಿಯರನ್ನು ಕರೆಯಿಸುವಾಗ, ರಿಮೇಕ್‌ ಚಿತ್ರಗಳನ್ನು ಮಾಡುವಾಗ ಅವರು ನೀಡುವ ಕಾರಣ ಒಂದೇ. `ನಮ್ಮಲ್ಲಿ ನಮಗೆ ಬೇಕಾದ ಗಾಯಕರಿಲ್ಲ, ನಾಯಕಿಯರಿಲ್ಲ, ಕಥೆಗಳಿಲ್ಲ ಆದ್ದರಿಂದ ಇದು ಅನಿವಾರ್ಯ’. ಯಡಿಯೂರಪ್ಪನವರೂ ಅಷ್ಟೇ ಬೇರೇ ಬೇರೇ ಪಕ್ಷಗಳಿಂದ ಬಂದವರಿಗೆ ಸಚಿವ ಸ್ಥಾನ ಕೊಟ್ಟರು. ಅವರಿಗೂ ಅಧಿಕಾರ ಉಳಿಸಿಕೊಳ್ಳಲು ಬೇಕಾದವರು ಪಕ್ಷದ ಒಳಗಿಲ್ಲ.

***

ಗಾಂಧಿನಗರದ `ಡಿಫ್ರೆಂಟ್‌’ ಸಿನಿಮಾಗಳ ನಿರ್ದೇಶಕರು `ಪಾರಿನ್‌ ಲೊಕೇಷನ್‌’ಗಳನ್ನು ಹುಡುಕಿ ಹಾರುವಂತೆ ನಮ್ಮ ನೂರು ದಿನಗಳ ಹೀರೋ ಕೂಡಾ ಭರವಸೆಗಳ ಬಿತ್ತನೆಗೆ ಫಾರಿನ್‌ ಲೊಕೇಶನ್‌ನಲ್ಲಿದ್ದಾರೆ. ಅವರಿಗೂ ಗಾಂಧಿನಗರಿಗರಿಗೂ ಅನ್ವಯಿಸಬಹುದಾದ ಫ್ರೆಂಚ್‌ ಚಿತ್ರಕಾರನ ಹೇಳಿಕೆಯೊಂದಿದೆ. `ಸತ್ಯ ಇರುತ್ತದೆ-ಸುಳ್ಳನ್ನು ಮಾತ್ರ ಆವಿಷ್ಕರಿಸಲೇ ಬೇಕಾಗುತ್ತದೆ’. ನಿಮ್ಮ ಆವಿಷ್ಕಾರಗಳು ಜನರಿಗೆ ತಿಳಿಯುವ ಮೊದಲು ಇರುವ ಸತ್ಯವನ್ನು ಒಪ್ಪಿಕೊಂಡುಬಿಡಿ.