ಯೇಸುಕ್ರಿಸ್ತ

ನಾರಾಯಣ ಗುರುಗಳ ಪರಂಪರೆಯ ಗುರು ನಿತ್ಯಚೈತನ್ಯ ಯತಿಗಳು ಎಲ್ಲ ಧರ್ಮಗಳ ಬಗ್ಗೆಯೂ ಆಳವಾದ ಅರಿವಿದ್ದವರು. ದೇಹಕ್ಕೆ ಬಾಧಿಸುವ ರೋಗಗಳಿಗಿಂತಲೂ ಹೆಚ್ಚಾಗಿ ಮನುಷ್ಯನನ್ನು ಕಾಡುವುದು ಮನಸ್ಸಿಗೆ ಬಾಧಿಸುವ ಆಧ್ಯಾತ್ಮಿಕ ರೋಗಗಳು. ಈ ರೋಗಗಳನ್ನು ಪರಿಹರಿಸಿದ ಮಹಾವೈದ್ಯರಲ್ಲಿ ಯೇಸು ಕ್ರಿಸ್ತರೂ ಇದ್ದಾರೆಂಬುದು ಯತಿಗಳ ಅನಿಸಿಕೆ. ಅವರು ಈ ಬಗೆಯ ಅಪೂರ್ವ ವೈದ್ಯರ ಕುರಿತು ರಚಿಸಿರುವ ಗ್ರಂಥದಲ್ಲಿರುವ ಯೇಸುವಿನ ಕುರಿತ ಬರೆಹದ ಭಾವಾನುವಾದ ಇಲ್ಲಿದೆ.

ಗುರುಕುಲದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಹೆಸರು ಜೋಸೆಫ್‌. ಆತ ಮಾಡುವ ಕೆಲಸ; ಕಳೆದ ಎರಡು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿರುವ ಬಡಗಿಯ ಕೆಲಸ. ನಾವಿಬ್ಬರು ಒಟ್ಟಿಗೆ ಕುಳಿತು ಮಾತನಾಡುವಾಗಲೆಲ್ಲಾ ನನ್ನನ್ನು ಬಹಳವಾಗಿ ಆಕರ್ಷಿಸುವುದು ಈ ಜೋಸೆಫ್‌ನ ಮಗ. ಅಪ್ಪನಿಂದ ಬರುವುದನ್ನೆಲ್ಲಾ ಈ ಮಗ ಪಡೆದುಕೊಂಡಿದ್ದ. ನಾನವನನ್ನು ಯೇಸು ಎಂದೇ ಕರೆಯುತ್ತಿದ್ದೆ. ಯೇಸು ಎಂಬ ಪದದ ಅರ್ಥ ಮತ್ತಾಯನು ಬರೆದ ಸುವಾರ್ತೆಯಲ್ಲಿ ಹೇಳಿರುವಂತೆ `ಜನಗಳನ್ನು ಪಾಪಗಳಿಂದ ಕಾಪಾಡುವವನು’ ಎಂದಾಗಿದೆ. ಇಂದು ಮುಂಜಾನೆ ಗೆಳೆಯ ಜೋಸೆಫ್‌ ಜತೆ ಮಾತನಾಡಲು ತೊಡಗಿದಾಗ ವಾಗ್‌ರೂಪಿಯಾದ ಯೇಸುವನ್ನು ಕಂಡ ನಾನು ಕೇಳಿದೆ:

`ನೀನು ಹೇಗೆ ಜನರನ್ನು ಪಾಪಗಳಿಂದ ವಿಮೋಚಿಸುತ್ತೀಯಾ?’

ಆಗ ಯೇಸು ಪ್ರಶ್ನಿಸಿದ: `ಬೈಬಲ್‌ನ ಆದಿ ಕಾಂಡವನ್ನು ಓದಿದ್ದೀಯಾ?’ ನಾನು ಹೌದೆಂದು ಗೋಣಾಡಿಸಿದೆ. ಸಂಭಾಷಣೆ ಮುಂದುವರಿಯಿತು.

ಯೇಸು: ಅದರಲ್ಲಿ ಹೇಳಲಾದ ಮೂರು ಆದಿಗಳು ಗೊತ್ತೇ?

ನಾನು: ಜಗತ್ತಿನ ಸೃಷ್ಟಿಗೆ ಮೊದಲಿದ್ದ ಆದಿಯ ಬಗ್ಗೆ ಹೇಳಿರುವುದು ನನಗೆ ನೆನಪಾಗುತ್ತಿದೆ. ಮೊದಲನೆಯ ಆದಿ ಸೃಷ್ಟಿಗೆ ಮೊದಲಿದದ್ದು. ಆಗ ಆದಿ ಸಾಗರದ ಮೇಲೆ ಕವಿದಿದ್ದ ಕತ್ತಲಿನ ಮೇಲೆ ದೇವರ ಚೈತನ್ಯ ಚಲಿಸುತ್ತಿತ್ತು. ಈ ಪ್ರಪಂಚದ ಸೃಷ್ಟಿಗೆ ದೇವರ ಆದೇಶ ಹೊರಬಿದ್ದುದನ್ನು ಎರಡನೇ ಆದಿ ಎಂದು ಕರೆಯಬಹುದು. `ಬೆಳಕಾಗಲಿ’ ಎಂದು ಆದೇಶಿಸಿದ ಕ್ಷಣದಿಂದ ಆರಂಭವಾಗುವ ಎರಡನೇ ಆದಿ ಆರು ದಿನದವರೆಗೂ ಮುಂದುವರೆಯುತ್ತದೆ. ಮೂರನೇ ಆದಿ ಆದಮನ ಸೃಷ್ಟಿಯಿಂದ ಆರಂಭಗೊಳ್ಳುವ ಮನುಷ್ಯ ಜೀವಿಯ ಸೃಷ್ಟಿಯೊಂದಿಗೆ ಆರಂಭವಾಗುತ್ತದೆ.

ಯೇಸು: ಮನುಷ್ಯನ ಸೃಷ್ಟಿಯ ಬಗ್ಗೆ ಹೇಳುವಾಗ ಆದಮನ ವಂಶಾವಳಿಯನ್ನೂ ಹೇಳಿದ್ದು ನೆನಪಿದೆಯೇ?

ನಾನು: ನೆನಪಿದೆ

ಯೇಸು: ಆ ವಂಶಾವಳಿ ಎಲ್ಲಿಯವರೆಗಿದೆ?

ನಾನು: ನೋಹನ ಪುತ್ರನಾದ ಅಬ್ರಾಹಮ ಮತ್ತು ನಾಹೇರನವರೆಗೆ.

ಯೇಸು: ಅಬ್ರಾಹಮನ ವಂಶಾವಳಿಯ ಬಗ್ಗೆ ಹೇಳಲಾಗಿದೆಯೇ?

ನಾನು: ಮತ್ತಾಯನು ಬರೆದ ಸುವಾರ್ತೆಯಲ್ಲಿ ಅಬ್ರಾಹಮನಿಂದ ಆರಂಭಗೊಂಡು ದಾವೀದನವರೆಗಿನ ಹದಿನಾಲ್ಕು ತಲೆಮಾರುಗಳ ಬಗ್ಗೆ, ದಾವೀದನಿಂದ ಆರಂಭಗೊಂಡು ಬ್ಯಾಬಿಲೋನ್‌ ಪ್ರವಾಸದವರೆಗಿನ ಹದಿನಾಲ್ಕು ತಲೆಮಾರುಗಳ ಬಗ್ಗೆ ಮತ್ತು ಬ್ಯಾಬಿಲೋನ್‌ ಪ್ರವಾಸದಿಂದ ಜೋಸೆಫ್‌ನವರೆಗಿನ ಹದಿನಾಲ್ಕು ತಲೆಮಾರುಗಳ ಬಗ್ಗೆ ಹೇಳಲಾಗಿದೆ.

ಯೇಸು: ಇದೇ ರೀತಿಯ ವಂಶಾವಳಿಗಳನ್ನು ಬೇರೆಲ್ಲಿಯಾದರೂ ಹೇಳಲಾಗಿದೆಯೇ?

ನಾನು: ಮಹಾಭಾರತದಲ್ಲಿ.

ಯೇಸು: ಮಹಾಭಾರತದ ವಂಶಾವಳಿಗಳು ಎಲ್ಲಿಂದ ಆರಂಭವಾಗುತ್ತವೆ?

ನಾನು: ಸೂರ್ಯನ ಶಕ್ತಿ ಭೂಮಂಡಲಕ್ಕೆ ಜೀವ ಚೈತನ್ಯವನ್ನು ಕೊಡುವ ಕ್ಷಣದಿಂದ.

ಯೇಸು: ಹಾಗಾದರೆ ಮೊದಲ ಜೀವಿಯ ಹೆಸರೇನು?

ನಾನು: ವೈವಸ್ವತ.

ಯೇಸು: ವೈವಸ್ವತನಿಂದ ಏನು ಆರಂಭವಾಗುತ್ತದೆ?

ನಾನು: ಮನ್ವಂತರಗಳು.

ಯೇಸು: ನೀನು ಈ ಪರಂಪರೆಯಲ್ಲಿ ನಂಬಿಕೆ ಇಟ್ಟಿದ್ದೀಯಾ?

ನಾನು: ಹೌದು. ನಂಬಿಕೆ ಇಟ್ಟಿದ್ದೇನೆ. ಯಾವ ಶಿಷ್ಯನಿಗೂ ಪರಂಪರೆಯಲ್ಲಿ ನಂಬಿಕೆ ಇಟ್ಟುಕೊಳ್ಳದಿರಲು ಸಾಧ್ಯವಿಲ್ಲ. ಆದಿ ನಾರಾಯಣನಿಂದ ಆರಂಭಗೊಳ್ಳುವ ವಂಶಾವಳಿಯನ್ನು ಅರಿತಿರುವುದರಿಂದಲೇ ಪ್ರತೀ ಶಿಷ್ಯನೂ `ವಂಶಋಷಿಭ್ಯೋ ಗುರುಭ್ಯೋ’ ಎಂದು ಪ್ರತೀ ಮುಂಜಾನೆಯೂ ವಂಶಾವಳಿಯಲ್ಲಿರುವ ಗುರುಗಳನ್ನೆಲ್ಲಾ ಸ್ತುತಿಸುತ್ತಾನೆ. ಬೃಹದಾರಣ್ಯಕೋಪನಿಷತ್ತಿನ ಐದನೇ ಅಧ್ಯಾಯದ ಆರನೇ ಬ್ರಾಹ್ಮಣದಲ್ಲಿ ಪೌತಿಮಾಷಿಯ ಪುತ್ರನಿಂದ ಆರಂಭಗೊಂಡು ಆತ್ರೇಯನವರೆಗೂ ಆತ್ರೇಯನಿಂದ ಆಸುರಿಯವರೆಗೂ ವಿಲೋಮವಾಗಿ ಸಾಗುವ ವಂಶಾವಳಿಯ ವಿವರಗಳಿವೆ. ಅದರಂತೆ ನಾರಾಯಣ, ಪದ್ಮಭವ, ವಸಿಷ್ಠ, ಶಕ್ತಿ, ಪರಾಶರ, ವ್ಯಾಸ, ಗೌಡಪಾದ, ಗೋವಿಂದ, ಶಂಕರ ಮೊದಲಾದ ಆಚಾರ್ಯರಿಂದ ಆರಂಭಿಸಿ ನನ್ನ ಗುರುಗಳವರೆಗಿನ ಗುರು ಪರಂಪರೆ ಮುಂದುವರೆಯುತ್ತದೆ.

ಯೇಸು: ಇದರಿಂದ ನಿನಗೆ ಅರ್ಥವಾದದ್ದೇನು?

ನಾನು: ಮನುಷ್ಯರು ಯಾವಾಗಲೂ ಒಂಟಿಯಾಗಿರಲಿಲ್ಲ.

ಯೇಸು: ಆದಿಯಲ್ಲಿ ಆರಂಭಗೊಂಡದ್ದೆಲ್ಲವೂ ಮುಂದುವರಿದವಲ್ಲವೇ?

ನಾನು: ಖಂಡಿತವಾಗಿಯೂ ಮುಂದುವರಿದವು.

ಯೇಸು: ದೇವರ ಆದಿ ಪುತ್ರನಾದ ಆದಮನು ದೇವರ ಅಣತಿಯನ್ನು ಮೀರಲಿಲ್ಲವೇ?

ನಾನು: ಹೌದು

ಯೇಸು: ಮನುಷ್ಯನ ಆದಿ ಪುತ್ರನಾದ ಕಾಯಿನ ನೀತಿವಂತನಾಗಿದ್ದನೇ?

ನಾನು: ಇಲ್ಲ. ಆತ ತನ್ನ ಸಹೋದರನನ್ನೇ ಕೊಂದು ದೇವರೆದುರು ನಿರುತ್ತರನಾಗಿ ನಿಂತ.

ಯೇಸು: ಜೋಸೆಫ್‌ನ ತಲೆಮಾರಿನವರು ನೀತಿವಂತರಾಗಿದ್ದರೇ?

ನಾನು: ಇಲ್ಲ. ಅವರು ಪ್ರೇಮ ಸ್ವರೂಪಿಯಾದ ನಿನ್ನನ್ನೇ ಅನ್ಯಾಯವಾಗಿ ಶಿಲುಬೆಗೇರಿಸಿದರು.

ಯೇಸು: ಹಾಗಾದರೆ ದೇವರ ಸೃಷ್ಟಿಗೊಂದು ಪರಂಪರೆ ಇರುವಂತೆಯೇ ಕೆಡುಕಿಗೂ ಒಂದು ಪರಂಪರೆ ಇದೆಯಲ್ಲವೇ?

ನಾನು: ಹೌದು ಸ್ವಾಮಿ.

ಯೇಸು: ಈ ಎರಡು ಪರಂಪರೆಗಳ ನಡುವಿನ ಭಿನ್ನತೆಗಳೇನು?

ನಾನು: ಎಲ್ಲವೂ ಎಲ್ಲರಿಗಾಗಿ ಎಂದು ಭಾವಿಸುವುದು ದೈವ ಪರಂಪರೆ. ನನ್ನದು ನನಗೆ ಮಾತ್ರ ಎಂದು ಭಾವಿಸುವುದು ಪಾಪಿಯ ಪರಂಪರೆ.

ಯೇಸು: ಹಾಗಾದರೆ ಪಾಪವೆಂದರೇನು?

ನಾನು: ನಾನು, ನನ್ನದು ಎಂಬುವುಗಳಲ್ಲಿರುವ ನಂಬಿಕೆ.

ಯೇಸು: ಪಾಪಿಯ ಧ್ವನಿ ಹೇಗಿರುತ್ತದೆ?

ನಾನು: `ನಾನು ನನ್ನ ಸಹೋದರನನ್ನು ರಕ್ಷಿಸಬೇಕೆ?’ ಎಂದು ಆತ ಕೋಪಾವಿಷ್ಠನಾಗಿ ಪ್ರಶ್ನಿಸುತ್ತಾನೆ.

ಯೇಸು: ದೇವರ ಪರಂಪರೆಯವನು ಏನು ಹೇಳುತ್ತಾನೆ?

ನಾನು: ನಿನ್ನಂತೆಯೇ ನಿನ್ನ ನೆರೆಯವನನ್ನೂ ಪ್ರೀತಿಸು ಎನ್ನುತ್ತಾನೆ.

ಯೇಸು: ಹಾಗಾದರೆ ಪಾಪದ ಬಗ್ಗೆ ನಿನ್ನ ನಿಲುವೇನು?

ನಾನು: ಎಲ್ಲ ರೋಗಗಳಿಗಿಂತಲೂ ಕೆಟ್ಟದ್ದು, ಕ್ರೂರವಾದದ್ದು ಹಾಗೂ ದುಃಖದಾಯಕವಾದ ರೋಗವೊಂದಿದ್ದರೆ ಅದು ಸ್ವಾರ್ಥವೆಂಬ ಪಾಪವಾಗಿದೆ.

ಯೇಸು: ಆ ರೋಗಕ್ಕಿರುವ ಮದ್ದು ಯಾವುದು?

ನಾನು: ಪಾಪವೆಂಬ ರೋಗಕ್ಕಿರುವ ಏಕೈಕ ಔಷಧವೆಂದರೆ ತ್ಯಾಗ.

ಯೇಸು: ನೀನು ಮಾರ್ಗದರ್ಶನಕ್ಕಾಗಿ ಕೈಯಲ್ಲಿ ಹಿಡಿದುಕೊಂಡಿರುವ ಹಣತೆ ಯಾವುದು?

ನಾನು: ಶ್ರೀಮದ್‌ಭಗವದ್ಗೀತೆ.

ಯೇಸು: ಗೀತೆ ಏನನ್ನು ಕಲಿಸುತ್ತದೆ?

ನಾನು: ತ್ಯಾಗಿಯಾಗಿ ಬದುಕುವುದನ್ನು ಕಲಿಸುತ್ತದೆ.

ಯೇಸು: ಅದು ಹೇಗೆ?

ನಾನು: ನನಗೆ ಕಾಣುತ್ತಿರುವುದೆಲ್ಲವೂ ದೇವರಾಗಿರುವುದರಿಂದ. ದೇವರು ಈ ಎಲ್ಲವುಗಳ ಹೃದಯದಲ್ಲಿಯೂ ಆಶ್ರಯ ಪಡೆದಿರುವುದರಿಂದ.

ಯೇಸು: ನೀನೇಕೆ ನನ್ನನ್ನು ಹುಡುಕುತ್ತಿದ್ದೀಯಾ?

ನಾನು: ಸಕಲ ರೋಗಗಳಿಗೂ ಮದ್ದು ಕೊಡುವ ಮಹಾ ವೈದ್ಯನಾಗಿರುವುದರಿಂದ.

ಯೇಸು: ನನ್ನಿಂದ ನೀನು ನಿರೀಕ್ಷಿಸುತ್ತಿರುವ ಔಷಧ ಯಾವುದು?

ನಾನು: ಪ್ರೀತಿ.

ಯೇಸು: ಆ ಪ್ರೀತಿಯನ್ನು ನೀನು ಹೇಗೆ ಗುರುತಿಸುತ್ತೀಯಾ?

ನಾನು: ಈ ಪ್ರಪಂಚದ ಎಲ್ಲಾ ಅಣುವಿನಲ್ಲಿಯೂ ಪ್ರಕಾಶಿಸುತ್ತಿರುವ ದೇವರೇ ಈ ಎಲ್ಲವುಗಳ ಅರ್ಥ. ಅಲ್ಲಿ ದೇವರನ್ನು ಕಾಣುವ ಬದಲಿಗೆ ನನ್ನನ್ನು ಕಂಡರೆ ಅದು ಅನರ್ಥವಾಗಿಬಿಡುತ್ತದೆ. ಸಂತೃಪ್ತಿಯ ಮೂಲಕ ಬಡವನಿಗೆ ಸೌಭಾಗ್ಯ ದೊರೆಯುತ್ತದೆ. ನೀನೇ ನನ್ನ ತೃಪ್ತಿ. ಆ ತೃಪ್ತಿ ಸಿಗುವವರೆಗೂ ನನ್ನ ಆತ್ಮ ಬಡವಾಗಿಯೇ ಇರುತ್ತದೆ. ಎಲ್ಲ ದುಃಖಗಳ ಮೂಲ ಕಾರಣವೂ ಆಸೆ. ಆದ್ದರಿಂದ ನಾನು ನಿನ್ನಲ್ಲಿ ಸಾಂತ್ವನವನ್ನು ಕಂಡುಕೊಳ್ಳುತ್ತಿದ್ದೇನೆ. ಈ ಜಗತ್ತಿನಲ್ಲಿ `ನಾನು ಮುಂದೆ ನಾನು ಮುಂದೆ’ ಎಂದು ಸಹನೆಯನ್ನು ಕಳೆದುಕೊಂಡು ಉಳಿದವರನ್ನು ತುಳಿದು ಮುಂದೆ ಸಾಗುತ್ತಿರುವ ಮನುಷ್ಯರು ನನಗೆ ಕಾಣಿಸುತ್ತಿದ್ದಾರೆ. ಆದರೆ ಅತ್ಯಂತ ಸಹನೆಯಿಂದ ಈ ಎಲ್ಲವನ್ನೂ ಕರುಣೆಯ ಕಣ್ಣಿನಿಂದ ನೋಡುತ್ತಿರುವ ನಿನ್ನನ್ನು ಕಂಡಾಗ ನಾನೂ ನಿನ್ನ ಸೌಮ್ಯತೆಯನ್ನು ಪಡೆದುಕೊಳ್ಳುತ್ತೇನೆ.

ಯೇಸು: ನಿನ್ನನ್ನು ನೀನೇ ಕಂಡುಕೊಳ್ಳುವುದು ಹೇಗೆ?

ನಾನು: ಕರುಣೆ ಹುಟ್ಟುವ ಸಂದರ್ಭದ ಸೃಷ್ಟಿಗಾಗಿ ನೀನು ಹಸಿದವನಾಗಿ ಬಂದು ನನ್ನಲ್ಲಿ ಆಹಾರವನ್ನು ಕೇಳುವೆ. ಬಾಯಾರಿದವನಾಗಿ ಬಂದು ನೀರು ಕೇಳುವೆ. ರೋಗಿಯಾಗಿ ಬಂದು ಚಿಕಿತ್ಸೆಯನ್ನು ಯಾಚಿಸುವೆ. ನಗ್ನನಾಗಿ ಬಂದು ಬಟ್ಟೆಯನ್ನು ಅಪೇಕ್ಷಿಸುವೆ. ಹೊರೆ ಹೊತ್ತು ಬಂದು ಅದನ್ನು ಇಳಿಸಲು ಕೇಳಿಕೊಳ್ಳುವೆ.

ಯೇಸು: ಆಗ ನೀನೇನು ಮಾಡುತ್ತೀಯಾ?

ನಾನು: ಆಗ ನಾನು ನನ್ನನ್ನೇ ಮರೆತು ಸಕಲರಿಗೂ ಸಕಲವನ್ನೂ ನೀಡುವ ದೇವರಲ್ಲಿ ಅವನ ಅತ್ಯುತ್ತಮ ಉಪಕರಣವನ್ನಾಗಿ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.

ಯೇಸು: ನೀನು ಯಾವಾಗ ಒಳ್ಳೆಯ ಉಪಕರಣವಾಗುತ್ತೀಯಾ?

ನಾನು: ನನ್ನ ಹೃದಯದಿಂದ ಸ್ವಾರ್ಥವೆಂಬ ಅಶುದ್ಧಿಯನ್ನು ತೊಳೆದು ಸ್ವಚ್ಛಗೊಳಿಸಿದಾಗ.

ಯೇಸು: ಅದು ನಿನಗೆ ಯಾವ ಪದವಿಯನ್ನು ನೀಡುತ್ತದೆ?

ನಾನು: ದೇವಪುತ್ರನ ಪದವಿ. ಏಕೆಂದರೆ ಅದು ನನ್ನಲ್ಲೂ ಇತರರಲ್ಲೂ ಒಂದೇ ಬಗೆಯ ಶಾಂತಿಯನ್ನು ಉಂಟುಮಾಡುತ್ತದೆ.

ಯೇಸು: ದೇವರ ರಾಜ್ಯ ಎಲ್ಲಿದೆ?

ನಾನು: ಅದು ಹೃದಯದಲ್ಲೇ ಇದೆ.

ಯೇಸು: ಅದನ್ನು ಹೇಗೆ ಕಂಡುಕೊಳ್ಳುವೆ?

ನಾನು: ಜಗತ್ತಿನ ಮತ್ತೊಂದು ತುದಿಯವರೆಗೆ ಇರುವ ನನ್ನ ನೆರೆಯವರಿಗೆ ನ್ಯಾಯ ದೊರೆಯುವವರೆಗೂ ಎಲ್ಲಾ ಬಗೆಯ ಹಿಂಸೆಯನ್ನೂ ಸಹನೆಯಿಂದ ಅನುಭವಿಸುತ್ತೇನೆ ಎಂದು ಸಂತೋಷದಿಂದ ತೀರ್ಮಾನಿಸುವ ಮೂಲಕ.

ಯೇಸು: ನೀನು ಹೇಗೆ ಭೂಮಿಯ ಉಪ್ಪಾಗಿರುವೆ?

ನಾನು: ಬದುಕಿನ ಎಲ್ಲಾ ರಸಗಳನ್ನೂ ದೈವೀಕತೆ ಎಂಬ ರಸದಲ್ಲಿ ಕಂಡುಕೊಳ್ಳುವ ಮೂಲಕ.

ಯೇಸು: ನೀನು ದೇವರ ಪರಂಪರೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವವನಾದರೆ ಬೇರೆ ಬೇರೆ ಮತಗಳನ್ನೂ ಬೇರೆ ಬೇರೆ ಸಂಸ್ಕೃತಿಗಳನ್ನೂ ಹೇಗೆ ಅರ್ಥಮಾಡಿಕೊಳ್ಳುವೆ?

ನಾನು: ಒಡಂಬಡಿಕೆಗಳನ್ನೋ ದೇವರನ್ನೋ ನಾಶ ಮಾಡಲು ನೀನು ಅವತರಿಸಿಲ್ಲ. ಬದಲಿಗೆ ಅವುಗಳನ್ನು ಸಾಧಿಸಿ ತೋರಿಸುವುದಕ್ಕೋಸ್ಕರ ನೀನು ಅವತರಿಸಿದ್ದೀಯ. ನಿನ್ನ ಕರ್ತವ್ಯಕ್ಕೆ ನಾನೂ ಜತೆಯಾಗುತ್ತೇನೆ.

ಯೇಸು: `ಕೊಲಬೇಡ’ ಎಂಬ ನನ್ನ ಉಪದೇಶವನ್ನು ನೀನು ಹೇಗೆ ಗ್ರಹಿಸಿರುವೆ?

ನಾನು: ಸತ್ಯದ ಮಹತ್ವನ್ನು ಕಾಣದಿರುವುದು ಇಲ್ಲವೇ ಅದನ್ನು ನಿರಾಕರಿಸುವುದೇ ಕೊಲೆ. ಯಾವುದೋ ಕಾರಣದಿಂದ ಶರೀರವನ್ನು ತ್ಯಜಿಸಿದವರಿದ್ದರೆ ಅವರ ಮಹತ್ವವನ್ನು ಅರ್ಹ ವಿಧಾನದಲ್ಲಿ ನಾನು ಆದರಿಸುತ್ತೇನೆ.

ಯೇಸು: ವ್ಯಭಿಚಾರ ಕೂಡದು ಎಂದು ನಾನು ಹೇಳಿದಾಗ ನೀನಗೇನು ಅರ್ಥವಾಯಿತು?

ನಾನು: ಸಕಲವನ್ನೂ ಒಳಗೊಳ್ಳುವ ಪರಮಸತ್ಯವೇ ಬ್ರಹ್ಮ. ಯಾವಾಗಲೂ ಆ ಸತ್ಯ ಮಾರ್ಗದಲ್ಲಿಯೇ ಸಾಗಬೇಕು. ಈ ಹಾದಿಯನ್ನು ಬಿಟ್ಟು ನಡೆಯುವುದೇ ವ್ಯಭಿಚಾರ.

ಯೇಸು: ನಾನು ತೋರಿಸಿಕೊಟ್ಟ ಮಾರ್ಗದಲ್ಲಿ ಯಾವ ವೈಶಿಷ್ಟ್ಯವನ್ನು ನೀನು ಕಂಡೆ?

ನಾನು: ಒಂದು ಸಂದರ್ಭದಲ್ಲಿ ನೀನು ಹೇಳಿದ ವಚನವೊಂದು ನನಗೆ ನೆನಪಾಗುತ್ತಿದೆ. ಒಮ್ಮೆ ಸುಂಕದ ಕಟ್ಟೆಯಲ್ಲಿದ್ದ ಲೇವಿ ಎಂಬ ಹೆಸರಿನ ಸುಂಕ ವಸೂಲಿಗಾರನಲ್ಲಿ ನಿನ್ನನ್ನು ಹಿಂಬಾಲಿಸಲು ಹೇಳಿದೆ. ಮತ್ತೆ ಅವನ ಮನೆಯಲ್ಲಿ ನಿನಗೆ ಆತಿಥ್ಯ ನೀಡಿದಾಗ ಫರಿಸಾಯರು ಮತ್ತು ಅವರ ವೇದಜ್ಞರು ಬಂದು `ನೀವೇಕೆ ಸುಂಕ ವಸೂಲಿಗಾರರು ಮತ್ತು ಪಾಪಿಗಳ ಜತೆ ಕುಳಿತು ಉಣ್ಣುತ್ತೀರಿ?’ ಎಂದು ಪ್ರಶ್ನಿಸಿದರು. ಅಂದು ನೀನು ನೀಡಿದ ಉತ್ತರ ನನಗೀಗಲೂ ಮಾರ್ಗದರ್ಶಕವಾಗಿದೆ- `ಆರೋಗ್ಯವಿರುವವನಿಗೆ ವೈದ್ಯನ ಅಗತ್ಯವಿಲ್ಲ. ನಾನು ಬಂದದ್ದು ನೀತಿವಂತರನ್ನು ಕರೆಯುವುದಕ್ಕಾಗಿಯಲ್ಲ. ನನ್ನ ಆಗಮನದ ಉದ್ದೇಶ ಪಾಪಿಗಳನ್ನು ಪಶ್ಚಾತಾಪದ ಹಾದಿಗೆ ಆಹ್ವಾನಿಸುವುದು’.

ಇಷ್ಟಾದ ನಂತರವೂ ಅವರು ಹೇಳಿದರು-`ಯೋಹಾನನ ಶಿಷ್ಯರು ಹಲವಾರು ಬಾರಿ ಉಪವಾಸ ಪ್ರಾರ್ಥನೆಗಳಲ್ಲಿ ತೊಡಗುತ್ತಾರೆ. ಫರಿಸಾಯರ ಶಿಷ್ಯರೂ ಹಾಗೆಯೇ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಇಂಥ ಅನುಷ್ಠಾಗಳನ್ನು ನಡೆಸುವುದಿಲ್ಲವಲ್ಲ’. ಅಂದು ನೀನು ಅವರಿಗೆ ಹೇಳಿದ್ದೇನು!

‘ಮದುಮಗ ಜತೆಯಲ್ಲಿರುವಾಗ ಆತನ ಜತೆಗಾರರನ್ನು ಉಪವಾಸವಿರಿಸಲು ಸಾಧ್ಯವೇ?’ ಹೀಗೆ ನೂರಾರು ಸಂದರ್ಭಗಳಲ್ಲಿ ಸ್ಥಗಿತಗೊಂಡ ವ್ಯವಸ್ಥೆಯನ್ನು ನಿರಾಕರಿಸಿ ಉಪದೇಶಗಳನ್ನು ನೀಡಿದ್ದೀಯ. ಆಚರಣೆಗಳಿಗೆ ಸೀಮಿತವಾದ ನೈತಿಕತೆಯನ್ನು ದಾಟಿ ಮಾನವೀಯ ಅಂತಃಕರಣದ ನೈತಿಕತೆಯನ್ನು ತೋರಿಸಿಕೊಟ್ಟಿದ್ದೀಯ. ಹರಿಯುವ ನದಿಯಲ್ಲಿ ಯಾವ ಕಲ್ಮಶವೂ ಉಳಿದುಕೊಳ್ಳುವುದಿಲ್ಲ. ಹಾಗೆಯೇ ನಿನ್ನ ವಚನಗಳೆಂಬ ನದಿಯೊಳಗೆ ಬದುಕುವ ನನ್ನೊಳಗೆ ಸಂಶಯದ ಹುತ್ತ ಬೆಳೆಯುವುದಿಲ್ಲ.

ಸರ್ವ ಲೋಕಗಳಿಗೂ ಮಂಗಲವನ್ನುಂಟು ಮಾಡುವ ದೇವರ ವಚನಗಳನ್ನು ಕೇಳಿ ರೋಮಾಂಚಿತನಾಗಿ ನಾನು ಹಲ್ಲೇಲೂಯಾ ಹಾಡಿದೆ.

ಚಾರ್ಲ್ಸ್‌ ಮಿನೆಜೆಸ್‌ ಎಂಬ ಜೋಸೆಫ್‌ ಕೆ.

ಕಳೆದ ವರ್ಷ ಅಂದರೆ 2005ರ ಜುಲೈ ತಿಂಗಳಲ್ಲಿ ಲಂಡನ್ ಸ್ಫೋಟ ಸಂಭವಿಸಿತು. ಈ ಘಟನೆಯ ನಂತರ ಬ್ರೆಜಿಲ್ ನ ಯುವಕನೊಬ್ಬನನ್ನು ಲಂಡನ್ ಪೊಲೀಸರು 'ತಪ್ಪಾಗಿ' ಕೊಂದು ಬಿಟ್ಟರು. ಇದೇ ಹೊತ್ತಿಗೆ ಕಾಶ್ಮೀರದಲ್ಲೂ ಸೇನಾ ಪಡೆಗಳು ಮಕ್ಕಳನ್ನು ಉಗ್ರಗಾಮಿಗಳೆಂದು ಭಾವಿಸಿ ಕೊಂದ ಘಟನೆಯೂ ನಡೆದಿತ್ತು. ಆಗ ಬರೆದ ಲೇಖನ ಇದು.

ಪ್ರಾಗ್‌ನ ಇಂಜಿನಿಯರ್‌ ಒಬ್ಬನಿಗೆ ಲಂಡನ್‌ನಲ್ಲಿ ಏರ್ಪಾಡಾಗಿದ್ದ ಇಂಜಿನಿಯರಿಂಗ್‌ಗೆ ಸಂಬಂಧಪಟ್ಟ ಸಮ್ಮೇಳನವೊಂದರ ಆಹ್ವಾನ ಬಂತು. ಆತ ಲಂಡನ್‌ಗೆ ಹೋದ. ಸಮ್ಮೇಳನದಲ್ಲಿ ಭಾಗವಹಿಸಿದ. ಅದು ಮುಗಿದ ನಂತರ ಪ್ರಾಗ್‌ಗೆ ಹಿಂತಿರುಗಿದ. ಮಾಮೂಲಿನಂತೆ ಕಚೇರಿಗೂ ಹೋದ. ಕಚೇರಿಯಲ್ಲಿರುವಾಗಲೇ ಆತನಿಗೆ ದೇಶವನ್ನಾಳುತ್ತಿದ್ದ ಪಕ್ಷದ ಮುಖವಾಣಿ `ರೂದ್‌ ಪ್ರಾವ್‌' ಕಾಣಸಿಕ್ಕಿತು. ಅದನ್ನೆತ್ತಿಕೊಂಡು ಕಣ್ಣಾಡಿಸಿದಾಗ ಅಲ್ಲೊಂದು ಸುದ್ದಿ…

ಲಂಡನ್‌ನಲ್ಲಿ ನಡೆದ ಸಮ್ಮೇಳನವೊಂದಕ್ಕೆ ಹೋಗಿದ್ದ ಝೆಕ್‌ ಇಂಜಿನಿಯರ್‌ ತನ್ನ ದೇಶದ ಸಮಾಜವಾದೀ ಆಡಳಿತವನ್ನು ನಿಂದಿಸಿ ಪಾಶ್ಚಾತ್ಯ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾನಲ್ಲದೆ ತನಗೆ ಆ ದೇಶಕ್ಕೆ ಹೋಗಲು ಇಷ್ಟವಿಲ್ಲದಿರುವುದರಿಂದ ಬ್ರಿಟನ್‌ ರಾಜಕೀಯ ಆಶ್ರಯ ನೀಡಬೇಕು ಎಂದು ಕೋರಿದ್ದಾನೆ.'

ಅನಧಿಕೃತ ವಲಸೆಯ ಜತೆಗೆ ಸರಕಾರವನ್ನೂ ಟೀಕಿಸಿದರೆ ಅದೇನು ಕಡಿಮೆಯ ಅಪರಾಧವೇ. ಝೆಕ್‌ ಕಾನೂನುಗಳಂತೆ ಕನಿಷ್ಠ ಇಪ್ಪತ್ತು ವರ್ಷಗಳ ಜೈಲು ಗ್ಯಾರಂಟಿ. ಇಂಜಿನಿಯರ್‌ಗೆ ಜಂಘಾಬಲವೇ ಉಡುಗಿ ಹೋಯಿತು. ವಿವರಗಳನ್ನು ಓದುತ್ತಾ ಹೋದಂತೆ ಲೇಖನದಲ್ಲಿ ಹೇಳಿರುವ ಇಂಜಿನಿಯರ್‌ ತಾನೇ ಎಂಬುದರಲ್ಲಿ ಅವನಿಗೆ ಯಾವ ಸಂಶಯವೂ ಉಳಿಯಲಿಲ್ಲ.

ಹೊತ್ತಿಗೆ ಕಚೇರಿಗೆ ಬಂದ ಆತನ ಸೆಕ್ರಟರಿ: `ಓಹ್‌ ನೀವು ಬಂದಿದ್ದೀರಾ-ಅವರು ಬರೆದಿರುವುದು…?' ಎಂದು ಕಂಗಾಲಾಗುತ್ತಾಳೆ. ಇಂಜಿನಿಯರ್‌ನನ್ನು ಭಯ ಆಕ್ರಮಿಸಿಕೊಳ್ಳತೊಡಗುತ್ತದೆ.

ಇದ್ದ ಅಲ್ಪ ಸ್ವಲ್ಪ ಧೈರ್ಯವನ್ನು ಕೂಡಿಸಿಕೊಂಡು ಆತ ಸೀದಾ ಹೋದದ್ದು ರೂದ್‌ ಪ್ರಾವ್‌ ಕಚೇರಿಗೆ. ಸುದ್ದಿ ಪ್ರಕಟಿಸಿದ ಸಂಪಾದಕನನ್ನು ಭೇಟಿಯಾಗುತ್ತಾನೆ. ಇಂಜಿನಿಯರ್‌ನ ಅಹವಾಲು ಕೇಳಿದ ಸಂಪಾದಕ ತನ್ನದೇನೂ ತಪ್ಪಿಲ್ಲ. ಗೃಹ ಸಚಿವಾಲಯ ಕಳುಹಿಸಿದ ಪತ್ರಿಕಾ ಟಿಪ್ಪಣಿ ಆಧರಿಸಿ ಸುದ್ದಿಯನ್ನು ಬರೆಯಲಾಗಿದೆ ಎಂದು ಕೈಚೆಲ್ಲಿದ.

ಇಂಜಿನಿಯರ್‌ ಅಲ್ಲಿಂದ ಗೃಹ ಸಚಿವಾಲಯಕ್ಕೆ ಹೋದ. ಅವರೂ ತಪ್ಪಾಗಿದೆ ಎಂಬುದನ್ನು ಒಪ್ಪಿದರು. ಆದರೆ `ಈ ತಪ್ಪು ನಮ್ಮದಲ್ಲ. ಲಂಡನ್‌ನಲ್ಲಿರುವ ರಾಯಭಾರ ಕಚೇರಿಯಿಂದ ಕಳುಹಿಸಿದ ಗುಪ್ತಚರ ವರದಿಯ ಆಧಾರದಲ್ಲಿ ಪತ್ರಿಕಾ ಟಿಪ್ಪಣಿ ಸಿದ್ಧಪಡಿಸಲಾಯಿತು' ಎಂದು ಸ್ಪಷ್ಟೀಕರಿಸಿದರು.

ಕೊನೆಗೂ ತಪ್ಪು ಎಲ್ಲಿ ಸಂಭವಿಸಿತು ಎಂಬುದನ್ನು ಕಂಡುಹಿಡಿದ ಸಂತೋಷದಲ್ಲಿ ಇಂಜಿನಿಯರ್‌ ಗೃಹ ಸಚಿವಾಲಯ ಈ ಬಗ್ಗೆ ಪತ್ರಿಕೆಗಳಿಗೊಂದು ಸ್ಪಷ್ಟೀಕರಣ ನೀಡಬೇಕೆಂದು ಕೇಳಿಕೊಂಡ. ಆದರೆ ಗೃಹ ಸಚಿವಾಲಯ `ಸ್ಪಷ್ಟೀಕರಣ ನೀಡಲು ಸಾಧ್ಯವಿಲ್ಲ. ಆದರೆ ಇದರಿಂದ ನಿಮಗೇನೂ ತೊಂದರೆಯಾಗುವುದಿಲ್ಲ, ನೀವು ಭಯಪಡಬೇಡಿ' ಎಂಬ ಭರವಸೆ ನೀಡಿತು.

ಆದರೆ ಇಂಜಿನಿಯರ್‌ನ ಭಯ ಹೆಚ್ಚುತ್ತಲೇ ಹೋಯಿತು. ತನ್ನ ಮೇಲೆ ನಿಗಾ ಇರಿಸಲಾಗಿದೆ. ತನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ, ಬೀದಿಯಲ್ಲಿ ಹೋಗುವಾಗ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಭಯಗಳಿಂದ ಆತ ನರಳತೊಡಗಿದ. ನಿದ್ರೆ ಆತನ ಹತ್ತಿರವೂ ಸುಳಿಯದಂತಾಯಿತು. ನಿದ್ರೆ ಬಂದರೂ ಭಯಂಕರ ಕನಸುಗಳು ಆತನ ಬೆನ್ನು ಹತ್ತಿದವು. ಈ ಒತ್ತಡವನ್ನು ತಾಳಲಾರದೆ ಕೊನೆಗೊಂದು ದಿನ ಆತ ಎಲ್ಲಾ ಕಾನೂನುಗಳನ್ನೂ ಉಲ್ಲಂಘಿಸಿ ಕಳ್ಳ ಹಾದಿಯಲ್ಲಿ ದೇಶ ಬಿಟ್ಟು ಓಡಿ ಹೋದ.

ಇದು ಜೋಸೆಫ್‌ ಸ್ಕ್ವೊರೆಸ್ಕಿ ಎಂಬ ಲೇಖಕ ಬರೆದ ಒಂದು ಸತ್ಯ ಕಥೆ. ಇದನ್ನು ಕುಂದೇರ ತನ್ನ ಆರ್ಟ್‌ ಆಫ್‌ ನಾವೆಲ್‌ನಲ್ಲಿ ಉಲ್ಲೇಖಿಸುತ್ತಾನೆ. ಕುಂದೇರ ಈ ಕಥೆಯನ್ನು ಉಲ್ಲೇಖಿಸುವುದು ಒಂದು `ಕಾಫ್ಕನ್‌ ಸ್ಥಿತಿ' ಎಂಬ ಕುತೂಹಲಕರ ವಿದ್ಯಮಾನವನ್ನು ವಿವರಿಸಲು.

ಈ ಕಾಫ್ಕನ್‌ ಸ್ಥಿತಿಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಗಳಿಗೆ ಗೊತ್ತಿದೆ. ಪ್ರಾಗ್‌ನ ಇಂಜಿನಿಯರ್‌ನ ಕತೆಯಂಥವಕ್ಕೆ ಅವರು `ಕಾಫ್ಕಯಿಸ್ಕ್‌' ಕತೆಗಳು ಎಂಬ ಹಣೆಪಟ್ಟಿ ಹಚ್ಚುವುದೂ ಇದೆ. ಇಷ್ಟಕ್ಕೂ ಏನೀ ಕಾಫ್ಕನ್‌ ಸ್ಥಿತಿ?

ನೂರಾ ಇಪ್ಪತ್ತೆರಡು ವರ್ಷಗಳ ಹಿಂದೆ ಜುಲೈ ತಿಂಗಳ ಮೂರನೇ ತಾರೀಕಿನಂದು ಆಗಿನ ಆಸ್ಟ್ರೋ ಹಂಗರಿಯನ್‌ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತಿದ್ದ ಪ್ರಾಗ್‌ ನಗರದಲ್ಲಿ ಫ್ರಾಂಜ್‌ ಕಾಫ್ಕಾ ಹುಟ್ಟಿದ. ಕಾಫ್ಕಾನ ಮನೆ ಮಾತು ಜರ್ಮನ್‌. ಆದರೆ ದಕ್ಷಿಣ ಬೊಹೆಮಿಯಾದಿಂದ ಪ್ರಾಗ್‌ಗೆ ವಲಸೆ ಬಂದಿದ್ದ ಪ್ರಾಂಜ್‌ ಕಾಫ್ಕಾನ ತಂದೆ ಹರ್ಮನ್‌ ಕಾಫ್ಕಾನಿಗೆ ಮಗ ಜರ್ಮನ್‌ ಹಾಗೂ ಝೆಕ್‌ ಭಾಷೆಗಳೆರಡರಲ್ಲೂ ಪರಿಣತಿ ಹೊಂದಬೇಕೆಂಬ ಆಸೆಯಿತ್ತು. ಹಾಗಾಗಿ ಫ್ರಾಂಜ್‌ ಕಾಫ್ಕಾ ಝೆಕ್‌ ಭಾಷೆಯನ್ನೂ ಕಲಿತ.
ಫ್ರಾಂಜ್‌ ಕಾಫ್ಕಾ ಎಷ್ಟು ಭಾಷೆಯನ್ನು ಕಲಿತ ಎಂಬುದಕ್ಕಿಂತ ಆತ ತನ್ನ ಬರೆಹಗಳಲ್ಲಿ ಅನಾವರಣಗೊಳಿಸಿದ ವ್ಯವಸ್ಥೆಯ ಕರಾಳ ರೂಪ ಆತನಿಗೆ ಸಾಹಿತ್ಯ ಚರಿತ್ರೆಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿತು. ಕಾಫ್ಕಾನ ಕೃತಿಗಳು ವ್ಯವಸ್ಥೆಗೊಂದು ಭಾಷ್ಯ ಬರೆಯುತ್ತವೆ.

ಈ ಭಾಷ್ಯ ಬಹಳ ಸರಳ. ಪ್ರಾಗ್‌ನ ಇಂಜಿನಿಯರ್‌ನ ಕತೆಯನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅವನಿಗೆ ಎದುರಾಗಿರುವುದು ಗಡಿಯೇ ಇಲ್ಲದ ಚಕ್ರವ್ಯೂಹದಂಥಾ ಒಂದು ವ್ಯವಸ್ಥೆ. ಈ ಚಕ್ರವ್ಯೂಹದ ಹೃದಯಕ್ಕೆ ಆತನಿಗೆ ಪ್ರವೇಶಿಸಲು ಸಾಧ್ಯವೇ ಇಲ್ಲ. ತನ್ನ ವಿರುದ್ಧ ರಾಜದ್ರೋಹದ ಆರೋಪ ಹೊರಿಸಿದವರಾರು ಎಂಬುದನ್ನು ಅರಿಯಲು ಆತನಿಗೆ ಸಾಧ್ಯವಿಲ್ಲ. ಇದು ನ್ಯಾಯಾಲಯದ ಕಟೆಕಟೆಯಲ್ಲಿ ನಿಂತಿರುವ ಕಾಫ್ಕಾನ `ಟ್ರಯಲ್‌'ನಲ್ಲಿರುವ ಜೋಸೆಫ್‌ ಕೆ.ಯಂಥದ್ದೇ ಸ್ಥಿತಿ. ದುರ್ಗದೆದುರು ನಿಂತಿರುವ `ಕ್ಯಾಸ್ಲ್‌'ನ ಮಿಸ್ಟರ್‌ ಕೆ.ಯ ಸ್ಥಿತಿಯೂ ಇದೇ.

ಕಾಫ್ಕಾನಿಗಿಂತ ಮೊದಲು ಬರೆದ ಲೇಖಕರೆಲ್ಲರೂ ವ್ಯವಸ್ಥೆಯನ್ನು ವಿವಿಧ ಆಸಕ್ತಿಗಳ ನಡುವಣ ಸಂಘರ್ಷದ ವೇದಿಕೆ ಎನ್ನುವಂತೆ ಚಿತ್ರಿಸಿದ್ದರು. ಆದರೆ ಕಾಫ್ಕಾನ ಗ್ರಹಿಕೆ ಸಂಪೂರ್ಣ ಭಿನ್ನ. ಆತನ ದೃಷ್ಟಿಯಲ್ಲಿ ವ್ಯವಸ್ಥೆ ಕೇವಲ ಒಂದು ವೇದಿಕೆಯಲ್ಲ. ಇದೊಂದು ದೊಡ್ಡ ಯಂತ್ರ. ತಾನೇ ಸೃಷ್ಟಿಸಿಕೊಂಡ ನಿಯಮಗಳನ್ನು ಪಾಲಿಸುವ ಯಂತ್ರ. ಈ ನಿಯಮಗಳನ್ನು ಯಾರು ಮತ್ತು ಯಾವಾಗ ರೂಪಿಸಿದರು ಎಂದು ಈಗ ಯಾರಿಗೂ ಗೊತ್ತಿಲ್ಲ. ಈ ನಿಯಮಗಳಿಗೆ ಮನುಷ್ಯನ ಸಮಸ್ಯೆಗಳೇನು ಎಂಬುದು ಅರ್ಥವಾಗುವುದಿಲ್ಲ. ಅಷ್ಟೇಕೆ ಇವು ಮೂರ್ಖ ನಿಯಮಗಳು ಎಂಬುದೂ ವ್ಯವಸ್ಥೆಗೆ ತಿಳಿಯದು.

ಹೌದು, ವ್ಯವಸ್ಥೆಗಳಿರುವುದೇ ಹಾಗೆ. ಇದನ್ನು ಅರ್ಥ ಮಾಡಿಕೊಳ್ಳಲು ಸಾಹಿತ್ಯ ಕೃತಿಗಳೇ ಬೇಕೆಂದೇನೂ ಇಲ್ಲ. ಒಂದೆರಡು ದಿನಗಳ ಹಿಂದಷ್ಟೇ ನಡೆದ ಎರಡು ಘಟನೆಗಳನ್ನು ನೋಡೋಣ. ಒಂದು: ಬ್ರೆಜಿಲ್‌ ಮೂಲದ ಜೀನ್‌ ಚಾರ್ಲ್ಸ್‌ ಡಿ ಮಿನೆಜಸ್‌ ಎಂಬ ಇಲೆಕ್ಟ್ರೀಷಿಯನ್‌ನ ಕೊಲೆ. ಎರಡು: ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮದುವೆ ಮುಗಿಸಿ ಮನೆಗೆ ಹಿಂದಿರುಗುತ್ತಿರುವಾಗ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಾಲ್ಕು ಮಂದಿ ಮಕ್ಕಳು.

ಚಾರ್ಲ್ಸ್‌ ಮಿನೆಜೆಸ್‌ ಆಗಲೀ ಕುಪ್ವಾರದ ಮಕ್ಕಳಾಗಲೀ ವ್ಯವಸ್ಥೆ ಹೇಳುವ ಯಾವ ನಿಯಮಗಳ ಪ್ರಕಾರವೂ ತಪ್ಪು ಮಾಡಿಲ್ಲ. ಆದರೆ ವ್ಯವಸ್ಥೆ ಅವರನ್ನು ಕೊಂದಿದೆ. ಚಾರ್ಲ್ಸ್‌ ಮಿನೆಜಸ್‌ ಕಳೆದ ನಾಲ್ಕು ವರ್ಷಗಳಿಂದ ಲಂಡನ್‌ನಲ್ಲಿ ಎಲ್ಲಾ ದಾಖಲೆ ಪತ್ರಗಳೊಂದಿಗೆ ಅಧಿಕೃತವಾಗಿ ವಾಸಿಸುತ್ತಿರುವ ವ್ಯಕ್ತಿ. ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್‌. ಆಗಸ್ಟ್‌ 21ರ ಗುರುವಾರದಂದು ನಡೆದ ವಿಫಲ ಬಾಂಬ್‌ ಸ್ಫೋಟ ಪ್ರಕರಣದ ನಂತರ ಈತನ ವಸತಿಯ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು. ಶುಕ್ರವಾರ ಆತ ಎಂದಿನಂತೆ ಮನೆಯಿಂದ ಹೊರಗೆ ಹೊರಟಾಗಲೂ ಮಫ್ತಿಯಲ್ಲಿದ್ದ ಪೊಲೀಸರು ಆತನನ್ನು ಹಿಂಬಾಲಿಸಿದರು. ಸ್ಟಾಕ್‌ವೆಲ್‌ ಟ್ಯೂಬ್‌ ಸ್ಟೇಷನ್‌ನಲ್ಲಿ (ಭೂಗತ ರೈಲು ನಿಲ್ದಾಣ) ರೈಲು ಹತ್ತಲು ಹೊರಟಿದ್ದ ಚಾರ್ಲ್ಸ್‌ ಮಿನೆಜಸ್‌ನ ಮೇಲೆ ಮುಗಿಬಿದ್ದ ಪೊಲೀಸರು ಆತನ ಮೈಗೆ ಕನಿಷ್ಠ ಐದು ಗುಂಡುಗಳನ್ನು ಹೊಡೆಯುವ ಮೂಲಕ ಕೊಂದರು.

ಲಂಡನ್‌ನ ಈ ಎರಡೂ ಸ್ಫೋಟಗಳ ಹಿಂದಿರುವುದು ಒಸಾಮಾ ಬಿನ್‌ ಲಾಡೆನ್‌ ಅಲ್‌ಖೈದಾ ಜಾಲವಂತೆ. ಈ ಜಾಲದಲ್ಲಿರುವುದೆಲ್ಲಾ ಮುಸ್ಲಿಂ ಮೂಲಭೂತವಾದಿಗಳಂತೆ. ಚಾರ್ಲ್ಸ್‌ ಮುಸ್ಲಿಮನಲ್ಲ. ಈತ ಕ್ಯಾಥೊಲಿಕ್‌. ಈತ ಮುಸ್ಲಿಂ ಮೂಲಭೂತವಾದಿಗಳ ಸ್ವರ್ಗವೆಂದು ಪಶ್ಚಿಮದವರು ಬಣ್ಣಿಸುವ ಏಷ್ಯಾ ಅಥವಾ ಆಫ್ರಿಕಾ ಖಂಡಗಳ ಯಾವ ದೇಶಕ್ಕೂ ಸೇರಿದವನಲ್ಲ. ಈತ ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್‌ನವನು. ಆದರೂ ಈತನ ಮೇಲೆ ಏಕೆ ಪೊಲೀಸರು ಒಂದು ಕಣ್ಣಿರಿಸಿದ್ದರು? ಕಣ್ಣಿರಿಸಿದ್ದರೆ ಮನೆಯಿಂದ ಹೊರಗೆ ಹೊರಡದಂತೆ ಅಲ್ಲಿಯೇ ಬಂಧಿಸಿ ಯಾಕೆ ವಿಚಾರಣೆ ನಡೆಸಲಿಲ್ಲ? ಒಂದು ವೇಳೆ ಈತನ ಚಲನವಲವನ್ನು ಗಮನಿಸುವುದೇ ಇವರ ಉದ್ದೇಶವಾಗಿದ್ದರೆ ಆತ ಟ್ಯೂಬ್‌ ಸ್ಟೇಷನ್‌ ತಲುಪುವ ಮೊದಲೇ ತಡೆಯಬಹುದಿತ್ತಲ್ಲವೇ?

ಪ್ರಶ್ನೆಗಳಿಗೆಲ್ಲಾ ಲಂಡನ್‌ನ ಪೊಲೀಸರು ನೀಡುವ ಉತ್ತರಗಳು ಪ್ರಾಗ್‌ನ ಇಂಜಿನಿಯರ್‌ಗೆ ದೊರೆತ ಉತ್ತರಗಳಂತೆಯೇ ಇವೆ. `ನಾವು ಆತನನ್ನು ನಿಲ್ಲುವಂತೆ ಹೇಳಿದೆವು', `ಆತ ರೈಲು ಹತ್ತಲು ಪ್ರಯತ್ನಿಸಿದ', `ಆತ ಓಡಿದ'. ಸಾಮಾನ್ಯ ಜ್ಞಾನವಿರುವ ಯಾರು ಬೇಕಾದರೂ ನಡೆದದ್ದೇನು ಎಂಬುದನ್ನು ಊಹಿಸಬಹುದು. ಯಾರಾದರೊಬ್ಬ ಸಾಮಾನ್ಯ ಮನುಷ್ಯನನ್ನು ನಾಲ್ಕು ಮಂದಿ ದಡಿಯರು ಹಿಂಬಾಲಿಸಿದರೆ ಆತನ ತಕ್ಷಣದ ಪ್ರತಿಕ್ರಿಯೆ ಏನಾಗಿರಬಹುದು? ಯಾರೋ ತನ್ನನ್ನು ದೋಚಲು ಬರುತ್ತಿದ್ದಾರೆ ಎಂದು ಭಾವಿಸಿ ಸುರಕ್ಷಿತ ಸ್ಥಳಕ್ಕೆ ಆತ ಧಾವಿಸುತ್ತಾನೆ. ಚಾರ್ಲ್ಸ್‌ ವಿಷಯದಲ್ಲಿ ಆಗಿರುವುದು ಅಷ್ಟೇ. ಮಫ್ತಿಯಲ್ಲಿರುವ ಪೊಲೀಸರನ್ನು ಆತ ಪೊಲೀಸರೆಂದು ಗುರುತಿಸಲು ಸಾಧ್ಯವೇ? ಅವರ ಕೈಯಲ್ಲಿರುವ ಪಿಸ್ತೂಲು ನೋಡಿ ಇವರ್ಯಾರೋ ಸಶಸ್ತ್ರ ದರೋಡೆಕೋರ ತಂಡ ಎಂದು ಆತ ಭಾವಿಸಿದರೆ ಅದು ಅವನ ತಪ್ಪೇ? ಇಷ್ಟಾಗಿಯೂ ಓಡದೇ ಇರಲು ಆತ ಏಜೆಂಟ್‌ 007 ಆಗಿರಬೇಕಷ್ಟೆ.

ಕುಪ್ವಾರ ಜಿಲ್ಲೆಯ ಬಂಗಾರ್‌ಗುಡ್‌ನಲ್ಲಿ ನಡೆದ ಘಟನೆಯೂ ಅಷ್ಟೇ. ತಡರಾತ್ರಿ ಮದುವೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ನಾಲ್ಕು ಮಂದಿ ಮಕ್ಕಳನ್ನು ಭದ್ರತಾ ಪಡೆಯವರು ಭಯೋತ್ಪಾದಕರೆಂದು ಭಾವಿಸಿದರು ಮತ್ತು ಗುಂಡು ಹಾರಿಸಿದರು. ಈ ಮಕ್ಕಳ ಬಳಿ ಬಂದೂಕಿರಲಿಲ್ಲ. ಅಷ್ಟೇಕೆ ಒಂದು ಗಟ್ಟಿಯಾದ ಕಟ್ಟಿಗೆ ತುಂಡೂ ಇರಲಿಲ್ಲ. ಆದರೂ ಅವರು ಹೇಗೆ ಭಯೋತ್ಪಾದಕರಂತೆ ಕಾಣಿಸಿದರು?

ವ್ಯವಸ್ಥೆಯ ಯಾಂತ್ರಿಕತೆಗೆ ಗಡಿಗಳೇನೂ ಇಲ್ಲ. ಲಂಡನ್‌ನ `ಬುದ್ಧಿವಂತ' ಪೊಲೀಸರು ಹಾಗೂ ಭಾರತದ `ಅತ್ಯುತ್ಸಾಹೀ' ಭದ್ರತಾ ಪಡೆಗಳ ಮಧ್ಯೆ ವ್ಯತ್ಯಾಸಗಳೇನೂ ಇಲ್ಲ ಎಂಬುದನ್ನು ಎರಡೂ ಘಟನೆಗಳು ಸಾಬೀತು ಮಾಡುತ್ತವೆ. ಜುಲೈ ಏಳರ ದಾಳಿಯ ನಂತರ ಲಂಡನ್‌ ಪೊಲೀಸರ ನಿಯಮಗಳು ಬದಲಾಗಿವೆ. ಪೊಲೀಸರಿಗೆ ಯಾರಾದರೂ ಮಾನವ ಬಾಂಬ್‌ನಂತೆ ಕಾಣಿಸಿದರೆ ಆತ/ಆಕೆಯ ತಲೆಗೆ ಗುಂಡು ಹಾರಿಸಬೇಕೆಂದು ಈ ನಿಯಮ ಹೇಳುತ್ತದೆ. ಕಾಲು, ಎದೆ, ಸೊಂಟಗಳಿಗೆ ಗುಂಡು ಹಾರಿಸಿದರೆ ಆತ ಬಾಂಬ್‌ ಸಿಡಿಸುವ ಸಾಧ್ಯತೆ ಇರುವುದರಿಂದ ನೇರ ತಲೆಗೇ ಗುಂಡು ಹೊಡೆಯಲು ಪೊಲೀಸರಿಗೆ ನಿರ್ದೇಶಿಸಲಾಗಿದೆ. ನಿಯಮವೇನೋ ಬಹಳ ತಾರ್ಕಿಕವಾಗಿದೆ. ಆದರೆ ಪೊಲೀಸರು ಸಂಶಯಿಸಿದ ವ್ಯಕ್ತಿ ಮಾನವ ಬಾಂಬ್‌ ಆಗದಿದ್ದರೆ?

ಇದು ಭಾರತದ ವಿಷಯದಲ್ಲೂ ಸರಿ. ಪೊಲೀಸರು ಸಂಶಯಿಸಿದ ವ್ಯಕ್ತಿ ಭಯೋತ್ಪಾದಕನಾಗದೇ ಇದ್ದರೆ?
ವ್ಯವಸ್ಥೆ ಒಂದು ಯಂತ್ರ. ಅದು ತಾನೇ ರೂಪಿಸಿಕೊಂಡ ನಿಯಮಗಳಂತೆ ನಡೆಯುತ್ತದೆ. ಈ ನಿಯಮಗಳನ್ನು ಯಾರು ಮತ್ತು ಯಾಕೆ ರೂಪಿಸಿದರು ಎಂಬುದು ಈಗ ಯಾರಿಗೂ ಗೊತ್ತಿಲ್ಲ!

ನಾದಯೋಗಿಯ ಮೇಲೊಂದು ಪ್ರಯೋಗ

ಗುರು ನಿತ್ಯಚೈತನ್ಯ ಯತಿ 1924ರಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮುರಿಞಕಲ್ಲ್‌ ಎಂಬಲ್ಲಿ ಹುಟ್ಟಿದರು. 1952ರಲ್ಲಿ ಶ್ರೀ ನಾರಾಯಣಗುರುಗಳ ಉತ್ತರಾಧಿಕಾರಿಯಾಗಿದ್ದ ಶ್ರೀ ನಟರಾಜಗುರುಗಳ ಶಿಷ್ಯತ್ವ ಸ್ವೀಕರಿಸಿದರು. ತತ್ವಶಾಸ್ತ್ರ ಮತ್ತು ಮನೋವಿಜ್ಞಾನದ ವಿದ್ವಾಂಸರಾಗಿದ್ದ ಶ್ರೀ ನಿತ್ಯಚೈತನ್ಯ ಯತಿ ಇಂಗ್ಲಿಷ್‌ ಹಾಗೂ ಮಲೆಯಾಳಂನಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. 1999ರಲ್ಲಿ ಸಮಾಧಿಸ್ಥರಾಗುವವರೆಗೂ ಫರ್ನ್‌ ಹಿಲ್ಸ್‌ನ ನಾರಾಯಣ ಗುರುಕುಲಂ ಮತ್ತು ಈಸ್ಟ್‌ ವೆಸ್ಟ್‌ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದರು. ಯತಿಗಳ `ಮರಕ್ಕಾನಾವತ್ತವರ್‌’ ಪುಸ್ತಕದಲ್ಲಿರುವ ಇಬ್ಬರು ಅಸಾಧಾರಣ ಯೋಗಿಗಳ ಕುರಿತ ಲೇಖನದ ಆಯ್ದ ಭಾಗದ ಭಾವಾನುವಾದ ಇಲ್ಲಿದೆ.

1964ರಲ್ಲಿ ಯಾವುದೋ ಕಾರಣಕ್ಕಾಗಿ ಋಷಿಕೇಶಕ್ಕೆ ಹೋಗಿ ಶಿವಾನಂದಾಶ್ರಮದಲ್ಲಿ ಉಳಿದುಕೊಳ್ಳಬೇಕಾಯಿತು. ಅಲ್ಲಿರುವ ಒಂದು ಕಟ್ಟಡದಿಂದ ರಾತ್ರಿ ಹಗಲೆನ್ನದೆ ಹಾಡು ಕೇಳಿಬರುತ್ತಿತ್ತು. ಈ ಹಾಡಿನ ಮಾಧುರ್ಯಕ್ಕೆ ಮಾರುಹೋದ ನಾನು ಆ ಕಟ್ಟಡ ಬಾಗಿಲನ್ನೊಮ್ಮೆ ತಟ್ಟಿ ನೋಡಿದೆ. ಆಗ ಹಾಡು ನಿಂತು ಬಾಗಿಲು ತೆರೆದುಕೊಂಡಿತು.
ಬಾಗಿಲು ತೆರೆದದ್ದು ಸುಮಾರು ಐವತ್ತರ ಆಸುಪಾಸಿನಲ್ಲಿದ್ದ ಒಬ್ಬ ಸನ್ಯಾಸಿ. ಕಾವಿಧಾರಿ. ಮುಂಡನಕ್ಕೆ ಒಳಗಾದ ತಲೆ. ಮುಖದಲ್ಲಿಯೂ ಕೂದಲುಗಳಿಲ್ಲ.
ಸನ್ಯಾಸಿಗಳ ಹೆಸರು ಕೇಳುವ ಅಗತ್ಯವಿಲ್ಲ. ಸುಮ್ಮನೆ ಸ್ವಾಮೀಜಿ ಎಂದು ಕರೆದರೆ ಸಾಕು. `ಸ್ವಲ್ಪ ಹೊತ್ತು ಹಾಡು ಕೇಳಲೇ ಸ್ವಾಮೀಜಿ?’ ಎಂದೆ.

ಸ್ವಾಮೀಜಿ ಇದಕ್ಕೊಪ್ಪಿದ್ದಷ್ಟೇ ಅಲ್ಲದೆ ನನಗೊಂದು ವಿಶೇಷಾತಿಥಿಯ ಸ್ಥಾನ ನೀಡಿ ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡರು.

ಆಮೇಲೆ ಅವರು ಸುಮಾರು ಒಂದು ಗಂಟೆಗಳ ಕಾಲ ಹಾಡಿದರು. ಹಾಡಿನಲ್ಲಿ `ತನ್ನನ ತಾನನ ತನ್ನಾನ’ ಎಂಬುದನ್ನು ಬಿಟ್ಟರೆ ಬೇರೊಂದು ಪದವೂ ಇರಲಿಲ್ಲ.

`ತಾವೇಕೆ ಇತರ ಸಂಗೀತಗಾರರಂತೆ ಹಾಡದೆ ಬರೇ ತನನ ಹಾಡುತ್ತೀರಲ್ಲಾ?’ ಎಂದು ಪ್ರಶ್ನಿಸಿದೆ.

ಅದಕ್ಕೆ ಆತ `ನಾನು ಭಾಗವತನಲ್ಲ. ನಾನು ನಾದಯೋಗಿ. ನಾನು ನಾದಾನುಸಂಧಾನಕ್ಕಾಗಿ ಹಾಡುತ್ತೇನೆ. ಅಕ್ಬರನ ಆಸ್ಥಾನದಲ್ಲಿ ತಾನ್‌ಸೇನ್‌ ಎಂಬ ಸಂಗೀತಗಾರನಿದ್ದ. ಆತ ನಾದಯೋಗಿ. ಅವನು ರೂಪುಕೊಟ್ಟ ರಾಗಗಳನ್ನು ಬಳಸಿ ನಾನು ನಾದಾನುಸಂಧಾನ ಮಾಡುತ್ತಿದ್ದೇನೆ’ ಎಂದು ಉತ್ತರಿಸಿದರು.

ಈ ಮಾತುಗಳನ್ನಾಡುವಾಗ ಅವರ ಮುಖದಲ್ಲಿದ್ದ ಅಸಾಧಾರಣ ಕಾಂತಿ ಮತ್ತು ವಿವರಣೆಯ ಸೌಮ್ಯತೆ ನನ್ನನ್ನು ಆಕರ್ಷಿಸಿದವು. ನಾನು ಸೈಕಿಕ್‌ ಅಂಡ್‌ ಸ್ಪಿರಿಚ್ಯುವಲ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕನೆಂದು ಪರಿಚಯಿಸಿಕೊಂಡು ನಮ್ಮ ಸಂಶೋಧನೆಗಳಲ್ಲಿ ಸಂಗೀತ ಸಂಬಂಧೀ ಅಧ್ಯಯನಗಳೂ ಇವೆ ಎಂದು ವಿವರಿಸಿದೆ.

ಸ್ವಾಮೀಜಿಗೆ ನಮ್ಮ ಸಂಶೋಧನೆಗಳ ಕುರಿತು ಕುತೂಹಲ ಉಂಟಾಗಿ ಪ್ರಶ್ನಿಸತೊಡಗಿದರು. ನಾದಯೋಗದ ಕುರಿತು ಸಂಶೋಧನೆಗಳನ್ನು ನಡೆಸುವುದಕ್ಕೆ ಇರುವ ಅತಿದೊಡ್ಡ ತೊಂದರೆಯೆಂದರೆ ನಾದಯೋಗಿಗಳು ಸಿಗದೇ ಇರುವುದು ಎಂಬುದನ್ನು ಅವರಿಗೆ ಅರ್ಥ ಮಾಡಿಸಿದೆ.

ಮಂತ್ರಯೋಗ, ಲಯಯೋಗ, ನಾದಯೋಗ ಮುಂತಾದುವುಗಳೆಲ್ಲಾ ಪರಸ್ಪರ ಸಂಬಂಧ ಹೊಂದಿವೆ. ನನ್ನೊಂದಿಗೆ ಚರ್ಚಿಸುತ್ತಿದ್ದ ಸ್ವಾಮೀಜಿ `ತಾನ’ವನ್ನು ಮಂತ್ರದಂತೆ ಪಠಿಸಿ ಲಯ ಸಾಧಿಸುತ್ತಿದ್ದರು.

ಒಬ್ಬ ಮಹಾಯೋಗಿಯನ್ನು ಅವರ ಯೋಗ್ಯತೆಗೂ ಚರ್ಯೆಗೂ ಹೊಂದದ ಕೆಲಸಗಳಲ್ಲಿ ತೊಡಗಿಸುವುದು ತಪ್ಪು ಎಂಬುದು ನನಗೆ ತಿಳಿದದ್ದರಿಂದ ನಾನು ಕ್ಷಮಾಪಣೆಯ ಧ್ವನಿಯಲ್ಲಿ ಅವರನ್ನು ದಿಲ್ಲಿಗೆ ಆಹ್ವಾನಿಸಿದೆ.

ಅವರ ಕುರಿತು ಇನ್ನಷ್ಟು ತಿಳಿಯಲು ಅವರ ಹೆಸರು, ಹುಟ್ಟು, ಶಿಕ್ಷಣ ಮೊದಲಾದುವುಗಳ ಬಗ್ಗೆ ಕೇಳಿದೆ. ಸ್ವಾಮೀಜಿಯ ಹೆಸರು ನಾದ ಬ್ರಹ್ಮಾನಂದ. ಅವರು ಹುಟ್ಟಿದ್ದು ಮೈಸೂರಿಗೆ ಹತ್ತಿರದ ಯಾವುದೋ ಹಳ್ಳಿಯಲ್ಲಿ. ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹಿಂದೂ-ಮುಸ್ಲಿಂ ಬಾಂಧವ್ಯ ಅನನ್ಯ. ಮುಸ್ಲಿಮರ ಮನೆಗಳಲ್ಲೂ ಹಿಂದೂ ಆಚಾರಗಳ ಅನುಷ್ಠಾನ ಅಲ್ಲಿ ಸಾಮಾನ್ಯ. ಭಾರತದಲ್ಲಿ ಮತ್ತೆಲ್ಲೂ ಕಾಣದಷ್ಟು ಸೂಫಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಣಸಿಗುತ್ತಾರೆ. ಕಬೀರ್‌ದಾಸ್‌, ಶಿರಡಿ ಸಾಯಿಬಾಬಾ ಮೊದಲಾದವರಂತೆ ಖುರಾನ್‌ ಮತ್ತು ರಾಮಾಯಣಗಳೆರಡರ ಬಗ್ಗೆಯೂ ಅವರಿಗೆ ಸಮಾನ ನಿಷ್ಠೆ. ಅಂಥ ಒಬ್ಬರು ಸೂಫಿ ತಾನ್‌ಸೇನ್‌ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದು ನಾದಯೋಗಿಯಾಗಿದ್ದರು.

ನಾದ ಬ್ರಹ್ಮಾನಂದ ಸ್ವಾಮೀಜಿ ತಮ್ಮ ಶಾಲಾ ಶಿಕ್ಷಣ ಮುಗಿದ ಮೇಲೆ ಈ ಯೋಗಿಯ ಬಳಿ ತಾನ ಕಲಿತರಂತೆ. ನಾದ ಬ್ರಹ್ಮಾನಂದ ಸ್ವಾಮೀಜಿ ಕಾಲೇಜಿಗೆ ಹೋಗಿದ್ದಾರೋ ಇಲ್ಲವೋ ಎಂಬುದನ್ನು ನಾನು ಕೇಳಲಿಲ್ಲ. ಆದರೆ ಅವರ ಮಾತುಗಳು ಉನ್ನತ ಶಿಕ್ಷಣ ಪಡೆದಿರುವ ಕುರುಹುಗಳನ್ನು ಒದಗಿಸುತ್ತಿದ್ದವು.

ಯೋಗದ ಕುರಿತು ಸಂಶೋಧನೆಗಳನ್ನು ನಡೆಸುವಾಗ ಯೋಗಿಯ ಹಿನ್ನೆಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಾವು ಅಧ್ಯಯನ ಮುಂದುವರಿಸುತ್ತೇವೆ. ಇದು ಒಂದೇ ಕೋಣೆಯಲ್ಲಿ ನಾಯಿ, ಮೊಲ, ಕೋತಿಗಳು ಒಟ್ಟಿಗೆ ಶಿಕ್ಷಣ ಪಡೆಯುವಂತೆ ಇರುತ್ತದೆ. ಇದರಿಂದ ತಮಗೆ ತೊಂದರೆಯಾಗಬಹುದು ಎಂದು ನಾದಬ್ರಹ್ಮಾನಂದರಲ್ಲಿ ಹೇಳಿದೆ. ಅವರದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. `ನನಗೆ ಈ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿಯಿದೆ’ ಎಂದವರು ಒತ್ತಿ ಹೇಳಿದಾಗ ನನಗೆ ಸಂತೋಷವೇ ಆಯಿತು.

ನಲವತ್ತು ನಿಮಿಷಗಳ ಕಾಲ ಉಸಿರಾಡದೆ ತಬಲ ನುಡಿಸುವುದು ನಾದಬ್ರಹ್ಮಾನಂದರ ಸಿದ್ಧಿಗಳಲ್ಲಿ ಒಂದು. ಆ ಹೊತ್ತಿನಲ್ಲಿ ಅವರ ಮೆದುಳಿನೊಳಗೆ ನಡೆಯುವ ವಿದ್ಯುತ್ಕಾಂತೀಯ ಪ್ರಕ್ರಿಯೆ ಹೇಗಿರುತ್ತದೆ ಎಂದು ಅಧ್ಯಯನ ಮಾಡಲು ನಾವು ಯೋಜನೆ ರೂಪಿಸಿದೆವು. ಹಾಗೆಯೇ ಅವರು ಧ್ಯಾನದ ಮೂಲಕ ಬಹಳ ಹೊತ್ತು ನಾದಸಮಾಧಿಯಲ್ಲಿ ಇರುತ್ತಾರೆ ಎಂಬುದೂ ಕೂಡಾ ನಮಗೆ ಒಳ್ಳೆಯ ಅಧ್ಯಯನ ವಿಷಯ ಎನಿಸಿತ್ತು.

ನನ್ನ ಆಹ್ವಾನಕ್ಕೆ ಮನ್ನಣೆಯಿತ್ತ ಸ್ವಾಮೀಜಿ ತಮ್ಮ ಸಂಗೀತೋಪಕರಣಗಳ ಜತೆಗೆ ದಿಲ್ಲಿಗೆ ಬಂದರು. ಕುಶಲ ವಿಚಾರಿಸುವಂಥ ಯಾವುದೇ ಔಪಚಾರಿಕತೆಗಳನ್ನು ಅವರು ಪಾಲಿಸುತ್ತಿರಲಿಲ್ಲ. ಬಂದವರು ಅವರಿಗಾಗಿ ಏರ್ಪಾಡು ಮಾಡಲಾಗಿದ್ದ ವಸತಿಯಲ್ಲಿ ಉಳಿದುಕೊಂಡರು.

ಒಬ್ಬ ಅಸಾಮಾನ್ಯ ನಾದಯೋಗಿಯನ್ನು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಪ್ರಯೋಗಕ್ಕೆ ಗುರಿಪಡಿಸಲಾಗುತ್ತಿದೆ ಎಂಬುದು ಪತ್ರಿಕೆಗಳಿಗೆ ಹೇಗೋ ತಿಳಿದು ಸುದ್ದಿಯಾಗಿತ್ತು. ಆಮೇಲೆ ನನ್ನ ದೂರವಾಣಿಗೆ ಕರೆಗಳ ಮೇಲೆ ಕರೆಗಳು. ಈ ಪ್ರಯೋಗ ವೀಕ್ಷಣೆಗೆ ದಿಲ್ಲಿಯಲ್ಲಿದ್ದ ಎಲ್ಲಾ ರಾಯಭಾರ ಕಚೇರಿಗಳಿಂದಲೂ ಹಲವರು ಬಂದರು.
ಅಂದೇ ಇನ್ನೊಂದು ಪ್ರಯೋಗಕ್ಕಾಗಿ ಐಐಎಂಸ್‌ನ ನ್ಯೂರೋ ಫಿಸಿಯಾಲಜಿ ವಿಭಾಗಕ್ಕೆ ಒಂದು ಕೋತಿಯನ್ನು ತರಲಾಗಿತ್ತು. ಅದರ ಕೈಕಾಲು ಕಟ್ಟಿ ಕುರ್ಚಿಯಲ್ಲಿ ಕುಳ್ಳಿರಿಸಲಾಗಿತ್ತು. ಅದರ ಎಲೆಕ್ಟ್ರೋ ಎನ್‌ಸೆಫಲೋಗ್ರಾಪ್‌ (ಇಇಜಿ) ತೆಗೆಯಲು ಅಡಿಯಿಂದ ಮುಡಿಯವರೆಗೆ ಹಲವೆಡೆ ವಯರ್‌ಗಳನ್ನು ಅಳವಡಿಸಿಡಲಾಗಿತ್ತು. ನಮ್ಮ ಪ್ರಯೋಗ ನಡೆಯುವಲ್ಲಿಗೆ ಬರುವವರು ಈ ಕೋತಿಯ ದರ್ಶನವನ್ನು ಮಾಡಿಕೊಂಡೇ ಬರಬೇಕಿತ್ತು. ಸ್ವಾಮೀಜಿಯ ಮೇಲೂ ನಾವು ಇಂಥದ್ದೇ ಒಂದು ಪ್ರಯೋಗ ನಡೆಸುತ್ತಿದ್ದರಿಂದ ಸ್ವಾಮೀಜಿ ಆ ಕೋತಿಯನ್ನು ನೋಡುವುದು ನನಗೆ ಅಷ್ಟೇನೂ ಇಷ್ಟವಿರಲಿಲ್ಲ. ಆದರೇನು ಮಾಡುವುದು…

ವಿವಿಧ ರಾಯಭಾರ ಕಚೇರಿಗಳಿಂದ ಪ್ರಯೋಗ ವೀಕ್ಷಣೆಗೆ ಬಂದ ವಿಐಪಿಗಳಿಗೆಲ್ಲಾ ಕುರ್ಚಿಗಳ ವ್ಯವಸ್ಥೆಯನ್ನೂ ಮಾಡಬೇಕಾಯಿತು. ಕೋಟು ಬೂಟುಗಳೊಂದಿಗೆ ಬಂದಿದ್ದ ವಿಐಪಿಗಳೆಲ್ಲಾ ಆಸೀನರಾದ ನಂತರ ಸ್ವಾಮಿಜಿಗೂ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಯಿತು.
ಮೊದಲ ಪ್ರಯೋಗದ ಉದ್ದೇಶ ಸ್ವಾಮೀಜಿ ಧ್ಯಾನಿಸುತ್ತಿರುವಾಗ ಇಇಜಿಯಲ್ಲಿ ಆಲ್ಫಾ ರಿದಂ ಸಿಗುತ್ತದೆಯೇ? ಸಿಕ್ಕರೆ ಅದೆಷ್ಟು ಕಾಲ ಸ್ಥಿರವಾಗಿರುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು.

ಸ್ವಾಮೀಜಿ ಧ್ಯಾನಿಸುವಾಗ ಕಣ್ಣು ಮುಚ್ಚುತ್ತಿರಲಿಲ್ಲ. ಅರ್ಧನಿಮೀಲಿತ ನೇತ್ರರಾಗಿ ಧ್ಯಾನಿಸುವುದು ಅವರ ವಿಧಾನ. ಹಾಗಾಗಿ ಸ್ವಾಮೀಜಿ ಧ್ಯಾನಕ್ಕಾಗಿ ಕುಳಿತರೆ ಅವರಿಗೆ ಎದುರು ಕುಳಿತ ವಿಐಪಿಗಳ ಬೂಟುಗಳು ಮಾತ್ರ ಕಾಣಿಸುವಂಥ ಸ್ಥಿತಿ ಪ್ರಯೋಗ ಶಾಲೆಯಲ್ಲಿತ್ತು. ಸ್ವಾಮೀಜಿ ತಮ್ಮ ಗುರುಗಳ ಮುಖಾರವಿಂದವನ್ನು ಧ್ಯಾನಿಸುತ್ತಿದ್ದರು. ಅಂತಲ್ಲಿ ಬೂಟುಗಳು ಕಂಡರೆ ಏನಾಗಬೇಡ.

ಒಬ್ಬ ಹಿಂದೂ ಆಚಾರ್ಯರ ವೈದಿಕ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಇದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ. ಆದರೂ ಸ್ವಾಮೀಜಿ ಇದನ್ನು ವಿರೋಧಿಸಲಿಲ್ಲ
ಎರಡು ಮೂರು ನಿಮಿಷಗಳಲ್ಲಿ ಇಇಜಿಯಲ್ಲಿ ಆಲ್ಫಾ ರಿದಂ ಕಾಣಿಸತೊಡಗಿತು. ಇದನ್ನು ಕಂಡ ನಮಗೆಲ್ಲಾ ಆಶ್ಚರ್ಯವಾಯಿತು. ಎಂಥಾ ಸ್ಥಿತಿಯಲ್ಲೂ ಒಬ್ಬ ಯೋಗಿ ಆತ್ಮ ಸಂಯಮ ಸಾಧಿಸುತ್ತಾನೆ ಎಂಬುದನ್ನು ಇದು ಸಾಬೀತು ಮಾಡಿತು. ಇದಾದ ಮೇಲೆ ನಾವು ಮಾಡಿದ ಕೆಲಸವಂತೂ ಅತಿ ದೊಡ್ಡ ಸಾಹಸ ಎಂದೇ ಹೇಳಬೇಕು.

ಸ್ವಾಮೀಜಿಯ ಮೂಗು, ಬಾಯಿಯನ್ನು ಸಂಪೂರ್ಣವಾಗಿ ಮುಚ್ಚಿ ಅವರ ಉಸಿರಾಟವನ್ನು ನಿಲ್ಲಿಸಿ ಅವರು ತಬಲ ನುಡಿಸವಷ್ಟೂ ಹೊತ್ತು ಬೀಟಾ ರಿದಂ ಸ್ಥಿರವಾಗಿರುತ್ತದೆಯೇ ಎಂಬುದನ್ನು ನಾವು ಪರೀಕ್ಷಿಸಬೇಕಾಗಿತ್ತು. ಸ್ವಾಮೀಜಿ ಹೇಳಿದಂತೆ ನಲವತ್ತು ನಿಮಿಷ ಶ್ವಾಸೋಚ್ಛ್ವಾಸವನ್ನು ನಿಲ್ಲಿಸಲು ಸಾಧ್ಯವೇ? ಈ ಸ್ಥಿತಿಯಲ್ಲಿ ನಾಲ್ಕು, ಎಂಟು, ಹದಿನಾರು, ಮೂವತ್ತೆರಡರ ತಾಳಕ್ರಮದಲ್ಲಿ ತಬಲಾ ಬಾರಿಸಲು ಅವರಿಗೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು.

ಪ್ರಯೋಗಾಲಯದಲ್ಲಿದ್ದ ಎಲ್ಲಾ ವೈದ್ಯರಿಗೂ, ಫಿಸಿಯೋಲಜಿಸ್ಟ್‌ಗಳಿಗೂ ನಮ್ಮ ಪ್ರಯೋಗ ಅತ್ಯಂತ ಕ್ರೂರ ಮತ್ತು ನಿಯಮಬಾಹಿರ ಎನಿಸತೊಡಗಿತ್ತು. ಪ್ರಯೋಗದ ನಡುವೇ ಸ್ವಾಮೀಜಿ ಉಸಿರುಕಟ್ಟಿ ಮೃತಪಟ್ಟರೆ ಉಸಿರುಗಟ್ಟಿಸಿ ಕೊಂದ ಆರೋಪವನ್ನು ನಾವೆಲ್ಲರೂ ಹೊರಬೇಕಾಗುತ್ತಿತ್ತು. ಆದ್ದರಿಂದ `ಇದನ್ನು ನನ್ನಿಷ್ಟಕ್ಕೆ ಅನುಗುಣವಾಗಿ ಮಾಡುತ್ತಿದ್ದೇನೆ. ಈ ಹಿಂದೆಯೂ ಇಂಥದ್ದನ್ನು ಮಾಡಿದ್ದೇನೆ. ಈವರೆಗೆ ಯಾವ ಅಪಾಯವೂ ಸಂಭವಿಸಿಲ್ಲ. ಒಂದು ವೇಳೆ ಈ ಪ್ರಯೋಗದಲ್ಲಿ ಅಪಾಯವೇನಾದರೂ ಆದರೆ ಅದಕ್ಕೆ ನಾನೇ ಜವಾಬ್ದಾರ’ ಎಂಬ ಒಕ್ಕಣೆಯುಳ್ಳ ಕರಾರು ಪತ್ರವೊಂದಕ್ಕೆ ಸ್ವಾಮೀಜಿಯವರಿಂದ ಸಹಿ ಹಾಕಿಸಿದ ನಂತರವಷ್ಟೇ ಪ್ರಯೋಗ ಮುಂದುವರಿಸಲು ವೈದ್ಯರು ಒಪ್ಪಿದರು.

ಮೂಗು ಮತ್ತು ಬಾಯಲ್ಲಿ ಗಾಳಿ ಹೊರಬರದಂತೆ ತಾನು ಒಳಗಿನಿಂದ ಅವುಗಳನ್ನು ಮುಚ್ಚುವುದರಿಂದ ಹೊರಗಿನಿಂದ ಅವನ್ನು ಮುಚ್ಚುವ ಅಗತ್ಯವಿಲ್ಲ ಎಂಬುದು ನಾದ ಬ್ರಹ್ಮಾನಂದಜಿ ಅವರ ಅಭಿಪ್ರಾಯ. ಆದರೆ ಪ್ರಯೋಗ ನಡೆಸುತ್ತಿರುವವರಿಗೆ ಅಗತ್ಯವಿರುವ ನಿಖರತೆಗಾಗಿ ಎಲೆಕ್ಟ್ರೋ ಫಿಸಿಯಾಲಜಿ ಪ್ರೊಫೆಸರ್‌ ಡಾ.ಛಿನ್ನ ಅವರೇ ಸ್ವಾಮೀಜಿಯವರ ಮೂಗನ್ನು ಗಟ್ಟಿಯಾಗಿ ಒತ್ತಿ ಹಿಡಿಯಲು ಒಪ್ಪಿದರು. ನಾವು ಅವರನ್ನು ನಿಜಕ್ಕೂ ಒಂದು ಕ್ರೂರ ಕ್ರಿಯೆಗೆ ಒಪ್ಪಿಸಿದ್ದೆವು.

ಎರಡು ಮೂರು ನಿಮಿಷಗಳಿಗಿಂತ ಹೆಚ್ಚಾಗಿ ಯಾರಿಗೂ ಉಸಿರುಕಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಮೆದುಳಿಗೆ ಆಘಾತವಾಗುತ್ತದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೂ ನಾವು ಪ್ರಯೋಗವನ್ನು ನಡೆಸಿಯೇ ತೀರಿದೆವು.

ಅದ್ಭುತ!

ದೇಹದ ಯಾವುದೇ ಅಂಗದ ಸಣ್ಣ ಚಲನೆ ಕೂಡಾ ಮೆದುಳಿನ ತರಂಗಗಳ ಆವೃತ್ತಿಯನ್ನು ಹೆಚ್ಚಿಸುತ್ತದೆ. ಆದರೆ ಸ್ವಾಮೀಜಿ ನಲವತ್ತು ನಿಮಿಷಗಳ ಕಾಲ ಉಸಿರು ನಿಲ್ಲಿಸಿ ತಾಳವನ್ನು ಅರವತ್ನಾಲ್ಕು ಮಾತ್ರೆಗಳ ಹಂತದವರೆಗೂ ಕೊಂಡೊಯ್ದು ತಬಲಾ ನುಡಿಸಿದರೂ ಅವರ ಮೆದುಳಿನ ವಿದ್ಯುತ್‌ ತರಂಗಗಳು ಬೀಟಾದಲ್ಲಿಯೇ ಸ್ಥಿರವಾಗಿದ್ದವು. ಮೆದುಳಿನ ಕೆಲಸ ಅನೈಚ್ಚಿಕ. ಆದರೆ ಯೋಗಿಯೊಬ್ಬ ತನಗೆ ಬೇಕಾದಂತೆ ನಿಯಂತ್ರಿಸುತ್ತಾನೆ ಎಂಬುದನ್ನು ನಾವು ಸಾಬೀತು ಮಾಡಿದ್ದೆವು. ನಾದೋಪಾಸನೆಯ ಮೂಲಕ ಸಾಧಿಸುವ ನಾದಲಯ ಮುಂದೆ ಅಧ್ಯಯನ ವಿಷಯವಾಯಿತು.

ನಮ್ಮ ಪ್ರಯೋಗವನ್ನು ಅತ್ಯಂತ ಕುತೂಲದಿಂದ ಮತ್ತು ಅಷ್ಟೇ ಸೂಕ್ಷ್ಮವಾಗಿ ಪರಿಶೀಲಿಸಿವದರಲ್ಲಿ ರೋಡ್ರಿಗಸ್‌ ಕೂಡಾ ಒಬ್ಬರು. ಅವರು ಚಿಲಿ ರಾಯಭಾರ ಕಚೇರಿಯಿಂದ ಬಂದಿದ್ದ ಒಬ್ಬ ವಿಜ್ಞಾನಿ. ಮುಂದೆ ಅವರು ಸ್ವಾಮೀಜಿಯನ್ನು ಚಿಲಿ ರಾಯಭಾರ ಕಚೇರಿಗೆ ಕರೆದೊಯ್ದು ಮತ್ತಷ್ಟು ಪ್ರಯೋಗಗಳಿಗೆ ಗುರಿಪಡಿಸಿದರು. ಸ್ವಾಮಿಜಿಯ ಹೊಟ್ಟೆ, ಎದೆ, ಕೆನ್ನೆ ಮುಂತಾದೆಡೆಗಳಿಂದೆಲ್ಲಾ ಸ್ವಾಮಿಜಿ ಹಾಡುವ ತಾನವನ್ನು ಧ್ವನಿಮುದ್ರಿಸಿಕೊಂಡರು.
ಸಂಗೀತದಿಂದ ಸಾಂಧ್ರವಾಗಿದ್ದ ಅವರ ದೇಹ ನಮಗೆ ಒಂದು ಅದ್ಭುತ ವಸ್ತುವಿನಂತೆ ಕಾಣಿಸುತ್ತಿತ್ತು.

ಪ್ರಯೋಗಗಳ ಫಲಿತಾಂಶಕ್ಕಿಂತ ಆಕರ್ಷಣೀಯವಾಗಿದ್ದದ್ದು ಆ ಮಹಾತ್ಮನ ಅತ್ಯಂತ ವಿನಯಪೂರ್ವಕ ನಡವಳಿಕೆ ಮತ್ತು ಪ್ರಯೋಗಗಳಿಗೆ ಅವರು ನೀಡುತ್ತಿದ್ದ ಸಹಕಾರ. ಸ್ವಾಮಿ ಬ್ರಹ್ಮಾನಂದರು ಪರಿಚಯವಾಗದೇ ಅವರ ಸಾಧನೆಗಳನ್ನು ವೈಜ್ಞಾನಿಕ ಪ್ರಯೋಗಗಳಿಗೆ ಒಳಪಡಿಸಿ ವಿಶ್ಲೇಷಿಸಲು ಸಾಧ್ಯವಾಗದೇ ಇದ್ದಿದ್ದರೆ ನಾನಿನ್ನೂ ಭಾರತೀಯ ಯೋಗ ಸಿದ್ಧಿಗಳನ್ನು ಅಪನಂಬಿಕೆಯಿಂದಲೇ ನೋಡುತ್ತಿದ್ದನೇನೋ?

ಮನಸ್ಸಿನ ಕ್ರಿಯೆಗಳಾದ ವಿಚಾರ, ಮನನ, ಧ್ಯಾನ ಎಂಬವುಗಳ ಮೂಲಕ ರಕ್ತ ಪರಿಚಲನೆ, ಮೆದುಳಿನೊಳಗಿನ ವಿದ್ಯುತ್ಕಾಂತೀಯ ಪ್ರಕ್ರಿಯೆ ಮುಂತಾದುವುಗಳನ್ನೆಲ್ಲಾ ನಿಯಂತ್ರಿಸಲು ಸಾಧ್ಯ ಎಂಬುದನ್ನು ಅವರೊಂದಿಗಿನ ಒಡನಾಟದಿಂದ ತಿಳಿಯಿತು. ಮುಂದೆ ಈ ಅನುಭವಗಳನ್ನು ನನ್ನ ಬದುಕಿನಲ್ಲಿ ಅತ್ಯಂತ ಉಪಯುಕ್ತವಾದ ರೀತಿಯಲ್ಲಿ ಬಳಸಲು ಸಾಧ್ಯವಾದದ್ದನ್ನು ನಾನಿಲ್ಲಿ ಸ್ಮರಿಸುತ್ತೇನೆ.

ಸುಮಾರು ಐವತ್ತು ವರ್ಷ ವಯಸ್ಸಿವರು ಎಂದು ನಾನಂದುಕೊಂಡಿದ್ದ ಸ್ವಾಮಿಜಿಯ ನಿಜವಾದ ವಯಸ್ಸು ಎಪ್ಪತ್ತನಾಲ್ಕು. ನಾನವರನ್ನು ಕೊನೆಯ ಬಾರಿ ಕಂಡದ್ದು ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ. ಅಂದೂ ನನಗೆ ನನಗವರ ನಾದಸಾಧನೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಇದನ್ನು ಬರೆಯುವ ಹೊತ್ತಿಗೆ ಅವರು ನನ್ನಿಂದ ದೂರವಾಗಿದ್ದರೂ ಅವರು ನಾದದ ಮೂಲಕ ಹಚ್ಚಿದ್ದ ಹಣತೆ ನನ್ನ ಹೃದಯದೊಳಗೆ ಉರಿಯುತ್ತಲೇ ಇದೆ.