ನಳಿನಿ ಜಮೀಲಾ– ಈ ಹೆಸರು ಕೇರಳದಲ್ಲಿ ಜನಜನಿತ. ಕಾರಣ ಆಕೆ ಬರೆದ ಆತ್ಮಕಥೆ.`ಲೈಂಗಿಕ ವೃತ್ತಿ ನಿರತಳೊಬ್ಬಳ ಆತ್ಮಕತೆ’ ಎಂಬ ಶೀರ್ಷಿಕೆಯ ಈ ಪುಸ್ತಕ ಸಂಪ್ರದಾಯಬದ್ಧ ಮನಸ್ಸುಗಳನ್ನೂ ಸ್ತ್ರೀವಾದಿಗಳನ್ನೂ ಏಕಕಾಲದಲ್ಲಿ ಕೆಣಕಿತ್ತು. ವೇಶ್ಯೆಯಾಗಿರುವುದೂ ಒಂದು ವೃತ್ತಿಯಾಗಬಹುದು ಎಂದು ಧೈರ್ಯವಾಗಿ ಹೇಳುವ ಮಹಿಳೆ ಸದ್ಯ ಕೇರಳಾ ಸೆಕ್ಸ್ ವರ್ಕರ್ಸ್ ಫೋರಂನ ಸಂಚಾಲಕಿಯಾಗಿದ್ದಾರೆ. ಪ್ರಸ್ತುತ ಲೇಖನದಲ್ಲಿ ತಮ್ಮ ಎರಡು ರಾತ್ರಿಗಳ ನೆನಪುಗಳನ್ನು ದಾಖಲಿಸಿದ್ದಾರೆ. ನಳಿನಿ ಜಮೀಲಾರ ಮಾತುಗಳನ್ನು ಮಲಯಾಳಂನಲ್ಲಿ ಪಿ.ಸಿ. ಹರೀಶ್ ಲೇಖನ ರೂಪಕ್ಕೆ ಇಳಿಸಿದ್ದರು. ಅದನ್ನಿಲ್ಲಿ ಅನುವಾದಿಸಲಾಗಿದೆ.
ಬಹಳ ವರ್ಷಗಳಾಗಿರಬೇಕು. ಏನಿಲ್ಲಾ ಎಂದರೂ ಇಪ್ಪತ್ತೈದು ಇಪ್ಪತ್ತಾರು ವರ್ಷಗಳಾದರೂ ಆಗಿರಬಹುದು… ಆಗ ನನಗೆ ಸುಮಾರು ಇಪ್ಪತ್ತೇಳು ವರ್ಷ ವಯಸ್ಸು. ಲೈಂಗಿಕ ವೃತ್ತಿ ಆರಂಭಿಸಿ ನಾಲ್ಕೈದು ವರ್ಷ ಕಳೆದಿತ್ತಷ್ಟೆ. ಕುಟ್ಟನಾಡಿನಲ್ಲಿದ್ದ ಮನೆಯೊಂದರಲ್ಲಿ ನನ್ನ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದೆ. ಅದು ಇತ್ತಿರಿವಮ್ಮನ ಮನೆ. ಇದು ನಮ್ಮ `ಕಂಪೆನಿ’ಯ ಮನೆ ಎಂದೂ ಹೇಳಬಹುದಿತ್ತು. ಕೆಲವು ಗಿರಾಕಿಗಳು ನನ್ನನ್ನು ಗುರುವಾಯೂರು, ಕುನ್ನಂಕುಳಂ ಮುಂತಾದೆಡೆಗೂ ಕರೆದೊಯ್ಯುತ್ತಿದ್ದರು. ಇಂಥದ್ದೊಂದು ಪ್ರಯಾಣದ ಮಧ್ಯೆ ನಾನು ಆತನನ್ನು ಮೊದಲ ಬಾರಿ ಕಂಡೆ. ಆತ ಕುನ್ನಂಕುಳಂನಲ್ಲಿ ಹೊಟೇಲ್ ಸಪ್ಲೇಯರ್. ಹೆಸರು ಕೃಷ್ಣನ್‌ಕುಟ್ಟಿ. ನಾನು ಮತ್ತು ನನ್ನ ಗೆಳೆಯ/ಗೆಳತಿಯರು ಇದೇ ಹೊಟೇಲ್‌ನಲ್ಲಿ ಊಟ ಮಾಡುತ್ತಿದ್ದೆವು.
ಚಹಾಕ್ಕೆ ಆರ್ಡರ್ ಮಾಡಿ ನಾನು ಸಿಗರೇಟು ಹಚ್ಚುತ್ತಿದ್ದೆ. ಸುಂದರಿಯಾದ ಹುಡುಗಿಯೊಬ್ಬಳು ಸಾಧಾರಣ ಹೊಟೇಲ್‌ನಲ್ಲಿ ಕುಳಿತು ಸಿಗರೇಟ್ ಹಚ್ಚಿದರೆ ಎಲ್ಲರ ಕಣ್ಣು ಅವಳ ಮೇಲೆ ಬೀಳುವುದರಲ್ಲಿ ಆಶ್ಚರ್ಯವೇನಿದೆ. ಕೃಷ್ಣನ್‌ಕುಟ್ಟಿಯೂ ಅಷ್ಟೇ ಓರೆಗಣ್ಣಿನಲ್ಲಿ ನನ್ನನ್ನು ಗಮನಿಸುತ್ತಲೇ ಇರುತ್ತಿದ್ದ. ಆತ ಅಷ್ಟೇನೂ ಸುಂದರನಲ್ಲ. ಆದರೆ ಮುಗ್ಧ ಮುಖ, ನಿಷ್ಕಳಂಕ ನಗು, ಎಲ್ಲರೊಂದಿಗೆ ಒಳ್ಳೆಯ ಮಾತು. ಅದೇನೋ ನನಗೂ ಅವನು ಇಷ್ಟವಾಗಿದ್ದ… ಅದರಿಂದಾಗಿಯೇ ಅವನು ಓರೆಗಣ್ಣಿನಲ್ಲಿ ನನ್ನನ್ನೇ ನೋಡುತ್ತಿದ್ದುದನ್ನು ನಾನೂ ಕಳ್ಳಗಣ್ಣುಗಳಲ್ಲಿ ಗಮನಿಸುತ್ತಲೇ ಇರುತ್ತಿದ್ದೆ.
ಮಾಜಕ್ಕೆ ಒಪ್ಪಲೇ ಸಾಧ್ಯವಿಲ್ಲದ ವೃತ್ತಿಯೊಂದರಲ್ಲಿ ತೊಡಗಿದ್ದ ನನ್ನ ಹೃದಯದೊಳಕ್ಕೆ ಆತ ಬಂದು ಕುಳಿತದ್ದು ಯಾವತ್ತು? ನನಗಂತೂ ಗೊತ್ತಿಲ್ಲ. ಕೃಷ್ಣನ್‌ಕುಟ್ಟಿಗೆ ನನ್ನ ಬಗ್ಗೆ ಏನೇನೂ ಗೊತ್ತಿರಲಿಲ್ಲ. ನನಗೂ ಅಷ್ಟೇ ಆತನ ಬಗ್ಗೆ ಏನೂ ಗೊತ್ತಿರಲಿಲ್ಲ. ನಾವು ಪರಸ್ಪರ ಮಾತನಾಡಿಯೂ ಇರಲಿಲ್ಲ. ನನ್ನ ಸಿಗರೇಟ್ ಪ್ರೀತಿ, ಜೋರಾದ ನಗು, ಹರಟೆಯ ನಡುವಣ ಕೀಟಲೆಗಳನ್ನೆಲ್ಲಾ ಆತ ದೂರದಿಂದಲೇ ಆಸ್ವಾಧಿಸುತ್ತಿದ್ದ ಎಂಬುದಂತೂ ನನಗೆ ತಿಳಿಯುತ್ತಿತ್ತು. ಆಗೀಗ ಅವನನ್ನು ಕದ್ದು ನೋಡುವ ಕೆಲಸ ನನಗೂ ಇಷ್ಟದ್ದು.
ಆ ದಿನಗಳಲ್ಲಿ ಲೈಂಗಿಕ ವೃತ್ತಿ ಈಗಿನಂತಿರಲಿಲ್ಲ. ಗಿರಾಕಿಗಳಿಗೆ ಸಿಕ್ಕಾಪಟ್ಟೆ ಭಯ. ಜತೆಗೆ ಅಳೆತೆ ಮೀರಿದ ಆತಂಕ. ನಾನು ಹಾಗೂ ಇತ್ತಿರವಮ್ಮನ ಮನೆಗೆ ಬರುತ್ತಿದ್ದವರನ್ನು ಸಾಮಾನ್ಯವಾಗಿ ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತಿತ್ತು. ಅದರಲ್ಲಿ ಪರವಾಗಿಲ್ಲ ಎನ್ನುವಷ್ಟು ಧನವಂತರಾದ ಯುವಕರನ್ನು ಮಾತ್ರ ನನ್ನ ಬಳಿಗೆ ಕಳುಹಿಸುತ್ತಿದ್ದರು. ಗದ್ದಲವೆಬ್ಬಿಸುವ ಮುದುಕರನ್ನು ತಂಗಮಣಿ ಮತ್ತು ಕಲ್ಯಾಣಿ ನಿರ್ವಹಿಸುತ್ತಿದ್ದರು. ದೊಡ್ಡ ದೊಡ್ಡ ಕುಟುಂಬಗಳ ತಲೆತಿರುಕ ಯುವಕರನ್ನು ಕುಟ್ಟಿತಂಗಮಣಿ ಸಂಬಾಳಿಸುತ್ತಿದ್ದಳು.
ಆಗೆಲ್ಲಾ ದಿನಕ್ಕೆ ಒಬ್ಬಿಬ್ಬರನ್ನು ಸುಧಾರಿಸಿದರೇ ಅದೇ ಹೆಚ್ಚು. ಎಲ್ಲ ಮುಗಿದರೂ ದೇಹಕ್ಕೊಂದು ಇರುವೆ ಕಚ್ಚಿದಾಗಿನ ಸುಸ್ತೂ ಇರುತ್ತಿರಲಿಲ್ಲ.
ಹೆಚ್ಚಿನ ಸಂದರ್ಭದಲ್ಲಿ ಇವೆಲ್ಲಾ ನಗುತರಿಸುವ ವ್ಯವಹಾರ. ಲೈಂಗಿಕತೆಯ ಬಗ್ಗೆ ಏನೂ ಅರಿಯದ ಮುಗ್ಧರು…ಅವರಿಗೆ ನನ್ನಂಥವರಲ್ಲಿ ಮಾತನಾಡುವುದಕ್ಕೂ ವಿಷಯವಿರುವುದಿಲ್ಲ. ಒಬ್ಬ ಒಳಗಿದ್ದರೆ ಆತ ಹೊರ ಬರುವವರೆಗೂ ಮತ್ತೊಬ್ಬ ಕಾದು ಕುಳಿತಿದ್ದು ಮತ್ತೆ ತಕ್ಷಣ ಒಳ ಬಂದು ಕ್ಷಣಾರ್ಧದಲ್ಲಿ ತೃಪ್ತಿ ಪಟ್ಟು ಹೊರಟುಬಿಡುತ್ತಿದ್ದರು.
ಆ ದಿನಗಳಲ್ಲಿ ಪ್ರತೀ ಗಿರಾಕಿ ಬರುವಾಗಲೂ ನನ್ನೊಳಗೆ ಪ್ರೀತಿಯ ಒರತೆಯೊಂದು ಹುಟ್ಟಿಕೊಳ್ಳುತ್ತಿತ್ತು. ಬರೇ ದೇಹ ಬಾಧೆ ತೀರಿಸುವವರಂತೆ ಬರುವ ಇವರಿಗೆ ಪ್ರೀತಿಯ ಆರ್ದ್ರತೆಯ ಅಗತ್ಯವೇನೂ ಇರುವುದಿಲ್ಲವಲ್ಲ…ಹಾಗಾಗಿ ನನ್ನೊಳಗೆ ಹುಟ್ಟಿದ್ದ ಆ ಪ್ರೀತಿಯ ಒರತೆ ಹಾಗೆಯೇ ಬತ್ತಿ ಹೋಗುತ್ತಿತ್ತು. ಲೈಂಗಿಕತೆಯ ದಾಹವೇ ಪ್ರೀತಿಯ ಅಭಿಲಾಷೆ ಎಂಬ ತಪ್ಪು ತಿಳಿವಳಿಕೆ ನನ್ನಲ್ಲೂ ಇತ್ತಲ್ಲ…!
ಲೈಂಗಿಕತೆಯ ಅಗತ್ಯವೇ ಇಲ್ಲದ ಪ್ರೀತಿಯೂ ಸಾಧ್ಯ ಎಂಬುದು ಈಗ ನನಗೆ ತಿಳಿದಿದೆ. ಇದು ನನ್ನಂಥವರಿಗೊಂದು ಬಗೆಯ ಸಾಂತ್ವನ. ನಾನು ನನ್ನ ಪ್ರಣಯಿಯೂ ನಮ್ಮನ್ನೇ ಅರ್ಥ ಮಾಡಿಕೊಳ್ಳುವ ಕ್ರಿಯೆ. ನಾನೂ ಆ ಹೊಟೇಲ್ ಸಪ್ಲೆಯರ್ ಕೃಷ್ಣನ್‌ಕುಟ್ಟಿಯೂ ಲೈಂಗಿಕತೆಯ ಅಗತ್ಯವಿಲ್ಲದ ಪ್ರಣಯದ ಹಾದಿಯಲ್ಲಿ ನಡೆದಿದ್ದವು. ಪ್ರೀತಿ ಎಂಬುದು ಮದುವೆಯಲ್ಲಿ ಕೊನೆಗೊಳ್ಳಬೇಕು ಎಂಬ ಜನಪ್ರಿಯ ನಂಬಿಕೆಯಿಂದಾಗಿ ಕೃಷ್ಣನ್‌ಕುಟ್ಟಿ ಕೂಡಾ ನನ್ನನ್ನು ಮದುವೆಯಾಗುವುದಕ್ಕೆ ಕೆಲವು ಯೋಜನೆಗಳನ್ನು ರೂಪಿಸುತ್ತಿದ್ದ. ಹೃದಯದೊಳಗಿನ ಪ್ರೀತಿಯೆಂಬ ಕೊಡ ತುಂಬಿದ್ದರೂ ಅದು ತಮಾಷೆ, ಕೀಟಲೆಗಳಾಚೆಗೆ ಬೆಳೆಯುವಂಥದ್ದು ಎಂದು ನನಗೆ ಅನ್ನಿಸುತ್ತಿರಲಿಲ್ಲ. ಅಥವಾ ಆ ದಿನಗಳಲ್ಲಿ ನಾನು ಪ್ರೀತಿಯೆಂಬ ಅನುಭೂತಿಯನ್ನು ಅದಕ್ಕಿಂತ ಹೆಚ್ಚು ಬೆಳೆಯಲು ಬಿಟ್ಟಿರಲಿಲ್ಲ . ಆ ದಿನಗಳ ನನ್ನ ಪರಿಸರವೇ ನನ್ನನ್ನು ಪರಿಪೂರ್ಣ ಪ್ರೀತಿಯೊಂದರ ಅನುಭವವನ್ನೇ ಪಡೆಯದಂತೆ ತಡೆಯಿತು ಅನ್ನಿಸುತ್ತದೆ.
ಒಂದು ದಿನ ಆತ ಬಾಯಿಬಿಟ್ಟು ಹೇಳಿದ. `ನೀನೆಂದರೆ ನನಗಿಷ್ಟ. ಮದುವೆಯಾಗುತ್ತೇನೆ…’ ಆದರೆ ಆ ಹೊತ್ತಿಗಾಗಲೇ ನನ್ನ ಮದುವೆಯಾಗಿತ್ತು! ಮಕ್ಕಳೂ ಇದ್ದರು. ಇವೆಲ್ಲಾ ಪ್ರೀತಿಯನ್ನು ತಡೆಯಲು ಸಮರ್ಥವಾದ ಅಡ್ಡಗೋಡೆಗಳಲ್ಲ ಎಂಬುದೂ ನನಗೆ ತಿಳಿದಿತ್ತು. ಆದರೂ ಅವನ ಮಾತು ಕೇಳಿದ ಕ್ಷಣ ನನಗೇನೂ ತೋಚದೇ ಹೋದದ್ದೂ ನಿಜ. ಅವನ ಮಾತುಗಳಲ್ಲಿದ್ದ ಪ್ರೀತಿಯ ಕಂಪನ ನನಗೆ ಕೇಳಿಸುತ್ತಿತ್ತು. ಆದರೆ ಅದನ್ನು ಪೂರ್ಣವಾಗಿ ಸ್ವೀಕರಿಸಲು ನನಗೆ ಸಾಧ್ಯವಿರಲಿಲ್ಲ. ಕಾರಣ ಸರಳ. ಆತನಿಗೆ ನನ್ನ ವೃತ್ತಿಯೇನೆಂದೇ ಗೊತ್ತಿರಲಿಲ್ಲ… ಒಂದು ತಮಾಷೆ ಎಂಬಂತೆ ನಾನು ಆ ಮಾತುಗಳನ್ನು ಕೇಳಿಸಿಕೊಂಡು ಮೌನವಾಗಿ ಉಳಿದೆ.
ಆತ ಮಾತ್ರ ನನ್ನ ಮೇಲಿನ ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸಿದ್ದ. ಈ ವಿಷಯವನ್ನು ಮನೆಯವರಿಗೆ ತಿಳಿಸಿ ಎರಡು ದಿನಗಳ ನಂತರ ಮತ್ತೆ ನನ್ನನ್ನು ಆ ಹೋಟೇಲಿನಲ್ಲೇ ಭೇಟಿಯಾದ. ಅವನ ಮುಖದಲ್ಲಿ ಸಂತೋಷ ಪುಟಿಯುತ್ತಿತ್ತು. ಆತನ ಮಾತು ಕೇಳುತ್ತಾ ನಾನು ಸುಮ್ಮನೆ ಕುಳಿತೆ. ನನ್ನ ಕಣ್ಣು ತುಂಬಿ ಬಂದವು. ಸಂತೋಷದಿಂದಲೋ? ನಿಸ್ಸಹಾಯಕತೆಯಿಂದಲೋ ಎಂದು ನನಗೀಗಲೂ ತಿಳಿದಿಲ್ಲ.
ಹೇಳುವನ್ನೆಲ್ಲಾ ಮುಗಿಸಿ ಹೋದ ನಂತರ ನಾನು ನನ್ನೆದುರು ಇಟ್ಟಿದ್ದ ತಿಂಡಿ ತಿಂದು ಹೊರಟೆ. ಹೊಟೇಲಿನ ಕ್ಯಾಶ್ ಕೌಂಟರ್‌ನ ಬಳಿಯೇ ನನಗಾಗಿ ಗಿರಾಕಿಯೊಬ್ಬರು ಕಾಯುತ್ತಿದ್ದರು. ಆತ ನನ್ನನ್ನು ಮಾತನಾಡಿಸಿದ. ನಾಳೆ ಎಲ್ಲಿ ಸಿಗಬೇಕು. ದುಡ್ಡೆಷ್ಟು ಎಂಬುದನ್ನೆಲ್ಲಾ ಚರ್ಚಿಸುತ್ತಿದ್ದಾಗ ಅಲ್ಲೇ ಬಾಗಿಲ ಬಳಿ ನಿಂತು ಕೃಷ್ಣನ್‌ಕುಟ್ಟಿ ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ. ನಾನದನ್ನು ಗಮನಿಸಿಯೇ ಇರಲಿಲ್ಲ. ಆತ ಮುಂದಿಟ್ಟ ಮದುವೆ ಪ್ರಸ್ತಾಪಕ್ಕೆ ನನ್ನ ಪ್ರತಿಕ್ರಿಯೆಗಾಗಿ ಕಾಯುತ್ತಾ ಆತ ಬಾಗಿಲ ಬಳಿ ನಿಂತಿದ್ದನಂತೆ.
ಮತ್ತೆ ನನಗೆ ಕೇಳಿಸಿದ್ದು ಒಂದು ಭೀಕರ ಸದ್ದು. ನಾನು ಬೆಚ್ಚಿ ಬಿದ್ದೆ. ನೋಡಿದರೆ ಕೃಷ್ಣನ್‌ಕುಟ್ಟಿ. ಆತ ಹುಚ್ಚನಂತಾಗಿಬಿಟ್ಟಿದ್ದ. ಕಣ್ಣಿನ ಗುಳ್ಳೆ ಹೊರಕ್ಕೆ ಬೀಳುತ್ತವೆಯೇನೋ ಎಂಬಂತಿದ್ದವು. ಮುಖ ಗಂಟಿಕ್ಕಿತ್ತು. ಆತ ಕೈಲಿದ್ದ ಟ್ರೇಯನ್ನು ನೆಲಕ್ಕೆಸೆದು ಕಿರುಚಿದ್ದ. ವಿಷಯವೇನೆಂದು ತಿಳಿಯದೆ ಇಡೀ ಹೊಟೇಲು ಗಾಬರಿಯಿಂದ ದಿಟ್ಟಿಸುತ್ತಿತ್ತು. ಕೃಷ್ಣನ್‌ಕುಟ್ಟಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ.
ಒಂದು ಕ್ಷಣ ನನಗೆ ಭೂಮಿ ಬಾಯ್ಬಿಡಬಾರದೇ ಅನ್ನಿಸಿತು. ಅದೇ ಕ್ಷಣ ಆತನ ಪ್ರೀತಿಯ ಆಳವೂ ತಿಳಿಯಿತು. ಆತನನ್ನು ನಾನು ನಿಜಕ್ಕೂ ಪ್ರೀತಿಸುತ್ತಿದ್ದೆ. ಆದರೇನು ಮಾಡುವುದು ಎಲ್ಲವೂ ಈಗ ಗಾಜಿನಂತೆ ಒಡೆದು ಹೋಯಿತಲ್ಲಾ… ಇನ್ನೇನು ಮಾಡುವುದಕ್ಕೆ ಉಳಿದಿಲ್ಲ ಎನ್ನಿಸಿ ನಾನು ಮೆಲ್ಲೆಗೆ ಹೊರಕ್ಕೆ ಹೆಜ್ಜೆ ಹಾಕಿದೆ.
ನನ್ನ ಹೃದಯವೇ ಛಿದ್ರವಾಗಿತ್ತು. ಮನೆಗೆ ಹೋದವಳೇ ಬಾಯಿಗೊಂದಿಷ್ಟು ವಿಸ್ಕಿ ಸುರಿದುಕೊಂಡೆ. ಮತ್ತೆ ಕುಡಿಯುತ್ತಾ ಹೋದೆ. ನಾನು ಅಷ್ಟೊಂದು ಕುಡಿದದ್ದು ಅಂದೇ ಇರಬೇಕು. ಎಷ್ಟೂ ಕುಡಿದರೂ ಅವನ ಕೂಗು, ಬಿಕ್ಕಿ ಬಿಕ್ಕಿ ಅಳುವ ಆ ಮುಖವೇ ನನ್ನ ಕಣ್ಣೆದುರು ಬರುತ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಯನ್ನೇ ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿತ್ತು. ಮತ್ತೆಷ್ಟೋ ರಾತ್ರಿಗಳನ್ನು ಈ ನೋವಿನಲ್ಲೇ ನಿದ್ದೆಯಿಲ್ಲದೆ ಕಳೆದಿದ್ದೇನೆ.
ಈಗ ಕೃಷ್ಣನ್‌ಕುಟ್ಟಿ ಎಲ್ಲಿದ್ದಾನೆಂದು ನನಗೆ ಗೊತ್ತಿಲ್ಲ. ಆ ದಿನದ ನಂತರ ಮತ್ತೆ ಆ ಹೊಟೇಲಿಗೆ ನಾನು ಹೋಗಲೂ ಇಲ್ಲ. ಮತ್ತೂ ಕೆಲಕಾಲ ಆತ ಅಲ್ಲೇ ಕೆಲಸ ಮಾಡುತ್ತಿದ್ದನೆಂದು ನನ್ನ ಗೆಳತಿಯರು ಹೇಳುತ್ತಿದ್ದರು. ಇದೆಲ್ಲಾ ಆಗಿ ದಶಕಗಳೇ ಉರುಳಿದರೂ ಆ ಮುಖ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದುಕೊಂಡುಬಿಟ್ಟಿದೆ. ನನಗೇನಾದರೂ ಚಿತ್ರ ಬಿಡಿಸಲು ಗೊತ್ತಿದ್ದರೆ ಅರೆಕ್ಷಣದಲ್ಲಿ ನನ್ನ ಆ ಪ್ರೇಮಿಯ ಚಿತ್ರ ಬಿಡಿಸಿ ನಿಮ್ಮೆದುರು ಇಟ್ಟು ಬಿಡುತ್ತಿದ್ದೆ.
***
ನಾನು ನಿದ್ದೆಯಿಲ್ಲದೆ ಕಳೆದ ರಾತ್ರಿಯ ಬಗ್ಗೆ ಹೇಳಿದ್ದೇನೆ. ಈಗ ನಾನು ನಿದ್ರಿಸಿದ ರಾತ್ರಿಯೊಂದನ್ನು ವಿವರಿಸುತ್ತೇನೆ.
ಇತ್ತಿರಿವಮ್ಮನ ಮನೆಯಲ್ಲಿದ್ದ ದಿನಗಳಲ್ಲೇ ನಾನು ಲಕ್ಷ್ಮೀಅಮ್ಮನ ಮನೆಗೂ ಹೋಗುತ್ತಿದ್ದೆ. ಚಾಲಿಶೇರಿಯಾಚೆಗಿರುವ ಕೋತರ ಎಂಬಲ್ಲಿ ಆ ಮನೆ ಇತ್ತು. ಇತ್ತಿರಿವಮ್ಮನ ಮನೆ ಆ ಪ್ರದೇಶದಲ್ಲೆಲ್ಲಾ ಬಹಳ `ಪ್ರಸಿದ್ಧ’. ಅದರಿಂದಾಗಿ ಅಲ್ಲಿ ಆಗಾಗ ಪೊಲೀಸ್ ರೇಡ್ ನಡೆಯುತ್ತಿತ್ತು. ಕೆಲವೊಮ್ಮೆ ಗಿರಾಕಿಗಳೂ ಅನಗತ್ಯ ಗದ್ದಲವೆಬ್ಬಿಸುತ್ತಿದ್ದರು.
ಈ ಸಂದರ್ಭಗಳಲ್ಲಿ ನಾನು ಮೆಲ್ಲಗೆ ಲಕ್ಷ್ಮೀ ಅಮ್ಮನ ಮನೆಯಕಡೆ ಹೊರಟುಬಿಡುತ್ತಿದ್ದೆ. ಅದೊಂದು ಕುಗ್ರಾಮದಲ್ಲಿದ್ದ ಮನೆ. ಹತ್ತಿರದಲ್ಲಿ ಬೇರೆ ಯಾವ ಮನೆಗಳೂ ಇರಲಿಲ್ಲ. ಲಕ್ಷ್ಮೀಅಮ್ಮನ ಗಿರಾಕಿಗಳಲ್ಲಿ ಹಲವರು ನಿಯತ ಗ್ರಾಹಕರು. ಲಕ್ಷ್ಮೀಅಮ್ಮನ ಗಂಡ ಸೇಲಂನಲ್ಲಿದ್ದರು. ಯಾರಾದರೂ ಬಂದು ಮನೆಯಲ್ಲಿರುವವರು ಯಾರು ಎಂದರೆ ಗಂಡನ ಸಂಬಂಧಿಕರು ಎಂದು ಲಕ್ಷ್ಮೀಅಮ್ಮ ಹೇಳುತ್ತಿದ್ದರು.
ಲಕ್ಷ್ಮೀಅಮ್ಮನ ನಿಯತ ಗ್ರಾಹಕರಲ್ಲೊಬ್ಬ ಸಿನಿ ಮಾಥ್ಯೂ. ಸರಕಾರೀ ಕೆಲಸದಲ್ಲಿದ್ದ ಈತ ನನಗಿಂತಲೂ ಹತ್ತು ವರ್ಷ ಹಿರಿಯ. ಲಕ್ಷ್ಮೀಅಮ್ಮ ಈತನಿಗೆ ಹೊಸ ಹೊಸ ಹುಡುಗಿಯರನ್ನು ಹುಡುಕಿ ಒದಗಿಸುತ್ತಿದ್ದರು. ಹೀಗೆ ನಾನೂ ಒಮ್ಮೆ ಸಿನಿ ಮಾಥ್ಯೂವಿಗೆ ಹೊಸ ಹುಡುಗಿಯಾದೆ…
ಮದುವೆಯಾಗಿದ್ದೆ, ನಾಲ್ಕು ಮಕ್ಕಳಿದ್ದವು. ಅಷ್ಟೇಕೆ ನಾಲ್ಕೈದು ವರ್ಷಗಳ ಲೈಂಗಿಕ ವೃತ್ತಿಯ ನಂತರವೂ ನನಗೆ ನಿಜವಾದ ಶೃಂಗಾರಾನುಭವ ಆಗಿರಲಿಲ್ಲ. ಮೊದಲಿಗೆ ಅದು ಸಿಕ್ಕದ್ದು ಈ ಸಿನಿ ಮಾಥ್ಯೂವಿನಿಂದ. ತನ್ನ ದೇಹದ ತೃಷೆಯನ್ನು ಮೀರಿದ ಲೋಕವನ್ನು ಅರಿತ ಕೆಲವೇ ಕೆಲವು ಗಿರಾಕಿಗಳಲ್ಲಿ ಈತನೂ ಒಬ್ಬ. ಈತನ ಸ್ಪರ್ಶದಿಂದ ನನ್ನೊಡಲು ಮೊಟ್ಟ ಮೊದಲ ಬಾರಿಗೆ ಜಾಗೃತವಾಯಿತು. ಹೂ ಅರಳುವಂತೆ ನನ್ನೊಳಗಿನ ಅನುಭೂತಿಗಳು ಒಂದೊಂದಾಗಿ ಅರಳಿದವು. ಅದನ್ನೆಲ್ಲಾ ಹೇಗೆ ವಿವರಿಸಬೇಕೆಂದು ನನಗೆ ತಿಳಿಯುತ್ತಿಲ್ಲ.
ನಮಗೇನಿಷ್ಟ ಎಂಬುದನ್ನು ನಾವು ಹೇಳದೆಯೇ ಯಾರಾದರೂ ಅರ್ಥ ಮಾಡಿಕೊಂಡರೆ ಹೇಗಿರಬಹುದು? ಅಂಥದ್ದೊಂದು ವ್ಯಕ್ತಿತ್ವ ಸಿನಿ ಮಾಥ್ಯೂವಿನದ್ದು. ಇದು ಕೇವಲ ಲೈಂಗಿಕತೆಗೆ ಮಾತ್ರ ಸಂಬಂಧಿಸಿದ ವಿಷಯವೇನೂ ಅಲ್ಲ. ಎಲ್ಲಾ ವಿಷಯಗಳಿಗೂ ಆತನ ಸ್ಪಂದನೆ ಹೀಗೆಯೇ. ನನಗೇನು ಇಷ್ಟವೋ ಅದನ್ನೆಲ್ಲಾ ಹೊತ್ತೇ ನನ್ನಲ್ಲಿಗೆ ಬರುತ್ತಿದ್ದ ಈತ ನನ್ನ ಪ್ರತೀ ಜೀವಕೋಶಗಳನ್ನು ಜಾಗೃತಗೊಳಿಸುತ್ತಿದ್ದ. ಬಹುಶಃ ಮೊದಲ ಬಾರಿಗೆ ನಾನು ಪುರುಷನೊಬ್ಬನ ಎದೆಯ ಮೇಲೆ ತಲೆಯಿಟ್ಟು ಮಲಗಿದೆ….