ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು.ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವಿತ್ತು. ಕರ್ನಾಟಕದ ಅನಂತಕುಮಾರ್ ಮತ್ತು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಕೇಂದ್ರ ಸಚಿವ ಸಂಪುಟದಲ್ಲಿದ್ದರು. ಕೇಂದ್ರದ ನೆರವಿಗೆ ಸಂಬಂಧಿಸಿದಂತೆ ಕರ್ನಾಟಕದ ಅಧಿಕಾರಾರೂಢ ಕಾಂಗ್ರೆಸ್ಸಿಗರ ಟೀಕೆ ಹೆಚ್ಚುತ್ತಲೇ ಹೋದಾಗ ಇಬ್ಬರೂ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು. ಕೇಂದ್ರ ಬರ ಪರಿಹಾರಕ್ಕೆಂದು ಒದಗಿಸಿದ್ದ ಹಣವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲ. ಬಹಳಷ್ಟು ಹಣ ಬಳಸದೆಯೇ ಲ್ಯಾಪ್ಸ್ (laps) ಆಗಿದೆ ಎಂದಲ್ಲಾ ಗದ್ದಲವೆಬ್ಬಿಸಿದ್ದರು. ಇದಕ್ಕೆ ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಜಗಧೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮುಂತಾದವರೆಲ್ಲಾ ಧ್ವನಿಗೂಡಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.