<p>
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಆರ್.ವಿ.ದೇಶಪಾಂಡೆಯವರಿಗೆ ದೊರೆತಿದೆ. ಪರಿಣಾಮವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಿಟ್ಟು ಬಂದಿದೆ. ಈಗವರು `ಅಹಿಂದ'ದ ಮೂಲಕ ರಣಕಹಳೆ ಮೊಳಗಿಸಲಿದ್ದಾರೆ. ಸಿದ್ದರಾಮಯ್ಯನವರೂ ಇದಕ್ಕೆ ಓಗೊಟ್ಟು ಭಾವುಕರಾಗಿ ಮಾತನಾಡುತ್ತಾರೆ. ಇದು ಈ ಹಿಂದೆಯೂ ಸಂಭವಿಸಿತ್ತು. ಆಗ ಸಿದ್ದರಾಮಯ್ಯ ಸೆಕ್ಯುಲರ್ ಜನತಾದಳದಲ್ಲಿದ್ದರು. ಆಗ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗಿತ್ತೆಂಬ ಅಸಮಾಧಾನವಿತ್ತು. ಅಷ್ಟು ಸಾಲದೆಂಬಂತೆ ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಸರಕಾರವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲವನ್ನೂ ಮಾಡುತ್ತಿದ್ದರು. ಇದನ್ನು ಪ್ರತಿಭಟಿಸಲು ಸಿದ್ದರಾಮಯ್ಯ `ಅಹಿಂದ' ವೇದಿಕೆ ಬಳಸಿಕೊಂಡರು. ದೇವೇಗೌಡರು ಸಿದ್ದರಾಮಯ್ಯನವರಿಗಿದ್ದ ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಂಡರು.
</p>
<p>
ಈಗ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿದ್ದಾರೆ. ಸೆಕ್ಯುಲರ್ ಜನತಾದಳದಿಂದ ದೂರವಾದ ಹೊಸತರಲ್ಲಿ ಎಲ್ಲರಿಗೂ ಕೇಳಿಸುವಂತೆ `ಅಹಿಂದ' ಜಪ ಮಾಡುತ್ತಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹತ್ತಿರವಾಗುತ್ತಾ ಹೋದಂತೆ `ಅಹಿಂದ' ಜಪದ ಧ್ವನಿಯನ್ನು ಮೆತ್ತಗಾಗಿಸಿ ಕೊನೆಗೊಮ್ಮೆ ಮೌನ ಜಪಕ್ಕೆ ಶರಣಾಗಿಬಿಟ್ಟರು. ಈಗ ಮತ್ತೆ `ಅಹಿಂದ' ಜಪದ ಧ್ವನಿಯನ್ನು ಸಿದ್ದರಾಮಯ್ಯ ತಾರಕಕ್ಕೆ ಏರಿಸಿದ್ದಾರೆ. ಇದನ್ನು ಕೇಳಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರೆಲ್ಲಾ ತಮ್ಮ ಕೈ ಹಿಡಿದು ಮೇಲೆತ್ತುತ್ತಾರೆ ಎಂಬ ಭಾವನೆ ಸಿದ್ಧರಾಮಯ್ಯನವರಿಗೂ ಅವರ ತಥಾಕಥಿತ ಬೆಂಬಲಿಗರಿಗೂ ಇರುವಂತೆ ಕಾಣಿಸುತ್ತದೆ.