ಅನುಕೂಲಸಿಂಧು ರಾಜಕಾರಣದ ಸಂಕೇತ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಕೇತಿಕವಾದ ಕ್ರಿಯೆಗಳಿಗೂ ಒಂದು ಮಹತ್ವವಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಖುದ್ದಾಗಿ ಪರಿಶೀಲಿಸಲು ಹೊರಡುವುದರಿಂದ ಆರಂಭಿಸಿ ರಾಜಧಾನಿಯ ಹೊರಗೆ ಸಂಪುಟ ಸಭೆ ಮತ್ತು ವಿಧಾನಸಭಾ ಅಧಿವೇಶನಗಳನ್ನು ನಡೆಸುವ ತನಕದ ಅನೇಕ ಕೆಲಸಗಳು ಈ ಸಾಂಕೇತಿಕ ಕ್ರಿಯೆಗಳ ಪರಿಧಿಯಲ್ಲಿ ಬರುತ್ತವೆ. ಚಾಮರಾಜ
ನಗರಕ್ಕೆ ಭೇಟಿ ನೀಡಿದವರೆಲ್ಲಾ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭ್ರಮೆ ವ್ಯಾಪಕವಾಗಿರುವಾಗ ಮುಖ್ಯಮಂತ್ರಿಯೊಬ್ಬ ಚಾಮರಾಜ ನಗರಕ್ಕೆ ಭೇಟಿ ನೀಡುವುದು ನಿಜಕ್ಕೂ ಮುಖ್ಯವಾಗುತ್ತದೆ. ರಾಜಧಾನಿಯಿಂದ ದೂರವಿರುವ ಪ್ರದೇಶವೊಂದು ಅಭಿವೃದ್ಧಿಯಿಂದಲೂ ದೂರವಿದ್ದಾಗ ಅಲ್ಲೊಂದು ವಿಧಾನಸಭಾ ಅಧಿವೇಶನ ನಡೆಸುವುದು ಇಲ್ಲವೇ ಸಂಪುಟ ಸಭೆಯನ್ನು
ನಡೆಸುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರ ತಮ್ಮ ಬಳಿಗೆ ಬಂತು ಎಂಬ ಭರವಸೆಯನ್ನು ಆ ಪ್ರದೇಶದ ಜನರಲ್ಲಿ ಮೂಡಿಸುವುದಕ್ಕೆ ಈ ಸಾಂಕೇತಿಕ ಕ್ರಿಯೆ ಸಹಾಯ ಮಾಡುತ್ತದೆ.
ದೇವೇಗೌಡರು ಪ್ರಧಾನಿಯಾಗಿದ್ದಾಗ ಈಶಾನ್ಯ ರಾಜ್ಯಗಳನ್ನು ಸಂದರ್ಶಿಸಿದ್ದು ಇದೇ ಕಾರಣಕ್ಕೆ ಮುಖ್ಯವಾಗಿತ್ತು. ದಿಲ್ಲಿ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಭಾವಿಸುತ್ತಿದ್ದ ರಾಜ್ಯಗಳಿಗೆ ಪ್ರಧಾನಿಯೇ ಹೋದರೆ ಆಗುವ ಪರಿಣಾಮವೇ ಇಲ್ಲಿಯೂ ಆಗಿತ್ತು.
ಎಚ್‌.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಮಿತಿಗಳೇನೇ ಇದ್ದರೂ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ವ್ಯಕ್ತಿಯೊಬ್ಬ ಹಳ್ಳಿಯ ಬಡವನ ಮನೆಯಲ್ಲೂ ವಾಸ್ತವ್ಯ ಮಾಡಬಲ್ಲ ಎಂಬುದು ನಿಜಕ್ಕೂ ಮಹತ್ವದ ವಿಷಯವೇ ಆಗಿತ್ತು. ಈ ಸಾಂಕೇತಿಕ ಕ್ರಿಯೆಗಳು ಮುಂದಿನ ಹಂತದಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು. ದುರದೃಷ್ಟವಶಾತ್‌ ನಮ್ಮಲ್ಲಿ ಸಾಂಕೇತಿಕ ಕ್ರಿಯೆಗಳ್ಯಾವೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅರ್ಥಪೂರ್ಣ ಕ್ರಿಯೆಗಳಾಗುತ್ತಿಲ್ಲ. ಇವೆಲ್ಲವೂ ಫೋಟೋಗಳಿಗೆ ಫೋಸ್‌ ಕೊಡುವುದಕ್ಕೂ ದೃಶ್ಯ ಮಾಧ್ಯಮಗಳಿಗೆ ವಿಷುಯಲ್‌ ಪೀಸ್‌ ಆಗುವುದಕ್ಕೂ ಸೀಮಿತವಾಗುತ್ತಾ ಸಾಗಿವೆ. ಈ ಸಾಂಕೇತಿಕ ಕ್ರಿಯೆಯಲ್ಲಿಯೂ ಅನುಕೂಲಸಿಂಧುತ್ವವೇ ಮೇಲುಗೈ ಸಾಧಿಸುತ್ತಿದೆ.
***
ಉತ್ತರ ಕರ್ನಾಟಕದ ಅನಾಥ ಪ್ರಜ್ಞೆ ಹೋಗಲಾಡಿಸುವುದಕ್ಕೆ ಬೆಳಗಾವಿಯಲ್ಲಿ ಅಧಿವೇಶನ ಎಂಬ ತರ್ಕವನ್ನು ವಿಶ್ಲೇಷಣೆಗೆ ಒಳಪಡಿಸಿದರೆ ನಮ್ಮ ಸರ್ಕಾರಗಳು ಅನುಸರಿಸುವ ಅನುಕೂಲ ಸಿಂಧು ರಾಜಕಾರಣ ಅರ್ಥವಾಗುತ್ತದೆ. ಉತ್ತರ ಕರ್ನಾಟಕದ ಅನಾಥ ಪ್ರಜ್ಞೆ ಹೋಗಲಾಡಿಸುವುದಕ್ಕೆ ವಿಧಾನ ಸಭಾ ಅಧಿವೇಶನವನ್ನು ಎಲ್ಲಿ ನಡೆಸಬೇಕಿತ್ತು? ಅತ್ಯಂತ ಹಿಂದುಳಿದ ಜಿಲ್ಲೆಯಲ್ಲಿ
ಎಂಬುದು ಈ ಪ್ರಶ್ನೆಗೆ ಸಹಜ ಉತ್ತರ. ಆದರೆ ಜೆಡಿಎಸ್‌-ಬಿಜೆಪಿ ಮೈತ್ರಿಕೂಟ ಮಾನವ ಅಭಿವೃದ್ಧಿ ಸೂಚಿಯಲ್ಲಿ ಮೊದಲ ಹತ್ತು ಸ್ಥಾನಗಳೊಳಗೇ ಇರುವ ಬೆಳಗಾವಿಯನ್ನು ಆರಿಸಿಕೊಂಡಿತು. ಮಾನವ ಅಭಿವೃದ್ಧಿ ಸೂಚಿಯಲ್ಲಿ ಬೆಳಗಾವಿಗೆ ಎಂಟನೇ ಸ್ಥಾನವಿದೆ.
ಅಭಿವೃದ್ಧಿ ಹೊಂದಿದೆ ಎನ್ನಲಾಗುತ್ತಿರುವ ದಕ್ಷಿಣ ಕರ್ನಾಟಕದ ಹಾಸನದಂಥ ಜಿಲ್ಲೆಗಿಂತ ಮೂರು ಸ್ಥಾನಗಳಷ್ಟು ಮೇಲಿರುವ ಜಿಲ್ಲೆಯಲ್ಲಿ ವಿಧಾನಸಭಾ ಅಧಿವೇಶನ ನಡೆಸುವುದೇ ಒಂದು ತಮಾಷೆಯಲ್ಲವೇ?
ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸಲೇಬೇಕೆಂದಿದ್ದರೆ ಮಾನವ ಅಭಿವೃದ್ಧಿ ಸೂಚಿಯಲ್ಲಿ 27ನೇ ಸ್ಥಾನದಲ್ಲಿರುವ ರಾಯಚೂರಿನಲ್ಲಿ ನಡೆಸಬಹುದಿತ್ತಲ್ಲವೇ? ಅದೂ ಬೇಡವೆಂದಿದ್ದರೆ 26ನೇ ಸ್ಥಾನದಲ್ಲಿರುವ ಗುಲ್ಬರ್ಗ, ಇಲ್ಲವೇ 24ನೇ ಸ್ಥಾನದಲ್ಲಿರುವ ಕೊಪ್ಪಳವನ್ನು ಆರಿಸಿಕೊಳ್ಳಬಹುದಿತ್ತಲ್ಲವೇ?
ಇವುಗಳನ್ನೇಕೆ ಆರಿಸಿಕೊಳ್ಳಲಿಲ್ಲ ಎಂಬುದಕ್ಕೆ ಕೆಲವು ಸರಳ ಕಾರಣಗಳನ್ನು ನಾವೇ ಕಂಡುಕೊಳ್ಳಬಹುದು. ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕೆ ಬೇಕಿರುವ ಎಲ್ಲಾ ಅನುಕೂಲಗಳೂ ಇವೆ. ಮಾನವ ಅಭಿವೃದ್ಧಿ ಸೂಚಿಯಲ್ಲಿ ಧಾರವಾಡಕ್ಕಿಂತಲೂ ಎರಡು ಸ್ಥಾನಗಳಷ್ಟು ಮೇಲಿರುವ ಬೆಳಗಾವಿ ಜಿಲ್ಲೆಗೆ ಸಂಪರ್ಕ ಸುಲಭ. ಪ್ರಭಾಕರ ಕೋರೆ ಅಧಿವೇಶನಕ್ಕೆ ಬೇಕಿರುವ ಸಕಲ ಅನುಕೂಲಗಳನ್ನೂ ಕಲ್ಪಿಸುತ್ತಾರೆ. ಅಧಿವೇಶನಕ್ಕೆ ರಜೆ ಇರುವ ದಿನಗಳಲ್ಲಿ ಶಾಸಕರು ಗೋವಾಕ್ಕೋ ಮುಂಬೈಗೋ ಹೋಗುವುದೂ ಸುಲಭ.
ಬೆಳಗಾವಿಯಲ್ಲಿ ಅಧಿವೇಶನಕ್ಕೆ ಒದಗಿಸಿರುವ ಅನುಕೂಲಗಳನ್ನು ನೋಡಿದರೆ ಕೊಪ್ಪಳದಲ್ಲೋ ರಾಯಚೂರಿನಲ್ಲೋ ಇಂಥದ್ದೊಂದು ಅಧಿವೇಶನ ನಡೆಯಲು ಸಾಧ್ಯವೇ ಇಲ್ಲವೇನೋ ಅನ್ನಿಸುತ್ತದೆ. ಕೊಪ್ಪಳದಲ್ಲಿ ಅಧಿವೇಶನ ನಡೆಸುವುದಕ್ಕೆ ಅಗತ್ಯವಿರುವ ಒಂದೇ ಒಂದು ಕಟ್ಟಡವೂ ಇಲ್ಲ. ವಸತಿಯ ವ್ಯವಸ್ಥೆಯಂತೂ ಸಾಧ್ಯವೇ ಇಲ್ಲ. ಕೊಪ್ಪಳದಲ್ಲಿ ನಮ್ಮ ಶಾಸಕರ `ಮಟ್ಟ’ಕ್ಕೆ ಬೇಕಿರುವ ಒಂದು ಹೊಟೇಲೂ ಇಲ್ಲ. ಮಂತ್ರಿಗಳ ಮಟ್ಟದ ಹೊಟೇಲುಗಳಂತೂ ಇಲ್ಲವೇ ಇಲ್ಲ. ರಾಯಚೂರಿನಲ್ಲಿ ಅಧಿವೇಶನ ನಡೆಸುವುದಾದರೆ ಅಲ್ಲಿರುವ ಸರ್ಕಾರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ರೋಗಿಗಳನ್ನೆಲ್ಲಾ ಸ್ಥಳಾಂತರಿಸಬೇಕೇನೋ?
***
ಈ ಅನುಕೂಲ ಸಿಂಧುತ್ವ ಕೇವಲ ಅಧಿವೇಶನ ನಡೆಸುವ ವಿಷಯಕ್ಕಷ್ಟೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮೊದಲ ಹೆಜ್ಜೆಯೆಂದು ಸರ್ಕಾರಗಳು ಹೇಳಿಕೊಂಡ ಹೈಕೋರ್ಟ್‌ ಪೀಠ ಸ್ಥಾಪನೆಯಾದದ್ದು ಧಾರವಾಡದಲ್ಲಿ. ಧಾರವಾಡ ಮಾನವ ಅಭಿವೃದ್ಧಿ ಸೂಚಿಯಲ್ಲಿ ಮೊದಲ ಹತ್ತು ಸ್ಥಾನಗಳೊಳಗೆ ಬರುವ ಜಿಲ್ಲೆ. ಗುಲ್ಬರ್ಗಕ್ಕೊಂದು ಸಂಚಾರೀ ಪೀಠ ದೊರೆತದ್ದು ಧರ್ಮಸಿಂಗ್‌ ಗುಲ್ಪರ್ಗದವರಾಗಿದ್ದರು ಎಂಬುದು ಕಾರಣವೇ ಹೊರತು ಅಭಿವೃದ್ಧಿಗೆ ಸಂಬಂಧಿಸಿದ ಸಾಂಕೇತಿಕತೆಯಲ್ಲ.
ಎರಡು ಹೊಸ ಮೆಡಿಕಲ್‌ ಕಾಲೇಜುಗಳನ್ನು ಸ್ಥಾಪಿಸಲು ಹೊರಟಾಗ ಅದರಲ್ಲೊಂದನ್ನು ಕೊಪ್ಪಳಕ್ಕೋ ರಾಯಚೂರಿಗೋ ನೀಡಬಹುದಿತ್ತು. ಆದರೆ ಆಗ ನಮ್ಮ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಕಾಣಿಸಿದ್ದು ಮಾನವ ಅಭಿವೃದ್ಧಿ ಸೂಚಿಯಲ್ಲಿ ಆರನೇ ಸ್ಥಾನದಲ್ಲಿರುವ ಶಿವಮೊಗ್ಗ ಮತ್ತು ಹನ್ನೊಂದನೇ ಸ್ಥಾನದಲ್ಲಿರುವ ಹಾಸನ ಜಿಲ್ಲೆಗಳು. 2007ರಲ್ಲಿ ಹೊಸ ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಾಗ ಕೇವಲ ಒಂದು ಸರ್ಕಾರಿ ಕಾಲೇಜನ್ನು ಹೊಂದಿದ್ದ ಬೀದರ್‌ಗೆ ದೊರೆತದ್ದು ಆರು ಸರ್ಕಾರಿ ಕಾಲೇಜುಗಳು. 63 ಸರ್ಕಾರಿ ಕಾಲೇಜುಗಳಿದ್ದ ಹಾಸನ ಜಿಲ್ಲೆಗೆ 20 ಕಾಲೇಜುಗಳ ಪಾಲು ದೊರೆಯಿತು. ಆಗ ಇದ್ದ
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ತೋರಿಸುವುದಕ್ಕೆ ಬೆಳಗಾವಿಯಲ್ಲಿ ವಿಧಾನ ಸಭಾ ಅಧಿವೇಶನವನ್ನು ಆಯೋಜಿಸಿದ್ದರು.
***
ಥಾರ್‌ ಮರುಭೂಮಿಯ ನಂತರ ಅತೀವ ನೀರಿನ ಕೊರತೆ ಅನುಭವಿಸುತ್ತಿರುವ ಭೂಭಾಗ ಉತ್ತರ ಕರ್ನಾಟಕದಲ್ಲಿದೆ. ಸೋದರ ಸಂಬಂಧಗಳಲ್ಲಿ ನಡೆಯುವ ವಿವಾಹದಿಂದ ಭಾರತದಲ್ಲೇ ಅತಿ ಹೆಚ್ಚು ಆರೋಗ್ಯದ ಸಮಸ್ಯೆಗಳಿರುವ ಪ್ರದೇಶವೂ ಉತ್ತರ ಕರ್ನಾಟಕವೇ. ಅಷ್ಟೇಕೆ ಮಾನವ ಅಭಿವೃದ್ಧಿ ಸೂಚಿಯ ಶಿಕ್ಷಣ ಸೂಚಿಯಲ್ಲಿ ಅತ್ಯಂತ ಹಿಂದುಳಿದಿರುವ ಎಂಟು ಜಿಲ್ಲೆಗಳಿರುವುದು ಇದೇ
ಪ್ರದೇಶದಲ್ಲಿ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವ ಎಂಟು ಜಿಲ್ಲೆಗಳಿರುವುದೂ ಉತ್ತರ ಕರ್ನಾಟಕದಲ್ಲಿಯೇ.
ಉತ್ತರ ಕರ್ನಾಟಕವೇಕೆ ಹೀಗಿದೆ ಎಂಬ ಪ್ರಶ್ನೆಯೇ ಸುತ್ತವೇ ಉತ್ತರ ಕರ್ನಾಟಕದಲ್ಲಿ ನಡೆಯುವ ಅಧಿವೇಶನ ಚರ್ಚಿಸಬಹುದಿತ್ತು. ಕಳೆದ ಬಾರಿಯ ಅಧಿವೇಶನದಲ್ಲಿ ಸಾಂಕೇತಿಕತೆಯ ಸಂಭ್ರಮ ಮುಖ್ಯವಾಗಿದ್ದನ್ನು ಕ್ಷಮಿಸಬಹುದು. ಈ ಬಾರಿಯೂ ಅದೇ ಮುಂದುವರೆದದ್ದನ್ನು ಹೇಗೆ ಒಪ್ಪಿಕೊಳ್ಳುವುದು. ಮಾನವ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನಗಳಲ್ಲಿರುವ ಕ್ಷೇತ್ರಗಳ ಶಾಸಕರೂ ಈ ವಿಷಯ ಚರ್ಚೆಯಾಗಬೇಕು ಎಂದು ಭಾವಿಸದೇ ಇರುವುದನ್ನು ಕ್ಷಮಿಸಲು ಸಾಧ್ಯವೇ?
ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದು ಕೆಲವು ಶಾಸಕರಿಗೆ ಗೋವಾದಲ್ಲಿ ರಜೆ ಕಳೆಯಲು ಅನುಕೂಲ ಕಲ್ಪಿಸಿದ್ದನ್ನು ಬಿಟ್ಟರೆ ಮತ್ತೇನನ್ನೂ ಸಾಧಿಸಲಿಲ್ಲ ಎಂಬುದು ಕಟು ವಾಸ್ತವ. ಬೆಳಗಾವಿಯಲ್ಲಿ ಮೃಷ್ಟಾನ್ನ ಉಣ್ಣಲು ಅವಕಾಶ ಕಲ್ಪಿಸುವ ಬದಲಿಗೆ ರಾಯಚೂರು, ಕೊಪ್ಪಳದಂಥ ಪ್ರದೇಶದಲ್ಲಿ ಅಧಿವೇಶನ ನಡೆಸಿದ್ದರೆ ಕನಿಷ್ಠ ಅನಭಿವೃದ್ಧಿಯ ರುಚಿಯನ್ನಾದರೂ ನಮ್ಮ ಜನಪ್ರತಿನಿಧಿಗಳು ಆಸ್ವಾದಿಸುತ್ತಿದ್ದರೇನೋ?

`ಜ್ಞಾನಾಧಾರಿತ ಆರ್ಥಿಕತೆ’ಯಲ್ಲಿ ಜ್ಞಾನದ ಪ್ರಶ್ನೆ

ಜ್ಞಾನ ಸಮಾಜ, ಜ್ಞಾನಾಧಾರಿತ ಆರ್ಥಿಕತೆ ಎಂಬ ಪದಪುಂಜಗಳನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ. ರಾಷ್ಟ್ರೀಯ ಜ್ಞಾನ ಆಯೋಗವಂತೂ ತನ್ನ ವರದಿಗೆ `ಜ್ಞಾನಾಧಾರಿತ ಸಮಾಜದತ್ತ’ ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾದ ಜ್ಞಾನ ಆಯೋಗ ಕೂಡ ಜ್ಞಾನಾಧಾರಿತ ಆರ್ಥಿಕತೆಯ ಬಗ್ಗೆ, ಜ್ಞಾನ ಸಮಾಜದ ಬಗ್ಗೆ ಹೇಳುತ್ತಿದೆ. ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಬೆಳೆಸುವುದರ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಕೂಡಾ ಹೇಳುತ್ತಾರೆ. ಇದೇ ಮಾತುಗಳನ್ನು ಹಣಕಾಸು ಸಚಿವರು ಇನ್ನಷ್ಟು ಸಂಕೀರ್ಣ ಪದಪುಂಜಗಳನ್ನು ಬಳಸಿ ವಿವರಿಸುತ್ತಾರೆ.
ಜ್ಞಾನ ಸಮಾಜದ ಕುರಿತಂತೆ ಯು.ಕೆ.ಯ ಸಸೆಕ್ಸ್‌ ವಿಶ್ವವಿದ್ಯಾಲಯದ ಸ್ಟೆಪ್ಸ್‌ ಕೇಂದ್ರ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಿತ್ತು. ವಿವಿಧ ವಿಷಯಗಳ ತಜ್ಞರು `ಜ್ಞಾನ ಸಮಾಜ’ವೆಂಬ ಪರಿಕಲ್ಪನೆಯ ಸುತ್ತ ಚರ್ಚೆ ನಡೆಸಿದರು. ದೇಶ-ವಿದೇಶಗಳ ತಜ್ಞರು ಭಾಗವಹಿಸಿದ್ದ `ರೌಂಡ್‌ ಟೇಬಲ್‌’ ಪರಿಕಲ್ಪನೆಯ ಸಂಕೀರ್ಣ ಸಮಸ್ಯೆಗಳನ್ನು ಚರ್ಚಿಸಿದರೆ ಮರುದಿನ ಏರ್ಪಾಡಾಗಿದ್ದ ಸಾರ್ವಜನಿಕ ಚರ್ಚೆ ಹಿಂದಿನ ದಿನದ ಚರ್ಚೆಗಳ ಸಾರವನ್ನು ಸಾರ್ವಜನಿಕ ಮಟ್ಟದಲ್ಲಿ ಚರ್ಚಾ ವಿಷಯವನ್ನಾಗಿಸಲು ಪ್ರಯತ್ನಿಸಿತು.

ರಾಷ್ಟ್ರೀಯ ಜ್ಞಾನ ಆಯೋಗದಿಂದ ಆರಂಭಿಸಿ ರಾಜ್ಯ ಜ್ಞಾನ ಆಯೋಗದ ತನಕ, ಪ್ರಧಾನಿಯಿಂದ ಆರಂಭಿಸಿ ಮುಖ್ಯಮಂತ್ರಿಗಳ ತನಕ, ಉದ್ಯಮಿಗಳಿಂದ ಆರಂಭಿಸಿ ವಿದ್ವಾಂಸರ ತನಕ ಎಲ್ಲರೂ ಚರ್ಚಿಸುತ್ತಿರುವ ಈ `ಜ್ಞಾನ ಸಮಾಜ’ ಎಂದರೆ ಏನು? ಈ ಪ್ರಶ್ನೆಗೆ ಸದ್ಯಕ್ಕೆ ದೊರೆಯುವ ಉತ್ತರ ವಿಕಿಪಿಡಿಯಾದ ವ್ಯಾಖ್ಯೆ ಮಾತ್ರ. ಜ್ಞಾನವನ್ನು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿಟ್ಟುಕೊಂಡಿರುವ ಸಮಾಜವನ್ನು `ಜ್ಞಾನ ಸಮಾಜ’ ಎನ್ನಬಹುದು. `ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಜ್ಞಾನ’ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ `ಜ್ಞಾನ ಸಮಾಜ’ವೆಂಬ ಆಧುನಿಕ ಪರಿಕಲ್ಪನೆಯ ಮಿತಿಗಳು ಅರ್ಥವಾಗತೊಡಗುತ್ತವೆ.

***

ಉತ್ಪಾದನೆ ಎಂಬ ಪರಿಕಲ್ಪನೆಯೇ ಸಮಾಜವೆಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡಿದೆ. ಸಮಾಜವೆಂಬ ಪರಿಕಲ್ಪನೆ ಅಸ್ತಿತ್ವದಲ್ಲಿ ಇಲ್ಲದ ಪ್ರಪಂಚದಲ್ಲಿ `ಉತ್ಪಾದನೆ’ ಪರಿಕಲ್ಪನೆಗೂ ಅವಕಾಶವಿಲ್ಲ. ಹಾಗೆಯೇ ಪ್ರತೀ ಉತ್ಪಾದನೆಯ ಹಿಂದೆಯೂ ಜ್ಞಾನ ಇದ್ದೇ ಇರುತ್ತದೆ. ಹಾಗಿರುವಾಗ `ಜ್ಞಾನ ಸಮಾಜದತ್ತ’ ಎಂದು ರಾಷ್ಟ್ರೀಯ ಜ್ಞಾನ ಆಯೋಗ ಹೇಳುವುದಕ್ಕೇನು ಅರ್ಥ? ಅಥವಾ ದೇಶ ವಿದೇಶಗಳ ವಿಶ್ವವಿದ್ಯಾಲಯದಲ್ಲಿರುವ ತಜ್ಞರು ಒಂದೆಡೆ ಕಲೆತು `ಜ್ಞಾನ ಸಮಾಜ’ದ ಕುರಿತಂತೆ ಚರ್ಚಿಸುವುದೇಕೆ?

ಈ ಪ್ರಶ್ನೆಗಳಿಗೆ ಇರುವ ಉತ್ತರ ಸರಳವಾದುದು. ಜ್ಞಾನವೆಂಬುದು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಕ್ಷೇತ್ರಗಳು ಯಾವುವು ಎಂಬುದನ್ನು `ಜ್ಞಾನಧಾರಿತ ಆರ್ಥಿಕತೆ’ಯ ಪ್ರತಿಪಾದಕರು ನಿರ್ಧರಿಸಿಬಿಟ್ಟಿದ್ದಾರೆ. ಸಾಫ್ಟ್‌ವೇರ್‌, ಹೊರಗುತ್ತಿಗೆ, ವೈಜ್ಞಾನಿಕ ಆವಿಷ್ಕಾರಗಳು ಮಾತ್ರ ಜ್ಞಾನವನ್ನು ಆಧಾರವಾಗಿಟ್ಟುಕೊಂಡ ಉತ್ಪನ್ನಗಳು ಎಂಬ ಪೂರ್ವಗ್ರಹಿಕೆಯ ಆಧಾರದ ಮೇಲೆ `ಜ್ಞಾನಾಧಾರಿತ ಆರ್ಥಿಕತೆ’ ನಿಂತಿದೆ. ಈ ಮಾದರಿಯ ಉತ್ಪಾದನೆಯನ್ನು ನಡೆಸುವ ಸಮಾಜಗಳು `ಜ್ಞಾನ ಸಮಾಜ’ ಎಂಬುದು ಇವರ ನಿಲುವು. ಅಂದರೆ ನಮ್ಮ ಕೃಷಿಕರು, ಕುಶಲಕರ್ಮಿಗಳು ಈ `ಜ್ಞಾನ ಸಮಾಜ’ದ ವ್ಯಾಖ್ಯೆಯೊಳಗೆ ಇಲ್ಲ. ಅಥವಾ ಇವರಲ್ಲಿರುವ ಜ್ಞಾನವನ್ನು ಈ `ಜ್ಞಾನ ಸಮಾಜ’ವು ಜ್ಞಾನವೆಂದು ಪರಿಗಣಿಸುವುದಿಲ್ಲ.

***

ಜ್ಞಾನ ಮತ್ತು ಉತ್ಪಾದನೆಯ ಸಂಬಂಧವನ್ನು ವಾಣಿಜ್ಯಾತ್ಮಕ ಅರ್ಥದಲ್ಲಿ ಗ್ರಹಿಸಿದಾಗಲೇ ಪೂರ್ವದ ಜ್ಞಾನ ಪರಂಪರೆಗಳೆಲ್ಲವೂ ಅರ್ಥ ಕಳೆದುಕೊಂಡುಬಿಡುತ್ತವೆ. ಪೇಟೆಂಟ್‌ ಮತ್ತು ಕಾಪಿ ರೈಟ್‌ ಕಾನೂನುಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಕ್ಕೆ ಒಳಪಡುವ ಜ್ಞಾನ ಮಾತ್ರ `ಜ್ಞಾನ’ವಾಗಿ ಉಳಿಯುತ್ತದೆ. ನಮ್ಮ ಕುಶಲಕರ್ಮಿಗಳು ತಮಗೆ ಪರಂಪರಾಗತವಾಗಿ ಬಂದಿರುವ ಕೌಶಲ್ಯಕ್ಕೆ ಪೇಟೆಂಟ್‌ ಪಡೆದುಕೊಳ್ಳಬೇಕು. ಇಲ್ಲವೇ ಇದಕ್ಕೆ ಪೇಟೆಂಟ್‌ ಪಡೆದುಕೊಂಡಿರುವ ಯಾವುದೋ ಸಂಸ್ಥೆಗೆ ನಿರಂತರವಾಗಿ ರಾಯಲ್ಟಿ ಪಾವತಿಸಬೇಕು. ಕೃಷಿಕರು ತಮ್ಮ ಬೆಳೆಗಳ ಬೀಜಗಳಿಗೆ ಪೇಟೆಂಟ್‌ ಪಡೆದಿರಬೇಕು ಇಲ್ಲವೇ ಪೇಟೆಂಟ್‌ ಮಾಲೀಕರಾಗಿರುವ ಯಾವುದೋ ಕಂಪೆನಿಗೆ ರಾಯಲ್ಟಿ ಪಾವತಿಸಬೇಕು. ಪಾರಂಪರಿಕ ವೈದ್ಯಕೀಯ ಕ್ಷೇತ್ರದ ಸಮಸ್ಯೆ ಇನ್ನೂ ಸಂಕೀರ್ಣವಾದುದು.

ನಮ್ಮ ಜ್ಞಾನ ಆಯೋಗದಿಂದ ಆರಂಭಿಸಿ ಪ್ರಧಾನಿಗಳ ತನಕದ ಎಲ್ಲರೂ ಪ್ರತಿಪಾದಿಸುತ್ತಿರುವ ಈ `ಜ್ಞಾನ ಸಮಾಜ’ದಲ್ಲಿ ಜ್ಞಾನದ ಮುಕ್ತ ಹರಿವು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಭಾರತದ ಮತ್ತು ಭಾರತದ ಹೊರಗಿರುವ ಅನೇಕ ವಿದ್ವಾಂಸರು ಚರ್ಚಿಸುತ್ತಿದ್ದಾರೆ. ಈ ಚರ್ಚೆಗಳು ಕೇವಲ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಗಳಂಥ `ಉತ್ಕೃಷ್ಟತಾ ಕೇಂದ್ರ’ಗಳ ವೇದಿಕೆಗಷ್ಟೇ ಸೀಮಿತಗೊಂಡಿರುವುದು ಈ ಹೊತ್ತಿನ ನಿಜವಾದ ಸಮಸ್ಯೆ.

***

ಪಾರಂಪರಿಕ ಜ್ಞಾನವನ್ನೂ ಆಧುನಿಕ ಮಾರುಕಟ್ಟೆ ಪ್ರತಿಪಾದಿಸುತ್ತಿರುವ `ಜ್ಞಾನ ಸಮಾಜ’ದ ಪರಿಧಿಯೊಳಕ್ಕೆ ತರುವುದಕ್ಕೂ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನದಲ್ಲಿ ಮುಖ್ಯವಾದುದು ಜೀವ ವೈವಿಧ್ಯ ದಾಖಲಾತಿಯಂಥವು. ಜೀವ ವೈವಿಧ್ಯವನ್ನು ದಾಖಲಿಸಿ ಅವುಗಳ ಮೇಲೆ ಮಾಲೀಕತ್ವ ನಿರ್ದಿಷ್ಟ ಸರ್ಕಾರ ಅಥವಾ ಸಮುದಾಯದ್ದೆಂದು ಸ್ಥಾಪಿಸಿಬಿಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ಈ ದಾಖಲಾತಿಯ ಹಿಂದಿನ ಪ್ರೇರಣೆ.

ಇದಕ್ಕೆ ವಿರುದ್ಧವಾದ ಮತ್ತೊಂದು ವಾದ ಸರಣಿಯೂ ಇದೆ. ಈ ಬಗೆಯ ದಾಖಲಾತಿಗಳು ಪಾರಂಪರಿಕ ಜ್ಞಾನವನ್ನು ಹೆಚ್ಚು ದೊಡ್ಡ ಗಂಡಾಂತರಕ್ಕೆ ದೂಡುತ್ತವೆ. ಪಾರಂಪರಿಕ ಅರಿವಿನ ಮೇಲೆ ತಮ್ಮ ಮಾಲೀಕತ್ವವನ್ನು ಸ್ಥಾಪಿಸಲು ಹೊರಟವರಿಗೆ ಈ ದಾಖಲಾತಿಗಳು ಒಂದು ಭಂಡಾರವಾಗಿ ಮಾರ್ಪಡುತ್ತವೆ ಎಂಬುದು ಈ ವಾದ.  ಮೊದಲನೆಯ ವಾದ ಆಧುನಿಕ ಮಾರುಕಟ್ಟೆಯ ಪರಿಭಾಷೆಯೊಳಗೇ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ ಎರಡನೇ ವಾದ ಮಾರುಕಟ್ಟೆಯ ಪರಿಭಾಷೆಯನ್ನು ಒಪ್ಪಿಕೊಂಡೇ ಅದರಿಂದ ದೂರ ಉಳಿಯಲು ಪ್ರಯತ್ನಿಸುತ್ತಿದೆ. ವಾಸ್ತವದಲ್ಲಿ ಇವರೆಡೂ ಈಗಿನ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಈ ಎರಡೂ ಪ್ರಯತ್ನಗಳು ಪಾರಂಪರಿಕ ಜ್ಞಾನದ ಮೇಲೆ ಯಾರೂ ಪೇಟೆಂಟ್‌ ಪಡೆಯದಂತೆ ನೋಡಿಕೊಳ್ಳುವುದನ್ನು ತಮ್ಮ ಮುಖ್ಯ ಉದ್ದೇಶವನ್ನಾಗಿಸಿಕೊಂಡಿವೆಯೇ ಹೊರತು ಪೇಟೆಂಟ್‌ ಎಂಬ ಪರಿಕಲ್ಪನೆಯನ್ನು ಪ್ರಶ್ನಿಸಲು ಹೋಗುತ್ತಿಲ್ಲ.

ಆಧುನಿಕ ಮಾರುಕಟ್ಟೆ ಪ್ರತಿಪಾದಿಸುತ್ತಿರುವ `ಪೇಟೆಂಟ್‌’, `ಕಾಪಿ ರೈಟ್‌’ಗಳ ಪರಿಕಲ್ಪನೆಯನ್ನೇ ಪ್ರಶ್ನಿಸದೇ ಹೋದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಭಾರತೀಯ ಜ್ಞಾನ ಪರಂಪರೆಗಳ ಅತಿ ಮುಖ್ಯ ಲಕ್ಷಣವೆಂದರೆ ಯಾವ ಆವಿಷ್ಕಾರವೂ ಯಾರೋ ಒಬ್ಬನದ್ದಾಗಿರುವುದಿಲ್ಲ. ಇದು ಸಾಹಿತ್ಯದಿಂದ ಆರಂಭಿಸಿ ವಿಜ್ಞಾನದ ತನಕದ ಎಲ್ಲ ಸಂದರ್ಭಗಳಲ್ಲೂ ಇರುವ ವಾಸ್ತವ. ಲೌಕಿಕ ಕೇಂದ್ರೀತವಾದ ಪಶ್ಚಿಮ ಪ್ರತಿಪಾದಿಸುವ ಆವಿಷ್ಕಾರ ಆಧ್ಯಾತ್ಮಿಕ ಭಾರತದ ಮಟ್ಟಿಗೆ ಒಂದು ಸುಧಾರಣೆ ಮಾತ್ರ. `ವ್ಯಾಸೋಚ್ಛಿಷ್ಟಂ ಜಗತ್ಸರ್ವಂ’ ಎನ್ನುವಾಗ ಭಾರತದ ಕವಿ ತನ್ನ ಸೃಜನಶೀಲತೆಯನ್ನು ನಿರಾಕರಿಸುತ್ತಿರುವುದಿಲ್ಲ. ಬದಲಿಗೆ ತನ್ನ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾ ಇದು ತನ್ನದು ಮಾತ್ರವಲ್ಲ ಎಂದು ವಿನಮ್ರನಾಗುತ್ತಿರುತ್ತಾನೆ. ರೈತ ಹೊಸತೊಂದು ಬೆಳೆ ವಿಧಾನವನ್ನು ಕಂಡುಕೊಂಡರೆ ಅದಕ್ಕೆ ಪೇಟೆಂಟ್‌ ಪಡೆಯದೆ ಉಳಿಯುವುದೂ ಇದೇ ಕಾರಣದಿಂದ.

ಮುಖ್ಯಮಂತ್ರಿಗಳೇ ನೆನಪಿದೆಯೇ ನಿಮ್ಮ ಪ್ರಣಾಳಿಕೆ

ಕರ್ನಾಟಕದ ಬಿಜೆಪಿ ಸರ್ಕಾರ ಹೆಚ್ಚು ಸುಭದ್ರವಾಗಿದೆ. ಪಕ್ಷೇತರ ಶಾಸಕರನ್ನು ಯಾರಾದರೂ ಖರೀದಿಸಿಬಿಟ್ಟರೆ ಸರ್ಕಾರ ಉರುಳಬಹುದೆಂಬ ಭಯ ಅದಕ್ಕಿಲ್ಲ. ಇನ್ನು ಮುಂದೆ ಅದಕ್ಕೆ ತಾನು ಮಾಡಿದ `ಸಂಕಲ್ಪ’ಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಯಾವ ಅಡ್ಡಿಯೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿಕೊಳ್ಳಲು ಇದು ಸಕಾಲ.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯ ಪುಟ-62ರ ಕೊನೆಯ ಸಾಲುಗಳಲ್ಲಿರುವಂತೆ `ಭ್ರಷ್ಟಾಚಾರವನ್ನು ತಡೆಗಟ್ಟುವುದು-ಲೋಕಾಯುಕ್ತವನ್ನು ಹೆಚ್ಚು ಬಲಪಡಿಸುವುದು’ ಸಮೃದ್ಧ ಕರ್ನಾಟಕಕ್ಕಾಗಿ ಬಿಜೆಪಿ ಮಾಡಿರುವ ಸಂಕಲ್ಪಗಳಲ್ಲಿ ಒಂದು. ಇಂಥದ್ದೇ ಸಂಕಲ್ಪವನ್ನು 2004ರ ಲೋಕಸಭಾ ಚುನಾವಣೆಯ ಸಂದರ್ಭದ ಪ್ರಣಾಳಿಕೆಯೂ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಯುದ್ಧ ನಡೆಸುವ ಭರವಸೆಯನ್ನು ಈ ಪ್ರಣಾಳಿಕೆ ನೀಡುತ್ತದೆ. ಆ ಸಾಲುಗಳು ಹೀಗಿವೆ: `ಭಾರತದ ಅಭಿವೃದ್ಧಿ ಪಥದ ಅತಿದೊಡ್ಡ ಅಡ್ಡಿಯೆಂದರೆ ಭ್ರಷ್ಟಾಚಾರದ ಎಂದು ಬಿಜೆಪಿ ಭಾವಿಸುತ್ತದೆ. ಭ್ರಷ್ಟಾಚಾರವು ನಮ್ಮ ಸಮಾಜ ಮತ್ತು ರಾಜಕಾರಣದ ನೈತಿಕತೆಯನ್ನೇ ದುರ್ಬಲಗೊಳಿಸಿದೆ. ಬಹುಕಾಲದ ಕಾಂಗ್ರೆಸ್‌ ಆಳ್ವಿಕೆ ಸೃಷ್ಟಿ ಮಾಡಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ವಹಿತಕ್ಕಾಗಿ ಅಧಿಕಾರದ ದುರ್ಬಳಕೆಯೇ ಹೆಚ್ಚಾಗಿದೆ. ಲಂಚ ಕೊಡದೆ ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲು ಆಗದ ತೊಂದರೆಯನ್ನು ಜನರು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರವೆಂಬ ಪಿಡುಗನ್ನು ತೊಡೆಯಲು ಎಲ್ಲಾ ಹಂತಗಳಲ್ಲಿಯೂ ಹೋರಾಟ ನಡೆಸಬೇಕೆಂದು ಬಿಜೆಪಿ ಭಾವಿಸುತ್ತದೆ’.

ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಈ ಸಾಲುಗಳನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ಅವರು ವಿರೋಧ ಪಕ್ಷದಲ್ಲಿರುವಾಗ ಸದನದಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದನ್ನು ಕರ್ನಾಟಕ ಮರೆತಿಲ್ಲ. ಆದರೆ ಇದೇ ಯಡಿಯೂರಪ್ಪನವರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ ಎನ್ನಲಾದ ನಿರ್ಧಾರವೊಂದು ಪತ್ರಿಕೆಗಳ ಮೂಲಕ ಕನ್ನಡ ನಾಡಿಗೆ ತಿಳಿಯಿತು.
ಆ ಸುದ್ದಿ ಹೀಗಿದೆ.

`ಆದಾಯಕ್ಕೆ ಮೀರಿ ಆಸ್ತಿ ಸಂಗ್ರಹಿಸಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆ ಆಯುಕ್ತ… ವಿರುದ್ಧ ಶಿಸ್ತುಕ್ರಮ ಜರುಗಿಸದಿರಲು ಸರ್ಕಾರ ನಿರ್ಧರಿಸಿದೆ. ಐಎಎಸ್‌ ಅಧಿಕಾರಿ…ಅವರ ಮನೆ ಹಾಗೂ ಕಚೇರಿಗಳ ಮೇಲೆ ಕೆಲ ತಿಂಗಳ ಹಿಂದೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಕೋಟ್ಯಂತರ ರೂಪಾಯಿಗಳ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.

`…ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಮತಗಳ ಮೇಲೆ ಕಣ್ಣು ಹಾಕಿರುವ ಸರ್ಕಾರ ಅದೇ ಜನಾಂಗಕ್ಕೆ ಸೇರಿದ ಅಧಿಕಾರಿ….ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರಲು ನಿರ್ಧರಿಸಿದೆ’

ಈ ಸುದ್ದಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಯಡಿಯೂರಪ್ಪನವರೇ ವಿವರಿಸಬೇಕು. ಭ್ರಷ್ಟಾಚಾರವನ್ನು ತಡೆಗಟ್ಟುವುದು ಮತ್ತು ಲೋಕಾಯುಕ್ತವನ್ನು ಬಲಪಡಿಸುವುದೆಂಬ ಸಂಕಲ್ಪವನ್ನು ಮಾಡಿದ್ದ ಬಿಜೆಪಿ ಪರಿಶಿಷ್ಟರ ಓಟುಗಳಿಗಾಗಿ ಭ್ರಷ್ಟ ಅಧಿಕಾರಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳದಿರಲು ತೀರ್ಮಾನಿಸಿದರೆ ಅದು ಪರಿಶಿಷ್ಟ ಜಾತಿಗಳಿಗೆ ಮಾಡುವ ಅವಮಾನವಲ್ಲವೇ? ಪರಿಶಿಷ್ಟರು ತಮ್ಮ ಜಾತಿಗೆ ಸೇರಿದ ಅಧಿಕಾರಿ ಭ್ರಷ್ಟನಾಗಿದ್ದರೂ ಆತನ ವಿರುದ್ಧ ಕ್ರಮ ಕೈಗೊಳ್ಳಬಾರದೆಂದು ನಿರೀಕ್ಷಿಸುತ್ತಾರೆ ಎಂದು ಸರ್ಕಾರ ಹೇಳಿದಂತಾಗಲಿಲ್ಲವೇ? ಪರಿಶಿಷ್ಟರನ್ನು ಒಟ್ಟಾಗಿ ಅಥವಾ ಪರಿಶಿಷ್ಟ ಪಟ್ಟಿಯಲ್ಲಿರುವ ಯಾವುದಾದರೊಂದು ಜಾತಿಯನ್ನು ಪ್ರತಿನಿಧಿಸುವ ಯಾವುದಾದರೊಂದು ಸಂಘಟನೆ ತಮ್ಮ ಜಾತಿಗೆ/ಜಾತಿಗಳಿಗೆ ಸೇರಿದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಕೇಳಿಕೊಂಡಿದೆಯೇ?

***

`ಬಹುಕಾಲದ ಕಾಂಗ್ರೆಸ್‌ ಆಳ್ವಿಕೆ ಸೃಷ್ಟಿ ಮಾಡಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ವಹಿತಕ್ಕಾಗಿ ಅಧಿಕಾರದ ದುರ್ಬಳಕೆಯೇ ಹೆಚ್ಚಾಗಿದೆ.’ ಎಂಬುದು ಬಿಜೆಪಿಯ ನಿಲುವು. ಇದನ್ನು ಸರಿಪಡಿಸುವುದಕ್ಕೆ `ಭ್ರಷ್ಟಾಚಾರವೆಂಬ ಪಿಡುಗನ್ನು ತೊಡೆಯಲು ಎಲ್ಲಾ ಹಂತಗಳಲ್ಲಿಯೂ ಹೋರಾಟ ನಡೆಸಬೇಕು’ ಎಂದು ಬಿಜೆಪಿ ಭಾವಿಸುತ್ತದೆ. ಈ `ಎಲ್ಲಾ ಹಂತಗಳಲ್ಲಿ’ ಮುಖ್ಯಮಂತ್ರಿಗಳ ನೇತೃತ್ವದಲ್ಲಿರುವ ಸಚಿವ ಸಂಪುಟದ ಹಂತ ಒಳಗೊಂಡಿಲ್ಲವೇ ಎಂಬುದು ಈಗಿನ ಸಮಸ್ಯೆ.

ಈ ಮೊದಲು ಕಾಂಗ್ರೆಸ್‌, ಜೆಡಿಎಸ್‌ಗಳ ಆಡಳಿತಾವಧಿಯಲ್ಲಿ ಭ್ರಷ್ಟಾಚಾರವಿತ್ತೆಂಬುದು ಎಲ್ಲರಿಗೂ ಗೊತ್ತಿದೆ. ಮಠಾಧೀಶರಿಗೆ ನೋವಾಗುತ್ತದೆ ಎಂಬ ಕಾರಣಕ್ಕಾಗಿ ಒಬ್ಬ ಭ್ರಷ್ಟ ಕೆಎಎಸ್‌ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಲಿಲ್ಲ. ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಐಎಎಸ್‌ಗೆ ಬಡ್ತಿಯೂ ದೊರೆಯಿತು. ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದದಿಂದ ಸೊಗಸುಗಾರ ಐಎಎಸ್‌ ಅಧಿಕಾರಿಯೊಬ್ಬರು ಎಷ್ಟೆಷ್ಟು ಹಗರಣಗಳಲ್ಲಿ ಸಿಕ್ಕಿಬಿದ್ದರೂ ಬಚಾವ್‌ ಆದರು ಎಂಬ ಕತೆಯೊಂದು ಜನಜನಿತವಾಗಿದೆ. ರಾಮಕೃಷ್ಣ ಹೆಗಡೆಯವರು ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದರೂ ಲೋಕಾಯುಕ್ತರಿಗೆ ಬಲಗೈಯಲ್ಲಿ ಕೊಟ್ಟ ಅಧಿಕಾರವನ್ನು ಎಡಗೈಯಲ್ಲಿ ಕಿತ್ತುಕೊಂಡದ್ದೂ ಕರ್ನಾಟಕದ ಜನತೆಗೆ ನೆನಪಿದೆ. ಇವರೆಲ್ಲರ ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು ಎಂದು ಹೇಳುತ್ತಿದ್ದ ಬಿಜೆಪಿ ತಾನು ಆಡಳಿತದಲ್ಲಿದ್ದಾಗಲೂ ಅದನ್ನೇ ಮುಂದುವರಿಸುತ್ತಿದೆಯೇ ಎಂಬ ಸಂಶಯ ಈಗ ಜನರನ್ನು ಕಾಡುತ್ತಿದೆ.

ಜನರ ಈ ಸಂಶಯಕ್ಕೆ ಕಾರಣಗಳೇನು ಎಂಬುದನ್ನು ಸಕಲ ಮಾಹಿತಿಗಳನ್ನೂ ತಾವು ಕುಳಿತಲ್ಲಿಗೇ ತರಿಸಿಕೊಳ್ಳುವ ಸಾಮರ್ಥ್ಯವಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿವರಿಸಬೇಕಿಲ್ಲ. ಆದರೂ ಸಾಂದರ್ಭಿಕವಾಗಿ ಕೆಲವು ವಿಷಯಗಳನ್ನು ಇಲ್ಲಿ ಹೇಳಲೇಬೇಕಾಗಿದೆ. ಭ್ರಷ್ಟ ಅಧಿಕಾರಿಯೊಬ್ಬನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೇ ಇರಲು ತೀರ್ಮಾನಿಸಿದ ತಕ್ಷಣ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅದರಲ್ಲಿ ಮುಖ್ಯವಾದುದು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದರಿಂದ ಸರ್ಕಾರಕ್ಕೆ ಅರ್ಥಾತ್‌ ಮುಖ್ಯಮಂತ್ರಿಗಳಾದಿಯಾಗಿ ಇರುವ ಆಡಳಿತಾರೂಢ ರಾಜಕಾರಣಿಗಳಿಗೆಲ್ಲರಿಗೂ ಆಗುವ ಲಾಭವೇನು?
ಈ ಪ್ರಶ್ನೆಯ ಸಂಭವನೀಯ ಉತ್ತರ ಹೀಗಿರಬಹುದು. ಭ್ರಷ್ಟ ಅಧಿಕಾರಿ ತಾನು ಗಳಿಸಿದ್ದರಲ್ಲಿ ಒಂದು ಪಾಲನ್ನು ತನ್ನ ಇಲಾಖೆಯ ಮಂತ್ರಿಗೆ ನೀಡುತ್ತಿದ್ದ. ಆ ಮಂತ್ರಿಯ ಮೂಲಕ ಅದು ಮುಖ್ಯಮಂತ್ರಿಗಳನ್ನೂ ತಲುಪುತ್ತದೆ. ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆದೇಶಿಸಿದರೆ ಆತ ತಾನು ಸಂಪಾದಿಸಿ ಯಾರಿಗೆಲ್ಲಾ ಪಾಲು ನೀಡುತ್ತಿದ್ದೆ ಎಂಬುದನ್ನು ವಿವರಿಸಬಹುದು. ಈ ವಾಸ್ತವವನ್ನು ಮುಚ್ಚಿಡುವುದಕ್ಕಾಗಿ ಆತನ ವಿರುದ್ಧ ಕ್ರಮ ಜರುಗಿಸದೇ ಇರಲು ಸರ್ಕಾರ ನಿರ್ಧರಿಸಿದೆ.

ಈ ಸಂಭವನೀಯ ಉತ್ತರ ತಮ್ಮ ಸರ್ಕಾರಕ್ಕೆ ಅನ್ವಯಿಸುವುದಿಲ್ಲ ಎಂಬುದನ್ನು ತಾರ್ಕಿಕವಾಗಿ ಸಾಬೀತು ಮಾಡುವ ತನಕವೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಜನರು ಅನುಮಾನದ ಕಣ್ಣಿನಿಂದಲೇ ನೋಡುತ್ತಾರೆ. ಈ ಹಿಂದಿನ ಉದಾಹರಣೆಗಳು ಅನುಮಾನವನ್ನು ಬಲಪಡಿಸುತ್ತಲೇ ಇರುತ್ತವೆ. ಇಲ್ಲಿಯ ತನಕ ಆದಾಯ ಮೀರಿದ ಆಸ್ತಿಯನ್ನು ಗಳಿಸಿ ಲೋಕಾಯುಕ್ತರ ದಾಳಿಗೆ ಗುರಿಯಾದ ಯಾರ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. `ಭ್ರಷ್ಟಾಚಾರದ ವಿರುದ್ಧ ಎಲ್ಲಾ ಹಂತಗಳಲ್ಲಿಯೂ ಹೋರಾಡುವ’ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಇದನ್ನು ಮಾಡದೇ ಹೋದರೆ ಅದೂ ಇತರ ಸರ್ಕಾರಗಳಂತೆಯೇ ಭ್ರಷ್ಟ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.

ಭ್ರಷ್ಟಾಚಾರದ ವಿರುದ್ಧ ಬೀದಿಯಲ್ಲೂ ಸದನದಲ್ಲೂ ಏಕಪ್ರಕಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಭ್ರಷ್ಟ ಅಧಿಕಾರಿಗಳಿಗೆ ಇನ್ನು ಬಲವಿಲ್ಲ ಎಂದು ಜನರು ನಂಬಿದ್ದರು. ಆದರೆ ಅವರೂ ತಾವೇ ಟೀಕಿಸುತ್ತಿದ್ದ ಸರ್ಕಾರಗಳ ಹಾದಿಯಲ್ಲೇ ಮುಂದುವರಿಯುವುದಕ್ಕೆ ನಾಚಿಕೆಯನ್ನೂ ಪಡುತ್ತಿಲ್ಲ ಎಂಬುದನ್ನು ಮಾಧ್ಯಮ ವರದಿಗಳು ಹೇಳುತ್ತಿವೆ. ಆದ್ದರಿಂದ ಅವರಿಗೆ ಬಿಜೆಪಿ ಪ್ರಣಾಳಿಕೆಯ 62ನೇ ಪುಟವನ್ನು ಮತ್ತೆ ನೆನಪಿಸಬೇಕಾಗಿ ಬಂದಿದೆ.