ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವ ಮುಖ್ಯ ಲಕ್ಷಣಗಳ ಲ್ಲೊಂದು ಭಾಷೆ. ಹಾಗಿದ್ದರೆ ಪ್ರಾಣಿಗಳಿಗೆ ಭಾಷೆ ಇಲ್ಲವೇ? ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸದ್ದುಗಳನ್ನು ಸೃಷ್ಟಿಸುವ ಮೂಲಕ ಪರಸ್ಪರ ಸಂವಹನವನ್ನು ಸಾಧಿಸುತ್ತವೆಯಲ್ಲವೇ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಪ್ರಶ್ನೆಗಳು ಸರಿಯಾಗಿಯೇ ಇವೆ. ಆದರೆ ಇವು ಮನುಷ್ಯನ ಭಾಷೆಯ ವೈಶಿಷ್ಟ್ಯವನ್ನು ಅರಿಯದೇ ಇರುವುದರಿಂದ ಹುಟ್ಟಿರುವ ಪ್ರಶ್ನೆಗಳು.
ಪ್ರಾಣಿಗಳ ಭಾಷೆಯೆಂದರೆ ನಿರ್ದಿಷ್ಟ ಸಂಖ್ಯೆಯ ಸಂಜ್ಞೆಗಳು ಮಾತ್ರ. ಹಸಿವಾದಾಗ ಒಂದು ಸಂಜ್ಞೆ, ಶತ್ರುವನ್ನು ನೋಡಿದಾಗ ಮತ್ತೊಂದು ಸಂಜ್ಞೆ, ಮಿಲನಕ್ಕೆ ಅಣಿಯಾಗುವುದಕ್ಕೆ ಇನ್ನೊಂದು ಸಂಜ್ಞೆ ಹೀಗೆ. ಇದನ್ನು ಒಂದು ಸರಳ ಉದಾಹರಣೆಯ ಮೂಲಕ ವಿವರಿಸಬಹುದು. ಮನೆಯ ನಾಯಿ ಅದಕ್ಕೆ ಅಸಹಜ ಎನಿಸಿದ್ದನ್ನು ಕಂಡಾಗ ಬೊಗಳುತ್ತದೆ. ಈ ಬೊಗಳುವಿಕೆಯ ತೀವ್ರತೆಯನ್ನು ಅನುಸರಿಸಿ ಅದೆಷ್ಟು ಕೋಪಗೊಂಡಿದೆ ಯೆಂದು ಊಹಿಸಬಹುದಾದರೂ ಅದು ನಿರ್ದಿಷ್ಟವಾಗಿ ಏನನ್ನು ನೋಡಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಲಂಗೂರ್ ಕೋತಿಗಳು ಕಾಡಿನಲ್ಲಿ ಹುಲಿ, ಚಿರತೆಯಂಥ ಪ್ರಾಣಿಗಳನ್ನು ಕಂಡಾಗ ಸದ್ದು ಮಾಡುತ್ತವೆ. ಈ ಸದ್ದನ್ನು ಕೇಳಿ ಅದು ಹುಲಿಯನ್ನು ನೋಡಿತೇ ಚಿರತೆಯನ್ನು ನೋಡಿತೇ ಎಂದು ನಿರ್ಧರಿಸಲಾಗದು.
ಮನುಷ್ಯನ ಭಾಷೆ ಹೀಗಲ್ಲ. ಅದು ಅನಂತ ಸಂಖ್ಯೆಯ ಅಭಿವ್ಯಕ್ತಿ ಗಳಿಗೆ ಅವಕಾಶವಿರುವ ಭಾಷೆ. ಈ ಕಾರಣದಿಂದಾಗಿಯೇ ಮನುಷ್ಯ ಪ್ರಾಣಿಗಳಿಗಿಂತ ಭಿನ್ನನಾಗುತ್ತಾನೆ. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಅವುಗಳ ಮೆದುಳು ಬಳ್ಳಿಯಲ್ಲಿ. ಮನುಷ್ಯನ ಭಾಷೆ ಹುಟ್ಟಿಕೊಳ್ಳುವುದು ಅವನ ಮೆದುಳಿನ ಎಡ ಗೋಳಾರ್ಧದ ಮೇಲ್ಭಾಗದಲ್ಲಿ. ಮೆದುಳು ಬಳ್ಳಿಯಿಂದ ಉತ್ಪತ್ತಿಯಾಗುವ ಸಂದೇಶಗಳೆಲ್ಲವೂ ಭಾವನಾತ್ಮಕ ತುರ್ತಿನವು. ಈ ಕುರಿತಂತೆ ನಾವೆಲ್ಲರೂ ಹೈಸ್ಕೂಲ್ ಮಟ್ಟದ ಪಠ್ಯ ಪುಸ್ತಕಗಳಲ್ಲೇ ಓದಿರುತ್ತೇವೆ. ಪರಾವರ್ತಿತ ಪ್ರತಿಕ್ರಿಯೆಗಳು ಮೆದುಳು ಬಳ್ಳಿಯಿಂದಲೇ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಬಿಸಿಯಾದ ಕೆಂಡವನ್ನು ಮುಟ್ಟಿದರೆ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವಂಥ ಪ್ರತಿಕ್ರಿಯೆಗಳಿವು. ಇಲ್ಲಿ ತರ್ಕ, ಕಾರಣಗಳಿಗೆ ಅವಕಾಶವಿಲ್ಲ. ಇವೆಲ್ಲಾ ತಕ್ಷಣದ ರಕ್ಷಣಾ ಕ್ರಿಯೆ ಗಳು. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಇಂಥ ಕಾರಣಗಳಿಂದ.