ಗುರು ನಿತ್ಯಚೈತನ್ಯ ಯತಿ 1924ರಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮುರಿಞಕಲ್ಲ್ ಎಂಬಲ್ಲಿ ಹುಟ್ಟಿದರು. 1952ರಲ್ಲಿ ಶ್ರೀ ನಾರಾಯಣಗುರುಗಳ ಉತ್ತರಾಧಿಕಾರಿಯಾಗಿದ್ದ ಶ್ರೀ ನಟರಾಜಗುರುಗಳ ಶಿಷ್ಯತ್ವ ಸ್ವೀಕರಿಸಿದರು. ತತ್ವಶಾಸ್ತ್ರ ಮತ್ತು ಮನೋವಿಜ್ಞಾನದ ವಿದ್ವಾಂಸರಾಗಿದ್ದ ಶ್ರೀ ನಿತ್ಯಚೈತನ್ಯ ಯತಿ ಇಂಗ್ಲಿಷ್ ಹಾಗೂ ಮಲೆಯಾಳಂನಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. 1999ರಲ್ಲಿ ಸಮಾಧಿಸ್ಥರಾಗುವವರೆಗೂ ಫರ್ನ್ ಹಿಲ್ಸ್‌ನ ನಾರಾಯಣ ಗುರುಕುಲಂ ಮತ್ತು ಈಸ್ಟ್ ವೆಸ್ಟ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದರು. ಯತಿಗಳ `ಮರಕ್ಕಾನಾವತ್ತವರ್’ ಪುಸ್ತಕದಲ್ಲಿರುವ ಇಬ್ಬರು ಅಸಾಧಾರಣ ಯೋಗಿಗಳ ಕುರಿತ ಲೇಖನದ ಆಯ್ದ ಭಾಗದ ಭಾವಾನುವಾದ ಇಲ್ಲಿದೆ.
1964ರಲ್ಲಿ ಯಾವುದೋ ಕಾರಣಕ್ಕಾಗಿ ಋಷಿಕೇಶಕ್ಕೆ ಹೋಗಿ ಶಿವಾನಂದಾಶ್ರಮದಲ್ಲಿ ಉಳಿದುಕೊಳ್ಳಬೇಕಾಯಿತು. ಅಲ್ಲಿರುವ ಒಂದು ಕಟ್ಟಡದಿಂದ ರಾತ್ರಿ ಹಗಲೆನ್ನದೆ ಹಾಡು ಕೇಳಿಬರುತ್ತಿತ್ತು. ಈ ಹಾಡಿನ ಮಾಧುರ್ಯಕ್ಕೆ ಮಾರುಹೋದ ನಾನು ಆ ಕಟ್ಟಡ ಬಾಗಿಲನ್ನೊಮ್ಮೆ ತಟ್ಟಿ ನೋಡಿದೆ. ಆಗ ಹಾಡು ನಿಂತು ಬಾಗಿಲು ತೆರೆದುಕೊಂಡಿತು.
ಬಾಗಿಲು ತೆರೆದದ್ದು ಸುಮಾರು ಐವತ್ತರ ಆಸುಪಾಸಿನಲ್ಲಿದ್ದ ಒಬ್ಬ ಸನ್ಯಾಸಿ. ಕಾವಿಧಾರಿ. ಮುಂಡನಕ್ಕೆ ಒಳಗಾದ ತಲೆ. ಮುಖದಲ್ಲಿಯೂ ಕೂದಲುಗಳಿಲ್ಲ.
ಸನ್ಯಾಸಿಗಳ ಹೆಸರು ಕೇಳುವ ಅಗತ್ಯವಿಲ್ಲ. ಸುಮ್ಮನೆ ಸ್ವಾಮೀಜಿ ಎಂದು ಕರೆದರೆ ಸಾಕು. `ಸ್ವಲ್ಪ ಹೊತ್ತು ಹಾಡು ಕೇಳಲೇ ಸ್ವಾಮೀಜಿ?’ ಎಂದೆ.