ಇತ್ತೀಚೆಗೆ ಬೆಂಗಳೂರು, ಅಹಮದಾಬಾದ್‌ಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಬಂದ ಎರಡು ಮುಖ್ಯ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಮೊದಲನೆಯದ್ದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರದ್ದು. ಸ್ಫೋಟಗಳೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತಿದೆ. ಸಂಸತ್‌ನಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ಸ್ಫೋಟಗಳನ್ನು ಸಂಘಟಸಿದ್ದಿರಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಈ ಪ್ರತಿಕ್ರಿಯೆ ಹೊರಬಿದ್ದ ದಿನವೇ ಸಫ್ದರ್ ಹಷ್ಮಿ ಮೆಮೋರಿಯಲ್ ಟ್ರಸ್ಟ್‌ನ ಶಬ್ನಂ ಹಶ್ಮಿ `ಪ್ರಭುತ್ವ ತನ್ನ ಉಳಿದೆಲ್ಲಾ ಸೇವೆಗಳನ್ನೂ ಖಾಸಗೀಕರಿಸಿರುವುದರಿಂದ ಅದಕ್ಕೆ ಉಳಿದಿರುವುದು ಭದ್ರತೆಯ ಕೆಲಸ ಮಾತ್ರ. ಇದನ್ನು ಜನರಿಗೆ ಆಗಾಗ ನೆನಪು ಮಾಡಿ ಕೊಡದೇ ಹೋದರೆ ಪ್ರಭುತ್ವವೇ ಅಪ್ರಸ್ತುತವಾಗಿಬಿಡುವ ಸಾಧ್ಯತೆ ಇದೆ. ಸರಣಿ ಸ್ಫೋಟಗಳನ್ನು ಈ ಹಿನ್ನೆಲೆಯಲ್ಲೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದಿದ್ದರು.
ನಗರ ಮಧ್ಯೆ ದೊಡ್ಡ ಪಟಾಕಿ ಸಿಡಿದರೂ ಅದರ ಹಿಂದೆ ಇಸ್ಲಾಮಿಕ್ ಭಯೋತ್ಪಾದನೆಯಿದೆ ಎಂದು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. ಅಂತಹ ಪಕ್ಷದ ಪ್ರಮುಖ ನಾಯಕಿಯೊಬ್ಬರು ಬಾಂಬ್ ಸ್ಫೋಟದ ಹಿಂದೆ ಮತ್ತೊಂದು ರಾಜಕೀಯ ಪಕ್ಷದ ಕೈವಾಡದ ಬಗ್ಗೆ ಆರೋಪಿಸಿದ್ದು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿಯೂ ವಿಶಿಷ್ಟವಾಗಿಯೂ ಇದೆ. ಅಷ್ಟೇ ಅಲ್ಲ ಅವರು ಸ್ಫೋಟಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಮಾಡಿಸಲು ಕಾರಣವಾದ ಅಂಶದ ಬಗ್ಗೆಯೂ ಹೇಳಿದ್ದರು. ಆದರೆ ಅದನ್ನು ಸ್ವತಃ ಬಿಜೆಪಿ ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಮಾಧ್ಯಮಗಳೂ ಅಷ್ಟೇ. `ಸ್ಫೋಟಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದ ನೀತಿ ಸಂಹಿತೆ’ಯ ಬಗ್ಗೆಯಷ್ಟೇ ಮಾತನಾಡಿ ಸುಮ್ಮನಾಗಿಬಿಟ್ಟವು.