ಅಪ್ಪ, ನಕ್ಷತ್ರ ಮತ್ತು ಜಿ.ಟಿ.ಎನ್

 

ಜಿ. ಟಿ. ನಾರಾಯಣರಾವ್
ಜಿ.ಟಿ. ನಾರಾಯಣರಾವ್

ನಾವಿನ್ನೂ ಚಿಕ್ಕವರು. ನಾನು ಐದನೇ ಕ್ಲಾಸಿನಲ್ಲಿದ್ದೆ ಎನಿಸುತ್ತದೆ. ನಮ್ಮ ಅಪ್ಪನಿಗೆ ಒಂದು ಕಿರಾಣಿ ಅಂಗಡಿಯಿತ್ತು. ಪ್ರತೀ ಮಂಗಳವಾರ ನಸುಕಿಗೇ ಎದ್ದು ಅಪ್ಪ ಸೈಕಲ್‌ ಹತ್ತಿ ಹಾಸನದ ಸಂತೆಗೆ ಹೊರಡುತ್ತಿದ್ದರು. ವಾರವಿಡೀ ಅಂಗಡಿಗೆ ಬೇಕಾದ ಸರಕನ್ನೆಲ್ಲಾ ಆ ದಿನ ಸಂತೆಯಲ್ಲಿ ಖರೀದಿಸಿ ಗಾಡಿ ರಾಜಣ್ಣನ ಗಾಡಿಗೆ ತುಂಬಿಸಿ ರಾತ್ರಿ ಎಂಟು ಗಂಟೆಗೆ ಗಾಡಿಯ ಜತೆಗೇ ಮನೆಗೆ ಹಿಂದಿರುಗುತ್ತಿದ್ದರು. ಮಂಗಳವಾರವಿಡೀ ಅಪ್ಪ ಮನೆಯಲ್ಲಿ ಇರುತ್ತಿರಲಿಲ್ಲವಾದ್ದರಿಂದ ಶಾಲೆಯಿಂದ ಹಿಂದಿರುಗಿದ ತಕ್ಷಣ ನಾನೂ ನನ್ನ ತಮ್ಮ ಮನೆಯಲ್ಲಿರುವ ರೇಡಿಯೋ, ಗಡಿಯಾರ, ಮೂಲೆಯಲ್ಲಿ ಮುಸುಕು ಹೊದ್ದು ತಣ್ಣಗೆ ಕುಳಿತಿರುತ್ತಿದ್ದ ನೀರೆತ್ತುವ ಡೀಸೆಲ್‌ ಪಂಪ್‌ಗಳ `ತಂತ್ರಜ್ಞಾನ'ವನ್ನು ಅರಿಯಲು ಹರಸಾಹಸ ಮಾಡುತ್ತಿದ್ದೆವು. ಅಮ್ಮನ ಕಣ್ಣು ತಪ್ಪಿಸಿ ಮಾಡುವ ಈ ಕೆಲಸಕ್ಕಾಗಿ ನಾವು ಬಳಸುತ್ತಿದ್ದ ತಂತ್ರಗಳದ್ದೇ ಒಂದು ದೊಡ್ಡ ಕಥೆಯಾಗಿಬಿಡುತ್ತದೆ.

ಮಂಗಳವಾರ ಸಂತೆ ನಮಗೆ ನಿಜಕ್ಕೂ ಖುಷಿ ಕೊಡುತ್ತಿದ್ದುದು ಬೇಸಿಗೆಯ ರಜೆಗಳಲ್ಲಿ. ಅಪ್ಪನಿಗೆ ಮೂಡ್‌ ಬಂದರೆ ನಮ್ಮಿಬ್ಬರಲ್ಲಿ ಒಬ್ಬನನ್ನು ಬೆಳಿಗ್ಗೆಯೇ ಎಬ್ಬಿಸಿ ಸೈಕಲ್‌ ಹತ್ತಿಸಿಕೊಂಡು ಹಾಸಕ್ಕೆ ಕರೆದೊಯ್ಯುತ್ತಿದ್ದರು. ನಮ್ಮೂರು ನಲ್ಲೂರಿನಿಂದ ಸುಮಾರು ಆರು ಕಿಲೋಮೀಟರ್‌ ದೂರದಲ್ಲಿರುವ ಪಾಳ್ಯ (ಟಿವಿ-9ನ ನ್ಯೂಸ್‌ ಆಂಕರ್‌ ಹಮೀದ್‌ ಪಾಳ್ಯ ಇದೇ ಊರಿನವರು) ಎಂಬಲ್ಲಿಯವರೆಗೂ ನಮ್ಮ ಸೈಕಲ್‌ ಪ್ರಯಾಣ. ಅಲ್ಲಿದ್ದ ನನ್ನಪ್ಪನ ಬಾವ ಅಥವಾ ನನ್ನ ಸೋದರ ಮಾವನ ಮನೆಯಲ್ಲಿ ಸೈಕಲ್‌ ನಿಲ್ಲಿಸಿ ಬಸ್‌ ಹತ್ತಿ ಹಾಸನಕ್ಕೆ ಹೋಗುತ್ತಿದ್ದೆವು. ನಸುಕಿನ ನಾಲ್ಕುಗಂಟೆಗೇ ಐದು ಕೆರೆ ಏರಿಗಳು, ಐದಾರು ಚಡವುಗಳಿದ್ದ ದಾರಿಯಲ್ಲಿ ನಮ್ಮ ಪ್ರಯಾಣ. ಚಡವು ಬಂದಾಗ ಅಪ್ಪ ನನ್ನನ್ನು ಇಳಿಸಿ ಸೈಕಲ್‌ ನೂಕಿಕೊಂಡೇ ಅದನ್ನು ಹತ್ತಿಸುತ್ತಿದ್ದರು. ಮಲೆನಾಡಿನಲ್ಲಿ ಸೈಕಲ್‌ ಬಳಸುವವರಿಗೆ ಇದೆಲ್ಲಾ ಮಾಮೂಲು. ಹೀಗೆ ನಡೆಯುತ್ತಾ ಸಾಗುತ್ತಿದ್ದಾಗ ಅಪ್ಪ ನಮ್ಮ ಮೂರನೇ ಕ್ಲಾಸಿನ ಪುಸ್ತಕದಲ್ಲೇ ಇದ್ದ `ಸಪ್ತರ್ಷಿ ಮಂಡಲ'ವನ್ನು ಆಕಾಶದಲ್ಲಿ ತೋರಿಸಿದ್ದರು. ನಾನು ಪುಸ್ತಕದಲ್ಲಿರುವ ಸಪ್ತರ್ಷಿ ಮಂಡಲದ ಚಿತ್ರದ ಗಾತ್ರದಲ್ಲೇ ಆಕಾಶದಲ್ಲಿ ಕಾಣಿಸುತ್ತಿದ್ದ ಹಲವು ನಕ್ಷತ್ರ ಪುಂಜಗಳನ್ನು ನೋಡಿ ಸಪ್ತರ್ಷಿ ಮಂಡಲ ಎಂದುಕೊಂಡಿದ್ದೆ. ಅಪ್ಪ ತೋರಿಸಿದ ಸಪ್ತರ್ಷಿ ಮಂಡಲದ ಏಳೂ ನಕ್ಷತ್ರಗಳು ನಾನು ಅಂದುಕೊಂಡಿದ್ದಕ್ಕಿಂತ ದೂರದಲ್ಲಿದ್ದವು. ಹಾಗೆಯೇ ಶುಕ್ರ ಗ್ರಹ ಅಥವಾ ಬೆಳ್ಳಿಯನ್ನು ಕಂಡದ್ದೇ ಇಂಥದ್ದೊಂದು ಮಂಗಳವಾರ ನಸುಕಿನಲ್ಲಿ.

ಪುಸ್ತಕದಲ್ಲಿ ಹೇಳಿದಂತೆಯೇ ಧ್ರುವ ನಕ್ಷತ್ರವನ್ನೂ ಅಪ್ಪ ಗುರುತಿಸಿ ತೋರಿಸಿದಾಗ ನಾವಿಬ್ಬರೂ ದಾನಿಹಳ್ಳಿ ಕೆರೆ ಏರಿ ದಾಟಿದ ನಂತರದ ಚಡವು ಹತ್ತುತ್ತಿದ್ದೆವು. ಹೀಗೆ ಅವರು ಹಾದಿಯ ಆಯಾಸ ಕಳೆಯಲೋ ಅಥವಾ ಮಗ ತಿಳಿದುಕೊಳ್ಳಲಿ ಎಂಬ ಕಾರಣಕ್ಕಾಗಿಯೋ ಅವರು ಹೇಳಿದ ವಿಷಯಗಳು ನನ್ನನ್ನು ಸ್ವಲ್ಪ ಹೆಚ್ಚೇ ಕಾಡಿದವು. ಈ ವಿವರಗಳನ್ನೆಲ್ಲಾ ಅವರು ನನ್ನ ತಮ್ಮನಿಗೂ ಹೇಳಿದ್ದರಿಂದ ರಾತ್ರಿಯಾಯಿತೆಂದರೆ ನಕ್ಷತ್ರಗಳ ಹೆಸರು ಹೇಳಲು ಅಪ್ಪನನ್ನು ಪೀಡಿಸುತ್ತಿದ್ದೆವು. ಅವರು ನಮ್ಮ ಪಠ್ಯ ಪುಸ್ತಕಗಳಲ್ಲಿದ್ದುದನ್ನು ಕಷ್ಟಪಟ್ಟು ಗುರುತಿಸಿ ಮುಂದೆ ತನಗೂ ಅಷ್ಟಾಗಿ ಗೊತ್ತಿಲ್ಲ. ಆದರೆ ಅದಕ್ಕೊಂದು ಪರಿಹಾರ ಹುಡುಕೋಣ ಎಂದು ಭರವಸೆ ಕೊಟ್ಟಿದ್ದರು.

ಒಂದು ಮಂಗಳವಾರ ರಾತ್ರಿ ಸಂತೆಯಿಂದ ಹಿಂದಿರುಗಿದಾಗ ಅವರ ಕೈಯಲ್ಲೊಂದು ಪುಸ್ತಕವಿತ್ತು. ನನ್ನ ಈಗಿನ ಜ್ಞಾನವನ್ನು ಬಳಸಿ ಹೇಳುವುದಾದರೆ ಅದು ಕ್ರೌನ್‌ 1/4 ಗಾತ್ರದ ಪುಸ್ತಕ ಅನ್ನಿಸುತ್ತದೆ. ಅದರ ಹೆಸರು `ನೋಡೋಣ ಬಾರಾ ನಕ್ಷತ್ರ'. ಈ ಪುಸ್ತಕ ಅಪ್ಪನ ಖಗೋಳ ಜ್ಞಾನವನ್ನು ಹೆಚ್ಚಿಸಿದಂತೆಯೇ ನಮ್ಮ ಆಕಾಶ ಜ್ಞಾನವನ್ನೂ ಹೆಚ್ಚಿಸಿತು. ಇದನ್ನು ಬರೆದವರು ಜಿ.ಟಿ.ನಾರಾಯಣರಾವ್‌.

ಅಪ್ಪನ ಕನ್ನಡ ಜ್ಞಾನ ಅಷ್ಟಕ್ಕಷ್ಟೇ. ಕಷ್ಟಪಟ್ಟು ಕನ್ನಡ ಪುಸ್ತಕಗಳನ್ನು ಓದುತ್ತಿದ್ದರು. ನಾವು ಕನ್ನಡವನ್ನು ಸುಲಲಿತವಾಗಿ ಓದಲಾರಂಭಿಸಿದ ದಿನಗಳಿಂದಲೇ ಅವರು ಕನ್ನಡ ಪುಸ್ತಕ, ಪತ್ರಿಕೆಗಳನ್ನೆಲ್ಲಾ ನಮ್ಮಿಂದಲೇ ಓದಿಸುತ್ತಿದ್ದರು. ಅಪ್ಪ ಗಾರೆ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಖರೀದಿಸಿದ್ದ ಒಂದು ದಿಕ್ಸೂಚಿ ಅಥವಾ ಕಂಪಾಸ್‌ ಮನೆಯಲ್ಲಿತ್ತು. ಗಡಿಯಾರದಂತೆ ಕಾಣಿಸುತ್ತಿದ್ದ ಅದೇನು ಎಂಬುದು ನಮಗಾರಿಗೂ ಗೊತ್ತಿರಲಿಲ್ಲ. ಅವರಿವರು ಮನೆ ಆಯ ನಿರ್ದರಿಸಲು ಕರೆದರೆ ಅದು ಹಾಗೂ ನಾವೀಗ Set square ಎಂದು ಕರೆಯುವ ಮೂಲೆ ಮಟ್ಟ ಮತ್ತು ಒಂದು ಮೆಟಲ್‌ ಟೇಪ್‌ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಅಲ್ಲಿ ಏನು ಮಾಡುತ್ತಿದ್ದರು ಎಂಬುದು ನಮಗೆ ಗೊತ್ತಿರಲಿಲ್ಲವಾದ್ದರಿಂದ ಈ ಕಂಪಾಸ್‌ ಹೇಗೆ ಬಳಕೆಯಾಗುತ್ತಿತ್ತು ಎಂದೂ ತಿಳಿದಿರಲಿಲ್ಲ.

`ನೋಡೋಣು ಬಾರಾ ನಕ್ಷತ್ರ' ಬಂದ ಮೇಲೆ ಕತ್ತಲಲ್ಲಿ ಟಾರ್ಚ್‌ ಹಿಡಿದುಕೊಂಡು ನಾನದನ್ನು ಓದಿ ಹೇಳುವುದು. ಆ ಮಾಹಿತಿಯ ಆಧಾರದ ಮೇಲೆ ಪುಸ್ತಕದಲ್ಲಿದ್ದ ನಕ್ಷೆ ನೋಡಿ ಅಪ್ಪ ನಕ್ಷತ್ರ ಗುರುತಿಸುವುದು ನಡೆಯುತ್ತಿತ್ತು. ಅವರು ಬೆರಳು ಮಾಡಿ ತೋರಿಸಿದ ನಕ್ಷತ್ರ ಯಾವುದು ನಾವು ನೋಡುತ್ತಿರುವ ನಕ್ಷತ್ರ ಯಾವುದು ಮುಂತಾದ ಗೊಂದಲಗಳಿದ್ದರೂ ಅನೇಕ ನಕ್ಷತ್ರಗಳನ್ನು ನಾವು ಗುರುತಿಸಿದ್ದಂತೂ ನಿಜ. ಇದಾದ ಮೇಲೆ `ನಕ್ಷತ್ರ ವೀಕ್ಷಣೆಗೆ ಮಾರ್ಗದರ್ಶಿ' ಎಂಬ ಕಪ್ಪು ಹೊದಿಕೆಯ ಮತ್ತೊಂದು ಪುಸ್ತಕವೂ ಬಂತು. ಇಷ್ಟಾಗುವ ಹೊತ್ತಿಗೆ ಅಪ್ಪನಿಗೂ ನಕ್ಷತ್ರ ಗುರುತಿಸುವ ಹುಚ್ಚು ಸ್ವಲ್ಪ ಜೋರಾಗಿಯೇ ಹಿಡಿದಿತ್ತು. ಸುಮ್ಮನೆ ಕಪಾಟಿನೊಳಗೆ ಇರುತ್ತಿದ್ದ ಕಂಪಾಸ್‌ ಹೊರಗೆ ಬಂತು. ರಾಮಾಚಾರರನ್ನು ಕರೆಯಿಸಿ ಒಂದು ಹಲಗೆಯ ತುಂಡಿಗೆ ತಗಡಿನ ಕೋನ ಮಾಪಕವನ್ನು ಅಳವಡಿಸಿ ಅದಕ್ಕೊಂದು ಪ್ಲಾಸ್ಟಿಕ್‌ ಪೈಪ್‌ ಕೂರಿಸಿ ಬೇರೇನೋ ಒಂದು ಉಪಕರಣವನ್ನು ಮಾಡಿಸಿದರು. ಆ ಪೈಪ್‌ನಲ್ಲಿ ದಿಕ್ಕು, ಡಿಗ್ರಿಗಳೆಲ್ಲವನ್ನೂ ಸರಿಯಾಗಿ ಗುರುತಿಸಿ ತೋರಿಸುತ್ತಿದ್ದರು.

ಈ ನಕ್ಷತ್ರ ನೋಡುವ ಕ್ರಿಯೆಯ ಮೂಲಕ ನಮ್ಮ ಮನೆಗೆ ಪ್ರವೇಶ ಪಡೆದ ಜಿ.ಟಿ.ಎನ್‌. ಮುಂದೆ ನಮ್ಮ ಖಗೋಳ ವಿಜ್ಞಾನ ಚರ್ಚೆಗಳ ಅವಿಭಾಜ್ಯ ಅಂಗವಾಗಿಬಿಟ್ಟರು. ಒಂದು ದಿನ ಆಲ್ಬರ್ಟ್‌ ಐನ್‌ಸ್ಟೀನ್‌ ಎಂಬ ದಪ್ಪ ಪುಸ್ತಕ ಬಂತು. ಅವು ಬೇಸಿಗೆ ರಜೆಯ ದಿನಗಳು. ಮಧ್ಯಾಹ್ನದ ಹೊತ್ತು ಅಂಗಡಿಯಲ್ಲಿ ಅಕ್ಕಿಯ ಚೀಲದ ಮೇಲೆ ಕುಳಿತು ನಾನು ಆ ಪುಸ್ತಕವನ್ನು ಓದುವುದು ಅಪ್ಪ ಕೇಳುವುದು ನಡೆಯುತ್ತಿತ್ತು. ಇನ್ನೂರಕ್ಕೂ ಹೆಚ್ಚು ಪುಟಗಳಿದ್ದ ಆ ಪುಸ್ತಕವಂತೂ ಓದಿ ಮುಗಿಯುವುದೇ ಇಲ್ಲವೇನೋ ಎಂಬ ಭಯ ಹುಟ್ಟಿಸುತ್ತಿತ್ತು. ಕಣ್ಣು ತಪ್ಪಿಸಿ ಹತ್ತಾರು ಪುಟಗಳನ್ನು ಮಗುಚಿ ಹಾಕಿದರೆ ಅಪ್ಪನಿಗೆ ಅದು ಹೇಗೋ ಗೊತ್ತಾಗಿ ಏನೋ ತಪ್ಪಿದೆ ಎಂದು ಮೊದಲಿದ್ದಲ್ಲಿಗೇ ಹಿಂದಿರುಗುವಂತೆ ಮಾಡುತ್ತಿದ್ದರು. ಎರಡು ವಾರಗಳ ಅವಧಿಯ ಓದಿನಲ್ಲಿ ಆ ಪುಸ್ತಕ ಮುಗಿಯಿತು.
ಆಗ ಓದಿದ್ದು ನನಗೇನೂ ಅರ್ಥವಾಗಿರಲಿಲ್ಲ. ಆದರೆ ನನ್ನ ಓದುವ ಅಭ್ಯಾಸಕ್ಕೆ ಅಪ್ಪನ ಈ ಓದಿಸುವಿಕೆಯೂ ಒಂದು ಕಾರಣವಾಗಿದ್ದಂತೂ ಹೌದು. ಹೈಸ್ಕೂಲಿನಲ್ಲಿರುವಾಗ ಅದೇ ಪುಸ್ತಕವನ್ನು ನಾನು ನನಗಾಗಿಯೇ ಓದಿದೆ. ಹಾಗೆಯೇ ಮತ್ತಷ್ಟು ಪುಸ್ತಕಗಳನ್ನೂ.

***

ಪುಸ್ತಕಗಳ ಮೂಲಕವೇ ಪರಿಚಿತರಾಗಿದ್ದ ಜಿ.ಟಿ.ಎನ್‌.ರನ್ನು ನಿಜದಲ್ಲಿ ನೋಡಲು ಸಾಧ್ಯವಾಗಿದ್ದು ಮಂಗಳೂರಿನಲ್ಲಿ. ಅವರ ಮಗ ಅಶೋಕವರ್ಧನರ ಅತ್ರಿ ಬುಕ್‌ ಸೆಂಟರ್‌ನಲ್ಲಿ. ಸುಮಾರಾಗಿ ಈ ಹೊತ್ತಿಗೆ ಜಿ.ಟಿ.ಎನ್‌.ರ ಸುಬ್ರಹ್ಮಣ್ಯಂ ಚಂದ್ರಶೇಖರ್‌ಮುಗಿಯದ ಪಯಣ ಪ್ರಕಟವಾಗಿತ್ತು. ಅಶೋಕವರ್ಧನರು ದ್ವಿಚಕ್ರ ವಾಹನದಲ್ಲಿ ಭಾರತದ ಅಭಯಾರಣ್ಯಗಳನ್ನು ಸಂದರ್ಶಿಸುವ ಸಾಹಸ ಯಾತ್ರೆಗೆ ಹೊರಟಿದ್ದರು. ಈ ಸಾಹಸ ಯಾತ್ರೆಯ ಅವಧಿಯುದ್ದಕ್ಕೂ ಜಿ.ಟಿ.ಎನ್‌. ಅಂಗಡಿ ನೋಡಿಕೊಳ್ಳುತ್ತಿದ್ದರು. ಹತ್ತಿರದಲ್ಲೇ ನನ್ನ ಪತ್ರಿಕೆಯ ಕಚೇರಿಯೂ ಇದ್ದುದರಿಂದ ವಾರಕ್ಕೆ ಮೂರ್ನಾಲ್ಕು ಸಾರಿಯಾದರೂ ಅತ್ರಿಗೆ ಹೋಗುತ್ತಿದ್ದೆ. ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕ ನಾರಾಯಣಸ್ವಾಮಿಯವರ ಕುರಿತು ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದ ಲೇಖನವೊಂದನ್ನು ನಾನು ಪತ್ರಿಕೆಗಾಗಿ ಅನುವಾದಿಸಿದ್ದೆ. ಇದು ಪ್ರಕಟವಾದ ಪತ್ರಿಕೆಯೊಂದನ್ನು ಜಿ.ಟಿ.ಎನ್‌. ಅವರಿಗೆ ಕೊಟ್ಟೆ. ಇದನ್ನು ಓದಿ ಅನುವಾದವನ್ನು ಮೆಚ್ಚುತ್ತಲೇ ಸಂಗೀತಕ್ಕೆ ಸಂಬಂಧಿಸಿದ ಪಾರಿಭಾಷಿಕಗಳ ಸಮರ್ಪಕ ಬಳಕೆಯ ಕುರಿತು ಹೇಳಿದರು. ನಾನೊಂದಷ್ಟು ಪ್ರಶ್ನೆಗಳನ್ನು ಕೇಳಿದೆ. ಅಂಗಡಿಯಲ್ಲಿ ಗಿರಾಕಿಗಳನ್ನೇ ಸುಧಾರಿಸುತ್ತಲೇ ವಿದ್ಯಾರ್ಥಿಯೊಬ್ಬನ ಸಂಶಯಗಳನ್ನು ಪರಿಹರಿಸುವ ಗುರುವಿನಂತೆ ಉತ್ತರ ನೀಡಿದ್ದರು.

ಈ ದಿನಗಳಲ್ಲೇ ನಾನು ಸುಬ್ರಹ್ಮಣ್ಯಂ ಚಂದ್ರಶೇಖರ್‌ರ ವೈಜ್ಞಾನಿಕ ಜೀವನ ಚರಿತ್ರೆಯ ಎರಡು ಪ್ರತಿಗಳನ್ನು ಖರೀದಿಸಿ ಒಂದನ್ನು ಅಪ್ಪನಿಗೆ ಕಳುಹಿಸಿಕೊಟ್ಟಿದ್ದೆ. ಆ ಪುಸ್ತಕವನ್ನು ಓದಿ ಅಪ್ಪನಿಗೆ ಹೇಳುವ ಹೊಣೆ ನನ್ನ ತಂಗಿಯ ಹೆಗಲಿಗೆ ಬಿದ್ದಿತ್ತು. ಅವಳು ಆ ಪುಸ್ತಕ ಓದುವ ಜತೆಗೆ `ಕೃಷ್ಣ ವಿವರಗಳು' ಪುಸ್ತಕವನ್ನೂ ಪೂರ್ತಿ ಓದಿ ಹೇಳಿದ್ದಳಂತೆ…

***

2005ರ ಡಿಸೆಂಬರ್‌ ನಾಲ್ಕರ ಬೆಳಿಗ್ಗೆ ತಮ್ಮ ಕೆಲಸವನ್ನೆಲ್ಲಾ ಮುಗಿಸಿದವರಂತೆ ಅಪ್ಪ ಇಹಲೋಕಕ್ಕೆ ವಿದಾಯ ಹೇಳಿಬಿಟ್ಟರು. ನಮಗೆ ಇಣುಕಲೂ ಅವಕಾಶವಿಲ್ಲದ ಅಪ್ಪನ ಕಪಾಟಿನ ಬೀಗದ ಕೈ ಈಗ ನನ್ನ ಹತ್ತಿರವೇ ಇದೆ. ಅದರೊಳಗಿದ್ದ ಕಂಪಾಸ್ ಈಗ ಕೈಗೇ ಸಿಗ್ಗುತ್ತದೆ. ಇತ್ತೀಚೆಗೆ ನಾನೂ ನನ್ನ ತಂಗಿಯೂ ಕುಳಿತು ಅಪ್ಪ ಮಲೆಯಾಳಂನಲ್ಲಿ ಬರೆದಿಟ್ಟಿರುವ ಡೈರಿಗಳನ್ನು ಓದುತ್ತಿರುವಾಗ ನಕ್ಷತ್ರ ವೀಕ್ಷಣೆ ನಡೆಸಿದ ಮಾಹಿತಿಗಳಿದ್ದವು. ನಾನು ಆಲ್ಪರ್ಟ್‌ ಐನ್‌ಸ್ಟೇನ್‌ ಓದಿದ್ದನ್ನೂ, ತಂಗಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಓದಿದ್ದನ್ನೂ ಅಪ್ಪ ಬರೆದಿಟ್ಟಿದ್ದಾರೆ…

ಈಗ ಜಿ.ಟಿ.ಎನ್‌. ಆತ್ಮಕತೆ `ಮುಗಿಯದ ಪಯಣ' ಪ್ರಕಟವಾಗಿದೆ. ಅಪ್ಪ ಇದ್ದಿದ್ದರೆ ಅದನ್ನೂ ನಮ್ಮಲ್ಲಿ ಯಾರಾದರೊಬ್ಬರು ಓದಿ ಹೇಳಬೇಕಿತ್ತು. ನಾನು ಬೆಂಗಳೂರಿನಲ್ಲೂ, ತಮ್ಮ ನಿರಂತರ ತಿರುಗಾಟದಲ್ಲೂ ಇರುವುದರಿಂದ ಈ ಕೆಲಸ ನನ್ನ ತಂಗಿಯ ಹೆಗಲೇರುತ್ತಿತ್ತು. ಅದು ನೆನಪಾಗಿ `ಮುಗಿಯದ ಪಯಣ' ಪುಸ್ತಕ ನೋಡಿದ ತಕ್ಷಣ ನನ್ನ ತಂಗಿ ಅಳಲಾರಂಭಿಸಿದಳು. ನಾನೆಷ್ಟೇ ತಡೆದುಕೊಂಡರೂ ಕಣ್ಣು ನನ್ನ ಮಾತು ಕೇಳಲಿಲ್ಲ…