ಭಾರತದ ಚುನಾವಣಾ ಇತಿಹಾಸದಲ್ಲಿ ಎರಡು ಪ್ರಮುಖ ಘೋಷಣೆ ಗಳಿವೆ. ಒಂದು ಇಂದಿರಾ ಗಾಂಧಿಯವರ ಕಾಲದ `ಗರೀಬಿ ಹಟಾವೋ’ ಮತ್ತೊಂದು ವಾಜಪೇಯಿ ಆಡಳಿತಾವಧಿಯನ್ನು ಗಮನದಲ್ಲಿಟ್ಟು ಕೊಂಡು ರೂಪಿಸಿದ `ಭಾರತ ಪ್ರಕಾಶಿಸುತ್ತಿದೆ’. ಈ ಎರಡೂ ಘೋಷಣೆ ಗಳ ಮಧ್ಯೆ ಮೂರು ದಶಕಗಳ ಅಂತರವಿದೆ. ಗರೀಬಿ ಹಟಾವೋ ಒಂದು ಕಾಲಘಟ್ಟದ ಭಾರತದ ಮನೋಭೂಮಿಕೆಯನ್ನು ಹೇಗೆ ವಶಪಡಿಸಿ ಕೊಂಡಿತೆಂದರೆ ಅವನತಿಯಂಚಿನಲ್ಲಿದ್ದ ಕಾಂಗ್ರೆಸ್‌ಗೆ ಮರುಜೀವ ದೊರೆಯಿತು. ಇಡೀ ಭಾರತದ ಮನೋಭೂಮಿಕೆಯನ್ನು ಹಿಡಿದಿಡುವ ಇಂಥದ್ದೊಂದು ಘೋಷಣೆಯನ್ನು ನೀಡುವುದಕ್ಕೆ ಈ ತನಕ ಯಾರಿಗೂ ಸಾಧ್ಯವಾಗಲಿಲ್ಲ.
ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿ ಪೂರ್ಣ ಗೊಂಡಾಗ ಬಿಜೆಪಿ ತನ್ನ ರಾಜಕಾರಣದ ಪುನರಾ ವಿಷ್ಕರಣಕ್ಕೆ ಹೊರಟಿತು. ತನ್ನ ಆಡಳಿತದ ಐದು ವರ್ಷಗಳಲ್ಲಿ ಕಾಣಿಸಿದ ಆರ್ಥಿಕತೆಯ ಉತ್ಕರ್ಷ ವನ್ನು ಗಮನದಲ್ಲಿಟ್ಟುಕೊಂಡು ಅದು `ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಿತು. ಇದಕ್ಕೆ ಪ್ರತಿ ಯಾಗಿ ಕಾಂಗ್ರೆಸ್ ಮೂರು ದಶಕಗಳಿಗೂ ಹೆಚ್ಚು ಹಳತಾದ `ಗರೀಬಿ ಹಟಾವೋ’ದ ಪರಿಕಲ್ಪನೆಯನ್ನೇ ಸ್ವಲ್ಪ ಸುಧಾರಿಸಿ `ಆಮ್ ಆದ್ಮಿ’ಯ ಬಗ್ಗೆ ಮಾತನಾಡಿತು. ಎರಡೂ ಘೋಷಣೆಗಳು ಭಾರತದ ಮನೋ ಭೂಮಿಕೆಯನ್ನು ಹಿಡಿದಿಡಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಿತು. ಬಿಜೆಪಿ ನೇತೃತ್ವದ ಎನ್‌ಡಿಎ ಸೋತಿತು. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೇರಲಾಗದೆ ಮತ್ತೊಂದು ಮೈತ್ರಿಕೂಟ ರೂಪಿಸಿ ಸರಕಾರ ರಚಿಸಿತು.