ಕರ್ನಾಟಕದ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ತಕ್ಷಣ ಬಂದ ಬೌದ್ಧಿಕ ಜಗತ್ತಿನ ಪ್ರತಿಕ್ರಿಯೆಗಳಲ್ಲಿ ಮೊದಲನೆಯದ್ದು ಮತ್ತು ಬಹಳ ಮುಖ್ಯವಾದುದು ಡಾ.ಯು.ಆರ್. ಅನಂತಮೂರ್ತಿಯವರದ್ದು. `ಯಾರು ಬಂದರೇನು? ಎಲ್ಲರೂ ಭ್ರಷ್ಟರೇ…’ ಎಂಬ ಸಿನಿಕ ಪ್ರತಿಕ್ರಿಯೆಯ ಬದಲಿಗೆ ಅವರು ರಚನಾತ್ಮಕವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಹನ್ನೊಂದು ಅಂಶಗಳ ಜನತಾ ಪ್ರಣಾಳಿಕೆಯೊಂದರ ಕರಡನ್ನು ಬಿಡುಗಡೆ ಮಾಡಿ ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಪೂರ್ಣಗೊಳಿಸೋಣ ಎಂದರು. ಈ ಪ್ರಣಾಳಿಕೆಗೆ ಬಂದ ಪ್ರತಿಕ್ರಿಯೆಗಳು ಬಹಳ ಕುತೂಹಲಕಾರಿ. ರಾಜಕೀಯ ಪಕ್ಷಗಳಿಗೆಲ್ಲಾ ಒಂದೊಂದು ಪ್ರಣಾಳಿಕೆಯಿದ್ದಂತೆ ಜನತೆಗೂ ಒಂದು ಪ್ರಣಾಳಿಕೆ ಇರುತ್ತದೆ ಎಂಬುದನ್ನು ಹೇಳಿದ ಅನಂತಮೂತಿರ್ಯವರ ನಿಲುವನ್ನು ಹಲವರು ಶ್ಲಾಘಿಸಿದರು. ವಿವಿಧ ಚಳವಳಿಗಳಲ್ಲಿ ತೊಡಗಿಕೊಂಡಿರುವ ಹಲವರು, ರಾಜಕಾರಣ ಪರಿಶುದ್ಧವಾಗಿರಬೇಕೆಂದು ಬಯಸುವವರು ಅನಂತಮೂರ್ತಿಯವರು ಮಂಡಿಸಿದ ಹನ್ನೊಂದು ಸೂತ್ರಗಳಿಗೆ ಪೂರಕವಾಗಿ ಒಂದಷ್ಟು ಅಂಶಗಳನ್ನು ಸೇರಿಸಿದರು.