ಜನವರಿ 29ರಂದು ಕರ್ನಾಟಕದ ಭ್ರಷ್ಟಾಚಾರದ ಇತಿಹಾಸದಲ್ಲಿ ಮೂರು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದ್ದು ಇದೇ ಮೊದಲ ಬಾರಿಗೆ ಶಾಸಕನೊಬ್ಬ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು. ಎರಡನೆಯದ್ದು ಶುದ್ಧ ಹಸ್ತದ ರಾಜಕಾರಣಿ ಎಂದೇ ಎಲ್ಲರೂ ಗುರುತಿಸುವ ಸಿದ್ದರಾಮಯ್ಯನವರು `ಎಲ್ಲರೂ ಭ್ರಷ್ಟರೇ ದುರದೃಷ್ಟವಶಾತ್ ಈತ ಸಿಕ್ಕಿಬಿದ್ದಿದ್ದಾನೆ’ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದು. ಈ ಪ್ರತಿಕ್ರಿಯೆಗೆ 225 ಮಂದಿ ವಿಧಾನಸಭೆ ಸದಸ್ಯರು ಮತ್ತು 75 ಮಂದಿ ವಿಧಾನ ಪರಿಷತ್ತಿನ ಸದಸ್ಯರಲ್ಲಿ ಯಾರೊಬ್ಬರೂ ವಿರೋಧ ವ್ಯಕ್ತಪಡಿಸದೇ ಇದ್ದದ್ದು. ಮತ್ತು ಲೋಕಾಯುಕ್ತ ಕಚೇರಿಗೆ ಶಾಸಕರ ದಂಡೊಂದು ನುಗ್ಗಿ ಬಂಧಿತ ಶಾಸಕ ವೈ ಸಂಪಂಗಿಯನ್ನು ಜಾಮೀನಿನ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂದು ರಂಪಾಟ ನಡೆಸಿದ್ದು. ಈ ಮೂರು ಘಟನೆಗಳು ಭ್ರಷ್ಟಾಚಾರದ ಸ್ವರೂಪವನ್ನು ವಿವರಿಸುತ್ತಿವೆ.
***
ಲೋಕಾಯುಕ್ತರ ಬಲೆಗೆ ಬಿದ್ದವರು ಆಡಳಿತಾರೂಢ ಬಿಜೆಪಿಗೆ ಸೇರಿದ ಕೋಲಾರ ಜಿಲ್ಲೆ ಕೆಜಿಎಫ್ ಶಾಸಕ ವೈ ಸಂಪಂಗಿ. ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ (ಐವತ್ತು ಸಾವಿರ ನಗದು, ಉಳಿದದ್ದು ಚೆಕ್) ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮಾನ್ಯ ಶಾಸಕರು ಈ ಮೊತ್ತ ಏಕೆ ಪಡೆಯುತ್ತಿದ್ದರು? ಲೋಕಾಯುಕ್ತ ಪೊಲೀಸರು ನೀಡುವ ಮಾಹಿತಿ ಹೀಗಿದೆ.
ಕೆಜಿಎಫ್‌ನ ಆಂಡರ್ಸನ್ ಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಯಿನ್ ಫಾರೂಕ್ ಎಂಬವರಿಗೆ ಒಂದು ನೀವೇಶನವಿದೆ. ಇದನ್ನು ಸುಳ್ಳು ದಾಖಲೆಗಳ ಮೂಲಕ ತಮ್ಮ ವಶಕ್ಕೆ ತೆಗೆದುಕೊಳ್ಳಲು ಇಲಿಯಾಸ್, ನಯಾಝ್ ಮತ್ತು ಖಾನ್ ಫಯಾಝ್ ಪ್ರಯತ್ನಿಸಿದ್ದರು. ಇದರ ವಿರುದ್ಧ ಮೊಯಿನ್ ಫಾರೂಕ್ ಇದೇ ಠಾಣೆಯಲ್ಲಿ ದೂರು ನೀಡಲು ಹೋದಾಗ ಅದನ್ನು ಠಾಣಾಧಿಕಾರಿ ಸ್ವೀಕರಿಸಿರಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠರು ನಿರ್ದೇಶಿಸಿದ ನಂತರ ದೂರು ದಾಖಲಿಸಿಕೊಂಡಿದ್ದರು. ಮೊಯಿನ್ ಫಾರೂಕ್ ವಿರುದ್ಧ ಇಲಿಯಾಸ್ ತಮ್ಮ ಪತ್ನಿಯ ಮೂಲಕ ದೂರು ಕೊಡಿಸಿದ್ದರು. ಈ ದೂರನ್ನೂ ಪಡೆದ ಪೊಲೀಸರು ಯಾರನ್ನೂ ಬಂಧಿಸುವುದಕ್ಕೆ ಹೋಗಿರಲಿಲ್ಲ.