`ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ’ ಸಂಗತಿ ನಮಗೆಲ್ಲಾ ಗೊತ್ತಿದೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರ ಬಗ್ಗೆ ಅನೇಕ ಚರ್ಚೆಗಳಿವೆ. ಕಾರಣ ಆಗ ಪಿಟೀಲು ಎಂಬ ವಾದ್ಯವೇ ಇರಲಿಲ್ಲ. ನಮ್ಮ ಈಗಿನ ಗಿಟಾರ್‌ನ ಮೂಲ ರೂಪವಾಗಿದ್ದ Lyre ವಾದ್ಯವನ್ನು ನೀರೋ ನುಡಿಸುತ್ತಿದ್ದ ಎಂದು ರೋಮಿನ ಇತಿಹಾಸಕಾರರಲ್ಲಿ ಒಬ್ಬನಾಗಿರುವ ಕ್ಯಾಸಿಯಸ್ ಹೇಳಿದ್ದಾನೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರಷ್ಟೇ ಮುಖ್ಯವಾದ ಮತ್ತೊಂದು ಪ್ರಶ್ನೆ ರೋಮ್‌ಗೆ ಬೆಂಕಿ ಹತ್ತಿಕೊಂಡದ್ದು ಹೇಗೆ ಎಂಬುದು? ಇದಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಆಕಸ್ಮಿಕ ಎಂದು ಹೇಳಿದ್ದಾರೆ. ಇನ್ನು ಕೆಲವರು ಕ್ರೈಸ್ತರು ಬೆಂಕಿ ಹಚ್ಚಿದರು ಎನ್ನುತ್ತಾರೆ. ನೀರೋನ ಕಾಲದ ದಾಖಲೆಗಳನ್ನು ಇಟ್ಟುಕೊಂಡು ಈ ಬೆಂಕಿಗೂ ನೀರೋನೇ ಕಾರಣನಾಗಿದ್ದನೆಂದು ಕ್ಯಾಸಿಯಸ್‌ನಂಥ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ನೀರೋ ಕಾಲದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸಲಾಗುತ್ತಿತ್ತು. ಗೋಡೆಗಳೂ ಮರದದಿಂದಲೇ ರೂಪುಗೊಳ್ಳುತ್ತಿದ್ದವು. ಕ್ಯಾಸಿಯಸ್ ದಾಖಲಿಸಿರುವಂತೆ `ನಗರವನ್ನು ನಾಶಮಾಡುವ ಅಭೀಪ್ಸೆಯಿಂದ ಉತ್ತೇಜಿತನಾದ ನೀರೋ ಕುಡುಕರಂತೆ ನಟಿಸಿ ನಗರಕ್ಕೆ ಕೊಳ್ಳಿ ಇಡಲು ಜನರನ್ನು ಕಳುಹಿಸಿದ. ಪಾಲಾಟೈನ್ ಬೆಟ್ಟದ ಮೇಲಿದ್ದ ತನ್ನ ಅರಮನೆಯಲ್ಲಿ ಉರಿಯುವ ರೋಮ್ ಅನ್ನು ನೋಡುತ್ತಾ ನೀರೋ Lyre ನುಡಿಸುತ್ತಾ ಹಾಡಿದ’.