ನಂಬಿ ಹಿಡಿದರೆ ನದಿಯ ಮಗ ಹಗೆಯ ಅಂಬಿಗಿಟ್ಟ ಕಾಯವನು
ಸುತ ಸತ್ತ ನೆಪದಲಿ ಧನುವ ಬಿಸುಟನು ಗರಡಿಯಾಚಾರ್ಯ
ಅಂಬು ಬೆಸನವ ಬೇಡಿದರೆ ತೊಡನೆಂಬ ಛಲ ನಿನಗಾಯ್ತು
ಮೂವರ ನಂಬಿ ಕೌರವ ಕೆಟ್ಟ ಅಕಟಕಟೆಂದನಾ ಶಲ್ಯ
ಇದು ಕರ್ಣಪರ್ವ ಯಕ್ಷಗಾನ ಪ್ರಸಂಗದ ಒಂದು ಪದ್ಯ. ತಮ್ಮೆಲ್ಲಾ ಪರಾಕ್ರಮಗಳನ್ನೂ ಕೃಷ್ಣನ `ಆಪರೇಷನ್’ಗಳಿಗೆ ಬಲಿಕೊಟ್ಟ ಕುರುಸೇನೆಯ ಅತಿರಥ ಮಹಾರಥರ ಕುರಿತು ಶಲ್ಯ ಆಡಿಕೊಳ್ಳುವುದನ್ನು ಈ ಪದ್ಯ ವಿವರಿಸುತ್ತದೆ.
ರಣರಂಗದಲ್ಲಿ ಕುರುಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಭೀಷ್ಮ ಶಿಖಂಡಿಯನ್ನು ನೆಪವಾಗಿಟ್ಟುಕೊಂಡು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯಕಾಲವನ್ನು ನಿರೀಕ್ಷಿಸತೊಡಗಿದ. ಮಗ ಚಿರಂಜೀವಿಯೆಂದು ತಿಳಿದಿದ್ದರೂ ಅಶ್ವತ್ಥಾಮನೆಂಬ ಆನೆ ಹತ್ಯೆಯಾದ ಸುದ್ದಿಯನ್ನು ನೆಪವಾಗಿಟ್ಟುಕೊಂಡ ದ್ರೋಣಾಚಾರ್ಯ ಯೋಗ ನಿದ್ರೆಗೆ ಪ್ರವೇಶಿಸಿಬಿಟ್ಟ. ಭೀಷ್ಮರಿರುವ ತನಕ ಯುದ್ಧರಂಗಕ್ಕೆ ಬರಲಾರನೆಂದು ಕುಳಿತಿದ್ದ ಕರ್ಣ ರಣರಂಗಕ್ಕೆ ಬಂದ ಮೇಲೆ ಕುಂತಿಗೆ ಕೊಟ್ಟ `ತೊಟ್ಟಂಬ ತೊಡಲಾರೆ’ನೆಂಬ ಭಾಷೆಗೆ ಬದ್ಧವಾಗಿ ಉಳಿದ. ಇವರನ್ನೆಲ್ಲಾ ನಂಬಿ `ಕೌರವ ಕೆಟ್ಟ’ ಎನ್ನುವ ಶಲ್ಯ ಕೂಡಾ ಕರ್ಣನ ತೊಟ್ಟ ಬಾಣವ ತೊಡದ ಪ್ರತಿಜ್ಞೆಯನ್ನು ಖಂಡಿಸಿ ರಥವಿಳಿದು ಕೌರವ ಕೆಡುವುದಕ್ಕೆ ತನ್ನ ಪಾಲನ್ನು ಸೇರಿಸುತ್ತಾನೆ.
ಚುನಾವಣಾ ಕುರುಕ್ಷೇತ್ರದಲ್ಲಿರುವ ಕರ್ನಾಟಕದ ಕಾಂಗ್ರೆಸ್‌ನ ಸ್ಥಿತಿಯೂ ಹೆಚ್ಚು ಕಡಿಮೆ ಮಹಾಭಾರತದ ಕುರುಸೇನೆಯ ಸ್ಥಿತಿಯನ್ನೇ ಹೋಲುತ್ತದೆ. ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್‌ನ ವಿರುದ್ಧವಿರುವವರೆಲ್ಲಾ ಪಾಂಡವರೆಂದೇನೂ ಭಾವಿಸಬೇಕಾಗಿಲ್ಲ. ಈ ಚುನಾವಣಾ ಕುರುಕ್ಷೇತ್ರದಲ್ಲಿ ಪಾಂಡವ ಪಕ್ಷವೇ ಇಲ್ಲ. ಇರುವವೆಲ್ಲವೂ ಕೌರವ ಪಕ್ಷಗಳೇ. ಇವುಗಳಲ್ಲಿ ಕಾಂಗ್ರೆಸ್ ಕೂಡಾ ಒಂದು ಅಷ್ಟೇ.