ಮೆಟ್ಟಿಲುಗಳಿಲ್ಲದ ಬಹು ಅಂತಸ್ತಿನ ಕಟ್ಟಡ

ಈಗ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಸಾಮಾನ್ಯ ರೈತನ ಮಗ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿ ಆ ಮೂಲಕ ಬಿಜೆಪಿಯಲ್ಲಿ ದುಡಿದು ಪಕ್ಷವನ್ನು ಬೆಳಸುತ್ತಲೇ ತಾವೂ ಬೆಳೆದವರು. ಇದನ್ನು ಹೇಳಿಕೊಳ್ಳುವುದಕ್ಕೆ ಯಡಿಯೂರಪ್ಪನವರು ಹೆಮ್ಮೆ ಪಡುತ್ತಾರೆ. ತಮ್ಮ ರೈತ ಹೋರಾಟದ ಕಥನವನ್ನು ಜನರ ಮುಂದಿಟ್ಟೇ ಅವರು ಓಟು ಕೇಳುತ್ತಾರೆ.

ಪ್ರಧಾನಿಯಾಗಿದ್ದ ದೇವೇಗೌಡರೂ ಅಷ್ಟೇ. ಪಕ್ಷವನ್ನು ಸಂಘಟಿಸಿ, ಕಟ್ಟಿ, ಬೆಳೆಸಿ, ಒಡೆದು, ತಾವೂ ಬೆಳೆದವರು. ಈ ಪಟ್ಟಿಯನ್ನು ಬಹಳ ಉದ್ದಕ್ಕೆ ಬೆಳೆಸಬಹುದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ, ಎಸ್.ಬಂಗಾರಪ್ಪ ಮುಂತಾದ ಅನೇಕರು ರಾಜಕೀಯ ಬದುಕಿನ ಆರಂಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದವರು. ಪಕ್ಷವನ್ನು ಕಟ್ಟುತ್ತಲೇ ತಾವು ಬೆಳೆದವರು. ಆದರೆ ಇಂದು ಕರ್ನಾಟಕದಲ್ಲಿರುವ ಯಾವುದೇ ರಾಜಕೀಯ ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ ಪದವಿಯ ಕನಸು ಕಾಣಬಹುದೇ? ಅದು ಬಿಡಿ ಕನಿಷ್ಠ ಶಾಸಕನ ಸ್ಥಾನದ ಕನಸನ್ನಾದರೂ ಕಾಣಲು ಸಾಧ್ಯವಿದೆಯೇ?

ಈ ಪ್ರಶ್ನೆಗೆ ಉತ್ತರ ಹುಡುಕಿದರೆ ನಿರಾಶೆಯಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ಪಡೆದುಕೊಳ್ಳುತ್ತಿರುವ ಸ್ವರೂಪವನ್ನು ನೋಡಿ ಭಯವಾಗುತ್ತದೆ. ಪ್ರಜಾಪ್ರಭುತ್ವದ ಬಹುದೊಡ್ಡ ಶಕ್ತಿಯೆಂದರೆ ರಾಜಕೀಯ ಪ್ರವೇಶಕ್ಕೆ ಇರುವ ಮುಕ್ತ ಅವಕಾಶ. ಈಗ ರಾಜಕೀಯ ಪಕ್ಷಗಳು ಮುಂದಿಡುತ್ತಿರುವ `ಗೆಲ್ಲುವ ಅರ್ಹತೆ’ಯೆಂಬ ಷರತ್ತು ಈ ಮುಕ್ತ ಪ್ರವೇಶದ ಅವಕಾಶವನ್ನೇ ಕಿತ್ತುಕೊಳ್ಳುತ್ತಿದೆ. ಯಾವ ಪಕ್ಷದ ಸಾಮಾನ್ಯ ಕಾರ್ಯಕರ್ತನೂ ತನ್ನ ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯ, ಜನಪ್ರಿಯತೆಯನ್ನು ಬಂಡವಾಳವಾಗಿಟ್ಟುಕೊಂಡು ಅಭ್ಯಥರ್ಿಯಾಗುವ ಕನಸು ಕಾಣಲು ಸಾಧ್ಯವಿಲ್ಲ. ಇಂಥದ್ದೊಂದು ಕನಸು ಕಾಣಬೇಕೆಂದರೆ ಆತ ಪ್ರಭಾವಶಾಲಿ ರಾಜಕೀಯ ಕುಟುಂಬದ ಸದಸ್ಯನಾಗಿರಬೇಕು ಇಲ್ಲವೇ ಸಿನಿಮಾದಂಥ ಕ್ಷೇತ್ರದ ಜನಪ್ರಿಯ ತಾರೆಯಾಗಿರಬೇಕು. ಇವೆರಡೂ ಅರ್ಹತೆಗಳಿಲ್ಲವಾದರೆ ಕಾನೂನು ಬದ್ಧವಾಗಿಯೋ ಕಾನೂನನ್ನು ಉಲ್ಲಂಘಿಸಿಯೋ ಟಿಕೆಟ್ ಖರೀದಿಸುವಷ್ಟು ಹಣ ಸಂಪಾದಿಸಿರಬೇಕು.

***

ಮೇಲೆ ಹೇಳಿದ ಮೂರು ಅರ್ಹತೆಗಳಿದ್ದವರಿಗೆ ಟಿಕೆಟ್ ಮೀಸಲು ಎಂದು ಯಾವ ಪಕ್ಷವೂ ಅಧಿಕೃತವಾಗಿ ಘೋಷಿಸುವುದಿಲ್ಲ. ಅದನ್ನು ಹೇಳುವುದಕ್ಕೆ ರಾಜಕೀಯ ಪಕ್ಷಗಳು ತರ್ಕಬದ್ಧವಾದ `ಗೆಲ್ಲುವ ಅರ್ಹತೆ’ ಎಂಬ ಪದಪುಂಜವನ್ನು ಬಳಸುತ್ತವೆ. ಏನೀ ಗೆಲ್ಲುವ ಅರ್ಹತೆ?

ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಗೆಲ್ಲುವ ಅರ್ಹತೆ ಏನು ಎಂಬುದು ಅರ್ಥವಾಗುತ್ತದೆ. ಈಗಾಗಲೇ ಸಾಕಷ್ಟು ಚರ್ಚೆಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಗ ರಾಘವೇಂದ್ರ ಅವರ ಉಮೇದುವಾರಿಕೆಯನ್ನು ಉದಾಹರಣೆಯಾಗಿಟ್ಟುಕೊಳ್ಳೋಣ. ರಾಜಕೀಯ ಅನುಭವದ ದೃಷ್ಟಿಯಿಂದ ನೋಡಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭಾನುಪ್ರಕಾಶ್ ಅವರಿಗೆ ಒಳ್ಳೆಯ ಸಂಘಟನಾತ್ಮಕ ಅನುಭವವಿದೆ. ಅವರು ಬಿಜೆಪಿಯ ರಾಜ್ಯ ಪದಾಧಿಕಾರಿಯೂ ಹೌದು. ಹಾಗೆಯೇ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಅಯನೂರು ಮಂಜುನಾಥ್ ಕೂಡಾ ಬಿಎಂಎಸ್ನ ಮೂಲಕ ಕಾರ್ಮಿಕರನ್ನು ಸಂಘಟಿಸಿ ಬೆಳೆದವರು. ಪಕ್ಷವನ್ನು ಕಟ್ಟಲು ಬಹುಕಾಲ ಶ್ರಮಿಸಿದವರು. ಬಂಗಾರಪ್ಪನವರನ್ನು ಬಿಜೆಪಿ ಅಭ್ಯರ್ಥಿಯಾಗಿ ಹೇರಿದಾಗ ಸಿಟ್ಟಿನಿಂದ ಪಕ್ಷಬಿಟ್ಟಿದ್ದನ್ನು ಹೊರತು ಪಡಿಸಿದರೆ ಅವರು ಯಾವಾಗಲೂ ಪಕ್ಷ ನಿಷ್ಠರೇ.

ಇವರಿಬ್ಬರನ್ನೂ ಮೀರಿಸುವ ಯಾವ ಅರ್ಹತೆ ರಾಘವೇಂದ್ರ ಅವರಿಗೆ ಇದೆ? ಇದಕ್ಕಿರುವ ಉತ್ತರಗಳು ಎರಡು. ಒಂದು, ರಾಘವೇಂದ್ರ ಯಡಿಯೂರಪ್ಪನವರ ಪುತ್ರ. ಮತ್ತೊಂದು, ವರ್ತಮಾನದ ಚುನಾವಣೆಗಳ ಅಗತ್ಯವಾಗಿರುವ ಬಂಡವಾಳ ಹೂಡಿಕೆಯ ಶಕ್ತಿ.

ಇಂಥದ್ದೇ ಮತ್ತೊಂದು ಉದಾಹರಣೆ ಹಾವೇರಿ ಲೋಕಸಭಾ ಕ್ಷೇತ್ರದ್ದು. ಇಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವುದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿಯವರ ಮಗ ಶಿವಕುಮಾರ್ ಉದಾಸಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ.ಉದಾಸಿಯವರಿಗೆ ಚುನಾವಣಾ ಏಜೆಂಟ್ ಆಗಿದ್ದುದನ್ನು ಹೊರತು ಪಡಿಸಿದರೆ ಶಿವಕುಮಾರ್ ಗೆ ಅಂಥ ರಾಜಕೀಯ ಅನುಭವವೇನೂ ಇಲ್ಲ. ಇಲ್ಲಿಯೂ ಎಂ.ಸಿ.ಪಾಟೀಲ್, ನೆಹರು ಓಲೆಕಾರ್, ರಾಜಶೇಖರ ಸಿಂಧೂರ್ ಅವರಂಥ ಅನುಭವಿಗಳಿದ್ದರೂ ಅವರಿಗೆ ಟಿಕೆಟ್ ಸಿಗಲಿಲ್ಲ.

ಮೇಲಿನ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು `ಯುವಕರಿಗೆ ಅವಕಾಶ ಕಲ್ಪಿಸಿದ್ದೇವೆ’ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಈ ಸ್ಪಷ್ಟನೆಯನ್ನು ನಿಜವೆಂದು ಪರಿಗಣಿಸಿದರೂ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದ ಇನ್ನೂ ಅನೇಕ ಯುವಕರಿಗೇಕೆ ಟಿಕೆಟ್ ದೊರೆಯಲಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದು ಬರೇ ಬಿಜೆಪಿಯ ಸಮಸ್ಯೆಯೇನೂ ಅಲ್ಲ. ದೇವೇಗೌಡರ ಕುಟುಂಬದ ಮೂವರು ಈಗ ಕರ್ನಾಟಕದ ವಿಧಾನಸಭೆಯಲ್ಲಿದ್ದಾರೆ. ನೆಹರು ಕುಟುಂಬದ ಇಬ್ಬರು ಲೋಕಸಭೆಯಲ್ಲೂ ಇದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕೆನರಾ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್ ಬೇಕು ಎನ್ನುತ್ತಿದ್ದಾರೆ. ಇಲ್ಲಿಂದ ಟಿಕೆಟ್ ಬಯಸಿರುವ ಮಾರ್ಗರೆಟ್ ಆಳ್ವ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದರು. ಅಷ್ಟೇಕೆ ಸ್ವತಃ ಮಾರ್ಗರೆಟ್ ಆಳ್ವ ಕೂಡಾ ರಾಜಕೀಯ ಕುಟುಂಬದಿಂದಲೇ ಬಂದವರು.

***

ರಾಜಕೀಯಕ್ಕೆ ಪ್ರವೇಶ ಪಡೆಯುವ ಮುಕ್ತ ಅವಕಾಶವನ್ನು ಪ್ರತಿಬಂಧಿಸುವ `ಗೆಲ್ಲುವ ಅರ್ಹತೆ’ಯ ಕುರಿತು ಇನ್ನಷ್ಟು ಚರ್ಚೆಗಳ ಅಗತ್ಯವಿದೆ. ಇದನ್ನು ಕೇವಲ ಕುಟುಂಬ ರಾಜಕಾರಣಕ್ಕೆ ಸೀಮಿತಗೊಳಿಸಿ ನೋಡುವುದರಲ್ಲಿಯೂ ಹೆಚ್ಚಿನ ಅರ್ಥವಿಲ್ಲ. ಕುಟುಂಬ ರಾಜಕಾರಣ ಬಹಳ ಹಿಂದಿನಿಂದಲೇ ಇತ್ತು. ಆದರೆ ಈಗಿನಂತೆ ಪ್ರಭಾವಶಾಲಿ ರಾಜಕೀಯ ಕುಟುಂಬದ ಸದಸ್ಯರು `ರೆಡಿಮೇಡ್’ ಅಭ್ಯರ್ಥಿಗಳಾಗುತ್ತಿರಲಿಲ್ಲ. ಒಂದು ಸಂಘಟನಾತ್ಮಕ ಅನುಭವದಿಂದಲೇ ಅವರೂ ನಾಯಕತ್ವ ಸ್ಥಾನಕ್ಕೇರುತ್ತಿದ್ದರು.

ತಳಮಟ್ಟದ ರಾಜಕೀಯ ಅನುಭವವಿಲ್ಲದ `ರೆಡಿಮೇಡ್ ಅಭ್ಯರ್ಥಿ’ಗಳು ತಾವು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ಎಂತಹ ನಾಯಕತ್ವ ನೀಡಬಲ್ಲರು? ದೇವೇಗೌಡರು ಮತ್ತು ಯಡಿಯೂರಪ್ಪನವರಿಬ್ಬರೂ ತಮ್ಮ ರೈತ ಹಿನ್ನೆಲೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರ ಮಕ್ಕಳು `ನಾನು ರೈತನ ಮಗನ ಮಗ’ ಹೇಳಿಕೊಳ್ಳುತ್ತಾರೆಯೇ?

***

ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಭಾರತದ ಜಾತಿಪದ್ಧತಿಯನ್ನು ಕಿಟಕಿಗಳೂ ಮೆಟ್ಟಿಲುಗಳೂ ಇಲ್ಲದ ಬಹುಅಂತಸ್ತಿನ ಕಟ್ಟಡವೊಂದಕ್ಕೆ ಹೋಲಿಸಿದ್ದರು. ಪ್ರತೀ ಅಂತಸ್ತಿನಲ್ಲಿವವರೂ ಆಯಾ ಅಂತಸ್ತಿನಲ್ಲಿ ಬಂಧಿಗಳು. ಕಿಟಕಿಗಳಿಲ್ಲದಿರುವುದರಿಂದ ಹೊರನೋಡುವ ಅವಕಾಶವಿಲ್ಲ. ಮೆಟ್ಟಿಲುಗಳೂ ಇಲ್ಲದಿರುವುದರಿಂದ ಕೆಳಗಿರುವವರು ಮೇಲೇರುವ ಪ್ರಶ್ನೆಯೂ ಇಲ್ಲ.

ನಮ್ಮ ಪಟ್ಟಭದ್ರ ರಾಜಕಾರಣಿಗಳು ರಾಜಕೀಯ ಕ್ಷೇತ್ರವನ್ನೂ ಮೆಟ್ಟಿಲುಗಳಿಲ್ಲದ ಬಹುಅಂತಸ್ತಿನ ಕಟ್ಟಡವಾಗಿ ಪರಿವರ್ತಿಸುತ್ತಿದ್ದಾರೆ. ರಾಜಕಾರಣಿಯ ಮಕ್ಕಳು ರಾಜಕಾರಣಿಗಳಾಗುವುದನ್ನು ಸಚಿವರೊಬ್ಬರು `ವೈದ್ಯರ ಮಕ್ಕಳು ವೈದ್ಯರಾದಂತೆ, ಸಂಗೀತಗಾರರ ಮಕ್ಕಳು ಸಂಗೀತಗಾರರಾದಂತೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ’ ಎಂದು ಸಮರ್ಥಿಸಿಕೊಂಡಿದ್ದರು. ಅವರ ಹೇಳಿಕೆಯನ್ನು ಸ್ವಲ್ಪ ಬದಲಾಯಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಕ್ಕಳು ಕಾರ್ಯಕರ್ತರಾಗಿರುತ್ತಾರೆ. ಮಂತ್ರಿಗಳು ಮಕ್ಕಳು ಮಾತ್ರ ಮಂತ್ರಿಗಳಾಗುತ್ತಾರೆ. ಇದರ ಪರಿಣಾಮ ಸಮಾಜದ ಮೇಲೂ ಆಗುತ್ತದೆ. ಕೊಳೆಗೇರಿಯಲ್ಲಿರುವವರು ಕೊಳೆಗೇರಿಯಲ್ಲಿಯೇ ಇರುತ್ತಾರೆ. ಕೂಲಿಕಾರನ ಮಕ್ಕಳು ಕೂಲಿ ಮಾಡುತ್ತಾರೆ. ಉಳ್ಳವರ ಮಕ್ಕಳು ಮಾತ್ರ ಉಳ್ಳವರಾಗಿರುತ್ತಾರೆ.

ತನಿಖೆ ಎಂಬ ಥಳಿಸುವಿಕೆ

ಇದು 1985ರ ಬಿಹಾರ ಕೇಡರ್‌ನ ಐಎಎಸ್‌ ಅಧಿಕಾರಿಯೊಬ್ಬರು ಹೇಳಿದ ಕತೆ.

`ನಾನು ಸೇವೆಗೆ ಸೇರಿದ ಹೊಸತರಲ್ಲಿ ನನ್ನ ಮನೆಯಿಂದ ಕೆಲ ವಸ್ತುಗಳು ಕಳವಾದವು. ಪೊಲೀಸರಿಗೆ ದೂರು ನೀಡಿದೆ. ತನಿಖೆ ಆರಂಭವಾಯಿತು. ನಾನು ಸಮಯಸಿಕ್ಕಾಗಲೆಲ್ಲಾ ಠಾಣೆಗೆ ಹೋಗಿ ನನ್ನ ದೂರಿನ ಕುರಿತು ವಿಚಾರಿಸುತ್ತಿದ್ದೆ. ಪ್ರತೀ ಬಾರಿ ಹೋದಾಗಲೂ ಪೊಲೀಸರು `ಇನ್ವೆಸ್ಟಿಗೇಷನ್‌ ಮಾಡುತ್ತಿದ್ದೇವೆ ಸಾರ್‌’ ಎಂದು ಯಾರಾದರೊಬ್ಬನಿಗೆ ಥಳಿಸುತ್ತಿರುತ್ತಿದ್ದರು. `ನಾನು ಠಾಣೆಗೆ ಹೋದ ದಿನ ನನ್ನನ್ನು ಮೆಚ್ಚಿಸುವುಕ್ಕೋ ಎಂಬಂತೆ ಅವರ ಥಳಿತದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಪ್ರತೀ ಬಾರಿ ಠಾಣೆಗೆ ಹೋದಾಗಲೂ ಹೊಸ ಹೊಸ `ಆರೋಪಿ’ಗಳಿಗೆ ಪೊಲೀಸರು ಥಳಿಸುತ್ತಿದ್ದರೇ ಹೊರತು ಕಳವಾದ ವಸ್ತುಗಳ ಕುರಿತು ಯಾವ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ಈ ಥಳಿಸುವಿಕೆಯನ್ನು ನೋಡಲಾಗದೆ ನಾನು ಕಳವಾದ ವಸ್ತುಗಳ ಆಸೆಯನ್ನೇ ಬಿಟ್ಟೆ’

ಇದು ಭಾರತೀಯ ಪೊಲೀಸ್‌ ವ್ಯವಸ್ಥೆಯ ಒಂದು ಸಣ್ಣ ಸ್ಯಾಂಪಲ್‌. ನಮ್ಮ ಪೊಲೀಸರ ಮಟ್ಟಿಗೆ ತನಿಖೆ ನಡೆಸುವುದೆಂದರೆ ಥಳಿಸುವುದು ಎಂದರ್ಥ.

***

ಕಳೆದ ತಿಂಗಳ (ಫೆಬ್ರವರಿ 2009) 27ರಂದು ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರ ಸುಮಾರು 34,000 ರೂಪಾಯಿ ಬೆಲೆಬಾಳುವ ಮೊಬೈಲ್‌ ಫೋನ್‌ ಒಂದು ಕಳವಾಯಿತು. ಈಗ ಮೊಬೈಲ್‌ ಫೋನ್‌ ಕಳವಾದರೆ ಅದನ್ನು ಪತ್ತೆ ಹಚ್ಚುವುದು ಸುಲಭ. ಕಳೆದು ಹೋದ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆ ಅಥವಾ ಇಂಟರ್‌ ನ್ಯಾಷನಲ್‌ ಮೊಬೈಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ ನಂಬರ್‌ ಅನ್ನು ಪೊಲೀಸರಿಗೆ ಕೊಟ್ಟರೆ ಸಾಕು. ಕಳೆದು ಹೋದ ಮೊಬೈಲ್‌ ಎಲ್ಲಿ ಬಳಕೆಯಾಗುತ್ತಿದ್ದರೂ ಅದನ್ನು ಪತ್ತೆ ಹಚ್ಚಬಹುದು. ಫೋನ್‌ ಕಳೆದುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನೂ ತಿಳಿಸಿದ್ದರು.

ಮಾರ್ಚ್‌ ನಾಲ್ಕನೇ ತಾರೀಕಿನಂದು ಎನ್‌.ಆರ್‌.ಕಾಲೋನಿಯ ನಿವಾಸಿ ಮುತ್ತುರಾಜ್‌ ಎಂಬ ಕಾರು ಚಾಲಕ ತ್ಯಾಗರಾಜ ನಗರದ ಬಿಡಿಎ ವಾಣಿಜ್ಯ ಸಂಕೀರ್ಣದಲ್ಲಿದ್ದ ಮೊಬೈಲ್‌ ಅಂಗಡಿಯೊಂದರಿಂದ 1,500 ರೂಪಾಯಿ ಮೌಲ್ಯದ ಮೊಬೈಲ್‌ ಸೆಟ್‌ ಒಂದನ್ನು ಖರೀದಿಸಿದರು. ಇದನ್ನವರು ಬಳಸಲು ತೊಡಗಿದ ಕ್ಷಣದಿಂದ ಅವರ ಸಮಸ್ಯೆಗಳು ಆರಂಭವಾದವು. ಮಾರ್ಚ್‌ 14ರ ಶನಿವಾರ ತ್ಯಾಗರಾಜ ನಗರ ಪೊಲೀಸರು ಮುತ್ತುರಾಜ್‌ರನ್ನು ಠಾಣೆಗೆ ಕರೆಯಿಸಿಕೊಂಡು `ತನಿಖೆ’ ನಡೆಸಿದರು.

ಪೊಲೀಸರದ್ದು ಒಂದೇ ಪ್ರಶ್ನೆ. `ಬೆಲೆಬಾಳುವ ಮೊಬೈಲ್‌ ಸೆಟ್‌ ಎಲ್ಲಿ?’. ಪ್ರಶ್ನೆ ಅರ್ಥವಾಗದೆ ತೊಳಲಾಡಿದ ಮುತ್ತುರಾಜ್‌ ತಮ್ಮಲ್ಲಿರುವ ಸೆಟ್‌ ತೋರಿಸಿದರೆ ಮತ್ತಷ್ಟು ಪೆಟ್ಟುಗಳು ಬಿದ್ದವು. ಮುತ್ತುರಾಜ್‌ ಅವರ ತಾಯಿ ಹೇಳುವಂತೆ `ನನ್ನ ಮಗನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಕಾಲಿಗೆ ಹಾಕಿ ಸ್ಟಿಕ್‌ನಲ್ಲಿ ಹೊಡೆದರು’. ಮುತ್ತುರಾಜ್‌ ಖರೀದಿಸಿದ ಮೊಬೈಲ್‌ ಫೋನ್‌ನ ರಸೀದಿ ಮತ್ತು ಬಾಕ್ಸ್‌ಗಳನ್ನು ನೋಡುವ ತನಕವೂ ಪೊಲೀಸರ `ತನಿಖೆ’ ಮುಂದುವರಿಯಿತು. ರಸೀದಿ ಮತ್ತು ಬಾಕ್ಸ್‌ ನೋಡಿದಾಗ ಸಾಫ್ಟ್‌ವೇರ್‌ ಇಂಜಿನಿಯರ್‌ ಕಳೆದುಕೊಂಡ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆ ಮತ್ತು ಮುತ್ತುರಾಜ್‌ ಖರೀದಿಸಿದ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆಗಳೆರಡೂ ಒಂದೇ ಆಗಿತ್ತು! ತಪ್ಪು ಮಾಡಿದ್ದು ಮೊಬೈಲ್‌ ತಯಾರಿಸಿದ ಕಂಪೆನಿಯವರು. ಆದರೇನಂತೆ ಪೊಲೀಸರ `ತನಿಖೆ’ಯಿಂದ ಮುತ್ತುರಾಜ್‌ರ ಕಾಲಿಗೆ ಗಂಭೀರ ಗಾಯವೇ ಆಗಿತ್ತು.

ಇಷ್ಟೆಲ್ಲಾ ಆದ ಮೇಲೆ ಜೆ.ಪಿ.ನಗರ ಠಾಣೆಯಲ್ಲಿ ಮುತ್ತುರಾಜ್‌ ಅವರ `ತನಿಖೆ’ ನಡೆಸಿದ ಇನ್ಸ್‌ಪೆಕ್ಟರ್‌ ಎಸ್‌.ಕೆ.ಉಮೇಶ್‌ `ನಾವೇನೂ ಮಾಡಲಿಲ್ಲ. ಆತ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದರಿಂದ ಥಳಿಸಿದ್ದು ಮಾತ್ರ ಹೌದು’ ಎಂಬ ಸ್ಪಷ್ಟನೆ ನೀಡಿದರು. ಇಡೀ ಪ್ರಕರಣವನ್ನು ಒಟ್ಟಾಗಿ ಗಮನಿಸಿದರೆ ದಾರಿ ತಪ್ಪಿದ್ದು ಯಾರು ಎಂಬುದಕ್ಕೆ ಹೆಚ್ಚಿನ ವಿವರಣೆಗಳ ಅಗತ್ಯವಿಲ್ಲ.

***

ಭಾರತೀಯ ಪೊಲೀಸರು ಒಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಶಂಕಿತ ಅಥವಾ ಆರೋಪಿ ಬಡವನಾಗಿದ್ದರೆ ಎಲ್ಲಾ ನಿಯಮಗಳನ್ನು ಮರೆತು ಅವನಿಗೆ ಬಡಿಯುವುದು. ಅಧಿಕಾರ ಮತ್ತು ಪ್ರಭಾವವುಳ್ಳವನಾಗಿದ್ದರೆ ಎಲ್ಲಾ ನಿಯಮಗಳನ್ನೂ ಮರೆತು ಆತನನ್ನು ರಕ್ಷಿಸುವುದು. ಮುತ್ತುರಾಜ್‌ ಪ್ರಕರಣದಲ್ಲಿ ಆದದ್ದು ಇದುವೇ. ಮುತ್ತುರಾಜ್‌ ಕೇವಲ ಕಾರು ಚಾಲಕ. ಹಾಗಾಗಿ ಅವರಿಗೆ ಪೊಲೀಸರು ಥಳಿಸಿದ್ದು ತಪ್ಪೇ ಆಗಿದ್ದರೂ `ನಮ್ಮದು ತಪ್ಪಾಯಿತು’ ಎಂದು ಹೇಳುವ ಸೌಜನ್ಯ ಪೊಲೀಸರಿಗಿಲ್ಲ.

ಈ ಘಟನೆ ನಡೆಯುವುದಕ್ಕೆ ಕೆಲವು ದಿನಗಳ ಮೊದಲು ಬೆಂಗಳೂರಿನ ಹೊರವಲಯದಲ್ಲಿ ರೇವ್‌ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದರು. ಖಾಸಗಿ ಸ್ಥಳವೊಂದರಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರ ಮೇಲೆ ಪೊಲೀಸರೇಕೆ ದಾಳಿ ನಡೆಸಿದರು ಎಂಬ ಪ್ರಶ್ನೆಯಿಂದ ಆರಂಭಿಸಿ ಅಲ್ಲಿ ಯಾವುದೇ ಮಾದಕ ದ್ರವ್ಯ ದೊರೆಯಲಿಲ್ಲ ಎಂಬ ತನಕದ ಎಲ್ಲಾ ವಿಚಾರಗಳೂ ಮಾಧ್ಯಮಗಳಲ್ಲಿ ಚರ್ಚೆಯಾದವು. ಪೊಲೀಸರ `ಅತ್ಯುತ್ಸಾಹ’ಕ್ಕೆ ಕಾರಣವೇನು ಎಂಬುದರ ಕುರಿತು ಒಂದು ತನಿಖೆಗೂ ಪೊಲೀಸ್‌ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಿಗೆ ಜಾಮೀನು ಪಡೆಯಲು ಆದ ತೊಂದರೆ ಮುಂತಾದುವುಗಳೆಲ್ಲವೂ ಚರ್ಚೆಗೊಳಪಟ್ಟಿತು.

ಆದರೆ ಮುತ್ತುರಾಜ್‌ ಪ್ರಕರಣದಲ್ಲಿ ತಪ್ಪು ಮಾಡಿದ ಪೊಲೀಸರು ತೋರಿಕೆಗೂ ತಮ್ಮ ತಪ್ಪು ಒಪ್ಪಿಕೊಳ್ಳಲಿಲ್ಲ. ಮಾಧ್ಯಮ ವರದಿಗಳನ್ನು ನೋಡಿ ಸ್ವಯಂ ಪ್ರೇರಣೆಯಿಂದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣ ದಾಖಲಿಸುವ ರಾಜ್ಯ ಮಾನವ ಹಕ್ಕುಗಳ ಆಯೋಗ ಈ ಲೇಖನ ಸಿದ್ಧಪಡಿಸುವವ ತನಕವೂ ಮೌನವಾಗಿಯೇ ಇತ್ತು.

***

ತನಿಖೆಗೂ ಥಳಿಸುವಿಕೆಗೂ ವ್ಯತ್ಯಾಸವಿಲ್ಲದಂತೆ ಪೊಲೀಸರು ವರ್ತಿಸುವುದೇಕೆ ಎಂಬ ಪ್ರಶ್ನೆ ಯಾವತ್ತೂ ಚರ್ಚೆಯಾಗಿಯೇ ಇಲ್ಲ. ಯಾರದ್ದಾದರೂ ಮನೆಯಲ್ಲಿ ಕಳವಾಯಿತು ಎಂದಾಕ್ಷಣ ಮೊದಲಿಗೆ ಮನೆಗೆಲಸದವರನ್ನು ಕರದೊಯ್ದು ಥಳಿಸುವುದನ್ನೇ ಪೊಲೀಸರು ತನಿಖೆ ಎಂದುಕೊಂಡಿದ್ದಾರೆ. ಮುತ್ತುರಾಜ್‌ಗೆ ಥಳಿಸಿದ್ದನ್ನು `ಆತ ಪೊಲೀಸರನ್ನು ತಪ್ಪುದಾರಿಗೆಳೆದದ್ದರಿಂದ ಥಳಿಸಬೇಕಾಯಿತು’ ಎಂದು ಸಮರ್ಥಿಸಿಕೊಳ್ಳುವ ಪೊಲೀಸರು ಶಾಸಕ ಸಂಪಂಗಿ ಲಂಚ ಪಡೆದು ತಲೆನೋವು, ಎದೆನೋವು ಎಂದು ನಟಿಸಿದಾಗ ಆಸ್ಪತ್ರೆಗೆ ದಾಖಲಿಸುವ ಬದಲಿಗೆ ಅವರಿಗೂ ಥಳಿಸಿ ನೀಡಿ ಸತ್ಯ ತಿಳಿದುಕೊಳ್ಳಲೇಕೆ ಪ್ರಯತ್ನಿಸಲಿಲ್ಲ? ಪೊಲೀಸರಿಗೆ ತರಬೇತಿ ನೀಡುವಾಗಲೇ ತನಿಖೆ ಎಂದರೆ ಥಳಿಸುವುದು ಎಂದು ಹೇಳಿಕೊಡಲಾಗುತ್ತದೆಯೇ? ಅಷ್ಟೇಕೆ ಪೊಲೀಸರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಈ ತರಬೇತಿಯ ಪಠ್ಯ ಕ್ರಮವೇನು? ಈ ಕುರಿತಂತೆ ಜನ ಸಾಮಾನ್ಯರಿಗೆ ತಿಳಿಸುವ ಏನಾದರೂ ವ್ಯವಸ್ಥೆ ಇದೆಯೇ?

ಹೀಗೆ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ. ಈ ಪ್ರಶ್ನೆಗಳಿಗೆ ಎಲ್ಲಿಂದಲೂ ಉತ್ತರ ಸಿಗುವುದಿಲ್ಲ. ಏಕೆಂದರೆ ಪೊಲೀಸರು ಅಧಿಕಾರ ಮತ್ತು ಪ್ರಭಾವವುಳ್ಳವರ ನಾಯಿಗೂ ಗೌರವ ನೀಡುತ್ತಾರೆ. ಹಾಗಾಗಿ ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುವ ಧೈರ್ಯ ಮತ್ತು ಸಾಮರ್ಥ್ಯವುಳ್ಳವರು ಯಾವತ್ತೂ ಪೊಲೀಸರ ಉದ್ಧಟತನವನ್ನು ಎದುರಿಸಿರುವುದೇ ಇಲ್ಲ. ಅದರಿಂದಾಗಿಯೇ ಅಧಿಕಾರರೂಢ ರಾಜಕಾರಣಿಗಳು ಪೊಲೀಸರನ್ನು ಮನುಷ್ಯರನ್ನಾಗಿಸುವ ಬಗ್ಗೆ ಮಾತನಾಡುವುದೂ ಇಲ್ಲ. ಸ್ಥಿತಿ ಹೀಗಿರುವಾಗ ಪೊಲೀಸ್‌ ವ್ಯವಸ್ಥೆಯನ್ನು ಮಾನವೀಯಗೊಳಿಸುವುದು ಹೇಗೆ?

ಈ ಪ್ರಶ್ನೆಗೆ ಇರುವ ಉತ್ತರ ಒಂದೇ. ಪೊಲೀಸ್‌ ವ್ಯವಸ್ಥೆಯೊಳಗೇ ಇರುವ ಯಾರಾದರೂ ಇಂಥದ್ದೊಂದು ಕ್ರಿಯೆಯನ್ನು ಆರಂಭಿಸಬೇಕು. ಕರ್ನಾಟಕದಲ್ಲೀಗ ಇದಕ್ಕೆ ಕಾಲ ಪಕ್ವವಾಗಿದೆ. ಪೊಲೀಸ್‌ ಸುಧಾರಣೆಯ ಅಗತ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಮತ್ತು ಅದರಲ್ಲಿ ಆಸಕ್ತಿ ಇರುವ ಡಾ.ಅಜ್‌ಕುಮಾರ್‌ ಸಿಂಗ್‌ ಪೊಲೀಸ್‌ ಮಹಾನಿರ್ದೇಶಕರಾಗಿದ್ದಾರೆ. ಸಿಓಡಿಯ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್‌ ಕೂಡಾ ಈ ವಿಷಯಗಳಲ್ಲಿ ಆಸಕ್ತಿ ಮತ್ತು ಕಾಳಜಿಗಳುಳ್ಳವರು. ಈ ಸುಶಿಕ್ಷಿತ ಮತ್ತು ಸಂಭಾವಿತರ ಕಾಲದಲ್ಲಿ ಸುಧಾರಣೆಯ ಪ್ರಕ್ರಿಯೆ ಆರಂಭವಾಗದಿದ್ದರೆ ಅದು ಸದ್ಯೋಭವಿಷ್ಯದಲ್ಲಿ ಅದನ್ನು ನಿರೀಕ್ಷಿಸುವುದೇ ತಪ್ಪಾಗಬಹುದು

ಹರ ಕೊಲ್ಲಲ್‌ ಪರ ಕಾಯ್ವನೆ?

ಕಳೆದ ಎರಡು ವರ್ಷಗಳಲ್ಲಿ ಬಿಹಾರದಿಂದ ಆರಂಭಿಸಿ ಕರ್ನಾಟಕದ ಹಾಸನದ ತನಕ ದಿಡೀರ್‌ ನ್ಯಾಯದಾನದ ಹಲವು ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ಓದಿ ತಿಳಿದಿದ್ದೇವೆ. ಎರಡು ವರ್ಷಗಳ ಹಿಂದೆ ಬಿಹಾರದ ವೈಶಾಲಿ ಜಿಲ್ಲೆಯ ಧೆಲ್‌ಫೋರ್ವಾ ಗ್ರಾಮದಲ್ಲಿ ಕಳವು ಆರೋಪಿಯೊಬ್ಬನನ್ನು ಬೀದಿಯಲ್ಲೇ ಭೀಕರವಾಗಿ ಥಳಿಸಿದ್ದು ಟಿ.ವಿ.ಚಾನೆಲ್‌ಗಳಲ್ಲಿ ಹಲವಾರು ಬಾರಿ ಪ್ರಸಾರವಾಗಿತ್ತು.

ಇದಾದ ಒಂದೇ ತಿಂಗಳಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್‌ನಲ್ಲಿ ಚಿನ್ನದ ಕಡಗವೊಂದನ್ನು ಕದ್ದಿದ್ದಾರೆಂಬ ಸಂಶಯದ ಮೇಲೆ 40 ವರ್ಷದ ಗರ್ಭಿಣಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಅಮಾನವೀಯವಾಗಿ ಥಳಿಸಲಾಗಿತ್ತು. ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯನ್ನು ಟಿ.ವಿ.ಚಾನೆಲ್‌ ವರದಿಗಾರನೊಬ್ಬ ಚಿತ್ರೀಕರಿಸಿದ್ದರಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ಮೂಕ ಸಾಕ್ಷಿಗಳಾಗಿದ್ದರು. ಬಿಹಾರದ ಘಟನೆಯ ಸಂದರ್ಭದಲ್ಲಂತೂ ಸಾರ್ವಜನಿಕರ ಥಳಿಸುವಿಕೆಯ ನಂತರ ಪೊಲೀಸರು ಆರೋಪಿಯನ್ನು ರಸ್ತೆಯಲ್ಲಿ ಎಳೆದಾಡಿದ್ದರು. ಕೇರಳದ ಘಟನೆಯಲ್ಲಿ ನಿರಪರಾಧಿ ಮಹಿಳೆ ಮತ್ತು ಆಕೆಯ ಇಬ್ಬರ ಮಕ್ಕಳಿಗೆ ವೈದ್ಯಕೀಯ ನೆರವು ನೀಡುವುದರ ಬದಲಿಗೆ ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು.
ಈ ಬಗೆಯ ದಿಡೀರ್‌ ನ್ಯಾಯದಾನದ ಪ್ರಕರಣಗಳು ಬಿಹಾರದಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ದೇಶದ ಉಳಿದೆಡೆ ಇಲ್ಲ ಎಂದಲ್ಲ. ಬಸ್‌ನಿಲ್ದಾಣದಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಒಬ್ಬನ ಮೇಲೆ ಕಳ್ಳನೆಂಬ ಸಂಶಯ ಬಂದರೆ ಆತ ಜನರಿಗೆ ಕಳ್ಳರ ಮೇಲಿರುವ ಸಿಟ್ಟಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಹೀಗೆ ಥಳಿತಕ್ಕೆ ಗುರಿಯಾದವರಲ್ಲಿ ಕೆಲವರು ಸ್ಥಳದಲ್ಲಿ ಮೃತಪಟ್ಟರೆ ಇನ್ನು ಕೆಲವರು ಹಲವಾರು ದಿನ ಆಸ್ಪತ್ರೆಯಲ್ಲಿದ್ದು ಕೊನೆಯುಸಿರೆಳೆದದ್ದೂ ಇದೆ.

ಈ ಬಗೆಯ ದಿಡೀರ್‌ ನ್ಯಾಯಕ್ಕೆ ಜನರೇಕೆ ಮುಂದಾಗುತ್ತಾರೆ ಎಂಬ ಪ್ರಶ್ನೆಗೆ ಇರುವ ಸುಲಭದ ಮತ್ತು ಸರಳವಾದ ಉತ್ತರ ಒಂದೇ. `ತಡವಾಗಿ ದೊರೆಯುವ ನ್ಯಾಯ ಅನ್ಯಾಯ’. ಪ್ರಕರಣವೊಂದು ನ್ಯಾಯಾಲಯದಲ್ಲಿದೆ ಎಂದರೆ ಇನ್ನು ಹಲವು ವರ್ಷಗಳ ಕಾಲ ಅದರ ಬಗ್ಗೆ ಚಿಂತಿಸದೇ ಇರುವುದೆಂಬ ಮನೋಭಾವ ಎಲ್ಲರಲ್ಲೂ ಮನೆ ಮಾಡಿದೆ. ಪರಿಣಾಮವಾಗಿ ಅಪರಾಧಿಕ ಪ್ರಕರಣಗಳಲ್ಲಿ ದಿಡೀರ್‌ ನ್ಯಾಯ ಒದಗಿಸುವ ಕೆಲಸಗಳಿಗೆ ಒಂದು ಬಗೆಯ ಹಿಂಬಾಗಿಲ ಪ್ರೋತ್ಸಾಹವೂ ಇದೆ. ಹೈದರಾಬಾದ್‌ನಲ್ಲಿ ಯುವತಿಯರ ಮೇಲೆ ಆಸಿಡ್‌ ಎರಚಿದವರು `ಎನ್‌ಕೌಂಟರ್‌’ನಲ್ಲಿ ಬಲಿಯಾದಾಗ ಜನರು ಪೊಲೀಸರಿಗೆ ಹೂಗುಚ್ಛಗಳನ್ನು ನೀಡಿ ಶ್ಲಾಘಿಸಿದ್ದನ್ನಿಲ್ಲಿ ನೆನಪಿಸಿಕೊಳ್ಳಬಹುದು.

***

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಹಲವಾರು ಕ್ರಿಮಿನಲ್‌ ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿತು. ಇದರಲ್ಲಿ ಪ್ರಚೋದನಕಾರಿ ಭಾಷಣ, ಸರ್ಕಾರಿ ಕಚೇರಿಗಳ ಮೇಲಿನ ದಾಳಿ, ಹಲ್ಲೆ, ಕೊಲೆಯತ್ನದಂಥ ಪ್ರಕರಣಗಳೂ ಇದ್ದವು. ಈ ಪ್ರಕರಣಗಳಲ್ಲಿ ಪಾಲ್ಗೊಂಡವರಲ್ಲಿ ಶಾಸಕರಿದ್ದರು. ಕೆಲವು ಸಂಘಟನೆಗಳ ನಾಯಕರಿದ್ದರು. ಈ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಕ್ರಿಯೆಯಲ್ಲಿ ರಾಜಕೀಯವಿದೆ ಎಂದು ಭಾವಿಸಬಹುದು. ಆದರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಮೊಕದ್ದಮೆ ಹೂಡುವುದನ್ನೇ ತಡೆಯುವ, ಹೂಡಿದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಕ್ರಮಗಳನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಇಬ್ಬರು ಭ್ರಷ್ಟ ಐಎಎಸ್‌ ಅಧಿಕಾರಿಗಳನ್ನು ರಕ್ಷಿಸಲಾಯಿತು. ಇವರಲ್ಲೊಬ್ಬರು ಆದಾಯಕ್ಕೆ ಮೀರಿದ ಆಸ್ತಿ ಪಾಸ್ತಿ ಸಂಗ್ರಹಿಸಿದ್ದ ಕಾರಣಕ್ಕೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ. ಮತ್ತೊಬ್ಬರು ಮಹಿಳಾ ಐಎಎಸ್‌ ಅಧಿಕಾರಿ. ಈಕೆ ಜಿಲ್ಲಾ ಪಂಚಾಯಿತಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾಗ ಸರ್ಕಾರದ ಹಣವನ್ನು ಸ್ವಂತ ಖಾತೆಗೆ ಹಾಕಿ ದುರುಪಯೋಗ ಪಡಿಸಿಕೊಂಡಿದ್ದ ಆರೋಪ ಹೊತ್ತವರು. ಈಕೆಯ ವಿರುದ್ಧ ಇಲಾಖೆ ತನಿಖೆ ಮುಗಿದಿತ್ತು. ಸಿಬಿಐ ತನಿಖೆ ನಡೆಯುತ್ತಿತ್ತು. ರಾಜ್ಯದ ಮುಖ್ಯ ಕಾರ್ಯದರ್ಶಿಯೊಬ್ಬರು ಈಕೆಯ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಸ್ಪಷ್ಟವಾಗಿ ಶಿಫಾರಸು ಮಾಡಿದ್ದರು. ಇಷ್ಟಾಗಿಯೂ ಮೊಕದ್ದಮೆಯನ್ನು ಮುಕ್ತಾಯಗೊಳಿಸಲು ಮುಖ್ಯಮಂತ್ರಿ ಕಾರ್ಯಾಲಯವೇ ನಿರ್ಧರಿಸತೆಂದು ಮಾಧ್ಯಮ ವರದಿಗಳು ಹೇಳುತ್ತವೆ. ಇವಷ್ಟೇ ಅಲ್ಲದೆ ನಕಲು ಮಾಡುವುದಕ್ಕೇ ಖ್ಯಾತರಾದ ಪ್ರೊಫೆಸರ್‌ ಒಬ್ಬರು ಆರೋಪ ಮುಕ್ತರಾದ ಕಥೆ ಬೇರೆಯೇ ಇದೆ.

ಇತ್ತೀಚೆಗೆ ಭಾರೀ ಸುದ್ದಿ ಮಾಡಿದ ಶಾಸಕ ವೈ.ಸಂಪಂಗಿ ಲಂಚ ಪ್ರಕರಣದ ವಿಷಯದಲ್ಲೂ ಇದೇ ಸಂಭವಿಸುತ್ತಿದೆ. ಶಾಸಕರ ಭವನಕ್ಕೆ ಇದ್ದಕ್ಕಿದ್ದಂತೆಯೇ ಸದನದ ಸ್ಥಾನವನ್ನು ನೀಡಲಾಯಿತು. ಅಂದರೆ ಶಾಸಕರ ಭವನದಲ್ಲಿ ಯಾರನ್ನಾದರೂ ಬಂಧಿಸಬೇಕಿದ್ದರೆ ಅದಕ್ಕೆ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯಬೇಕಾಗುತ್ತದೆ. ಸಂಪಂಗಿ ಪ್ರಕರಣದ ಹಿನ್ನೆಲೆಯಲ್ಲೇ ಇದನ್ನು ನೋಡುವುದಾದರೆ ಇನ್ನು ಮುಂದೆ ಶಾಸಕರ ಭವನದಲ್ಲಿ ಶಾಸಕರು ತಕ್ಷಣ ಬಂಧನಕ್ಕೊಳಗಾಗುವ ಭೀತಿಯಿಲ್ಲದೆ ಲಂಚ ಪಡೆಯುವುದೂ ಸೇರಿದಂತೆ ಏನು ಬೇಕಾದರೂ ಮಾಡಬಹುದು.

***

ಇದನ್ನೆಲ್ಲಾ ಗಮನಿಸಿಯೇ ಪ್ರಕಾಶ್‌ಸಿಂಗ್ಖ್‌/ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಬಹಳ ಮುಖ್ಯವಾದ ತೀರ್ಪನ್ನು ನೀಡಿತ್ತು. ಪೊಲೀಸರು ಆಯಾ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವುದರ ಬದಲಿಗೆ ಕಾನೂನಿನ ಪ್ರತಿನಿಧಿಯಾಗಿರುವಂತೆ ವ್ಯವಸ್ಥೆಯನ್ನು ಬದಲಾಯಿಸಬೇಕು. ಇದಕ್ಕಾಗಿ ಪೊಲೀಸರ ವರ್ಗಾವಣೆ ಮತ್ತಿತರ ಕ್ರಿಯೆಗಳಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳಲು ಒಂದು ಸಕ್ಷಮ ಪ್ರಾಧಿಕಾರವನ್ನು ಸ್ಥಾಪಿಸಬೇಕು ಮುಂತಾದ ಪೊಲೀಸ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ನ್ಯಾಯಾಲಯ ಹೇಳಿತ್ತು.

ಪೊಲೀಸ್‌ ವ್ಯವಸ್ಥೆಯೆಂಬುದು ಸರ್ಕಾರದ ಪ್ರತಿನಿಧಿಯಾಗದೆ ಕಾನೂನಿನ ಪ್ರತಿನಿಧಿಯಾಗುವ ಕ್ರಿಯೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ತಂದುಕೊಡುತ್ತದೆ. 2006ರ ಸೆಪ್ಟೆಂಬರ್‌ 22ರಂದು ತೀರ್ಪು ನೀಡಿದಾಗ ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಸರ್ಕಾರಗಳಿಗೆ 2007ರ ಡಿಸೆಂಬರ್‌ 31ರ ತನಕ ಕಾಲಾವಕಾಶ ನೀಡಲಾಗಿತ್ತು. ಬದಲಾವಣೆಗಳನ್ನು ಮಾಡುತ್ತೇವೆಂದು ಒಪ್ಪಿದ್ದ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನ್ಯಾಯಾಲಯ ಕೊಟ್ಟ ಡೆಡ್‌ಲೈನ್‌ ಮುಗಿದು ಒಂದು ವರ್ಷ ದಾಟಿದೆ. ಪೊಲೀಸ್‌ ಆಯೋಗದ ಶಿಫಾರಸುಗಳ ಜಾರಿಗೆ ಕ್ರಿಯಾ ಯೋಜನೆ ರೂಪಿಸಿದ್ದ ಅಧಿಕಾರಿ ಶ್ರೀಕುಮಾರ್‌ ಈಗ ನಿವೃತ್ತರಾಗಿದ್ದಾರೆ.

***

ಪೊಲೀಸರನ್ನು ಕಾನೂನಿನ ಪ್ರತಿನಿಧಿಗಳನ್ನಾಗಿಸುತ್ತೇವೆಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದ ಸರ್ಕಾರ ಪೊಲೀಸರನ್ನು ತನ್ನ ಕೈಗೊಂಬೆಯಾಗಿಯೇ ಉಳಿಸಿಕೊಂಡಿದೆ. ತನಗೆ ಬೇಡವಾದವರ ಮೇಲೆ ಮೊಕದ್ದಮೆ ಹೂಡುವುದಕ್ಕೂ ತನಗೆ ಬೇಕಿದ್ದವರ ಮೇಲಿರುವ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಕೆಲಸವನ್ನೂ ಅದು ಮಾಡುತ್ತಿದೆ. ಇದು ಹಣ ಮತ್ತು ಅಧಿಕಾರ ಬಲವಿರುವವರಿಗೆ ಯಾವ ಕಾನೂನು ಅನ್ವಯಿಸುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ರವಾನಿಸುತ್ತದೆ. ಇದರ ಪರಿಣಾಮ ಕಳ್ಳರಿಗೆ ಬೀದಿಯಲ್ಲೇ ಬಡಿದು ಪಾಠ ಕಲಿಸುವ ದಿಡೀರ್‌ ನ್ಯಾಯದಾನದ ವ್ಯಾಪ್ತಿಯನ್ನು ಜನರು ವಿಧಾನ ಸೌಧಕ್ಕೂ ಶಾಸಕರ ಭವನಕ್ಕೂ ಸರ್ಕಾರೀ ಕಚೇರಿಗಳಿಗೂ ವಿಸ್ತರಿಸಿಕೊಳ್ಳುವಲ್ಲಿ ಕಾಣಿಸಿಕೊಳ್ಳಬಹುದು. ಆ ಹೊತ್ತಿಗೆ ಸರಿಪಡಿಸುವುದಕ್ಕೇನೂ ಉಳಿದಿರುವುದಿಲ್ಲ!