ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವನವರು ಅಧಿಕಾರ ಸ್ವೀಕರಿಸುವುದಕ್ಕೆ ಸರಿಯಾಗಿ ಹನ್ನೊಂದು ದಿನಗಳ ಮೊದಲು ಕರ್ನಾಟಕದಲ್ಲೊಂದು ಕಳ್ಳಭಟ್ಟಿ ದುರಂತ ಸಂಭವಿಸಿತು. ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ಮಂದಿ ಬಲಿಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಈ ಘಟನೆಯ ಹಿಂದೆ ತಮ್ಮ ವಿರೋಧಿಗಳ ಕೈವಾಡವನ್ನು ಸಂಶಯಿಸಿದ್ದರು. ಇದನ್ನವರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ತಕ್ಕಂತೆ ಸಾರಾಯಿ ನಿಷೇಧವನ್ನು ತೀವ್ರ ಟೀಕೆಗೆ ಒಳಪಡಿಸಿದ್ದ ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರಂಥ ಹೇಳಿಕೆಗಳೂ ಇದ್ದವು.
ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಹತ್ತೇ ದಿನಗಳಲ್ಲಿ ಗೊಬ್ಬರ ಕೊರತೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಯಿತು. ಗುಂಡು ತಗುಲಿದ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಸಂದರ್ಭದಲ್ಲಿಯೂ ಯಡಿಯೂರಪ್ಪನವರು ಸಂಶಯಿಸಿದ್ದು ವಿರೋಧಿ ಗಳ ಕೈವಾಡವನ್ನೇ. ಇದಕ್ಕೆ ತಕ್ಕಂತೆ ಕೇಂದ್ರ ಸರಕಾರ ಗೊಬ್ಬರ ಬಿಡುಗಡೆ ಮಾಡಿರಲಿಲ್ಲ. ಗೊಬ್ಬರದ ಲಾರಿಗಳನ್ನೇ ಹಿಡಿದು ನಿಲ್ಲಿಸುವಷ್ಟರ ಮಟ್ಟಿಗೆ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಷ್ಟು ಹಿಂಸಾತ್ಮಕ ಪ್ರತಿಭಟನೆಗಳೂ ನಡೆಯುತ್ತಿದ್ದವು.
ಸರಕಾರಕ್ಕೆ ನೂರು ದಿನ ತುಂಬಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ತಥಾಕಥಿತ `ಹಿಂದೂ ಪರ’ ಸಂಘಟನೆಗಳು ದಾಳಿ ನಡೆಸಿದವು. ದಾವಣಗೆರೆಯಲ್ಲಿ ಆರಂಭಗೊಂಡ ಈ ದಾಳಿಯ ಸರಣಿ ಮಂಗಳೂರಿಗೆ ತಲುಪುವ ಹೊತ್ತಿಗೆ ಪಡೆದುಕೊಂಡ ಸ್ವರೂಪವೇ ಬೇರೆ. ಅಲ್ಲಿಯ ತನಕವೂ `ನ್ಯೂ ಲೈಫ್ ಫೆಲೋಷಿಪ್’ ಎಂಬ ಕ್ರೈಸ್ತ ಧರ್ಮ ಪ್ರಸಾರದ ಸಂಘಟನೆಗೆ ಸೇರಿದ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿದ್ದ ದಾಳಿಗಳು ಕೆಥೋಲಿಕ್ ಕ್ರೈಸ್ತರ ಚರ್ಚ್‌ಗಳಿಗೂ ವ್ಯಾಪಿಸಿದವು. ಶಿಲುಬೆಯನ್ನು ಮುರಿಯುವ, ಯೇಸುವಿನ ಪ್ರತಿಮೆಯನ್ನು ಭಗ್ನಗೊಳಿಸುವ, ಪರಮಪ್ರಸಾದವನ್ನು ನಾಶಪಡಿಸುವ, ಗರ್ಭಿಣಿಯ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದವು.
ಮಂಗಳೂರಿನಲ್ಲಿ ಕ್ರೈಸ್ತರು ಈ ದಾಳಿಗಳ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನೂ ಪಡೆಯಿತು. ಈ ಹಿಂಸೆಗೆ ಪೊಲೀಸರೇ ಕಾರಣರು ಎಂಬ ವಾದ ಒಂದೆಡೆಗಿದ್ದರೆ ಪ್ರತಿಭಟನೆಕಾರರ ಹಿಂಸೆ ಪೊಲೀಸರನ್ನು ರೊಚ್ಚಿಗೆಬ್ಬಿಸಿತು ಎಂಬುದು ಮತ್ತೊಂದು ವಾದ. ದಕ್ಷಿಣ ಕನ್ನಡದ ಪೊಲೀಸರು ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಈ ತನಕ ನಿರ್ವಹಿಸಿರುವುದನ್ನು ನೋಡಿದರೆ ತಪ್ಪು ಎರಡೂ ಕಡೆಯೂ ಇರಬಹು ದೆಂದು ಕಾಣಿಸುತ್ತದೆ. ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುವ ವರೆಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಈವರೆಗಿನ ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ.