ನಲ್ಲೂರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಂಚಿನಲ್ಲಿರುವ ಒಂದು ಗ್ರಾಮ. ಹಾಸನ ಮತ್ತು ಸಕಲೇಶಪುರ ನಗರಗಳೆರಡರಿಂದಲೂ ಸಮಾನ ದೂರದಲ್ಲಿರುವ ಅಷ್ಟೇನೂ ಒಳ್ಳೆಯ ರಸ್ತೆಯಿಲ್ಲದ ಮಲೆನಾಡಿನ ಈ ಹಳ್ಳಿಗೆ ಹತ್ತು ವರ್ಷಗಳ ಹಿಂದೆ ಇದ್ದದ್ದು ಒಂದೇ ಬಸ್ಸು. ರಾಷ್ಟ್ರೀಯ ಹೆದ್ದಾರಿಯಿಂದ ಆರೇ ಕಿಲೋಮೀಟರ್‌ಗಳಷ್ಟು ದೂರವಿದ್ದರೂ ಬಸ್ಸು ಮಾತ್ರ ಬೆಳಿಗ್ಗೆ ಮತ್ತು ಸಂಜೆ ಬರುತ್ತಿತ್ತು. ಇತ್ತೀಚೆಗೆ ಬಸ್ಸುಗಳ ಸಂಖ್ಯೆ ನಾಲ್ಕಾಗಿದೆ. ಬೆಳಿಗ್ಗೆ ಸಕಲೇಶಪುರದಿಂದ ಬರುವ ಬಸ್ಸು ಪೂರ್ಣ ಖಾಲಿಯಾಗಿಯೇ ನಲ್ಲೂರಿಗೆ ಬರುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ತಲುಪುವ ಆರು ಕಿಲೋಮೀಟರ್‌ಗಳ ಒಳಗೆ ಬಸ್ಸು ತುಂಬಿಕೊಳ್ಳುತ್ತದೆ. ಇದಕ್ಕೆ ಹತ್ತುವವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳದ್ದೇ ಸಿಂಹ ಪಾಲು. ಉಳಿದವರು ಆಸ್ಪತ್ರೆಗೆ ಹೋಗುವವರು, ಸಂತೆಗೆ ಹೋಗುವವರು ಹೀಗೆ ಆಯಾ ದಿನದ ವಿಶೇಷಗಳಿಗೆ ಪ್ರಯಾಣಿಸುವವರು. ಈ ಸಂಖ್ಯೆ ಕೆಲವೊಮ್ಮೆ ಬಸ್ಸಿನ ಮೇಲೆ ಹತ್ತಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ.