ದಕ್ಷ ಸೇವೆಯಲ್ಲಿ `ಸೇವೆ’ ಎಷ್ಟಿದೆ?

ನಲ್ಲೂರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಂಚಿನಲ್ಲಿರುವ ಒಂದು ಗ್ರಾಮ. ಹಾಸನ ಮತ್ತು ಸಕಲೇಶಪುರ ನಗರಗಳೆರಡರಿಂದಲೂ ಸಮಾನ ದೂರದಲ್ಲಿರುವ ಅಷ್ಟೇನೂ ಒಳ್ಳೆಯ ರಸ್ತೆಯಿಲ್ಲದ ಮಲೆನಾಡಿನ ಈ ಹಳ್ಳಿಗೆ ಹತ್ತು ವರ್ಷಗಳ ಹಿಂದೆ ಇದ್ದದ್ದು ಒಂದೇ ಬಸ್ಸು. ರಾಷ್ಟ್ರೀಯ ಹೆದ್ದಾರಿಯಿಂದ ಆರೇ ಕಿಲೋಮೀಟರ್‌ಗಳಷ್ಟು ದೂರವಿದ್ದರೂ ಬಸ್ಸು ಮಾತ್ರ ಬೆಳಿಗ್ಗೆ ಮತ್ತು ಸಂಜೆ ಬರುತ್ತಿತ್ತು. ಇತ್ತೀಚೆಗೆ ಬಸ್ಸುಗಳ ಸಂಖ್ಯೆ ನಾಲ್ಕಾಗಿದೆ. ಬೆಳಿಗ್ಗೆ ಸಕಲೇಶಪುರದಿಂದ ಬರುವ ಬಸ್ಸು ಪೂರ್ಣ ಖಾಲಿಯಾಗಿಯೇ ನಲ್ಲೂರಿಗೆ ಬರುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ತಲುಪುವ ಆರು ಕಿಲೋಮೀಟರ್‌ಗಳ ಒಳಗೆ ಬಸ್ಸು ತುಂಬಿಕೊಳ್ಳುತ್ತದೆ. ಇದಕ್ಕೆ ಹತ್ತುವವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳದ್ದೇ ಸಿಂಹ ಪಾಲು. ಉಳಿದವರು ಆಸ್ಪತ್ರೆಗೆ ಹೋಗುವವರು, ಸಂತೆಗೆ ಹೋಗುವವರು ಹೀಗೆ ಆಯಾ ದಿನದ ವಿಶೇಷಗಳಿಗೆ ಪ್ರಯಾಣಿಸುವವರು. ಈ ಸಂಖ್ಯೆ ಕೆಲವೊಮ್ಮೆ ಬಸ್ಸಿನ ಮೇಲೆ ಹತ್ತಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ.

ಆರು ಕಿಲೋಮೀಟರ್‌ಗಳೊಳಗೆ ಬರುವ ಆರು ತಂಗುದಾಣಗಳಲ್ಲಿ ಬಸ್ಸು ತುಂಬಿ-ತುಳುಕುವಷ್ಟು ಜನರಿರುವುದನ್ನು ನೋಡಿ ಕೆಲವರು ಈ ದಾರಿಯಲ್ಲಿ ಮ್ಯಾಕ್ಸಿಕ್ಯಾಬ್‌ಗಳನ್ನೂ ಓಡಾಡಿಸಿ ನೋಡಿದರು. ಇದಕ್ಕೂ ಜನರೇನೋ ಬಂದರು. ಆದರೆ ಕೃಷಿ ಕೆಲಸ ಹೆಚ್ಚಿದ್ದ ದಿನಗಳಲ್ಲಿ, ಭಾನುವಾರಗಳಂದು ಈ ದಾರಿಯಲ್ಲಿ ಜನರೇ ಇಲ್ಲದಿರುವುದನ್ನು ಕಂಡು ಅವರು ಈ ವ್ಯವಹಾರದಿಂದ ಹಿಂದೆ ಸರಿದರು. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕೆಲವರು ರಸ್ತೆಯ ಗುಣಮಟ್ಟವನ್ನೂ ದೂರಿದರು.

ಕೆಲವು ದಿನಗಳಂದು ಜನರೇ ಇಲ್ಲದಿದ್ದರೂ ಕೆಲವು ದಿನಗಳಂದು ಬರೇ ವಿದ್ಯಾರ್ಥಿ ಪಾಸ್‌ಗಳೇ ಬಸ್‌ ತುಂಬಿಕೊಂಡಾಗಲೂ ಬೇಸರ ಮಾಡಿಕೊಳ್ಳದೇ ಇದ್ದದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ. ಒಬ್ಬ ಪ್ರಯಾಣಿಕನೂ ಇಲ್ಲದೇ ಇರುವ ದಿನಗಳಲ್ಲೂ ಈ ಬಸ್ಸುಗಳು ಬಂದು ಹೋಗುವುದು ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ. ಸುತ್ತಲಿನ ಆರು ಕಿಲೋಮೀಟರ್‌ ಸುತ್ತಳತೆಯಲ್ಲಿ ಒಂದೇ ಒಂದು ಆಸ್ಪತ್ರೆಯಾಗಲೀ ವೈದ್ಯರಾಗಲೀ ಇಲ್ಲ. ಈ ದಾರಿಯಲ್ಲಿ ಬರುವ ಬಸ್ಸು ಆರೋಗ್ಯದ ಸಮಸ್ಯೆಗೊಂದು ಉತ್ತರ. ಪ್ರೌಢಶಾಲೆಯಿಲ್ಲ. ಕಾಲೇಜಿಲ್ಲ. ಹಾಗೆಂದು ಶಿಕ್ಷಣ ಪಡೆಯಬೇಕೆಂದುಕೊಂಡವರಿಗೆ ಬಸ್ಸುಗಳಿರುವುದೇ ಧೈರ್ಯ.

ಹೊತ್ತು ಹೊತ್ತಿಗೆ ಬಂದು ಹೋಗುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಬಗ್ಗೆ ಈ ಊರಿನವರಿಗೆ ಬಹಳ ಸಮಾಧಾನವಿದೆ ಎಂದು ಅಂದುಕೊಳ್ಳಬೇಕಾಗಿಲ್ಲ. ಬೆಳಿಗ್ಗೆ ಏಳಕ್ಕೆ ಬರಬೇಕಾದ ಬಸ್ಸು ಎಂಟಾದರೂ ಕಾಣಿಸಿದೇ ಹೋದರೆ ಕಾಲುಗಟ್ಟಿ ಇರುವವರು ಬಸ್ಸಿಗೆ ಶಾಪ ಹಾಕುತ್ತಾ ಆರು ಕಿಲೋಮೀಟರ್‌ ನಡೆದು ಹೆದ್ದಾರಿ ತಲುಪುತ್ತಾರೆ. ಖಾಸಗಿ ಬಸ್‌ ಇದ್ದಿದ್ದರೆ ಒಳ್ಳೆಯದಿತ್ತು ಎಂದು ನೆರೆಯ ಚಿಕ್ಕಮಗಳೂರನ್ನೂ ಯಾವತ್ತೋ ನೋಡಿದ್ದ ಮಂಗಳೂರನ್ನೂ ನೆನಪಿಸಿಕೊಳ್ಳುತ್ತಲೂ ಇರುತ್ತಾರೆ.

***

ರೆಂಜಾಡಿ ಎಂಬ ಊರಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ. ರಾಷ್ಟ್ರೀಯ ಹೆದ್ದಾರಿ-17ರಿಂದ ಸುಮಾರು ಐದು ಕಿಲೋಮೀಟರ್‌ ದೂರದಲ್ಲಿರುವ ಹಳ್ಳಿ ಇದು. ಮಂಗಳೂರಿನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ನಿಂತರೆ ಹತ್ತು ನಿಮಿಷದೊಳಗೆ ಇಲ್ಲಿಗೆ ಹೋಗಲು ಒಂದು ಬಸ್‌ ಸಿಗುತ್ತದೆ. ಆದರೆ ರಾತ್ರಿ ಎಂಟು ಕಳೆದರೆ ಅಲ್ಲಿಗೆ ನೇರವಾಗಿ ಹೋಗುವ ಬಸ್ಸುಗಳಿಲ್ಲ. ರಾತ್ರಿ ಹತ್ತು ಗಂಟೆ ದಾಟಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಬಸ್ಸುಗಳೂ ಇರುವುದಿಲ್ಲ. ಯಾವುದಾದರೂ ಲಾರಿಗೆ ಕೈತೋರಿಸಿ ಇಲ್ಲವೇ ಕೇರಳದ ಕಡೆಗೆ ಹೋಗುವ ಬಸ್ಸುಗಳವರಲ್ಲಿ ಅಲವತ್ತುಕೊಂಡು ತೊಕ್ಕೊಟ್ಟು ಎಂಬಲ್ಲಿ ಇಳಿದು, ರಿಕ್ಷಾದವರಿಗೆ ನೂರಾರು ರೂಪಾಯಿಗಳನ್ನು ಕೊಟ್ಟು ಮನೆ ತಲುಪಬೇಕು.

ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಹಗಲು ಹೊತ್ತಿನಲ್ಲಿ ನೆನಪಿಸಿಕೊಂಡಾಗಲೆಲ್ಲಾ ಕಾಣ ಸಿಗುವ ಬಸ್ಸುಗಳು ಸಾಕಷ್ಟು ಜನರಿದ್ದರೆ ಮಾತ್ರ ಹೋಗುತ್ತವೆಯೇ ಹೊರತು ರೆಂಜಾಡಿಯಲ್ಲಿ ಯಾರೋ ಮಂಗಳೂರಿಗೆ ಬರುವವರು ಕಾಯುತ್ತಿದ್ದಾರೆ ಎಂಬ ಕಾರಣಕ್ಕಾಗಿ ಹೋಗುವುದಿಲ್ಲ. ಅಂದ ಹಾಗೆ ಇಲ್ಲಿಯೂ ಮೂರು ಕಿಲೋಮೀಟರ್‌ ವ್ಯಾಪ್ತಿಯೊಳಗೆ ಆಸ್ಪತ್ರೆ ಇಲ್ಲ. ಪ್ರೌಢಶಾಲೆಯಿಲ್ಲ. ಕಾಲೇಜೂ ಇಲ್ಲ.

***

ಮಂಗಳಾದೇವಿ ದೇವಸ್ಥಾನವಿರುವುದು ಮಂಗಳೂರಿನ ಹೃದಯ ಭಾಗದಲ್ಲಿ. ಈ ಪ್ರದೇಶಕ್ಕೆ ಮಂಗಳಾದೇವಿ ಎಂದೇ ಕರೆಯುತ್ತಾರೆ. ಇಲ್ಲಿಂದ ಎಂಆರ್‌ಪಿಎಲ್‌ ಕಾರ್ಖಾನೆ ಇರುವ ಸುರತ್ಕಲ್‌ಗೆ ಹಲವು ಬಸ್‌ಗಳಿವೆ. ಆಚೆ ಕಡೆಯಿಂದಲೂ ಅಷ್ಟೇ. ಬೈಕಂಪಾಡಿ ಕೈಗಾರಿಕ ಪ್ರದೇಶದಿಂದ ಕೆಲಸ ಮುಗಿಸಿಕೊಂಡು ಸೀದಾ ಮನೆ ತಲುಪಲು ಅನುಕೂಲವಾಗುವಂತೆ ಅನೇಕ ಬಸ್ಸುಗಳು. ಇವೆಲ್ಲವೂ ಹಗಲು ಹೊತ್ತಿನಲ್ಲಿ ಮಾತ್ರ. ಎರಡನೇ ಪಾಳಿಯನ್ನು ಮುಗಿಸಿಕೊಂಡು ರಾತ್ರಿ ಹತ್ತಕ್ಕೆ ಯಾರಾದರೂ ಸುರತ್ಕಲ್‌ ಅಥವಾ ಬೈಕಂಪಾಡಿಯಲ್ಲಿ ಮಂಗಳಾದೇವಿಯ ಬಸ್ಸು ಹಿಡಿಯಬೇಕೆಂದರೆ ಅವರ ಅದೃಷ್ಟ ಚೆನ್ನಾಗಿರಬೇಕು. ಅಂದರೆ ಬಸ್ಸಿನ ತುಂಬ ಜನರಿದ್ದರಷ್ಟೇ ಆ ಬಸ್ಸು ಮಂಗಳಾದೇವಿಯವರೆಗೂ ಹೋಗುತ್ತದೆ. ಇಲ್ಲದಿದ್ದರೆ ಮತ್ತೊಂದು ಬಸ್ಸು ಸಿಗದ ಜಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಬಸ್ಸು ಮಾಯವಾಗುತ್ತದೆ. ಈ ಬಸ್ಸುಗಳೆಲ್ಲಾ `ದಕ್ಷ ಸೇವೆ’ ನೀಡುವ ಖಾಸಗಿಯವರದ್ದು. ಇಲ್ಲಿ ನೇಮಕಾತಿಯಲ್ಲಿ ಮೀಸಲಾತಿ ಇರುವುದಿಲ್ಲ. ಲಾಭವಿಲ್ಲದಿದ್ದರೆ ಏನೂ ನಡೆಯುವುದೂ ಇಲ್ಲ.

***

ನಲ್ಲೂರಿಗೆ ಜನರಿಲ್ಲದಿದ್ದರೂ ಬಸ್‌ ಓಡಿಸುವ ಕೆಎಸ್‌ಆರ್‌ಟಿಸಿ ಈಗ ನಷ್ಟದಲ್ಲೇನೂ ಇಲ್ಲ. ಹಾಗೆಯೇ ಜನರಿದ್ದಾಗ ಮಾತ್ರ ಬಸ್ಸು ಓಡಿಸುವ ಖಾಸಗಿಯವರೂ ನಷ್ಟದಲ್ಲಿಲ್ಲ. ಕೆಎಸ್‌ಆರ್‌ಟಿಸಿಯ ಲಾಭದ ಕಲ್ಪನೆ ಮತ್ತು ಖಾಸಗಿ ಬಸ್‌ ಮಾಲೀಕರ ಲಾಭದ ಕಲ್ಪನೆಗಳೆರಡೂ ಭಿನ್ನ. ವಾರದ ಬಹುತೇಕ ದಿನಗಳಲ್ಲಿ ತುಂಬಿ ತುಳುಕುವಷ್ಟು ಜನರಿರುವುದರಿಂದ ಒಂದರೆಡು ದಿನ ಜನರಿಲ್ಲದೇ ಇದ್ದರೂ ಪರವಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಭಾವಿಸುತ್ತದೆ. ಅದೊಂದು ಸರಕಾರೀ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಹಾಗೆ ಭಾವಿಸುವಂತೆ ಕಾನೂನುಗಳು ಒತ್ತಾಯಿಸುತ್ತವೆ. ಈ ಕಾನೂನನ್ನು ಕೆಎಸ್‌ಆರ್‌ಟಿಸಿಯ ನೌಕರರು ಪಾಲಿಸುತ್ತಾರೆ. ಜನರಿರಲಿಲ್ಲ ಎಂಬ ಕಾರಣಕ್ಕೆ ಅವರ ಸಂಬಳವೇನೂ ಕಡಿತವಾಗುವುದಿಲ್ಲ.

ಖಾಸಗಿ ಬಸ್‌ಗಳು ವ್ಯವಹರಿಸುವ ವಿಧಾನವೇ ಬೇರೆ. ಪ್ರತಿ ದಿನ ಆಗುವ ಸಂಪಾದನೆಯ ಒಂದು ಭಾಗ ಚಾಲಕ ಮತ್ತು ನಿರ್ವಾಹಕರಿಗೆ ದೊರೆಯುತ್ತದೆ. ಕೆಲವೊಮ್ಮೆ ಒಂದು ನಿರ್ದಿಷ್ಟ ಮೊತ್ತವನ್ನು ಬಸ್ಸಿನ ಮಾಲೀಕರಿಗೆ ನೀಡುವ ಒಪ್ಪಂದವಿರುತ್ತದೆ. ಎರಡೂ ವಿಧಾನಗಳಲ್ಲಿ ಯಾವುದನ್ನು ಅನುಸರಿಸಿದರೂ ಜನರಿಲ್ಲದೇ ಹೋದರೆ ಟ್ರಿಪ್‌ ನಡೆಸಲು ಚಾಲಕ ಮತ್ತು ನಿರ್ವಾಹಕರು ಮನಸ್ಸು ಮಾಡುವುದಿಲ್ಲ.

ನಲ್ಲೂರಿನ ಜನರ ಉದಾಹರಣೆಯನ್ನು ಮುಂದಿಟ್ಟುಕೊಂಡು ಅರ್ಥ ಮಾಡಿಕೊಳ್ಳಲು ಹೊರಟರೆ ಖಾಸಗಿಯವರ ಲಾಭದ ಪರಿಕಲ್ಪನೆ ತಂದೊಡ್ಡುವ ಸಮಸ್ಯೆ ಅರ್ಥವಾಗುತ್ತದೆ. ಭಾನುವಾರದಂದು ನಲ್ಲೂರಿಗೆ ಹೋಗುವ ಬಸ್ಸಿಗೆ ಜನರೇ ಇರುವುದಿಲ್ಲ. ಖಾಸಗಿಯವರಾದರೆ ಭಾನುವಾರದ ಟ್ರಿಪ್‌ ರದ್ದಾಗುತ್ತದೆ. ಈ ದಿನ ನಲ್ಲೂರಿನಲ್ಲೊಬ್ಬನಿಗೆ ಸಣ್ಣಗೆ ಜ್ವರ ಬಾಧಿಸಿದ್ದರೆ, ಅದು ತೀವ್ರವಾಗಿ ಏರುವ ಮಲೇರಿಯಾ ಜ್ವರವೇನಾದರೂ ಆಗಿದ್ದರೆ, ಆಸ್ಪತ್ರೆಗೆ ಹೋಗಲು ಆತ ಬಸ್ಸಿಗಾಗಿ ಕಾಯುತ್ತಿದ್ದರೆ ಅವನ ಭವಿಷ್ಯವೇನು?

ಇದು ಕೇವಲ ಒಂದು ಉದಾಹರಣೆ ಮಾತ್ರ. ಇಂಥ ಇನ್ನೂ ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಜೀವನಾವಶ್ಯಕ ಸೇವೆಗಳನ್ನು ಒದಗಿಸುವುದರಲ್ಲಿಯೂ ಲಾಭದ ಅಂಶವಿರುತ್ತದೆ. ಇದು ಬಹಳ ದೊಡ್ಡ ಲಾಭವೂ ಆಗಿರಬಹುದು. ಸೇವೆಯನ್ನು ಒದಗಿಸುವವರು ಇಲ್ಲಿ ಸೇವೆಯನ್ನು ಮರೆತು ಕೇವಲ ಲಾಭವನ್ನು ಮಾತ್ರ ಪರಿಗಣಿಸುವ ಸ್ಥಿತಿ ಉದ್ಭವಿಸಿದಂತೆ ಇರಬೇಕಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳೇ ಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ ಬಾರದಿದ್ದರೆ ತಮ್ಮ ಹಕ್ಕಿನಂತೆ ಅದನ್ನು ಕೇಳುವುದಕ್ಕೆ ಜನರಿಗೆ ಹಕ್ಕು ಮತ್ತು ಧೈರ್ಯಗಳೆರಡೂ ಇರುತ್ತವೆ. ಅದು ಒದಗಿಸುವ ಸೇವೆ ದಕ್ಷವಾಗಿಲ್ಲದಿದ್ದರೂ ಅದಕ್ಕೊಂದು ಸೇವೆಯ ಆಯಾಮವಿರುತ್ತದೆ. ವಿದ್ಯುತ್‌ ಒದಗಿಸುವ ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಗಳು ಒದಗಿಸುವ ಸೇವೆಗಳನ್ನು ಸಾರ್ವಜನಿಕ ಸ್ವಾಮ್ಯದಲ್ಲೇ ಇರುವಂತೆ ನೋಡಿಕೊಳ್ಳಬೇಕಿರುವುದು ಈ ಕಾರಣಕ್ಕಾಗಿಯೇ. ಈ ಸಂಸ್ಥೆಗಳು ನಷ್ಟದಲ್ಲಿದ್ದರೆ, ಆಡಳಿತಾತ್ಮಕವಾಗಿ ವಿಫಲಗೊಂಡಿದ್ದರೆ ಅವುಗಳನ್ನು ಸುಧಾರಣೆಗೊಳಪಡಿಸಿಯಾದರೂ ಉಳಿಸಿಕೊಳ್ಳಲೇಬೇಕು.

ಪ್ರತಿಭಟನೆಯ ಅವಸಾನ

ಕರವೇ ದಾಂದಲೆ

ಅದು 1999ರ ವಿಧಾನಸಭಾ ಚುನಾವಣೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾದ ಡಿ.ಬಿ. ಚಂದ್ರೇಗೌಡ ಸ್ಪರ್ಧಿಸಿದ್ದರು. ಈ ಹೊತ್ತಿಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕಾಗಿ ಗಿರಿಜನರನ್ನು ಒಕ್ಕಲೆಬ್ಬಿಸಲು ಅಗತ್ಯವಿರುವ ಔಪಚಾರಿಕತೆಗಳನ್ನು ಪೂರೈಸಿಕೊಂಡಿದ್ದ ಅರಣ್ಯ ಇಲಾಖೆ `ಕಾರ್ಯಾಚರಣೆ’ಗೆ ಮುಂದಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲೊಂದು ಹೋರಾಟ ನಡೆಯುತ್ತಿತ್ತು. ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂಬ ಮಾತುಗಳನ್ನೂ ಹೋರಾಟಗಾರರು ಆಡಿದ್ದರು. ಈ ಹೊತ್ತಿನಲ್ಲಿ ಡಿ.ಬಿ. ಚಂದ್ರೇಗೌಡರ ಮಧ್ಯ ಪ್ರವೇಶವಾಯಿತು. `ಗಿರಿಜನರ ಹಿತ ಕಾಪಾಡುತ್ತೇನೆಂದು ನಾನು ನನ್ನ ರಕ್ತದಲ್ಲಿ ಬೇಕಾದರೂ ಬರೆದುಕೊಡಲು ಸಿದ್ಧ’ ಎಂಬ ಭರವಸೆ ನೀಡಿದರು.

ಚುನಾವಣಾ ಫಲಿತಾಂಶಗಳು ಹೊರಬಿದ್ದವು. ಡಿ.ಬಿ. ಚಂದ್ರೇಗೌಡರು ಗೆದ್ದಿದ್ದರು. ಅವರ ಗೆಲುವಿಗೆ ಆದಿವಾಸಿ-ಗಿರಿಜನರು ಎಷ್ಟರ ಮಟ್ಟಿಗೆ ಕಾರಣರಾಗಿದ್ದರೋ ಗೊತ್ತಿಲ್ಲ. ಚಂದ್ರೇಗೌಡರು ಎಸ್‌.ಎಂ.ಕೃಷ್ಣ ಸರಕಾರದಲ್ಲಿ ಕಾನೂನು ಸಚಿವರಾಗಿದ್ದಂತೂ ನಿಜ. ತಮ್ಮ ಕ್ಷೇತ್ರದ ಶಾಸಕರೇ ಕಾನೂನು ಸಚಿವರಾದದ್ದನ್ನು ಕಂಡ ಆದಿವಾಸಿಗಳು ತಮ್ಮ ಸಮಸ್ಯೆ ಪರಿಹಾರವಾಗುತ್ತದೆಂದು ನಂಬಿದರು. ಆದರೆ ಚಂದ್ರೇಗೌಡರು ನಿಧಾನವಾಗಿ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದರು. ರಾಷ್ಟ್ರೀಯ ಉದ್ಯಾನವನ ಕಾಯ್ದೆಗೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಅದು ಕೇಂದ್ರ ಸರಕಾರದ ಕಾನೂನು, ನಮಗೇನೂ ಮಾಡಲು ಸಾಧ್ಯವಿಲ್ಲ. ಹೀಗೆ ನೂರೆಂಟು ತಾಂತ್ರಿಕ ಕಾರಣಗಳನ್ನು ಮುಂದೊಡ್ಡತೊಡಗಿದರು.

ಡಿ.ಬಿ. ಚಂದ್ರೇಗೌಡರ ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಕುದುರೆಮುಖ ಕಾಡಿನಲ್ಲಿ ಬಂದೂಕಿನ ಸದ್ದುಗಳು ಕೇಳಲಾರಂಭಿಸಿದವು. ಮತ್ತೊಂದು ಚುನಾವಣೆ ನಡೆದು ಧರ್ಮಸಿಂಗ್‌ ಮುಖ್ಯಮಂತ್ರಿಯಾಗುವ ಹೊತ್ತಿಗೆ ಕುದುರೆಮುಖ ಕಾಡಿನಲ್ಲಿ ನಕ್ಸಲೀಯರಿದ್ದಾರೆ ಎಂಬುದು ನೂರಕ್ಕೆ ನೂರರಷ್ಟು ಸಾಬೀತಾಗಿತ್ತು. ಎನ್‌ಕೌಂಟರ್‌ಗಳು ನಡೆದು ಕೆಲವರು ಬಲಿಯಾದರು. ರಾಜ್ಯ ಸರಕಾರ ಗಿರಿಜನರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ ಎಂದು ಭರವಸೆ ನೀಡುವ ದೊಡ್ಡ ಫಲಕಗಳನ್ನು ಕುದುರೆಮುಖದ ಕಾಡಿನೊಳಗೂ ಹಾಕಲಾಯಿತು. ಗಿರಿಜನರಿಗೆ ಬೆದರಿಕೆ ಹಾಕುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ತಣ್ಣಗಾದರು. ಗಿರಿಜನರ ಅಭಿವೃದ್ಧಿಗೆ ಪ್ಯಾಕೇಜುಗಳ ಘೋಷಣೆ ನಡೆಯಿತು.

***

ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ವಾಹನ ಚಾಲಕನಾಗಿ ದುಡಿಯುತ್ತಿದ್ದ ಒಬ್ಬಾತನನ್ನು ರಾತ್ರಿ ಬೆಳಗಾಗುವುದರೊಳಗೆ ಕೆಲಸದಿಂದ ತೆಗೆದು ಹಾಕಲಾಯಿತು. ಕನ್ನಡ ರಕ್ಷಣಾ ವೇದಿಕೆಯ ಸದಸ್ಯರು ಆ ಸಂಸ್ಥೆಯೊಳಗೆ ನುಗ್ಗಿ ದಾಂಧಲೆ ನಡೆಸಿದರು. ಆ ಸಂಸ್ಥೆಯವರು ಚಾಲಕನಿಗೆ ಮತ್ತೆ ಕೆಲಸ ಕೊಡಲಿಲ್ಲ. ಆದರೆ ಹಾಗೆ ಮಾಡುವುದಕ್ಕಾಗಿ ಆ ಉದ್ಯೋಗಿಗೆ ದೊಡ್ಡ ಪ್ರಮಾಣದ ಮೊತ್ತವೊಂದನ್ನು ಪರಿಹಾರವಾಗಿ ನೀಡಬೇಕಾಯಿತು.

***

ಖಾಸಗಿ ಬ್ಯಾಂಕ್‌ ಒಂದರ ಸಾಲ ವಸೂಲಿಗಾರರು ವಾಹನ ಚಾಲಕನೊಬ್ಬನ ಮನೆಯ ಮೇಲೆ ದಾಳಿ ಮಾಡಿ ಆತನನ್ನು ಥಳಿಸಿದರು. ಪೊಲೀಸರು ಕೇಸು ದಾಖಲಿಸಿಕೊಳ್ಳುವುದಕ್ಕೇ ಹಿಂದು-ಮುಂದು ನೋಡುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದು ಕನ್ನಡ ರಕ್ಷಣಾ ವೇದಿಕೆ. ಅವರ ಆರ್ಭಟಕ್ಕೆ ಪೊಲೀಸರೂ ಹೆದರಿದರು. ಕಾನೂನು ಬಾಹಿರ ವಿಧಾನಗಳ ಮೂಲಕ ಸಾಲ ವಸೂಲು ಮಾಡಲು ಹೊರಟಿದ್ದ ಬ್ಯಾಂಕಿನ ಏಜಂಟರೂ ಪೊಲೀಸ್‌ ಕೇಸುಗಳ ಭಾರಕ್ಕೆ ಕುಸಿದರು. ಸಾಲಕೊಟ್ಟಿದ್ದ ಬ್ಯಾಂಕ್‌ ಮುಂದೆ ಬಂದು ತನ್ನ ವಸೂಲಾತಿ ವಿಧಾನಗಳು ಹೀಗಿರಲಿಲ್ಲ. ಏಜೆಂಟರು ತಪ್ಪು ಮಾಡಿದ್ದಾರೆ ಎಂದೆಲ್ಲಾ ಅಲವತ್ತುಕೊಂಡು ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿತು.

***

ಭಾರತದ ಸಂವಿಧಾನ ಹೇಳುವಂತೆ ಎಂಟನೇ ಶೆಡ್ಯೂಲಿನಲ್ಲಿರುವ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳೇ ಸರಿ. ಇಂಗ್ಲಿಷ್‌ ಮತ್ತು ಹಿಂದಿಗಳು ಕೇಂದ್ರ ಸರಕಾರ ಆಡಳಿತಕ್ಕೆ ಬಳಸುತ್ತದೆ. ಇದು ಆಡಳಿತಾತ್ಮಕ ಅನುಕೂಲವೇ ಹೊರತು ಹಿಂದಿಗೆ ನೀಡಿದ ಪ್ರತ್ಯೇಕ ಮನ್ನಣೆಯೇನೂ ಅಲ್ಲ. ಈ ಅರ್ಥದಲ್ಲಿ ಹಿಂದಿಯನ್ನು ಪರಿಗಣಿಸಿದರೆ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಎಲ್ಲಾ ನೇಮಕಾತಿ ಪರೀಕ್ಷೆಗಳಿಗೂ ಕನ್ನಡದ ಮತ್ತು ಎಂಟನೇ ಶೆಡ್ಯೂಲಿನಲ್ಲಿರುವ ಇತರ ಎಲ್ಲಾ ಭಾಷೆಗಳ ಪ್ರಶ್ನೆ ಪತ್ರಿಕೆಗಳಿರಬೇಕು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದಾಗಿರುವುದೇ ಇದಕ್ಕೆ ಸಾಕ್ಷಿ.

ಆದರೆ ರೈಲ್ವೇ ಇಲಾಖೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಇರುವವರಿಗೆ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲೂ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರ ಬರೆಯಬಹುದಾದ ಸ್ಥಿತಿ ಇದೆ. ಸರೋಜಿನಿ ಮಹಿಷಿ ವರದಿಯಿಂದ ಆರಂಭವಾಗಿ ಅನೇಕ ವರದಿಗಳಲ್ಲಿ ಈ ವಿಷಯದ ಚರ್ಚೆ ಇದೆ. ಆದರೆ ಇದರ ಕುರಿತು ನಿಜವಾದ ಚರ್ಚೆ ಆರಂಭವಾದದ್ದು ಇತ್ತೀಚೆಗೆ. ಅದಕ್ಕೆ ಕಾರಣವಾದದ್ದು ಕನ್ನಡ ರಕ್ಷಣಾ ವೇದಿಕೆ. ಈ ಬಹಳ ಮುಖ್ಯವಾದ ಚರ್ಚೆಯನ್ನು ಅದು ಆರಂಭಿಸಿದ್ದು ಬಹಳ ಸುಲಭವಾದ ತಂತ್ರದ ಮೂಲಕ. ರೈಲ್ವೇ ನೇಮಕಾತಿ ಮಂಡಳಿ ನಡೆಸುತ್ತಿದ್ದ ಸಂದರ್ಶನಾಂಗಣದ ಮೇಲೆ ಅದು ಹಿಂಸಾತ್ಮಕ ದಾಳಿಯನ್ನು ನಡೆಸಿತು. ಇದರಿಂದ ದೊಡ್ಡ ಉಪಯೋಗವೇನೂ ಆಗದಿದ್ದರೂ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ರಾಜಕೀಯ ಪಕ್ಷಗಳು ಕನ್ನಡ ಮಾತ್ರ ಬಲ್ಲವರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮಾತನಾಡಲು ತೊಡಗಿದವು.

***

ಮೇಲಿನ ಎಲ್ಲಾ ಉದಾಹರಣೆಗಳೂ ಒಂದು ಅಂಶವನ್ನು ಸ್ಪಷ್ಟ ಪಡಿಸುತ್ತಿವೆ. ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕವಾದ ಯಾವುದೇ ತಂತ್ರವನ್ನು ಬಳಸಿ ಒತ್ತಾಯಗಳನ್ನು ಮುಂದಿಟ್ಟರೂ ಆಡಳಿತ ನಡೆಸುವವರು ಅದನ್ನು ಪರಿಗಣಿಸುವುದಿಲ್ಲ. ಹಿಂಸೆಯ ಅಂಶ ಸೇರಿಕೊಂಡ ತಕ್ಷಣ ಹೋರಾಟಕ್ಕೊಂದು ಬೆಲೆ ಸಿಗಲಾರಂಭಿಸುತ್ತದೆ. ಈ ತರ್ಕವನ್ನು ಇನ್ನಷ್ಟು ಬೆಳೆಸಿದರೆ ಆದಿವಾಸಿ-ಗಿರಿಜನರು ನಕ್ಸಲೀಯರಿಗೆ ಬೆಂಬಲ ನೀಡುವುದು ಮತ್ತು ಕನ್ನಡಿಗರಾಗಿದ್ದುಕೊಂಡು ಕೇಂದ್ರ ಸರಕಾರದಲ್ಲಿ ಉದ್ಯೋಗ ಪಡೆಯಬೇಕಾದವರು ಕನ್ನಡ ರಕ್ಷಣಾ ವೇದಿಕೆಯ ಹಿಂಸಾತ್ಮಕ ತಂತ್ರಗಳಿಗೆ ಬೆಂಬಲ ನೀಡುವುದು ಸರಿ ಎಂದಾಗುತ್ತದೆ. ಹಾಗಂದುಕೊಳ್ಳಲೂ ಸಮಸ್ಯೆ ಇದೆ. ಕರ್ನಾಟಕದ ಹೆಚ್ಚುವರಿ ಡಿಜಿಪಿ ಶಂಕರ್‌ ಬಿದರಿ ಇತ್ತೀಚೆಗೊಂದು ಹೇಳಿಕೆ ನೀಡಿದರು. `ಹೋರಾಟದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ದಾಂಧಲೆ ಎಬ್ಬಿಸುವ ಕೆಲಸದಲ್ಲಿ ಕೆಲವು ಸಂಘಟನೆಗಳು ತೊಡಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಅಸಮಾಧಾನವನ್ನು ಹೊರಗೆಡಹುವ ಹಕ್ಕಿದೆ. ಆದರೆ ಅದು ಮಿತಿ ಮೀರಬಾರದು’. ಹೆಚ್ಚುವರಿ ಡಿಜಿಪಿಯವರ ಮಾತುಗಳು ನೂರಕ್ಕೆ ನೂರರಷ್ಟು ಕಾನೂನುಬದ್ಧವಾಗಿವೆ. ಆದರೆ ಹೀಗೇ ಕಾನೂನು ಬದ್ಧವಾಗಿ ಹೋರಾಟ ಮಾಡುತ್ತಿದ್ದಾಗ ಕುದುರೆಮುಖದ ಆದಿವಾಸಿ ಗಿರಿಜನರಿಗೆ ಸಿಕ್ಕಿದ್ದು ಒಕ್ಕಲೆಬ್ಬಿಸುವಿಕೆಯ ಉಡುಗೊರೆ. ನಕ್ಸಲೀಯರು ಗುಂಡು ಹಾರಿಸಿದ ತಕ್ಷಣ ಅವರಿಗೆ ಅಭಿವೃದ್ಧಿ ಪ್ಯಾಕೇಜುಗಳು ಬಂದವು.

ಸಾಲ ವಸೂಲಿಗೆ ಬ್ಯಾಂಕಿನವರು ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ದೂರು ಕೊಡಲು ಹೋದರೆ ಅದನ್ನು ಸ್ವೀಕರಿಸುವುದಕ್ಕೆ ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆಯವರ ಬಳಿ ಹೋದರೆ ಸಮಸ್ಯೆ ತಾತ್ಕಾಲಿಕವಾಗಿಯಾದರೂ ಪರಿಹಾರವಾಗುತ್ತದೆ. ಕ್ಷುಲ್ಲಕ ನೆಪ ಮುಂದಿಟ್ಟುಕೊಂಡು ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡುವ ಮತೀಯವಾದಿಗಳಿಗೂ ಕರ್ನಾಟಕ ರಕ್ಷಣಾ ವೇದಿಕೆಯೇ ಮದ್ದು ಎಂಬುದೂ ಇತ್ತೀಚೆಗಷ್ಟೇ ಸಾಬೀತಾಯಿತು. ಪರಿಸ್ಥಿತಿ ಹೀಗಿರುವಾಗ `ಪ್ರಜಾಸತ್ತಾತ್ಮಕ, ಕಾನೂನುಬದ್ಧ ಹೋರಾಟ ಮಾಡಬೇಕು’ ಎನ್ನುವುದು ವಾಸ್ತವದಿಂದ ವಿಮುಖಿಯಾದ ಉಪದೇಶವಾಗುವುದಿಲ್ಲವೇ?

***

ಹಿಂಸೆಗಿಳಿಯದೆ ಪ್ರಜಾಸತ್ತಾತ್ಮಕವಾಗಿ ಬೇಡಿಕೆಗಳನ್ನು ಮಂಡಿಸಬೇಕು ಎಂದು ಯಾರು ಯಾರಿಗೂ ಹೇಳುವಂಥ ಸ್ಥಿತಿ ಈಗ ಇಲ್ಲದಿರುವುದರ ಹಿಂದಿರುವುದು ರಾಜಕೀಯ ನಾಯಕತ್ವದ ವೈಫಲ್ಯ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡಕ್ಕೂ ಹೊಂದಿಕೊಂಡಿರುವ ಸಾಕಷ್ಟು ಪ್ರಬಲವೇ ಆಗಿರುವ ಕಾರ್ಮಿಕ ಸಂಘಟನಾ ವಿಭಾಗಗಳಿವೆ. ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನಲ್ಲಿ ಕೆಲಸ ಮಾಡುವ ದಿನಗೂಲಿ ನೌಕರನೊಬ್ಬನನ್ನು ಕಿತ್ತು ಹಾಕಿದರೆ ಆತನ ಪರವಾಗಿ ಮಾತನಾಡುವ ಧೈರ್ಯ ಮತ್ತು ಅದಕ್ಕೆ ಬೇಕಾದ ಚಾತುರ್ಯಗಳು ಈ ಎರಡೂ ಕಾರ್ಮಿಕ ಸಂಘಟನೆಗಳಿಗಿಲ್ಲ. ಇದ್ದರೂ ಅವು ಇಂದಿನವರೆಗೂ ತೋರಿಸಿಕೊಟ್ಟಿಲ್ಲ. ಇನ್ನು ಕಾರ್ಮಿಕರನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವ ಎಡ ಪಕ್ಷಗಳ ಕಾರ್ಮಿಕ ನಾಯಕರೂ ಅಷ್ಟೇ. ಸಂಘಟಿತರಾಗಿರುವ ಕಾರ್ಮಿಕರ ಮಧ್ಯೆ ಮಾತ್ರ ಇವರ ಆಟಾಟೋಪ. ಇವರೆಲ್ಲಾ ಪ್ರಜಾಸತ್ತಾತ್ಮಕವಾಗಿ ಮಾತನಾಡಿ ಜನರ ಬೇಡಿಕೆಗಳನ್ನು ವ್ಯವಸ್ಥೆ/ಆಡಳಿತಗಳ ಮುಂದೆ ಇಡಬೇಕಾದವರು. ಇವರಾರೂ ಆ ಕೆಲಸ ಮಾಡದೇ ಇದ್ದಾಗ ಯಾವುದೋ ಒಂದು ತಂತ್ರದ ಮೂಲಕ ಕೆಲಸ ಸಾಧಿಸಿಕೊಡುವ ಸಂಘಟನೆಗಳಿಗೆ ಜನರು ಮೊರೆ ಹೋಗುತ್ತಾರೆ.

***

ಕೇಂದ್ರ ಸರಕಾರದ ಅಧೀನದಲ್ಲಿರುವ ಇಲಾಖೆಗಳು ಮತ್ತಿತರ ಸಂಸ್ಥೆಗಳಲ್ಲಿ `ಸಿ’ ಮತ್ತು `ಡಿ’ ದರ್ಜೆಯ ಹುದ್ದೆಗಳ ನೇಮಕಾತಿ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಇಂದಿನವರೆಗೂ ಯಾವುದೇ ರಾಜಕೀಯ ಪಕ್ಷ ತಲೆಕೆಡಿಸಿಕೊಂಡಂತೆ ಕಾಣಿಸುವುದಿಲ್ಲ. ಕನ್ನಡ ರಕ್ಷಣಾ ವೇದಿಕೆಯ ಪ್ರತಿಭಟನೆಗಳಿಗೆ ಬೆಂಬಲ ಸಿಗಲಾರಂಭಿಸಿದಾಗ ಎಲ್ಲಾ ರಾಜಕೀಯ ಪಕ್ಷಗಳೂ `ತಾವೂ ಇದ್ದೇವೆ’ ಎಂದುಕೊಂಡು ಅದಕ್ಕೆ ಧ್ವನಿಗೂಡಿಸಿದರು. ಕಾಂಗ್ರೆಸ್‌ ಈಗಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿಯೂ ಒಂದು ಪೂರ್ಣ ಅವಧಿಗೆ ಕೇಂದ್ರದಲ್ಲಿ ಗದ್ದುಗೆ ಹಿಡಿದಿತ್ತು. ಎರಡೂ ಪಕ್ಷಗಳ ಒಬ್ಬ ನಾಯಕರೂ ಕೇಂದ್ರ ಸರಕಾರದ ಇಲಾಖೆಗಳಿಗೆ ನಡೆಯುವ ನೇಮಕಾತಿಯ ಸ್ವರೂಪ ಅದರಲ್ಲಿ ಇರುವ ಪ್ರಾದೇಶಿಕ ಅಸಮಾನತೆಗಳ ಕುರಿತು ಚರ್ಚಿಸಿದ್ದಿಲ್ಲ.

ಈಗಲೂ ರೈಲ್ವೇ ನೇಮಕಾತಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮಾತನಾಡುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಸದ್ಯವೇ ಎದುರಾಗುತ್ತಿರುವ ಚುನಾವಣೆಗಳು. ಈ ಕಣ್ಣೊರೆಸುವ ರಾಜಕಾರಣ ಎರಡು ರೀತಿಯಲ್ಲಿ ಅಪಾಯಕಾರಿ. ಮೊದಲನೆಯದ್ದು ರೈಲ್ವೇ ಇಲಾಖೆಯ ನೇಮಕಾತಿಯನ್ನು ಹಿಂಸಾತ್ಮಕವಾಗಿ ವಿರೋಧಿಸುವುದಕ್ಕೆ ತಥಾಕಥಿತ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರುವವರೂ ಒಪ್ಪಿಗೆ ನೀಡಿದಂತಾಗುತ್ತದೆ. ಎರಡನೆಯದ್ದು: ರಾಜಕೀಯ ಪ್ರಬುದ್ಧತೆಯೇ ಇಲ್ಲದೆ ಗಾಳಿಬಂದಂತೆ ತೂರಿಕೊಳ್ಳುವ ಮನಸ್ಥಿತಿ ಇದು. ಡಿ.ಬಿ.ಚಂದ್ರೇಗೌಡರು ಚುನಾವಣೆ ಗೆಲ್ಲಲು ಆದಿವಾಸಿಗಳಿಗೆ ಭರವಸೆ ಕೊಟ್ಟಂತೆಯೇ ಯಡಿಯೂರಪ್ಪ, ಅನಂತಕುಮಾರ್‌ ಆದಿಯಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌ ರೈಲ್ವೇ ನೇಮಕಾತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂಸಾತ್ಮಕ ಹೋರಾಟಗಳನ್ನು ಬಂದೂಕಿನಿಂದ ನಿಯಂತ್ರಿಸಬಹುದೆಂದು ವಾದಿಸಬಹುದು. ಆದರೆ ರಾಜಕೀಯ ಪಕ್ಷಗಳ ಸೋಲು ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಬಹುದು ಎಂಬ ಭರವಸೆಯನ್ನೇ ನಾಶ ಮಾಡುತ್ತಿರುವುದನ್ನು ಹೇಗೆ ತಡೆಯುವುದು?

ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು

ಮಾಧ್ಯಮಗಳಲ್ಲಿ ಪ್ರಕಟವಾಗುವ ಸಾವಿನ ಸುದ್ದಿಗಳಲ್ಲಿ ಎರಡು ವಿಧ. ಮೊದಲನೆಯದ್ದು ಕೇವಲ ಸಂಖ್ಯೆಗಳಲ್ಲಿ ಹೇಳುವ ಸಾವುಗಳು. ಎರಡನೆಯದ್ದು ಸತ್ತ ವ್ಯಕ್ತಿಯ ಕುರಿತು ಹೇಳುವಂಥದ್ದು. ಅಪಘಾತಗಳು, ಆಕಸ್ಮಿಕಗಳು, ದುರಂತಗಳು ಸಂಭವಿಸಿದಾಗ ಸತ್ತವರ ಸಂಖ್ಯೆಗಳೇ ಮುಖ್ಯವಾಗಿ ಸತ್ತವರು ಯಾರೆಂಬುದು ನಗಣ್ಯವಾಗಿಬಿಡುತ್ತವೆ. ಪ್ರಮುಖ ವ್ಯಕ್ತಿಗಳ ಮರಣದ ಸಂದರ್ಭದಲ್ಲಿ ವ್ಯಕ್ತಿಯೇ ಮುಖ್ಯ. ಈ ಎರಡೂ ಅಲ್ಲದ ಸಂದರ್ಭವೊಂದರಲ್ಲಿ ವ್ಯಕ್ತಿ ಮುಖ್ಯನಾಗುವುದೂ ಇದೆ. ಬೆಂಗಳೂರಿನ ಉದಾಹರಣೆಯನ್ನೇ ಪರಿಗಣಿಸುವುದಾದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಕೊಲೆಯಾದರೆ ಆತ/ಆಕೆ `ಪ್ರಮುಖ’ನಲ್ಲದೇ ಹೋದರೂ ಮುಖ್ಯ ಸುದ್ದಿಯಾಗುವುದಿದೆ. ಹೊರ ಗುತ್ತಿಗೆ ಉದ್ದಿಮೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಕೊಲೆಯಾದಾಗ ಅದು ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಸುದ್ದಿಯಾಗಿತ್ತು. ಈಗಲೂ ಆ ಪ್ರಕರಣದ ವಿಚಾರಣೆಯ ವಿವರಗಳು ಮಾಧ್ಯಮಗಳಲ್ಲಿ ಕಾಣಿಸುತ್ತಲೇ ಇರುತ್ತದೆ.

ಇದು ಕೇವಲ ಸಾವಿನ ಸುದ್ದಿಗೆ ಮಾತ್ರ ಸೀಮಿತವಾದ ವಿಷಯವೇನೂ ಅಲ್ಲ. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಒಂದು ವರ್ಷದಲ್ಲಿ ನಡೆಸಿದ ರಫ್ತಿನ ಪ್ರಮಾಣ, ಅದರಿಂದ ವಿವಿಧ ಕಂಪೆನಿಗಳು ಗಳಿಸಿದ ಲಾಭದ ಪ್ರಮಾಣ ಇತ್ಯಾದಿ ಅಂಕಿ-ಅಂಶಗಳು ಕಾರಣವಿಲ್ಲದೆಯೇ ಮುಖ್ಯಪುಟಗಳ ಸುದ್ದಿಯಾಗುತ್ತದೆ. ಷೇರು ಮಾರುಕಟ್ಟೆಯ ಗೂಳಿ-ಕರಡಿಗಳ ಚಿನ್ನಾಟಕ್ಕೆ ದೊರೆಯುವ ಮಹತ್ವದ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ಕಳೆದವಾರ ಷೇರು ಮಾರುಕಟ್ಟೆ ಸ್ವಲ್ಪ ಚೆನ್ನಾಗಿಯೇ ಚೇತರಿಸಿಕೊಂಡಿದ್ದ ಹೊತ್ತಿನಲ್ಲಿ ರಾಷ್ಟ್ರೀಯ ಕ್ರೈಂ ರೆಕಾರ್ಡ್‌ ಬ್ಯೂರೋ ತನ್ನ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿತು. ಅದರಂತೆ 2006ರಲ್ಲಿ ಭಾರತಾದ್ಯಂತ 17,060 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಪತ್ರಿಕೆಗಳಲ್ಲಿ ಇದು ಮುಖಪುಟದ ಸುದ್ದಿಯಾಗಿದ್ದರೂ ಹೆಚ್ಚಿನ ಎಲ್ಲ ಪತ್ರಿಕೆಗಳು ಇದರ ಬಗ್ಗೆ ಸಂಪಾದಕೀಯ ಬರೆದರೂ ಎರಡಂಕಿಯ ಅಭಿವೃದ್ಧಿ ದರದತ್ತ ಧಾವಿಸುತ್ತಿರುವ ಭಾರತೀಯರಿಗೆ ಮಾತ್ರ ಏನೂ ಅನ್ನಿಸಲಿಲ್ಲ. ಕಾಲ್‌ ಸೆಂಟರ್‌ ಹುಡುಗಿಯ ಸಾವಿಗೆ ಕರಗಿ ನೀರಾದ ಹೃದಯಗಳಲ್ಲೊಂದೂ ಯಾಕೆ ಹೀಗೆ ರೈತರು ಸಾಯುತ್ತಿದ್ದಾರೆಂದು ಪ್ರಶ್ನಿಸಲಿಲ್ಲ!

ಭಾರತದ ರೈತನ ಆತ್ಮಹತ್ಯೆ ಅಂಕೆ-ಸಂಖ್ಯೆಗಳ ವ್ಯವಹಾರವಾಗಿ ಕನಿಷ್ಠ ಹತ್ತು ವರ್ಷಗಳಾದವು. ಕರ್ನಾಟಕ ಸರಕಾರವಂತೂ ಸತ್ತ ರೈತನ ಬೆಲೆ ಒಂದು ಲಕ್ಷ ರೂಪಾಯಿಗಳೆಂದು ಹೇಳಿಬಿಟ್ಟಿದೆ. ಮಹಾರಾಷ್ಟ್ರದ ವಿದರ್ಭ ಪ್ರದೇಶದ ರೈತರ ಆತ್ಮಹತ್ಯೆಗಳನ್ನು ವೇಗವನ್ನು ತಡೆಯಲು ಸ್ವತಃ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೇ ಹೊಸ ಪ್ಯಾಕೇಜ್‌ ಘೋಷಿಸಿದರು. ಈ ಪ್ಯಾಕೇಜ್‌ ಘೋಷಣೆಯಾಗಿ ಹದಿನಾರು ತಿಂಗಳು ತುಂಬುವ ಹೊತ್ತಿಗೆ ಸರಿಯಾಗಿ ರಾಷ್ಟ್ರೀಯ ಕ್ರೈಂ ರೆಕಾರ್ಡ್‌ ಬ್ಯೂರೋ ವಿದರ್ಭದ ರೈತರ ಆತ್ಮಹತ್ಯೆಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತಲೂ ಹೆಚ್ಚು ಎಂದು ಹೇಳಿದೆ.

***

ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಈ ಪ್ರಶ್ನೆಗೆ ಈವರೆಗೆ ನಡೆದ ಯಾವ ಸಂಶೋಧನೆಯೂ ಇದಮಿತ್ಥಂ ಎಂಬಂಥ ಉತ್ತರವೊಂದನ್ನು ನೀಡಿಲ್ಲ. ನಮ್ಮ ಸಂಶೋಧನಾ ವಿಧಾನಗಳಿಗೆ ಇಂಥದ್ದೊಂದು ಉತ್ತರವನ್ನು ನೀಡುವ ಶಕ್ತಿಯೂ ಇಲ್ಲ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕುವ ಕ್ರಿಯೆ ವಿಶ್ಲೇಷಣಾತ್ಮಕವಾಗಿ ಸಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡವನು/ಳು ಕುಡಿಯುತ್ತಿದ್ದನೇ/ಳೇ?, ಮನೆಯ ಖರ್ಚಿಗೂ ಸಾಲ ಮಾಡಿಕೊಂಡಿದ್ದರೇ? ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ರೈತರ ಆತ್ಮಹತ್ಯೆಗೆ `ಇತರ ಕಾರಣ’ಗಳೂ ಇವೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. `ಇತರ ಕಾರಣ’ಗಳೂ ಇರುವುದರಿಂದ ರೈತರ ಆತ್ಮಹತ್ಯೆಯ ಕಾರಣ ಅಸ್ಪಷ್ಟವಾಗಿಯೇ ಉಳಿಯುತ್ತದೆ.

ವಿವಿಧ ಸಂಶೋಧನೆಗಳು ಪಟ್ಟಿ ಮಾಡುವ ಇತರ ಕಾರಣಗಳು ಈಗ ಹುಟ್ಟಿಕೊಂಡವೇನೂ ಅಲ್ಲ. ಈ ಮೊದಲೂ ರೈತರು ಸಾಲ ಮಾಡುತ್ತಿದ್ದರು. ಬೆಳೆ ವಿಫಲವಾಗುತ್ತಿತ್ತು. ಆಗಲೂ ಸಾಲ ಮಾಡಿಯೇ ಮಕ್ಕಳ ಮದುವೆ ಮಾಡುತ್ತಿದ್ದರು ಅಷ್ಟೇಕೆ ಸಾಲ ತಂದೇ ಪಿತೃಪಕ್ಷವನ್ನೂ ಆಚರಿಸುತ್ತಿದ್ದರು. ಆದರೆ ಈ ಸಾಲಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ಏಕೆ ಅವೇ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ರೈತರ ಆತ್ಮಹತ್ಯೆಗಳ ಸಂಶೋಧನೆ ನಡೆಸುವ ಯಾರಿಗೂ ಈ ಪ್ರಶ್ನೆ ಕಾಡುವುದಿಲ್ಲವೇಕೆ?

ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್‌ ಘೋಷಿಸಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ `ಹೌದು’ ಅಥವಾ `ಇಲ್ಲ’ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ.

***

ರೋಗಗ್ರಸ್ತ ಉದ್ದಿಮೆಗಳ ಕಾಯ್ದೆ-1985 ಎಂಬ ಕಾಯ್ದೆಯೊಂದನ್ನು ಜಾರಿಗೆ ತಂದು ಇಪ್ಪತ್ತೆರಡು ವರ್ಷಗಳಾದುವು. ಉದ್ದಿಮೆಗಳು ನಷ್ಟಕ್ಕೊಳಗಾದಾಗ ಸರಕಾರ ಮಧ್ಯ ಪ್ರವೇಶಿಸಿ ಪುನಶ್ಚೇತನಕ್ಕೆ ನೆರವು ನೀಡುವುದು ಈ ಕಾಯ್ದೆಯ ಮುಖ್ಯ ಉದ್ದೇಶ. ಈ ಪುನಶ್ಚೇತನ ಕ್ರಿಯೆಯನ್ನು ಕಾರ್ಯಗತಗೊಳಿಸಲು ಬೋರ್ಡ್‌ ಆಫ್‌ ಇಂಡಸ್ಟ್ರಿಯಲ್‌ ಅಂಡ್‌ ಫೈನಾನ್ಸ್‌ ರಿಕನ್‌ಸ್ಟ್ರಕ್ಷನ್‌ (ಬಿಐಎಫ್‌ಆರ್‌) ಎಂಬ ಸಂಸ್ಥೆಯಿದೆ. ಈ ಸಂಸ್ಥೆ ರೋಗಗ್ರಸ್ತ ಉದ್ದಿಮೆಗಳ ಪುನಶ್ಚೇತನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ತನ್ನ ಕಡೆಯ ನಿರ್ದೇಶಕರನ್ನು ಉದ್ದಿಮೆಯ ಆಡಳಿತ ಮಂಡಳಿಗೆ ನೇಮಿಸಿ ನಿರ್ವಹಣೆಯ ಮೇಲ್ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಸ್ಥೆಗೆ ಸಾಲ ನೀಡಿದ ಬ್ಯಾಂಕ್‌ಗಳವರನ್ನು ಕರೆಯಿಸಿ ಬಡ್ಡಿ ಮನ್ನಾ ಮಾಡಿಸುವುದರಿಂದ ಹಿಡಿದು ಸಾಲದ ಮೊತ್ತದಲ್ಲೇ ಸ್ವಲ್ಪ ಪ್ರಮಾಣವನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ ಸಂಸ್ಥೆಯ ಪುನಶ್ಚೇತನಕ್ಕೆ ಅಗತ್ಯವಿರುವ ಸಾಲವನ್ನು ಕೊಡಿಸುವ ಕೆಲಸವೂ ನಡೆಯುತ್ತದೆ.

ರೈತನೊಬ್ಬ ಸಾಲ ಮಾಡಿಕೊಂಡು ಕಷ್ಟಕ್ಕೆ ಬಿದ್ದರೆ ಅವನ ನೆರವಿಗೆ ಯಾರು ಬರುತ್ತಾರೆ? ಪಡೆದ ಸಾಲವನ್ನು ಮರು ಪಾವತಿ ಮಾಡದಿದ್ದರೆ ಅವನದೇ ಷೇರು ಬಂಡವಾಳದಿಂದ ನಡೆಯುತ್ತಿರುವ ಸಹಕಾರ ಸಂಘ ಕೂಡಾ ಅವನ ಜಮೀನು ಹರಾಜು ಹಾಕುವ ಮಾತನಾಡುತ್ತದೆ. ಮರು ಪಾವತಿಯಿಲ್ಲದೆ ಸಾಲವಿಲ್ಲ ಎಂಬ ಸಹಕಾರ ಸಂಘ ಮತ್ತು ಬ್ಯಾಂಕುಗಳ ನೀತಿಯಿಂದಾಗಿ ರೈತ ಅನಿವಾರ್ಯವಾಗಿ ಸುಲಭದಲ್ಲಿ ಸಾಲಕೊಡುವ ಬಡ್ಡಿ ವ್ಯಾಪಾರಿಗಳ ಬಳಿಗೆ ಹೋಗುತ್ತಾನೆ. ಈ ಸಾಲದ ಮೂಲಕ ಮಾಡಿದ ಹೂಡಿಕೆಯೂ ನಷ್ಟವಾದರೆ? ಈ ಹೊತ್ತಿಗಾಗಲೇ ಚಕ್ರವ್ಯೂಹ ಪ್ರವೇಶ ಮಾಡಿರುವ ರೈತ ಹೊರ ಬರುವ ದಾರಿ ಹುಡುಕುತ್ತಲೇ ಒಂದು ದಿನ ಸತ್ತು ಹೋಗುತ್ತಾನೆ. ಆತ್ಮಹತ್ಯೆ ಸುಲಭ ಬಿಡುಗಡೆಯ ಒಂದು ಮಾರ್ಗ ಮಾತ್ರ.

ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ನೀಡುವ ಕೃಷಿ ಸಾಲದ ಸ್ವರೂಪದ ಬಗ್ಗೆ ಪ್ರಧಾನ ಮಂತ್ರಿಯವರಿಂದ ಆರಂಭಿಸಿ ಆತ್ಮಹತ್ಯೆ ತಡೆಗೆ ಪ್ರಧಾನ ಮಂತ್ರಿ ಪ್ಯಾಕೇಜ್‌ ಕಾರ್ಯರೂಪಕ್ಕೆ ತರುವ ಅಧಿಕಾರಿಗಳವರೆಗೆ ಎಲ್ಲರಿಗೂ ಗೊತ್ತಿದೆ. ಬಿಐಎಫ್‌ಆರ್‌ ತರಹವೇ ಕೃಷಿ ಪುನಶ್ಚೇತನಕ್ಕೊಂದು ಸಂಸ್ಥೆ ಇರಬೇಕೆಂದು ಮಾತ್ರ ಯಾರಿಗೂ ಅನ್ನಿಸುವುದಿಲ್ಲ.

ಇದು ಬರೇ ಸಾಲಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರ ಅಲ್ಲ. ಭಾರತದಲ್ಲಿರುವ ಖಾಸಗಿ, ಸರಕಾರೀ ಸ್ವಾಮ್ಯದ ಟೆಲಿಫೋನ್‌ ಕಂಪೆನಿಗಳು ತಮ್ಮ ಸೇವಾದರವನ್ನು ಹೆಚ್ಚಿಸಬೇಕಾದರೆ ಕನಿಷ್ಠ 24 ಗಂಟೆಗಳ ಮೊದಲಾದರೂ ಸೇವೆಯನ್ನು ಪಡೆಯುವರಿಗೆ ಇದರ ವಿವರವನ್ನು ತಿಳಿಸಬೇಕು. ದರ ಹೆಚ್ಚಿಸುವ ಮೊದಲು ಅದನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಮುಂದಿಟ್ಟು ಅದರ ಒಪ್ಪಿಗೆ ಪಡೆಯಬೇಕು.

ರೈತನಿಗೆ ಬೀಜ, ಕೀಟನಾಶಕ ಒದಗಿಸುವ ಹಲವು ದೇಶೀ ಮತ್ತು ವಿದೇಶೀ ಕಂಪೆನಿಗಳು ಭಾರತದಲ್ಲಿವೆ. ಇವುಗಳು ಋತುಮಾನ, ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಬೀಜದ ಬೆಲೆಯನ್ನು ನಿರ್ಧರಿಸುತ್ತವೆ. ಆ ಬೆಲೆ ಕೊಟ್ಟು ರೈತ ಬೀಜ, ಕೀಟನಾಶಕಗಳನ್ನು ಖರೀದಿಸಬೇಕು. ಈ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವುದು ಯಾವ ಆಧಾರದ ಮೇಲೆ ಎಂದು ಯಾರೂ ಕೇಳುವುದಿಲ್ಲ. ಈ ಬೆಲೆಗಳನ್ನು ನಿಯಂತ್ರಿಸುವುದಕ್ಕೂ ಟ್ರಾಯ್ ನಂಥ ಒಂದು ಸಂಸ್ಥೆ ಬೇಡವೇ?

ನಮ್ಮ ನೀತಿ ನಿರೂಪಕರಿಗೆ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳದೇ ಇರುವುದೂ ಸಹಜವಾಗಿದೆ. ಅವರು ಜಗತ್ತಿಗೆ ತೋರಿಸುತ್ತಿರುವ ಅಭಿವೃದ್ಧಿ ದರದಲ್ಲಿ ರೈತನ ಪಾಲೇಲೂ ಇಲ್ಲ. ರೈತನೂ ಅಷ್ಟೇ ಉದ್ದಿಮೆಗಳಂತೆ ತನ್ನ ಸಮಸ್ಯೆಯನ್ನು ಪರಿಹರಿಸಲು ಬಿಐಎಫ್‌ಆರ್‌ ಬರಲೆಂದು ಕಾಯುವುದಿಲ್ಲ. ಅವನದ್ದೇ ಪರಿಹಾರದ ಹಾದಿ ಹುಡುಕಿಕೊಂಡಿದ್ದಾನೆ. ಅದನ್ನು ಆತ್ಮಹತ್ಯೆ ಎಂದು ಕರೆಯಲಾಗುತ್ತಿದೆ.

ಅಫ್ತಾಬ್‌ ಅಲಂ ಅನ್ಸಾರಿ ಬಾಂಗ್ಲಾದೇಶಿಯಾದದ್ದು

ತೊಳೆದು ಶುಭ್ರವಾಗಿರುವ ಟ್ಯಾಕ್ಸಿಗಳು ಎಂದಿನಂತೆ ಆ ಮುಂಜಾನೆಯೂ ಅಜೀಜ್‌ಗೆ ಉತ್ಸಾಹ ತುಂಬಿದವು.N S Madhavan ಅಂಥದ್ದೊಂದು ಟ್ಯಾಕ್ಸಿಯಲ್ಲಿ ಹತ್ತಿ ಕುಳಿತು ಆಫೀಸಿನತ್ತ ಹೊರಟ ಅವನಿಗೆ ಚುನಾವಣೆಯ ಗಡಿಬಿಡಿಯನ್ನು ಮುಗಿಸಿ ಸುಧಾರಿಸಿಕೊಳ್ಳುತ್ತಿರುವ ಮುಂಬೈ ಕಾಣಿಸುವುದರ ಜತೆಗೆ ಟ್ಯಾಕ್ಸಿಯ ಗಾಜಿಗಂಟಿಸಿದ್ದ ಹುಲಿಯ ತಲೆ ಇರುವ ಸ್ಟಿಕರ್‌ ಕಾಣಿಸಿತು.ಹಿಂದಿನ ದಿನ ಪ್ರದೀಪ್‌ ಪಿಳ್ಳೈ ಊಟದ ಹೊತ್ತಿನಲ್ಲಿ `ಸರಕಾರ ಬದಲಾಗಿದೆ’ ಎಂದಿದ್ದ. ಜಯಂತ್‌ ಕರ್ಮಾರ್ಕರ್‌ ಮತ್ತೇನೋ ಹೇಳಿದ್ದ ಆದರೆ ಪ್ರದೀಪ್‌ ಪಿಳ್ಳೆಯ ಮಾತು ಸುಖಾ ಸುಮ್ಮನೆ ನಿಗೂಢವನ್ನು ಧ್ವನಿಸುತ್ತಿದೆ ಎಂದು ಅಜೀಜ್‌ಗೆ ಅನ್ನಿಸಿತ್ತು.

ಟ್ಯಾಕ್ಸಿ ಬಂದು ನರೀಮನ್‌ ಪಾಯಿಂಟ್‌ನ ಬಹುಮಹಡಿ ಕಟ್ಟಡದ ಎದುರು ನಿಲ್ಲುವ ಹೊತ್ತಿಗೆ ಅಜೀಜ್‌ಗೆ ಮುಂಬೈ ಬದಲಾಗಿಲ್ಲ ಅನ್ನಿಸತೊಡಗಿತ್ತು. ಲೋಕಲ್‌ ಟ್ರೈನುಗಳು ಮುಂಬೈಯನ್ನು ಸೀಳಿಕೊಂಡು ಓಡುತ್ತಿವೆ. ಚರ್ಚ್‌ ಗೇಟ್‌ನಲ್ಲಿ ಎಂದಿನಂತೆ ಪ್ರಯಾಣಿಕರ ಗುಂಪು ಇಳಿದು ಆಚೀಚೆ ನೋಡದೆ ಓಡುತ್ತಿದೆ. ಊಟದ ಡಬ್ಬ ಸೈಕಲೇರುತ್ತಿವೆ…

ಆಫೀಸಿಗೆ ಹೋದರೆ ಟೇಬಲ್‌ ಮೇಲಿದ್ದ ಪಾಸ್‌ಪೋರ್ಟ್‌ ಸೈಜಿನ ತನ್ನದೇ ಫೋಟೋಗಳಿದ್ದವು. ಅಲ್ಲೇ ಇದ್ದ ಪಾಸ್‌ಪೋರ್ಟ್‌ ಅರ್ಜಿ ಭರ್ತಿ ಮಾಡತೊಡಗಿದ. ಅವನನ್ನು ಕಂಪೆನಿ ಫ್ರಾಂಕ್‌ಫರ್ಟ್‌ನಲ್ಲಿ ನಡೆಯುತ್ತಿದ್ದ ಕೈಗಾರಿಕಾ ಪ್ರದರ್ಶನಕ್ಕೆ ಕಳುಹಿಸುತ್ತಿತ್ತು. ಅರ್ಜಿಯನ್ನು ಟ್ರಾವೆಲ್‌ ಏಜೆಂಟ್‌ಗೆ ಕಳುಹಿಸುವ ಹೊತ್ತಿಗಾಗಲೇ ಊಟದ ಹೊತ್ತಾಗಿತ್ತು. ಊಟ ಮಾಡುತ್ತಿದ್ದವರ ಧ್ವನಿ ಏರಿತ್ತು. ಯಾವುದೇ ಷೇರಿನ ಬೆಲೆ ಎದ್ದಿದೆ ಇಲ್ಲವೇ ಬಿದ್ದಿದೆ ಎಂದುಕೊಂಡು ಅಲ್ಲಿಗೆ ಹೋದರೆ ಜ್ಯೋತಿ ಪ್ರಸಾದ್‌ ಶ್ರೀವಾಸ್ತವ ಕೇಳಿದ `ನೀನೇ ಹೇಳು ಅಜೀಜ್‌. ಈ ಕರ್ಮಾರ್ಕರ್‌ ಹೊಸ ಸರಕಾರ ವಿದೇಶೀಯರನ್ನೆಲ್ಲಾ ಓಡಿಸುತ್ತೇವೆ ಎಂದದ್ದು ಕ್ರೂರ ಎನ್ನುತ್ತಿದ್ದಾನೆ. ಸರಕಾರ ನಿಲುವಿನಲ್ಲಿ ತಪ್ಪೇನಿದೆ?’

`ತಪ್ಪೇನಿಲ್ಲ, ಎಲ್ಲಾ ದೇಶಗಳೂ ವೀಸಾ ಅವಧಿ ಮುಗಿದ ಮೇಲೆ ವೀದೇಶೀಯರನ್ನು ಹೊರಗೆ ಕಳುಹಿಸುತ್ತವೆ’ ಎಂದ ಅಜೀಜ್‌.

`ಇದೆಲ್ಲಾ ರಾಜಕಾರಣ. ನಿಮಗೆ ಇದೆಲ್ಲಾ ಅರ್ಥವಾಗುವುದಿಲ್ಲ’ ಎಂದು ಕರ್ಮಾಕರ್‌ ಸಿಟ್ಟು ಮಾಡಿಕೊಂಡ.

`ನಮಗೆ ಅರ್ಥವಾಗುವುದು ಸ್ಟಾಕ್‌ ಮಾರ್ಕೆಟ್‌ ಒಂದೇ. ಈ ರಾಜಕೀಯ ಚರ್ಚೆಯಲ್ಲಿ ಸಮಯ ಹಾಳು ಮಾಡದೆ ಸ್ವಲ್ಪ ದುಡ್ಡು ಮಾಡಿಕೊಳ್ಳೋಣ’ ಎಂದ ಪ್ರದೀಪ್‌ ಪಿಳ್ಳೆ. ಉಳಿದವರೂ ಇದಕ್ಕೆ ಧ್ವನಿಗೂಡಿಸುವ ಹೊತ್ತಿಗೆ ಅಜೀಜ್‌ ಕಣ್ಣು ಮುಚ್ಚಿಕೊಂಡು ನಿಟ್ಟುಸಿರಿಟ್ಟ. ಆಗ ಬಂತು ಟ್ರಾವೆಲ್‌ ಏಜೆಂಟ್‌ನ ಕರೆ `ಅಜೀಜ್‌ ನೀವು ರೇಷನ್‌ ಕಾರ್ಡ್‌ನ ಫೋಟೋ ಕಾಪಿ ಕಳುಹಿಸಿ’

`ನನಗೆ ರೇಷನ್‌ ಕಾರ್ಡ್‌ ಇಲ್ಲ. ಒಂದು ಪಾಸ್‌ಪೋರ್ಟ್‌ಗೆ ಏನೆಲ್ಲಾ ನರಕ. ರೇಷನ್‌ ಅಕ್ಕಿಯನ್ನು ನಾನು ತಿನ್ನಬೇಕಾ?’

`ಅದೆಲ್ಲಾ ಬೇಡ. ಅಡ್ರೆಸ್‌ ಪ್ರೂಫ್‌ ಆಗಿ ರೇಷನ್‌ ಕಾರ್ಡ್‌ ಕಾಪಿ ಅಟ್ಯಾಚ್‌ ಮಾಡಬೇಕು.’

`ಸರಿ ನಾನೇನು ಮಾಡಲಿ?’

`ಏನಿಲ್ಲಾ ಸಪ್ಲೈ ಆಫೀಸಿಗೆ ಹೋಗಿ ಒಂದು ಅರ್ಜಿ ಕೊಡಿ. ಕೆಲವು ದಿನಗಳ ನಂತರ ಒಬ್ಬ ಇನ್ಸ್‌ಪೆಕ್ಟರ್‌ ಬರುತ್ತಾನೆ. ಅವನ ರೇಟು ಈಗ ಒಂದು ಗಾಂಧಿ. ಎರಡು ದಿನದಲ್ಲಿ ರೇಷನ್‌ ಕಾರ್ಡ್‌ ಸಿಗುತ್ತೆ’.

ಮುಂದಿನ ಭಾನುವಾರ ಬೆಳಿಗ್ಗೆ ವಿಸಿಆರ್‌ನಲ್ಲಿ ರಾಜ್‌ಕಪೂರ್‌ನ ಹಳೆಯ ಸಿನಿಮಾ ನೋಡುತ್ತಾ ಮುಂಬೈಯ ಪುರಾತತ್ವ ಸಂಶೋಧನೆ ನಡೆಸುತ್ತಿದ್ದಾಗ ಯಾರೋ ಬಾಗಿಲು ಬಡಿದರು. ಅಮ್ಮಿಜಾನ್‌ ಊಟಕ್ಕೆ ಕರೆಯಲು ಬಂದಿದ್ದಾರೆಂದು ಗಡಿಯಾರ ನೋಡಿದರೆ ಗಂಟೆಯಿನ್ನೂ ಹನ್ನೊಂದು. ಅಮ್ಮಿಜಾನ್‌ ಹೇಳಿದರು `ಯಾರೋ ಸಪ್ಲೈ ಡಿಪಾರ್ಟ್‌ಮೆಂಟಿನವರಂತೆ’ ಎಂದರು.

ಇದೇನು ಭಾನುವಾರ ಬಂದಿದ್ದಾರೆಂದು ಹೊರಗೆ ಹೋಗಿ ನೋಡಿದರೆ ಇನ್ಸ್‌ಪೆಕ್ಟರ್‌ ಜತೆಗೆ ಆಡಳಿತ ಪಕ್ಷಕ್ಕೆ ಓಟು ಹಿಡಿಯಲು ಓಡಾಡುತ್ತಿದ್ದ ದಾದಾ ಕೂಡಾ ಇದ್ದಾನೆ.

`ನೀವು ರೇಷನ್‌ ಕಾರ್ಡ್‌ಗೆ ಅಪ್ಲೈ ಮಾಡಿದ್ದಿರಾ?’

`ಹೌದು. ನಿಮ್ಮ ಜತೆ ಇರುವುದು ಯಾರು?’

`ರಾಮೂ ದಾದ. ನಿಮ್ಮ ಮನೆ ಹುಡುಕುವುದಕ್ಕೆ ಅವರನ್ನು ಕರೆದುಕೊಂಡು ಬಂದೆ. ಮೇಡಂ ಗೋಖಲೆಯವರನ್ನು ನಾಳೆ ಬೆಳಿಗ್ಗೆ ಬಂದು ಕಾಣಬೇಕಂತೆ. ಪ್ರಮೀಳಾ ಗೋಖಲೆ…’

ಪ್ರಮೀಳಾ ಗೋಖಲೆಯ ಕಚೇರಿಯ ತುಂಡು ಬಾಗಿಲನ್ನು ತೆರೆದಾಗ ಅವನಿಗೆ ಆಶ್ಚರ್ಯವಾಯಿತು. ಆಕೆಯಿನ್ನೂ ಮೂವತ್ತರ ಆಸುಪಾಸಿನಲ್ಲಿದ್ದಂತೆ ಕಂಡಿತು. ಎರಡು ಜಡೆ ಹಾಕಿಕೊಂಡಿದ್ದ ಆಕೆ ಶಾಲೆಗೆ ಹೋಗುವ ಹುಡುಗಿಯಂತೆ ಅಜೀಜ್‌ ಕಂಡಳು. ಆಕೆಯ ಅರೆತೆರದ ಡ್ರಾವರ್‌ನಲ್ಲಿ ಅರ್ಧ ಓದಿ ಮಗುಚಿಟ್ಟಿದ್ದ `ಜ್ಞಾನೇಶ್ವರಿ’ ಇತ್ತು.

`ಮಿಸ್ಟರ್‌ ಅಜೀಜ್‌?’ ಆಕೆ ಪಿಸುಗುಡುವಷ್ಟು ಸೌಮ್ಯವಾಗಿ ಕೇಳಿದಳು.

`ಹೌದು’

`ತಂದೆಯ ಹೆಸರು?’

`ಬೀರಾನ್‌ ಕುಂಞಿ’

`ತಾಯಿ?’

`ಫಾತಿಮಾ’

`ಅವರು ಬದುಕಿದ್ದಾರಾ?’

`ಇಲ್ಲ. ಕಳೆದ ವರ್ಷವಲ್ಲ ಅದರ ಹಿಂದಿನ ವರ್ಷ ಇಬ್ಬರೂ ಒಂದು ತಿಂಗಳ ಅಂತರದಲ್ಲಿ ತೀರಿಕೊಂಡರು’

`ನಿಮಗೇನಾದರೂ ಭೂಮಿ ಇದೆಯಾ?’

`ಇಲ್ಲ. ನನ್ನನ್ನು ಐಐಟಿಯಲ್ಲಿ ಓದಿಸುವುದಕ್ಕೆ ಮತ್ತೆ ನನ್ನ ತಮ್ಮನಿಗೆ ಅಬೂದಾಬಿಯ ವೀಸಾ ಕೊಡಿಸುವುದಕ್ಕೆ ಆಸ್ತಿಯನ್ನೆಲ್ಲಾ ಮಾರಿದರು’

`ಹಾಗಿದ್ದರೆ ನಿಮ್ಮಲ್ಲಿ ಹಳೆಯ ಭೂಕಂದಾಯ ಕಟ್ಟಿದ ರಸೀದಿಗಳಿರಬೇಕು’

`ಇಲ್ಲ’

`ಹಾಗಾದರೆ ನಿಮಗೆ ಭಾರತದಲ್ಲಿ ಏನಾದರೂ ಆಸ್ತಿಯಿತ್ತು ಎನ್ನುವುದಕ್ಕೆ ಆಧಾರಗಳಿಲ್ಲ’.

`ಇಲ್ಲ…ನನ್ನ ರೇಷನ್‌ ಕಾರ್ಡ್‌?’

`ಈ ತನಿಖೆ ಅದಕ್ಕೇ. ಮೊದಲು ನೀವು ಭಾರತೀಯ ಎಂದು ಸಾಬೀತು ಮಾಡಬೇಕು. ಆಮೇಲೆ ರೇಷನ್‌ ಕಾರ್ಡ್‌ನ ಬಗ್ಗೆ ಯೋಚಿಸಬಹುದು.’

`ಒಳ್ಳೆ ಆಟ. ನಿಮ್ಮನ್ನು ನಡು ರಾತ್ರಿಯಲ್ಲಿ ಎಬ್ಪಿಸಿ ಭಾರತೀಯ ಪೌರಳೆಂದು ಸಾಬೀತು ಮಾಡು ಅಂದರೆ ನೀವೇನು ಮಾಡುತ್ತೀರಿ?’ ಅಜೀಜ್‌ನ ಧ್ವನಿ ಏರಿತು.

`ನಾನು ನನ್ನ ಹೆಸರು ಹೇಳುತ್ತೇನೆ. ಅಷ್ಟೇ. ನನ್ನ ಹೆಸರೇ ನನ್ನ ಇತಿಹಾಸ ಮತ್ತು ಭೂಗೋಳ. ಪ್ರಮೀಳಾ ಗೋಖಲೆ, ಮಹಾರಾಷ್ಟ್ರಿಯನ್‌, ಹಿಂದೂ, ಚಿತ್ಪಾವನ್‌. ಅರ್ಥವಾಯಿತಾ?’ ಇಷ್ಟೆಲ್ಲಾ ಹೇಳಿದರೂ ಆಕೆಯ ಧ್ವನಿ ಪಿಸುಗುಡುವ ಪ್ರೇಮಿಯಂತೆ ಇತ್ತು. ಧ್ವನಿಯ ಈ ಸೌಮ್ಯತೆಯೇ ಅಜೀಜ್‌ಗೆ ಹೆದರಿಕೆ ಹುಟ್ಟಿಸಿತು.

`ನಾನೇನು ಮಾಡಲಿ ಈಗ’

`ಈಗ ಹೋಗಿ ಮತ್ತೆ ಕರೆದಾಗ ಬನ್ನಿ’.

ಎರಡು ದಿನಗಳ ನಂತರ ಅಜೀಜ್‌ ಪ್ರಮೀಳಾ ಗೋಖಲೆಯನ್ನು ಭೇಟಿಯಾದಾಗ ಆ ಅರೆ ತೆರೆದ ಡ್ರಾವರ್‌ನಲ್ಲಿ ಮಗುಚಿಟ್ಟಿದ್ದ ಜ್ಞಾನೇಶ್ವರಿ ಮತ್ತಷ್ಟು ಪುಟಗಳು ಓದಿ ಮುಗಿದಂತೆ ಮತ್ತೊಂದು ಕಡೆಗೆ ಬಂದಿದ್ದವು. ಮತ್ತೆ ಪ್ರಶ್ನೆಗಳು.

`ನೀವು ಹುಟ್ಟಿದ್ದೆಲ್ಲಿ?’

`ಕೇರಳದಲ್ಲಿ’

`ಕೇರಳದಲ್ಲಿ ಎಲ್ಲಿ’

`ಮಲಪ್ಪುರಂ ಜಿಲ್ಲೆಯಲ್ಲಿ’

`ಯಾವ ಹಳ್ಳಿ?’

`ಪಾಂಗ್‌’

`ಪಾಂಗ್‌. ಪಾಂಗ್‌ ಅಂದರೇನು?’ ಮೊದಲ ಬಾರಿಗೆ ಆಕೆ ಧ್ವನಿ ಏರಿತು?’

`ಪಾಂಗ್‌. ಅದು ನಮ್ಮ ಊರಿನ ಹೆಸರು’

`ಇದೆಂಥ ಹೆಸರು. ಅದೆಲ್ಲಾ ಇಲ್ಲ. ಅಂಥದ್ದೊಂದು ಹೆಸರಿನ ಹಳ್ಳಿ ಭಾರತದಲ್ಲಿರಲು ಸಾಧ್ಯವಿಲ್ಲ.’

`ಮೇಡಂ, ನಾನ್ಯಾಕೆ ಸುಳ್ಳು ಹೇಳಬೇಕು?’

`ಅದೆಲ್ಲಾ ನನಗೆ ಗೊತ್ತಿಲ್ಲ. ಮಲಯಾಳಂನಲ್ಲಿ ಪಾಂಗ್‌ ಎಂಬುದರ ಅರ್ಥವೇನು?’

`ನನಗೆ ಗೊತ್ತಿಲ್ಲ, ಅದಕ್ಕೇನಾದಾರೂ ಅರ್ಥವಿರಬಹುದೆಂದೇ…’

`ಅರ್ಥವಿಲ್ಲದ ಶಬ್ದವೇ? ಶಬ್ದಗಳಿಗೆ ಅವಮಾನ ಮಾಡಬೇಡಿ. ಈಗ ಸ್ಪಷ್ಟವಾಯಿತಲ್ಲ `ಪಾಂಗ್‌’ ಎಂಬುದೊಂದಿಲ್ಲ ಅಂತ’

`ಪಾಂಗ್‌ ಇದೆ. ನೀವು ಮಲಪ್ಪುರಂ ಕಲೆಕ್ಟರ್‌ಗೆ ಒಂದು ಟೆಲಿಗ್ರಾಂ ಮಾಡಿ ಖಚಿತಪಡಿಸಿಕೊಳ್ಳಬಹುದು’

`ಭಾರತದ ಭೂಪಟದಲ್ಲಿ ಪಾಂಗ್‌ ಅನ್ನು ತೋರಿಸಬಹುದೇ?’

`ಸಾಧ್ಯವಿಲ್ಲ’

`ಕೇರಳದ ಭೂಪಟದಲ್ಲಿ..?’

`ನನಗೆ ಗೊತ್ತಿಲ್ಲ…’

`ಹಾಗಿದ್ದರೆ ಭಾರತದಲ್ಲಿ ಅಂಥದ್ದೊಂದು ಸ್ಥಳವಿಲ್ಲ. ನೀವಿನ್ನು ಹೋಗಬಹುದು’

ಅಜೀಜ್‌ ಕೆಲದಿನಗಳು ಆಫೀಸಿಗೆ ಹೋಗಲಿಲ್ಲ. ಒಂದು ಸಂಜೆ ರಾಮೂ ದಾದಾನ ಜತೆಗೆ ಆ ಇನ್ಸ್‌ಪೆಕ್ಟರ್‌ ಬಂದು ತಮ್ಮ ಜತೆ ಆಫೀಸಿಗೆ ಬರಬೇಕೆಂದರು. ಅಜೀಜ್‌ ಹೋದ. ಅರೆತೆರೆದ ಡ್ರಾವರ್‌ನಲ್ಲಿ ಮಗುಚಿಟ್ಟಿದ್ದ ಜ್ಞಾನೇಶ್ವರಿಯ ಪುಟಗಳೆಲ್ಲಾ ಓದಿ ಮುಗಿದಂತೆ ಮತ್ತೊಂದು ಬದಿಗೆ ಸರಿದಿದ್ದವು.

`1970ರಲ್ಲಿ ನೀವು ಭಾರತದಲ್ಲಿದ್ದಿರಾ?’ ಅದೇ ಪಿಸುಗುಡುವ ಧ್ವನಿಯಲ್ಲಿ ಪ್ರಶ್ನೆಗಳು ಆರಂಭಗೊಂಡವು.
`ಮೇಡಂ, ಆಗ ನಾನಿನ್ನೂ ಹುಟ್ಟಿರಲಿಲ್ಲ’

`71ರಲ್ಲಿ..?’

`ಆ ವರ್ಷ ನಾನು ಹುಟ್ಟಿದೆ’

`ಅಂದರೆ 1970ಕ್ಕೆ ಮೊದಲು ನೀವು ಭಾರತದಲ್ಲಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೀರಿ’

`ಇದೆಂಥ ಅಸಂಬದ್ಧ. ಆಗ ನಾನಿನ್ನೂ ಹುಟ್ಟಿರಲಿಲ್ಲ’

`ಹಾಗಿದ್ದರೆ ಬಾಂಗ್ಲಾದೇಶದಿಂದ ನುಸುಳುವಿಕೆ ಆರಂಭವಾಗುವ ಮೊದಲು ನೀವು ಭಾರತದಲ್ಲಿರಲಿಲ್ಲ ಎಂದು ದಾಖಲಿಸಲೇ?’

`ಆಗ ನಾನಿನ್ನು ಹುಟ್ಟಿಯೇ ಇರಲಿಲ್ಲ ಎಂದು ಎಷ್ಟಾಸಾರಿ ಹೇಳಬೇಕು?’

`ಹೌದು ಅಥವಾ ಇಲ್ಲಗಳಲ್ಲಿ ಉತ್ತರ ಕೊಡಿ’ ಆಕೆಯ ಧ್ವನಿ ಸ್ವಲ್ಪ ಏರಿತು. ಇದು ಅಜೀಜ್‌ಗೆ ಸಿಡಿಲಿನಂತೆ ಕೇಳಿಸಿತು.

`ಹೇಳಿ, ಬಾಂಗ್ಲಾದಿಂದ ಅಕ್ರಮ ವಲಸೆ ಆರಂಭವಾಗುವ ಮೊದಲು ಅಂದರೆ 1970ಕ್ಕೂ ಮೊದಲು ನೀವು ಭಾರತದಲ್ಲಿ ಇದ್ದಿರೇ?

`ಇಲ್ಲ’

`ಬಾಂಗ್ಲಾದೇಶದಿಂದ ಅಕ್ರಮ ವಲಸೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದರೆ 71ರ ನಂತರ ಇದ್ದಿರೇ?’

`ಹೌದು’

ಕೆಲ ಕ್ಷಣಗಳ ಮೌನದ ನಂತರ ಬೇಸರನವನ್ನು ಅದುಮಿಟ್ಟು ಅಜೀಜ್‌ ಕೇಳಿದ `ನನ್ನ ರೇಷನ್‌ ಕಾರ್ಡ್‌’
ಮುಗುಳ್ಳನಕ್ಕು ಆಕೆ ಹೇಳಿದಳು `ನನ್ನ ವರದಿಯನ್ನು ಮುಗಿಸಿದ್ದೇನೆ. ನಾಳೆಯೇ ಅದನ್ನು ಕಳುಹಿಸಿ ಕೊಡುತ್ತೇನೆ’

`ಅಂದರೆ ನಾನೊಬ್ಬ ಅಕ್ರಮ ವಲಸಿಗ ಎನ್ನುತ್ತಿರಾ’

`ಅದನ್ನು ನೀವೇ ಒಪ್ಪಿಕೊಂಡಿದ್ದೀರಲ್ಲಾ?’

***

ಅಫ್ತಾಬ್‌ ಆಲಂ ಅನ್ಸಾರಿ ಎಂಬ ಕೊಲ್ಕತ್ತಾದ ಸಿಇಎಸ್‌ಸಿಯ ನೌಕರ, ಕಾಶಿಪುರ್‌ ನಿವಾಸಿ 2007ರ ಡಿಸೆಂಬರ್‌ 27ರಂದು ತನ್ನ ಗೆಳೆಯನ ಜತೆ ಶ್ಯಾಂಬಜಾರ್‌ಗೆ ಹೋಗಿ ಮನೆಗೆ ಬೇಕಿದ್ದ ಕೆಲ ವಸ್ತುಗಳು ಖರೀದಿಸಿ ಹಿಂದಿರುಗುತ್ತಿದ್ದಾಗ ಅವನ ಮೊಬೈಲ್‌ ಫೋನ್‌ಗೆ ಕರೆಯೊಂದು ಬಂತು.

`ಎಲ್ಲಿದ್ದೀರಿ’

`ಬಸ್‌ನಲ್ಲಿದ್ದೇನೆ. ಚಿರಿಯಾಮೋರ್‌ನಲ್ಲಿ ಇಳಿಯುತ್ತೇನೆ’.

ಅರ್ಧ ಗಂಟೆ ಕಳೆದು ಅಲ್ಲಿ ಇಳಿದು ರಸ್ತೆ ದಾಟುವಾಗ ಆರು ಮಂದಿ ಯೂನಿಫಾರ್ಮ್‌ ಧರಿಸದ ಪೊಲೀಸರು ಬಂದು ಎಳೆದುಕೊಂಡು ಹೋಗಿ ಕಾರಿಗೆ ಹತ್ತಿಸಿದರು. ಅವರಂದರು `ನೀನು ಮುಖ್ತರ್‌ ಅಲಿಯಾಸ್‌ ರಾಜು ಅಲಿಯಾಸ್‌ ಬಾಂಗ್ಲಾದೇಶಿ’. ಅವನಲ್ಲದ ಅಫ್ತಾಬ್‌ ಅದನ್ನು ನಿರಾಕರಿಸಿದ. ನಿರಾಕರಿಸಿದಷ್ಟೂ ಪೊಲೀಸರಿಗೆ ಇವನೇ `ಮುಖ್ತರ್‌ ಅಲಿಯಾಸ್‌ ರಾಜು ಅಲಿಯಾಸ್‌ ಬಾಂಗ್ಲಾದೇಶಿ’ ಅನ್ನಿಸತೊಡಗಿತು.

ಮರುದಿನ ಈತನನ್ನು ಅಲಿಪೂರ್‌ ಸಬ್‌ ಡಿವಿಷನಲ್‌ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟರ ಎದುರು ಹಾಜರು ಪಡಿಸಿ ಅವನನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಲಕ್ನೊದಲ್ಲಿರುವ ವಿಶೇಷ ತನಿಖಾ ದಳದ ಲಾಕಪ್‌ನಲ್ಲಿ ಈತನನ್ನು ವಿಚಾರಣೆಗೊಳಪಡಿಸಲಾಯಿತು. ಆ ವಿಚಾರಣೆ ಹೀಗಿತ್ತು.

`ನಮ್ಮ ಕಣ್ಣನ್ನೇ ನೋಡು’

`…’

`ನೀನು ಮುಖ್ತರ್‌ ಅಲಿಯಾಸ್‌ ರಾಜು ಅಲಿಯಾಸ್‌ ಬಾಂಗ್ಲೇದೇಶಿ. ತಲೆತಪ್ಪಿಸಿಕೊಂಡ ಭಯೋತ್ಪಾದಕ’

`ನಾನು ಕೊಲ್ಕತ್ತಾ ಸಿಇಎಸ್‌ಸಿಯ ಸಾಮಾನ್ಯ ನೌಕರ.’

ಅಧಿಕಾರಿಯೊಬ್ಬ ಉತ್ತರ ಪ್ರದೇಶ ಸರಣಿ ಸ್ಫೋಟಗಳ ಪಟ್ಟಿ ಓದಿದ. ಅದಕ್ಕೆಲ್ಲಾ ನೀನೇ ಕಾರಣ ಎಂದ. ಅಫ್ತಾಬ್‌ಗೆ ಏನು ಕೇಳುತ್ತಿದ್ದೇನೆಂದೇ ಅರ್ಥವಾಗಲಿಲ್ಲ. ಗೊಂದಲದಲ್ಲಿರುವಾಗಲೇ ಪೆಟ್ಟು ಬೀಳ ತೊಡಗಿದವು. ಆತ ಕುರ್ಚಿಯಲ್ಲೇ ಗಟ್ಟಿಯಾಗಿ ಕುಳಿತುಬಿಟ್ಟ.

ಅಧಿಕಾರಿಯೊಬ್ಬ ಕಿರುಚಿದ `ಎಲ್ಲಾ ಭಯೋತ್ಪಾದಕರೂ ಅಷ್ಟೇ. ತಮಗೇನೂ ಗೊತ್ತಿಲ್ಲ ಅನ್ನುತ್ತಾರೆ…’

`ನಾನು ಭಯೋತ್ಪಾದಕನಲ್ಲ…’ ಅಫ್ತಾಬ್‌ ಮತ್ತೆ ಹೇಳಿದ.

ಅಧಿಕಾರಿಗೆ ಸಿಟ್ಟು ಬಂತು ಬೆಲ್ಟ್‌ ಬಿಚ್ಚಿ ಭಾರಿಸತೊಡಗಿದ.

ಅಫ್ತಾಬ್‌ ಸಿಇಎಸ್‌ಸಿಯ ಕೆಲಸಗಾರ ಎಂದು ಕೊಲ್ಕತ್ತಾದ ಪತ್ರಿಕೆಗಳಲ್ಲೆಲ್ಲಾ ಸುದ್ದಿಯಾಗಿ ತನಿಖಾಧಿಕಾರಿ ಬದಲಾಗುವ ಹೊತ್ತಿಗೆ ಒಂದು ವಾರ ಕಳೆದಿತ್ತು. ಹೊಸ ತನಿಖಾಧಿಕಾರಿ ಅಫ್ತಾಬ್‌ನನ್ನು ಹೆಚ್ಚು ಪ್ರಶ್ನೆಗಳೇನ್ನೇನೂ ಕೇಳಲಿಲ್ಲ. ಕೇಳಿದ್ದು ಒಂದು ಮುಖ್ಯ ಪ್ರಶ್ನೆ `ನೀನು ಆಗಾಗ ಗೋರಕ್‌ಪುರಕ್ಕೆ ಯಾಕೆ ಹೋಗುತ್ತೀ?’

`ನಾನು ಮದುವೆಯಾದದ್ದು ಗೋರಕ್‌ಪುರದ ಹುಡುಗಿಯನ್ನು. ನಾನು ಅಲ್ಲೇ ಹತ್ತಿರದ ಗೋಲಾಬಜಾರ್‌ನವನು’

`ನಿನ್ನ ಮೊಬೈಲ್‌ನಿಂದ ಸ್ಫೋಟದ ಶಂಕಿತ ಆರೋಪಿಯೊಬ್ಬ ಫೋನ್‌ ಮಾಡಿದ್ದು ಹೇಗೆ?’

`ಮಾರ್ಚ್‌ ಆರರಂದು ಅಂದರೆ ನನ್ನ ಮದುವೆಯ ಹಿಂದಿನ ದಿನ ಕೊಲ್ಕತ್ತಾದಿಂದ ಗೋರಕ್‌ಪುರಕ್ಕೆ ಹೋಗುವಾಗ ಅಪರಿಚಿತನೊಬ್ಬ ನನ್ನ ಹತ್ತಿರ ತುರ್ತಾಗಿ ಗೋರಕ್‌ಪುರಕ್ಕೊಂದು ಫೋನ್‌ ಮಾಡಬೇಕೆಂದು ಫೋನ್‌ ಕೇಳಿ ಪಡೆದಿದ್ದ’

***

ಅಜೀಜ್‌ನ ಕಥೆ ಬರೆದದ್ದು ಖ್ಯಾತ ಮಲೆಯಾಳಂ ಸಣ್ಣ ಕತೆಗಾರ ಎನ್‌.ಎಸ್‌.ಮಾಧವನ್‌. ಅಫ್ತಾಬ್‌ ಆಲಂ ಅನ್ಸಾರಿಯ ಕಥೆ ಬರೆದದ್ದು ಪತ್ರಿಕೆಗಳು. ಅವನ ಬಗ್ಗೆ ಕೆಲವು ಪತ್ರಕರ್ತರು ಆಸಕ್ತಿ ವಹಿಸದೇ ಹೋಗಿದ್ದರೆ ಅವನೂ ಅಜೀಜ್‌ನಂತೆಯೇ ಆಗುತ್ತಿದ್ದನೇನೋ. ಮೊನ್ನೆ ಅಂದರೆ ಜನವರಿ 16ರಂದು ಆತನ ಬಿಡುಗಡೆಯಾಯಿತು.